ADVERTISEMENT

ನಿಮಗೆ ಬೇರೆ ಸುದ್ದಿ ಇಲ್ಲವೇ?

ಮಾಧ್ಯಮಗಳಿಗೆ ಮುಖ್ಯಮಂತ್ರಿ ಪ್ರಶ್ನೆ, ಎನ್‌ಎಚ್ಆರ್‌ಸಿ ನೋಟಿಸ್

​ಪ್ರಜಾವಾಣಿ ವಾರ್ತೆ
Published 22 ಜುಲೈ 2014, 19:30 IST
Last Updated 22 ಜುಲೈ 2014, 19:30 IST

ಬೆಂಗಳೂರು/ನವದೆಹಲಿ: 6 ವರ್ಷದ  ಬಾಲಕಿ ಮೇಲೆ ಶಾಲೆ­ಯಲ್ಲಿ ನಡೆದಿರುವ ಅತ್ಯಾಚಾರ ಘಟನೆಯಿಂದ ತೀವ್ರ ಆತಂಕ­ಗೊಂಡಿ­ರುವ  ನೂರಾರು ಪಾಲಕರು ಬೀದಿ­ಗಿಳಿದು ಪ್ರತಿಭಟನೆ ನಡೆಸುತ್ತಿರು­ವಾಗಲೇ, ಮುಖ್ಯ­ಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ಪ್ರಶ್ನಿಸಿದ ಮಾಧ್ಯಮ ಪ್ರತಿನಿಧಿ­ಗಳನ್ನೇ  ತರಾಟೆಗೆ ತೆಗೆದು­ಕೊಂಡ ಘಟನೆ ನಡೆದಿದೆ.

ವಿಧಾನಸಭೆ ಮೊಗಸಾಲೆಯಲ್ಲಿ ಮಂಗಳವಾರ ಸುದ್ದಿ­ಗಾರರು ಕೇಳಿದ ಪ್ರಶ್ನೆಗೆ ಗರಂ ಆಗಿಯೇ ಮರುಪ್ರಶ್ನೆ ಹಾಕಿದ ಸಿದ್ದರಾಮಯ್ಯ, ‘ನಿಮಗೆ ರೇಪ್‌ (ಅತ್ಯಾಚಾರ) ವಿಷಯ ಬಿಟ್ಟು ಬೇರೆ ಏನೂ ಸುದ್ದಿ ಇಲ್ಲವೇ?’ ಎಂದು ಕೇಳಿದರು.

ನಿಮ್ಮ ತವರು ಜಿಲ್ಲೆ ಮೈಸೂರಿನಲ್ಲಿ ಮಹಿಳೆ ಮೇಲೆ ಅತ್ಯಾಚಾರ ನಡೆದಿದೆ.. ಅಲ್ಲಿ ಮತ್ತೊಂದು ಅತ್ಯಾಚಾರ ನಡೆ­ದಿದೆ. ಹೀಗೆ ಅತ್ಯಾಚಾರ ಪ್ರಕರಣಗಳನ್ನು ಪತ್ರಕ­ರ್ತರು ಪಟ್ಟಿ ಮಾಡಿ ಪ್ರಶ್ನೆ ಮಾಡಿದ್ದಕ್ಕೆ ಮುಖ್ಯಮಂತ್ರಿ ಸಿಟ್ಟಿಗೆದ್ದರು.

‘ನಿಮಗೆ ರೇಪ್‌ ಒಂದೇ ಸುದ್ದಿಯೇ, ಬೇರೆ ಸುದ್ದಿಗಳು ಇಲ್ಲವೇ’ ಎಂದೂ ಪ್ರಶ್ನಿಸಿದರು.
‘ಸದಾ ಅತ್ಯಾಚಾರದ ಬಗ್ಗೆಯೇ ಪ್ರಶ್ನೆ ಕೇಳಬೇಡಿ. ಮೈಸೂರಿನ ಘಟನೆ ಬಗ್ಗೆ ನನಗೆ ಮಾಹಿತಿ ಇಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ‘ಅತ್ಯಾಚಾರಿಗಳ ವಿರುದ್ಧ ಯಾವಾಗ ಗೂಂಡಾ ಕಾಯ್ದೆ ಹಾಕಬೇಕೋ ಆಗ ಹಾಕುತ್ತೇವೆ. ಬಿಜೆಪಿಯು ಈ ಪ್ರಕರಣ­ವನ್ನು  ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ’ ಎಂದೂ ದೂರಿದರು.

ರಾಜ್ಯಕ್ಕೆ ನೋಟಿಸ್‌:  ಈ ನಡುವೆ, ಬಾಲಕಿ ಮೇಲಿನ ಅತ್ಯಾ­­ಚಾರ  ಕುರಿತು 2 ವಾರ­ಗಳಲ್ಲಿ ವರದಿ ಕೊಡು­ವಂತೆ ‘ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ’ ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ.

ದೇಶದಾದ್ಯಂತ ತೀವ್ರ ಆಕ್ರೋಶದ  ಅಲೆ ಎಬ್ಬಿಸಿರುವ 6 ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣ ಕುರಿತು ಸ್ವಯಂಪ್ರೇರಣೆಯಿಂದ ದೂರು ದಾಖಲಿ­ಸಿ­ಕೊಂಡಿರುವ ಮಾನವ ಹಕ್ಕುಗಳ ಆಯೋಗವು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಪೊಲೀಸ್‌ ಮಹಾ­ನಿರ್ದೇಶಕ, ಹಾಗೂ ಬೆಂಗಳೂರು ಜಿಲ್ಲಾಧಿಕಾರಿಗಳಿಗೆ ಮಂಗಳವಾರ ನೋಟಿಸ್‌ ಜಾರಿ ಮಾಡಿದೆ.

ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿ ಆಧರಿಸಿ ‘ಎನ್‌ಎಚ್‌ಆರ್‌ಸಿ’ ದೂರು ದಾಖಲಿಸಿಕೊಂಡಿದೆ. ಮಗುವಿನ ಮೇಲೆ ನಡೆದಿರುವ ಅತ್ಯಾಚಾರ ಅತ್ಯಂತ ಆತಂಕದ ವಿಷಯ. ಇದು ಮಾನವ ಹಕ್ಕು ಉಲ್ಲಂಘನೆಯೂ ಆಗಿದೆ. ಈ ಪ್ರಕರಣ ಕುರಿತು ಎರಡು ವಾರಗಳಲ್ಲಿ ವರದಿ ಸಲ್ಲಿಸುವಂತೆ ಮಾನವ ಹಕ್ಕು ಆಯೋಗ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಲೋಕಸಭೆಯಲ್ಲಿ ಚಕಮಕಿ
ರಾಜ್ಯದ ಅತ್ಯಾಚಾರ ಪ್ರಕರಣಗಳು ಮಂಗಳವಾರ ಲೋಕಸಭೆಯಲ್ಲಿ ಪ್ರತಿಧ್ವನಿಸಿ ಬಿಜೆಪಿ ಮತ್ತು ಕಾಂಗ್ರೆಸ್‌ ಸದಸ್ಯರ ನಡುವೆ ಚಕಮಕಿಗೆ ಕಾರಣ­ವಾಯಿತು. ಅತ್ಯಾಚಾರ ಪ್ರಕರಣಗಳನ್ನು ಕುರಿತು ಕಾಂಗ್ರೆಸ್‌ ಸರ್ಕಾರದಿಂದ ವರದಿ ತರಿಸಿಕೊಳ್ಳಬೇಕೆಂದು ಬಿಜೆಪಿ ಸದಸ್ಯರು ಆಗ್ರಹಿಸಿದರು.

ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯೆ ಶೋಭಾ ಕರಂದ್ಲಾಜೆ, ರಾಜ್ಯದಲ್ಲಿ ಹದಿನೈದು ದಿನಗಳಲ್ಲಿ ಸುಮಾರು 50 ಅತ್ಯಾಚಾರ ಪ್ರಕರಣಗಳು ನಡೆದಿವೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಕಾನೂನು– ಸುವ್ಯವಸ್ಥೆ ಕುಸಿದಿದೆ. ಸರ್ಕಾರ ಇದೆಯೇ ಎಂಬ ಅನುಮಾನ ಜನರಿಗೆ ಬಂದಿದೆ. ಅತ್ಯಾಚಾರಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಟೀಕಿಸಿದರು. ಇದರಿಂದ ಸಿಟ್ಟಿಗೆದ್ದ ಕಾಂಗ್ರೆಸ್‌ ಸದಸ್ಯರು ಶೋಭಾ ಕರಂದ್ಲಾಜೆ ವಿರುದ್ಧ ಪ್ರತಿಭಟಿಸಿದರು. ಶೋಭಾ ಕರಂದ್ಲಾಜೆ ಜತೆ ದನಿಗೂಡಿಸಿದ ಮತ್ತೊಬ್ಬ ಬಿಜೆಪಿ ಸದಸ್ಯ ಪಿ.ಸಿ. ಮೋಹನ್‌, ಪೊಲೀಸರು ಆರೋಪಿ­ಗಳನ್ನು ಬಂಧಿಸಲು ತಡ ಮಾಡುತ್ತಿದ್ದಾರೆ ಎಂದು ದೂರಿದರು.

ಗೂಂಡಾ ಕಾಯ್ದೆ ತಿದ್ದುಪಡಿ
ರಾಜ್ಯದಲ್ಲಿ ಇನ್ನು ಮುಂದೆ ಅತ್ಯಾ­ಚಾ­ರಿಗಳ  ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳುವ ಉದ್ದೇಶ­ದಿಂದ ಕಾಯ್ದೆಗೆ ಈ ಅಧಿ­ವೇಶನದಲ್ಲೇ ತಿದ್ದುಪಡಿ ತರಲಾ­ಗು­ವುದು ಎಂದು ಗೃಹ ಸಚಿವ ಕೆ.ಜೆ. ಜಾರ್ಜ್‌ ತಿಳಿಸಿದರು. ವಿಧಾನ ಪರಿಷತ್‌ನಲ್ಲಿ ಮಂಗಳ­ವಾರ ಶೂನ್ಯ ವೇಳೆ­ಯಲ್ಲಿ ಅವರು ಸ್ವಯಂ­ಪ್ರೇರಿತ ಹೇಳಿಕೆ ನೀಡಿದರು.

ಸಿ.ಎಂ ಹೇಳಿಕೆಯ ಪ್ರಚೋದನೆಯ ಫಲ: ಕಾಂಗ್ರೆಸ್
ಈ ಮಧ್ಯೆ ಕಾಂಗ್ರೆಸ್‌ ಹೈಕಮಾಂಡ್‌ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಿಂತಿದೆ. ಅತ್ಯಾಚಾರ ಪ್ರಕರಣದಲ್ಲಿ ಸರ್ಕಾರ ಸಾಧ್ಯವಾದ ಎಲ್ಲ ಕ್ರಮಗಳನ್ನು ಕೈಗೊಂಡಿದೆ ಎಂದು ಕಾಂಗ್ರೆಸ್‌ ಹೇಳಿದೆ.

ಮಾಧ್ಯಮಗಳ ಕುರಿತಾಗಿ ಸಿದ್ದ­ರಾಮಯ್ಯ ನೀಡಿರುವ ವಿವಾದಾತ್ಮಕ ಹೇಳಿಕೆ ಪ್ರಚೋದನೆಯ ಫಲ. ಅವರನ್ನು ಪ್ರಚೋದಿಸಿದ್ದರಿಂದ ಅವರು ಈ ರೀತಿ ಹೇಳಿದ್ದಾರೆಂದು ಕಾಂಗ್ರೆಸ್‌ ವಕ್ತಾರ ರಾಜೀವ್‌ ಗೌಡ ವಿವ­ರಿಸಿ­­ದರು. ರಾಜ್ಯಸಭೆ ಸದಸ್ಯರಾದ ರಾಜೀವ್‌ ಗೌಡ ಮುಖ್ಯಮಂತ್ರಿ ಹೇಳಿಕೆಗೆ ಬೇರೆ ಯಾವ ಅರ್ಥವೂ ಹುಡು­ಕುವ ಅಗತ್ಯವಿಲ್ಲ ಎಂದರು. ಈಗಾಗಲೇ ಸರ್ಕಾರ ಎಲ್ಲ ಕಠಿಣ ಕ್ರಮಗಳನ್ನು ಕೈಗೊಂಡಿದೆ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT