ADVERTISEMENT

ಧರ್ಮ ಸಂಸತ್‌ನಿಂದ ರಾಜಕೀಯ ಬದಲಾವಣೆ!

ರಾಮ ಮಂದಿರ ನಿರ್ಮಾಣ ಕಾಂಗ್ರೆಸ್‌ ಬೆಂಬಲಿಸಬಹುದು: ಪೇಜಾವರ ಶ್ರೀ

ಎಂ.ನವೀನ್ ಕುಮಾರ್
Published 21 ನವೆಂಬರ್ 2017, 19:30 IST
Last Updated 21 ನವೆಂಬರ್ 2017, 19:30 IST
ಪೇಜಾವರ ಸ್ವಾಮೀಜಿ
ಪೇಜಾವರ ಸ್ವಾಮೀಜಿ   

ಉಡುಪಿ: ಧರ್ಮ ಸಂಸತ್ ರಾಜಕೀಯ ಬದಲಾವಣೆಗೂ ಕಾರಣವಾಗಬಹುದು. ಕಾಂಗ್ರೆಸ್ ಸಹ ರಾಮಮಂದಿರ ನಿರ್ಮಾಣಕ್ಕೆ ಬೆಂಬಲ ನೀಡಬಹುದು ಎಂದು ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

ಧರ್ಮ ಸಂಸತ್ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಉಡುಪಿಯಲ್ಲಿ ಹಿಂದೆ ನಡೆದ ಧರ್ಮ ಸಂಸತ್‌ನಲ್ಲಿ ರಾಮ ಮಂದಿರದ ಬೀಗ ತೆಗೆಯಬೇಕು ಎಂಬ ನಿರ್ಣಯ ಮಾಡಲಾಗಿತ್ತು. ಆಗ ರಾಜೀವ್ ಗಾಂಧಿ ಅವರು ನಿರ್ಣಯ ಒಪ್ಪಿಕೊಂಡು, ಹಿಂದೂಗಳ ಮತ ಸಹ ಬೇಕು ಎಂಬ ಕಾರಣಕ್ಕೆ ಬೀಗ ತೆಗೆಸಿದ್ದರು. ಕಾಂಗ್ರೆಸ್‌ ಈಗ ಇದಕ್ಕೆ ಅನುಕೂಲಕರವಾಗಿ ಸ್ಪಂದಿಸಬಹುದು’ ಎಂದು ಹೇಳಿದರು.

ಉತ್ತರ ಪ್ರದೇಶ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಮಂದಿರ ನಿರ್ಮಾಣಕ್ಕೆ ಅನುಕೂಲಕರ ವಾತಾವರಣ ಇದೆ. ಸಂಸತ್‌ನಲ್ಲಿ ನಿರ್ಣಯ ಮಾಡಿ, ಕಾಯ್ದೆ ಜಾರಿ ಮಾಡುವ ಮೂಲಕ ಮಂದಿರ ನಿರ್ಮಾಣ ಮಾಡಬಹುದು. ಜೀವನಾಂಶ ಕೋರಿದ್ದ ಶಾಬಾನು ಪ್ರಕರಣದಲ್ಲಿ ನ್ಯಾಯಾಲಯ ಆಕೆಯ ಪರ ತೀರ್ಪು ನೀಡಿದರೂ, ಸರ್ಕಾರ ಕಾಯ್ದೆ ಜಾರಿಗೊಳಿಸಿತ್ತು ಎಂದು ಹೇಳಿದರು.

ADVERTISEMENT

ಇತಿಹಾಸದಲ್ಲಿ ಆಗಿ ಹೋದ ತಪ್ಪುಗಳಿಗೆ ಈಗ ಪರಿಹಾರ ಹುಡುಕುವುದು ಎಷ್ಟು ಸರಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ರಾಮ ಹಿಂದೂಗಳ ಆರಾಧ್ಯ ದೈವ. ಆದ್ದರಿಂದ ಆ ವಿಷಯದಲ್ಲಿ ರಾಜಿ ಇಲ್ಲ. ಸದ್ಯ ಸರಳುಗಳ ಹಿಂದೆ ರಾಮನ ಮೂರ್ತಿ ಇದೆ. ಅದು ಸರಿಯಾಗದಿದ್ದರೆ ಮನಸ್ಸಿಗೆ ಆಘಾತವಾಗುತ್ತದೆ. ಇದು ಸ್ವಾಭಿಮಾನದ ಪ್ರಶ್ನೆಯೂ ಹೌದು. ಆದ್ದರಿಂದ ಮಂದಿರ ನಿರ್ಮಾಣ ವಿಷಯದಲ್ಲಿ ರಾಜಿ ಇಲ್ಲ’ ಎಂದರು.

* ಮಸೀದಿ ಒಡೆಯುವ ನಿರ್ಣಯವನ್ನು ಮಾಡಿರಲಿಲ್ಲ. ಆವೇಶದಲ್ಲಿ ಅದು ಆಗಿ ಹೋಯಿತು. ವಿಶ್ವ ಹಿಂದೂ ಪರಿಷತ್ ಸಹ ಅದಕ್ಕೆ ಹೊಣೆಯಲ್ಲ

-ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.