ADVERTISEMENT

ಧರ್ಮ ಸಿಂಗ್ ನಿಧನ: ರಾಜ್ಯದಲ್ಲಿ ಇಂದು ರಜೆ ಘೋಷಣೆ, ಮೂರು ದಿನ ಶೋಕಾಚರಣೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2017, 13:25 IST
Last Updated 27 ಜುಲೈ 2017, 13:25 IST
ಧರ್ಮ ಸಿಂಗ್ ನಿಧನ: ರಾಜ್ಯದಲ್ಲಿ ಇಂದು ರಜೆ ಘೋಷಣೆ, ಮೂರು ದಿನ ಶೋಕಾಚರಣೆ
ಧರ್ಮ ಸಿಂಗ್ ನಿಧನ: ರಾಜ್ಯದಲ್ಲಿ ಇಂದು ರಜೆ ಘೋಷಣೆ, ಮೂರು ದಿನ ಶೋಕಾಚರಣೆ   

ಹಾವೇರಿ, ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎನ್‌. ಧರ್ಮ ಸಿಂಗ್ ಅವರ ನಿಧನಕ್ಕೆ ರಾಜ್ಯದಲ್ಲಿ ಇಂದು(ಗುರುವಾರ) ರಜೆ ಘೋಷಣೆ ಮಾಡಲಾಗಿದೆ. ನಾಳೆ(ಶುಕ್ರವಾರ) ಅವರ ಅಂತಿಮ ಸಂಸ್ಕಾರ ನಡೆಯಲಿದ್ದು, ಬೀದರ್, ಕಲಬುರ್ಗಿ ಜಿಲ್ಲೆಗಳಲ್ಲಿ ನಾಳೆಯೂ ರಜೆ ಘೋಷಣೆ ಮಾಡಲಾಗಿದೆ.

ರಾಜ್ಯದಾದ್ಯಂತ ಮೂರು ದಿನ ಶೋಕಾಚರಣೆ ಘೋಷಿಸಲಾಗಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತಿಮ ಸಂಸ್ಕಾರ ನೆರವೇರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

ಧರ್ಮಸಿಂಗ್ ಅವರ ನಿಧನದಿಂದಾಗಿ ಹಾವೇರಿಯ ಕಾಗಿನೆಲೆಯಲ್ಲಿ ಆಯೋಜಿಸಿದ್ದ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಸಿದ್ದರಾಮಯ್ಯ ಅವರು ಬೆಂಗಳೂರಿಗೆ ಹಿಂದಿರುಗಿದರು.

ADVERTISEMENT

ಧರ್ಮಸಿಂಗ್ ಅವರು ಗುರುವಾರ ಬೆಳಿಗ್ಗೆ ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ 80 ವರ್ಷ ವಯಸ್ಸಾಗಿತ್ತು.

ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರ ನಿಧನಕ್ಕೆ ಸರ್ಕಾರ ರಾಜ್ಯಾದ್ಯಂತ ಮೂರು ದಿನಗಳ ಶೋಕಾಚರಣೆ ಘೋಷಿಸಿದೆ. ಧರ್ಮ ಸಿಂಗ್ ಅವರ ಗೌರವಾರ್ಥ ಸರ್ಕಾರಿ ಕಚೇರಿಗಳು, ಶಾಲೆ, ಕಾಲೇಜುಗಳಿಗೆ ಇಂದು ಮಧ್ಯಾಹ್ನ ಅರ್ಧ ದಿನ ರಜೆ ಘೋಷಿಸಲಾಗಿದೆ.

ಧರ್ಮ ಸಿಂಗ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಾಳೆ ಕಲಬುರ್ಗಿಯಲ್ಲಿ ನಡೆಯುವುದರಿಂದ ಬೀದರ್, ಕಲಬುರ್ಗಿ ಜಿಲ್ಲೆಯಲ್ಲಿ ನಾಳೆಯೂ ಸರ್ಕಾರಿ ಕಚೇರಿಗಳು ಮತ್ತು ಶಾಲೆ, ಕಾಲೇಜುಗಳಿಗೆ ರಜೆ ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.