ADVERTISEMENT

ನೀರು ಪರೀಕ್ಷೆ ಪ್ರಯೋಗಾಲಯ ಸ್ಥಾಪನೆಯಲ್ಲಿ ಅವ್ಯವಹಾರ

ವಿಧಾನಸಭೆ ವಿರೋಧ ಪಕ್ಷದ ನಾಯಕ ಶೆಟ್ಟರ್‌ ಆರೋಪ

​ಪ್ರಜಾವಾಣಿ ವಾರ್ತೆ
Published 6 ಮೇ 2016, 19:30 IST
Last Updated 6 ಮೇ 2016, 19:30 IST
ನೀರು ಪರೀಕ್ಷೆ ಪ್ರಯೋಗಾಲಯ ಸ್ಥಾಪನೆಯಲ್ಲಿ ಅವ್ಯವಹಾರ
ನೀರು ಪರೀಕ್ಷೆ ಪ್ರಯೋಗಾಲಯ ಸ್ಥಾಪನೆಯಲ್ಲಿ ಅವ್ಯವಹಾರ   

ಬೆಂಗಳೂರು: ‘ರಾಜ್ಯದ 146 ತಾಲ್ಲೂಕುಗಳಲ್ಲಿ ನೀರಿನ ಪರೀಕ್ಷೆ ಪ್ರಯೋಗಾಲಯ ಸ್ಥಾಪನೆ ಮತ್ತು ಇದಕ್ಕೆ ಸಂಬಂಧಿಸಿದ ಉಪಕರಣಗಳ ಖರೀದಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ₹ 190 ಕೋಟಿ ವೆಚ್ಚ ಮಾಡಿದೆ. ಇದರಲ್ಲಿ ಭಾರಿ ಅವ್ಯವಹಾರ ನಡೆದಿದೆ’ ಎಂದು ವಿಧಾನ ಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಈ ಹಗರಣದಲ್ಲಿ ಸಚಿವ ಎಚ್‌.ಕೆ. ಪಾಟೀಲ ನೇರವಾಗಿ ಭಾಗಿಯಾಗಿರುವ ಮೂಲಕ ಸ್ವಜನ ಪಕ್ಷಪಾತ ಎಸಗಿದ್ದಾರೆ. ಹೀಗಾಗಿ ಈ ಟೆಂಡರ್‌ ಪ್ರಕ್ರಿಯೆಯನ್ನು ರದ್ದುಗೊಳಿಸಿ ಉನ್ನತಮಟ್ಟದ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.

ಪ್ರಯೋಗಾಲಯ ಸ್ಥಾಪಿಸಲು ಪ್ರಸಾದ್‌ ರಾಯಪಾಟಿ ಎಂಬ ವ್ಯಕ್ತಿ ಮತ್ತು ಅವರು ಸೃಷ್ಟಿಸಿದ ಸಂಸ್ಥೆಗೆ ಮೂರು ಹಂತಗಳಲ್ಲಿ ಟೆಂಡರ್‌ ನೀಡಲಾಗಿದೆ. 80 ತಾಲ್ಲೂಕುಗಳಿಗೆ ಮೊದಲ ಹಂತದಲ್ಲಿ ಟೆಂಡರ್‌ ಮೂಲಕ ಕಾರ್ಯಾದೇಶ ನೀಡಲಾಗಿದೆ. ಆದರೆ, ಎರಡನೇ ಹಂತದಲ್ಲಿ 20 ತಾಲ್ಲೂಕುಗಳಿಗೆ ಟೆಂಡರ್‌ ಇಲ್ಲದೇ ನೀಡಲಾಗಿದೆ. ಕೊನೆಯ ಹಂತದಲ್ಲಿ ಉಳಿದ 46 ತಾಲ್ಲೂಕುಗಳಿಗೆ ಟೆಂಡರ್‌ ಮೂಲಕ ನೀಡಲಾಗಿದ್ದರೂ, ಪ್ರಸಾದ್‌ಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಇನ್ನೊಂದು ಸಂಸ್ಥೆಯ ಅರ್ಜಿಯನ್ನು ತಾಂತ್ರಿಕ ಕಾರಣ ನೀಡಿ ತಿರಸ್ಕರಿಸಲಾಗಿದೆ’ ಎಂದರು.

‘ಟೆಂಡರ್‌ನಲ್ಲಿ ಭಾಗವಹಿಸುವ ಗುತ್ತಿಗೆದಾರರು ಉತ್ಪಾದಕರಾಗಿರಬೇಕು ಅಥವಾ ಅಧಿಕೃತ ಮಾರಾಟಗಾರರಾಗಿರಬೇಕು ಎಂಬ ಷರತ್ತು ವಿಧಿಸಲಾಗಿತ್ತು. ಆದರೆ ಪ್ರಸಾದ್‌ಗೆ ಈ ಅರ್ಹತೆ ಇರಲಿಲ್ಲ. ಈ ಷರತ್ತು ಪೂರೈಸಲು ಸಾಧ್ಯವಾಗದಿದ್ದರೆ ಜಂಟಿಯಾಗಿ ಟೆಂಡರ್‌ ಸಲ್ಲಿಸಬಹುದು ಎಂಬ ನಿಯಮವನ್ನು ಸೇರಿಸಲಾಗಿದೆ. ಇದರ ಹಿಂದೆ ಗುತ್ತಿಗೆದಾರನಿಗೆ ಸಹಾಯ ಮಾಡುವ ಉದ್ದೇಶ ಇತ್ತು’ ಎಂದರು.

‘ಗುತ್ತಿಗೆದಾರರು ಹಿಂದಿನ ಐದು ಆರ್ಥಿಕ ವರ್ಷಗಳಲ್ಲಿ ಪ್ರಸ್ತುತ ಕ್ಷೇತ್ರದಲ್ಲಿ ಯಾವುದಾದರೂ ಎರಡು ಆರ್ಥಿಕ ವರ್ಷಗಳಲ್ಲಿ ₹57 ಕೋಟಿ
ವಹಿವಾಟು ನಡೆಸಿರಬೇಕು. ಅದಕ್ಕೆ ಸಂಬಂಧಿಸಿ ಲೆಕ್ಕ ಪರಿಶೋಧಕರ ಪ್ರಮಾಣ ಪತ್ರ ಸಲ್ಲಿಸಬೇಕು ಎಂಬ ನಿಯಮ ಪಾಲಿಸದ ಪ್ರಸಾದ್‌, ಶ್ರೀನಿವಾಸ ಕನಸ್ಟ್ರಕ್ಷನ್ಸ್‌ ಇಂಡಿಯಾ ಎಂಬ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ಹಿಂಬಾಗಿಲ ಮೂಲಕ ಈ ಷರತ್ತು ಪೂರೈಸಿದ್ದಾರೆ’ ಎಂದು ಮಾಹಿತಿ ನೀಡಿದರು.

  ‘₹ 15 ಕೋಟಿಯ ಸಾಲ್ವೆನ್ಸಿ (ಸಾಲ ತೀರಿಸುವ ಸಾಮರ್ಥ್ಯದ ಕುರಿತ) ಪ್ರಮಾಣ ಪತ್ರ ಸಲ್ಲಿಸಬೇಕು ಎಂಬ ನಿಯಮವನ್ನೂ ಪ್ರಸಾದ್‌ ಉಲ್ಲಂಘಿಸಿದ್ದಾರೆ.  ಹಿಂದಿನ ಐದು ವರ್ಷಗಳಲ್ಲಿ ಇದೇ ಮಾದರಿಯಲ್ಲಿ ಟೆಂಡರ್‌ ಪಡೆದ ಕಾರ್ಯಾದೇಶದಲ್ಲಿ ಶೇ 80ರಷ್ಟು ಕಾಮಗಾರಿ ಪೂರ್ಣಗೊಳಿಸಿದ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಆದರೆ ಪ್ರಸಾದ್‌ ಮತ್ತು ಅವರು ಸೃಷ್ಟಿಸಿದ ರೇ ಎನ್ವಿರಾನ್ ಸಂಸ್ಥೆ ತನಗೆ ವ್ಯವಹಾರಿಕ ಸಂಬಂಧ ಇಲ್ಲದ ಬೆಂಗಳೂರಿನ ಗ್ಲೋಬಲ್‌ ಟೆಕ್ನೋಲಜಿಸ್‌ ಮತ್ತು ಹೈದರಾಬಾದಿನ ಸಾವಂತ್‌ ಇನ್‌ಸ್ಟ್ರುಮೆಂಟ್‌ ಪ್ರೈವೇಟ್‌ ಮತ್ತು ದಿಲ್ಲಿಯ ಗೆನ್‌ ನೆಕ್ಸ್ಟ್‌ ಲಾಬ್‌ ಟೆಕ್ನೋಲಜೀಸ್‌ ಎಂಬ ಮೂರು ಸಂಸ್ಥೆಗಳ ಪ್ರಮಾಣ ಪತ್ರಗಳನ್ನು ಸಲ್ಲಿಸಿ ಕಾನೂನುಬಾಹಿರವಾಗಿ ಟೆಂಡರ್‌ ಪಡೆದುಕೊಂಡಿದೆ’ ಎಂದು ದೂರಿದರು.

ಈ ಕುರಿತು ಪ್ರತಿಕ್ರಿಯೆ ಪಡೆಯಲು ಸಚಿವ ಎಚ್.ಕೆ ಪಾಟೀಲ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಲಭ್ಯರಾಗಲಿಲ್ಲ.

ಅಧಿಕಾರಿಗಳಿಗೆ ಎಂಜಿನಿಯರ್ ಪತ್ರ
‘ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನಲ್ಲಿ ಕೊಳವೆ ಬಾವಿಯ ನೀರಿನ ಗುಣಮಟ್ಟ ಪರೀಕ್ಷೆ ಮಾಡದೇ ರೇ ಎನ್ವಿರಾನ್‌ ಸಂಸ್ಥೆಯ ಪ್ರಸಾದ್‌ ರಾಯಪಾಟಿ 
ಅವ್ಯವಹಾರ ನಡೆಸಿದ್ದಾರೆ ಎಂದು ಅಲ್ಲಿನ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಉಪ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

‘ಈ ಸಂಸ್ಥೆ ನೀರಿನ ಮಾದರಿಗಳನ್ನು ಪರೀಕ್ಷೆ ಮಾಡದೆ, ತಾಲ್ಲೂಕಿನ ಕೊಳವೆ ಬಾವಿಗಳ ಪಟ್ಟಿ ಪಡೆದು ಬೋಗಸ್‌ ಫಲಿತಾಂಶಗಳನ್ನು ಸೃಷ್ಟಿಸಿ ಇಲಾಖೆಯ ಅಂತರ್ಜಾಲದಲ್ಲಿ ಅಪ್‌ಲೋಡ್‌ ಮಾಡಿರುವ ಬಗ್ಗೆ ಎಂಜಿನಿಯರ್‌ ಮಾಹಿತಿ ನೀಡಿದ್ದಾರೆ.

ಆ ಮೂಲಕವೂ ಕೋಟ್ಯಂತರ ಮೊತ್ತದ ಹಣವನ್ನು ಹಗಲು ದರೋಡೆ ಮಾಡಲಾಗಿದೆ’ ಎಂದೂ ಶೆಟ್ಟರ್‌ ಆರೋಪಿಸಿದರು.

1,189 ಶುದ್ಧ ನೀರಿನ ಘಟಕ ಮಾತ್ರ ಕಾರ್ಯಾಚರಣೆ: ಶೆಟ್ಟರ್‌
‘ರಾಜ್ಯದಲ್ಲಿ ಮೂರು ವರ್ಷಗಳಲ್ಲಿ ಕೇವಲ 1,560 ಶುದ್ಧ ನೀರಿನ ಘಟಕಗಳು ಸ್ಥಾಪನೆಗೊಂಡಿವೆ. ಈ ಪೈಕಿ 1,189 ಘಟಕಗಳು ಕಾರ್ಯಾಚರಣೆಯಲ್ಲಿವೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಹೇಳಿದರು.

‘ಮಾರ್ಚ್‌ 2016ರ ಒಳಗಾಗಿ ಏಳು ಸಾವಿರ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸುವುದಾಗಿ ಭರವಸೆ ನೀಡಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಎಚ್‌.ಕೆ. ಪಾಟೀಲ ಅವರ ಕಾರ್ಯವೈಖರಿಯನ್ನು ಇದು ತೋರಿಸುತ್ತಿದೆ. ನೈತಿಕತೆ ಇದ್ದರೆ ಅವರು ತಮ್ಮ ಮಾತಿನಂತೆ ಸಚಿವ ಸ್ಥಾನಕ್ಕೆ ಈಗಾಗಲೇ ರಾಜೀನಾಮೆ ನೀಡಬೇಕಿತ್ತು’ ಎಂದು ಅವರು ವ್ಯಂಗ್ಯವಾಗಿ  ಹೇಳಿದರು.

‘2015–16ನೇ ಸಾಲಿನಲ್ಲಿ  ನಾಲ್ಕು ಸಾವಿರ ಘಟಕ ಸ್ಥಾಪಿಸುವುದಾಗಿ ಹೇಳಿದ್ದ ಸಚಿವರು, ಸ್ಥಾಪಿಸಿದ್ದು ಕೇವಲ 534. ಈ ಪೈಕಿ 204 ಘಟಕಗಳು ಮಾತ್ರ ಕಾರ್ಯಾಚರಣೆಯಲ್ಲಿವೆ. ಅಷ್ಟೇ ಅಲ್ಲ, ಈವರೆಗೆ ಸ್ಥಾಪನೆಯಾದ ಘಟಕಗಳಲ್ಲಿ ಶೇ50ರಷ್ಟು ಸಮರ್ಪಕವಾಗಿ ಕಾರ್ಯ­ನಿರ್ವಹಿಸುತ್ತಿಲ್ಲ. ಮೂರು ವರ್ಷಗಳಲ್ಲಿ ಶುದ್ಧ ನೀರಿನ ಘಟಕ ಸ್ಥಾಪನೆಗಾಗಿ ₹ 334.88 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದ್ದು, ₹ 125.90 ಕೋಟಿ ಮಾತ್ರ ಖರ್ಚು ಆಗಿದೆ’
ಎಂದರು.

‘ನಮ್ಮ (ಬಿಜೆಪಿ) ಸರ್ಕಾರದ ಅವಧಿಯಲ್ಲಿ 687 ಘಟಕಗಳನ್ನು 10 ವರ್ಷಗಳ ನಿರ್ವಹಣೆ ಹಾಗೂ ಪ್ರತೀ ವ್ಯಕ್ತಿಗೆ 10 ಲೀಟರ್‌ ಕುಡಿಯುವ ನೀರು ಪೂರೈಸುವ ಷರತ್ತಿನಂತೆ ದರ ನಿಗದಿಪಡಿಸಿ ಟೆಂಡರ್‌ ನೀಡಲಾಗಿತ್ತು. ಆದರೆ ಎಚ್‌.ಕೆ. ಪಾಟೀಲರು ಪ್ರತೀ ವ್ಯಕ್ತಿಗೆ ಕೇವಲ 3 ಲೀಟರ್‌ನಂತೆ 7 ವರ್ಷ ನಿರ್ವಹಣೆ ಮಾಡುವಷರತ್ತಿನಂತೆ ಆರು ಪಟ್ಟು ಹೆಚ್ಚು ದರ ನಿಗದಿಪಡಿಸಿ ಟೆಂಡರ್‌ ನೀಡಿದ್ದಾರೆ’ ಎಂದೂ ಅವರು ದೂರಿದರು.

‘ಬಿಡುಗಡೆಯಾದ ಹಣ ಖರ್ಚು ಆಗಲಿ’: ‘ರಾಜ್ಯಕ್ಕೆ ಕೇಂದ್ರ ಸರ್ಕಾರ ಸರಿಯಾದ ಪ್ರಮಾಣದಲ್ಲಿ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಟೀಕಿಸುವ ಬದಲು ಈಗಾಗಲೇ ಬಿಡುಗಡೆಯಾಗಿರುವ ₹ 1,540 ಕೋಟಿ ಸಂಪೂರ್ಣ ಖರ್ಚು ಮಾಡಲು ಮುಖ್ಯಮಂತ್ರಿ ಮುಂದಾಗಬೇಕು’ ಎಂದು ಶೆಟ್ಟರ್‌ ಆಗ್ರಹಿಸಿದರು.
ಬರ ಕಾಮಗಾರಿಗಾಗಿ ಬಿಡುಗಡೆ ಮಾಡಿದ ₹ 246 ಕೋಟಿ ಖರ್ಚು ಆಗದೆ  ಜಿಲ್ಲಾಧಿಕಾರಿಗಳ ಖಾತೆಯಲ್ಲಿಉಳಿದಿದೆ. ಮತ್ತೆ ಹೆಚ್ಚುವರಿಯಾಗಿ ಕೇಂದ್ರ ಸರ್ಕಾರ ₹ 730 ಕೋಟಿ ಬಿಡುಗಡೆ ಮಾಡಿದೆ’ ಎಂದರು.

‘ಬರಪೀಡಿತ ತಾಲ್ಲೂಕುಗಳಲ್ಲಿ ಕೇವಲ 52 ಗೋಶಾಲೆಗಳನ್ನು ತೆರೆದು, 15,072 ಜಾನುವಾರುಗಳಿಗೆ 96,01511 ಟನ್‌  ಮೇವು ಪೂರೈಕೆ ಮಾಡಲಾಗಿದೆ.

ಇದು ಯಾವುದಕ್ಕೂ ಸಾಲದು. ಕೇವಲ ಬರಗಾಲ ಪ್ರದೇಶದಲ್ಲಿ ಸುತ್ತಿದರೆ ಏನೂ  ಪ್ರಯೋಜನ ಇಲ್ಲ.  ಜನರ ಬೇಡಿಕೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ಸ್ಪಂದಿಸಬೇಕು’ ಎಂದು ಶೆಟ್ಟರ್ ಅವರು ಒತ್ತಾಯಿಸಿದರು.

ಪ್ರಯೋಗಾಲಯ ಸ್ಥಾಪನೆಯಲ್ಲಿ ಭ್ರಷ್ಟಚಾರ ನಡೆದಿರುವುದು ಮೇಲ್ನೋಟಕ್ಕೆ ಸ್ಪಷ್ಟ. ಇದರಲ್ಲಿ ಸಚಿವ ಎಚ್‌.ಕೆ. ಪಾಟೀಲ ಭಾಗಿಯಾಗಿರುವ ಅನುಮಾನ ಇದೆ
-ಜಗದೀಶ ಶೆಟ್ಟರ್‌
ವಿಧಾನಸಭೆ ವಿರೋಧ ಪಕ್ಷದ ನಾಯಕ

ಮುಖ್ಯಾಂಶಗಳು

* 146 ತಾಲ್ಲೂಕುಗಳಲ್ಲಿ ₹ 190 ಕೋಟಿ ವೆಚ್ಚ
* ಟೆಂಡರ್‌ ನಿಯಮ ಉಲ್ಲಂಘನೆ– ಆರೋಪ
* ಹಿಂಬಾಗಿಲಿನಿಂದ ಷರತ್ತು ಈಡೇರಿಕೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.