ADVERTISEMENT

‘ನೈಸ್‌ ಯೋಜನೆ ಸ್ವಾಧೀನಕ್ಕೆ ಮಸೂದೆ ಮಂಡಿಸಿ’

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2017, 19:30 IST
Last Updated 22 ನವೆಂಬರ್ 2017, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಳಗಾವಿ: ‘ಬೆಂಗಳೂರು–ಮೈಸೂರು ಇನ್ ಫ್ರಾಸ್ಟ್ರಕ್ಚರ್ ಕಾರಿಡಾರ್ (ಬಿಎಂಐಸಿ) ಯೋಜನೆಯನ್ನು (ನೈಸ್ ರಸ್ತೆ) ಸರ್ಕಾರದ ಸ್ವಾಧೀನಕ್ಕೆ ಪಡೆಯಲು ಇದೇ ಅಧಿವೇಶನದಲ್ಲಿ ಮಸೂದೆ ಮಂಡಿಸಿ’ ಎಂದು ವಿಧಾನಸಭೆಯಲ್ಲಿ ಒಕ್ಕೊರಲಿನಿಂದ ಒತ್ತಾಯಿಸಲಾಯಿತು.

ನೈಸ್ ಸಂಸ್ಥೆ ಅಕ್ರಮಗಳ ಬಗ್ಗೆ ವಿಚಾರಣೆ ನಡೆಸಿದ್ದ ಸದನ ಸಮಿತಿ ವರದಿಯ ಶಿಫಾರಸುಗಳು ಅನುಷ್ಠಾನವಾಗದೇ ಇರುವ ಕುರಿತು ಸಾರ್ವಜನಿಕ ಮಹತ್ವದ ವಿಷಯದ ಮೇಲೆ ಬುಧವಾರ ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಯಿತು.

ವಿಷಯ ಪ್ರಸ್ತಾಪಿಸಿದ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ, ಒಂದು ವರ್ಷ ಕಳೆದರೂ ಈ ಬಗ್ಗೆ ಕ್ರಮ ಕೈಗೊಳ್ಳದೆ ಸರ್ಕಾರ ಸದನವನ್ನು ಕತ್ತಲೆಯಲ್ಲಿ ಇಟ್ಟಿದೆ. ಕ್ರಿಯಾ ಒಪ್ಪಂದ ಉಲ್ಲಂಘಿಸಿ, ದಾಖಲೆಗಳನ್ನು ತಿದ್ದಿ ನೈಸ್ ಸಂಸ್ಥೆಅಕ್ರಮಗಳನ್ನು ಎಸಗಿದೆ ಎಂದು
ಸದನ ಸಮಿತಿ ವರದಿ ಹೇಳಿದೆ ಎಂದರು.

ADVERTISEMENT

ಯೋಜನೆ ಹೆಸರಿನಲ್ಲಿ ಪ್ರತಿ ಎಕರೆಗೆ ತಲಾ ₹2 ಲಕ್ಷದಂತೆ ರೈತರಿಂದ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ₹15ರಿಂದ ₹20 ಕೋಟಿಗೆ
ನೈಸ್ ಸಂಸ್ಥೆ ಮಾರಾಟ ಮಾಡುತ್ತಿದೆ. ನೈಸ್ ಸಂಸ್ಥೆ ಮುಖ್ಯಸ್ಥರು ಸರ್ಕಾರದ ವಿರುದ್ಧ ತೊಡೆ ತಟ್ಟುತ್ತಿದ್ದಾರೆ ಎಂದರು.

ಬಹುಮತ ಇರುವ ಸರ್ಕಾರಕ್ಕೆ ಯೋಜನೆಯನ್ನು ಸ್ವಾಧೀನಪಡಿಸಿಕೊಳ್ಳಲು ಏನು ಅಡ್ಡಿ ಇದೆ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಸರ್ಕಾರ ಬದ್ಧತೆ ಹಾಗೂ ರೈತರ ಬಗೆಗಿನಕಾಳಜಿ ತೋರಿಸಬೇಕಾದರೆ ಯೋಜನೆಯನ್ನು ಸ್ವಾಧೀನಪಡಿಸಿಕೊಳ್ಳಲು ಮಸೂದೆ ಮಂಡಿಸಲಿ ಎಂದು ಸಲಹೆ ನೀಡಿದರು.

ಇದಕ್ಕೆ ಧ್ವನಿಗೂಡಿಸಿದ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್, ಹಿಂದೆ ಯಾವ ವರದಿಗೂ ಪಕ್ಷಾತೀತ ಬೆಂಬಲ ಸಿಕ್ಕಿರಲಿಲ್ಲ. ಸದನದ ಸಾರ್ವಭೌಮತೆಯನ್ನು ಎತ್ತಿ ಹಿಡಿಯಬೇಕಾದರೆ ಕ್ರಿಯಾ ಒಪ್ಪಂದ ರದ್ದುಪಡಿಸಿ, ಯೋಜನೆಯನ್ನು ಸ್ವಾಧೀನಪಡಿಸಿಕೊಳ್ಳುವ ಇಚ್ಛಾಶಕ್ತಿಯನ್ನು ಸರ್ಕಾರ ಪ್ರದರ್ಶಿಸಬೇಕು. ಹೀಗಾದಲ್ಲಿ ಮಾತ್ರ ಸರ್ಕಾರಕ್ಕೆ ವಂಚಿಸಿದ ಅಧಿಕಾರಿಗಳು, ನೈಸ್‌ ಸಂಸ್ಥೆಗೆ ಬುದ್ಧಿ ಬರುತ್ತದೆ ಎಂದರು.

ಒಪ್ಪಂದ ರದ್ದು ಮಾಡುವಂತೆ ಕಾನೂನು ಇಲಾಖೆ ಶಿಫಾರಸು ಮಾಡಿದೆ ಎಂದು ‘ಪ್ರಜಾವಾಣಿ’ ಮುಖಪುಟದಲ್ಲಿ ವರದಿ ಮಾಡಿದೆ ಎಂದು ಹೇಳಿದ ಜೆಡಿಎಸ್‌ನ ಕೆ.ಎಂ. ಶಿವಲಿಂಗೇಗೌಡ, ವರದಿಯ ಶಿಫಾರಸು ಅನುಷ್ಠಾನ ಮಾಡಲು ಯಾರು ಅಡ್ಡಿಯಾಗಿದ್ದಾರೆ ಎಂದು ಪ್ರಶ್ನಿಸಿದರು.

ಪ್ರಮುಖ ಕಡತಗಳು ನಾಪತ್ತೆಯಾಗಿರುವ ಕಾರಣಕ್ಕೆ ಯಾರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ, ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸಿದ ನೈಸ್ ಸಂಸ್ಥೆಯಿಂದ ₹700 ಕೋಟಿ ದಂಡ ವಸೂಲಿಗೆ ಗಣಿ ಇಲಾಖೆ ಏನು ಕ್ರಮ ಕೈಗೊಂಡಿದೆ, 2,000 ಎಕರೆ ಭೂಮಿಯನ್ನು ರೈತರಿಗೆ ವಾಪಸ್ ನೀಡಲು ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದ ಅವರು, ಹಗರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿದರು.

ಈ ವಿಷಯ ಕುರಿತು ಕಾಂಗ್ರೆಸ್‌ನ ಎಸ್.ಟಿ. ಸೋಮಶೇಖರ್, ಬಿಜೆಪಿಯ ಸತೀಶ್ ರೆಡ್ಡಿ, ಸರ್ವೋದಯಕರ್ನಾಟಕ ಪಕ್ಷದ ಕೆ.ಎಸ್. ಪುಟ್ಟಣ್ಣಯ್ಯ, ಜೆಡಿಎಸ್‌ನ ವೈ.ಎಸ್.ವಿ. ದತ್ತ ಮಾತನಾಡಿದರು.

ಮುಖ್ಯಮಂತ್ರಿ ಹಿತಾಸಕ್ತಿ ಬಹಿರಂಗವಾಗಲಿ: ಕಾಗೇರಿ

‘ಸದನ ಸಮಿತಿ ವರದಿ ಮೇಲೆ ಕ್ರಮ ಕೈಗೊಳ್ಳದಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದರಲ್ಲಿ ಅವರ ಹಿತಾಸಕ್ತಿ ಏನಿದೆ ಎಂಬುದನ್ನು ಸದನಕ್ಕೆ ಬಹಿರಂಗ ಪಡಿಸಿ’ ಎಂದು ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಆಗ್ರಹಿಸಿದರು.

ಇಡೀ ಸದನ ವರದಿಗೆ ಬೆಂಬಲ ನೀಡಿತ್ತು. ಹಾಗಿದ್ದರೂ ಸದನ ಸಮಿತಿಯ ಅಧ್ಯಕ್ಷರಾಗಿದ್ದ ಕಾನೂನು ಸಚಿವರು ಇಷ್ಟು ಅಸಹಾಯಕರಾದರೆ ಹೇಗೆ. ಕ್ರಮ ಕೈಗೊಳ್ಳದಂತೆ ಮುಖ್ಯಮಂತ್ರಿ ಸೂಚನೆ ನೀಡಿರುವುದು ನಿಜವಾದರೆ ಅದನ್ನು ಸದನದಲ್ಲಿ ಹೇಳಿ. ನಿಮ್ಮ ಬೆಂಬಲಕ್ಕೆ ನಾವು ನಿಲ್ಲುತ್ತೇವೆ ಎಂದರು.

‘ವರದಿ ಎಷ್ಟಕ್ಕೆ ಮಾರಾಟವಾಗಿದೆ’
‘ಸದನ ಸಮಿತಿ ವರದಿ ಎಷ್ಟು ಮೊತ್ತಕ್ಕೆ ಮಾರಾಟವಾಗಿದೆ ಎಂದು ಜನರು ಕೇಳುತ್ತಿದ್ದಾರೆ. ಇದರ ಬಗ್ಗೆ ಸ್ಪಷ್ಟನೆ ನೀಡಬೇಕು’ ಎಂದು ಬಿಜೆಪಿಯ ಎಸ್.ಆರ್. ವಿಶ್ವನಾಥ್‌ ಒತ್ತಾಯಿಸಿದರು.

‘ಸದನ ಸಮಿತಿಯ ಸದಸ್ಯನಾಗಿ ನನ್ನನ್ನು ನೇಮಕ ಮಾಡಿದಾಗ, ಎಂತೆಂತಹ ದೊಡ್ಡವರು ಹೋರಾಟ ನಡೆಸಿದ್ದಾರೆ. ಅವರಿಂದ ಏನೂ ಆಗಲಿಲ್ಲ. ಎಲ್ಲರೂ ಅಡ್ಜಸ್ಟ್ ಆಗ್ತಾರೆ ಎಂದು ಜನರು ಟೀಕಿಸಿದ್ದರು. ಅಂತಹ ಅಪವಾದಕ್ಕೆ ಗುರಿಯಾಗದಂತೆ ವರದಿ ಕೊಟ್ಟಿದ್ದೇವೆ. ವರ್ಷ ಕಳೆದರೂ ರೈತರಿಗೆ ಭೂಮಿ ಸಿಗಲಿಲ್ಲ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿಲ್ಲ ಎಂದು ಜನ ಈಗ ಹೀಗಳೆಯುತ್ತಿದ್ದಾರೆ. ನಾವಂತೂ ಮಾರಾಟವಾಗಿಲ್ಲ. ಮಾರಾಟವಾಗಿದ್ದು ಯಾರು’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.