ADVERTISEMENT

ನ್ಯಾಯಮೂರ್ತಿ ಸುಭಾಷ ಅಡಿ ಆರೋಪಮುಕ್ತ

ಬೂದಿಹಾಳ್ ಸಮಿತಿ ವರದಿ ಸಲ್ಲಿಕೆ *ಸರ್ಕಾರಕ್ಕೆ ಮುಖಭಂಗ

​ಪ್ರಜಾವಾಣಿ ವಾರ್ತೆ
Published 26 ಮೇ 2016, 19:41 IST
Last Updated 26 ಮೇ 2016, 19:41 IST
ನ್ಯಾಯಮೂರ್ತಿ ಸುಭಾಷ ಅಡಿ ಆರೋಪಮುಕ್ತ
ನ್ಯಾಯಮೂರ್ತಿ ಸುಭಾಷ ಅಡಿ ಆರೋಪಮುಕ್ತ   

ಬೆಂಗಳೂರು: ಉಪ ಲೋಕಾಯುಕ್ತ ನ್ಯಾಯಮೂರ್ತಿ ಸುಭಾಷ ಬಿ. ಅಡಿ ಅವರು ಸ್ವಜನ ಪಕ್ಷಪಾತ ನಡೆಸಿದ್ದಕ್ಕೆ ಯಾವುದೇ ಆಧಾರಗಳಿಲ್ಲ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಆರ್.ಬಿ. ಬೂದಿಹಾಳ್ ಸಮಿತಿ ವರದಿ ನೀಡಿದೆ.

ಧಾರವಾಡ ಜಿಲ್ಲೆಯ ಡಾ. ಶೀಲಾ ಪಾಟೀಲ ಪ್ರಕರಣದಲ್ಲಿ ನ್ಯಾಯಮೂರ್ತಿ ಅಡಿ ವ್ಯಾಪ್ತಿ ಮೀರಿ ಅಧಿಕಾರ ಚಲಾಯಿಸಿದ್ದಾರೆ ಎಂಬ ಆರೋಪ ಹೊರಿಸಿ, ಅವರ ಪದಚ್ಯುತಿಗೆ ಯತ್ನಿಸಿದ್ದ ರಾಜ್ಯ ಸರ್ಕಾರಕ್ಕೆ ಇದರಿಂದ ತೀವ್ರ ಮುಖಭಂಗ ಆದಂತಾಗಿದೆ.

‘ಆರೋಪಗಳನ್ನು ಹೊತ್ತುಕೊಂಡು ಇರಲಾರೆ. ಲೋಕಾಯುಕ್ತ ಸಂಸ್ಥೆ ದುರ್ಬಲಗೊಳಿಸಲು ಅವಕಾಶ ನೀಡಲಾರೆ’ ಎಂದು ಹೇಳಿದ್ದ ನ್ಯಾಯಮೂರ್ತಿ ಅಡಿ ಈಗ ಆರೋಪ ಮುಕ್ತರಾಗಿದ್ದಾರೆ.

‘ಅಡಿ ಅವರ ವಿರುದ್ಧ ಆರೋಪ ಮಾಡಿದವರು, ಅದನ್ನು ಸಾಬೀತುಪಡಿಸುವ ಸಾಕ್ಷ್ಯಗಳನ್ನು  ನೀಡಲು ವಿಫಲರಾಗಿದ್ದಾರೆ’ ಎಂದು ನ್ಯಾಯಮೂರ್ತಿ ಬೂದಿಹಾಳ್ ಅವರು ಸ್ಪೀಕರ್‌ ಕಾಗೋಡು ತಿಮ್ಮಪ್ಪ ಅವರಿಗೆ ಮೇ 20ರಂದು ಸಲ್ಲಿಸಿರುವ ವರದಿಯಲ್ಲಿ ಹೇಳಿದ್ದಾರೆ.

ಪಕ್ಷಪಾತದ ಆರೋಪ: ಅಡಿ ಅವರು ಸ್ವಜನಪಕ್ಷಪಾತ ನಡೆಸಿದ್ದಾರೆ. ಹಾಗಾಗಿ ಅವರನ್ನು ಎರಡನೆಯ ಉಪ ಲೋಕಾಯುಕ್ತ ಸ್ಥಾನದಿಂದ ಪದಚ್ಯುತಿಗೊಳಿಸಬೇಕು ಎಂದು ತನ್ವೀರ್ ಸೇಠ್ ನೇತೃತ್ವದಲ್ಲಿ ಕಾಂಗ್ರೆಸ್ಸಿನ 78 ಶಾಸಕರು ಸ್ಪೀಕರ್‌ಗೆ ಪ್ರಸ್ತಾವ ಸಲ್ಲಿಸಿದ್ದರು.

ಈ ಪ್ರಸ್ತಾವದ ಕುರಿತು ರಾಜ್ಯದ ಅಡ್ವೊಕೇಟ್ ಜನರಲ್, ಕಾನೂನು ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಲೋಕಾಯುಕ್ತ ರಿಜಿಸ್ಟ್ರಾರ್‌ ಜೊತೆ ಚರ್ಚಿಸಿದ ಕಾಗೋಡು ತಿಮ್ಮಪ್ಪ ಅವರು ಆರೋಪಗಳ ಕುರಿತು ತನಿಖೆ ನಡೆಸುವಂತೆ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿದ್ದ ಎಸ್‌.ಕೆ. ಮುಖರ್ಜಿ ಅವರಿಗೆ ಮನವಿ ಮಾಡಿದ್ದರು. ನ್ಯಾಯಮೂರ್ತಿ ಮುಖರ್ಜಿ  ತನಿಖೆ ನಡೆಸಲು ನ್ಯಾಯಮೂರ್ತಿ ಬೂದಿಹಾಳ್ ಸಮಿತಿ ರಚಿಸಿದ್ದರು.

ಅಡಿ ಅವರೂ ಸಮಿತಿಯ ಎದುರು ಪಾಟಿ ಸವಾಲಿಗೆ ಹಾಜರಾಗಿದ್ದರು. ಬೂದಿಹಾಳ್‌ ಸಮಿತಿ 316 ಪುಟಗಳ ವರದಿಯನ್ನು ಸ್ಪೀಕರ್‌ ಅವರಿಗೆ ನೀಡಿದೆ.

ಮಜಗೆ ಆಕ್ಷೇಪ: ಒಂದನೆಯ ಉಪ ಲೋಕಾಯುಕ್ತರಾಗಿದ್ದ ನ್ಯಾಯಮೂರ್ತಿ ಎಸ್.ಬಿ. ಮಜಗೆ ವ್ಯಾಪ್ತಿಗೆ ಬರುವ ಡಾ. ಶೀಲಾ ಪಾಟೀಲ ವಿರುದ್ಧದ ಇಲಾಖಾ ವಿಚಾರಣೆಯನ್ನು ಕೈಬಿಡಬಹುದು ಎಂದು ನ್ಯಾಯಮೂರ್ತಿ ಅಡಿ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದರು.

ಪತ್ರದ ಅನುಸಾರ ಡಾ. ಶೀಲಾ ವಿರುದ್ಧದ ಇಲಾಖಾ ವಿಚಾರಣೆಯನ್ನು ಸರ್ಕಾರ ಕೈಬಿಟ್ಟಿತ್ತು. ಇದರ ಬಗ್ಗೆ ಮಜಗೆ ಅವರು, ಲೋಕಾಯುಕ್ತರಾಗಿದ್ದ ವೈ. ಭಾಸ್ಕರ ರಾವ್‌ ಅವರಿಗೆ ಪತ್ರ ಬರೆದು ಅಡಿ ಕಾರ್ಯವೈಖರಿ ಬಗ್ಗೆ ಆಕ್ಷೇಪ ಎತ್ತಿದ್ದರು.

‘ಅಡಿ ಅವರ ಆದೇಶ ನೋಡಿ ನನಗೆ ಆಶ್ಚರ್ಯ ಮಾತ್ರ ಆಗಿಲ್ಲ, ಆಘಾತವೂ ಆಗಿದೆ. ನನ್ನ ವ್ಯಾಪ್ತಿಯ ಪ್ರಕರಣವನ್ನು ಮತ್ತೊಬ್ಬ ಉಪ ಲೋಕಾಯುಕ್ತರು ವಿಲೇವಾರಿ ಮಾಡಿರುವುದು ಕಾನೂನುಬಾಹಿರ’ ಎಂದು ಪತ್ರದಲ್ಲಿ ಹೇಳಿದ್ದರು. ಕಾಂಗ್ರೆಸ್‌ ಶಾಸಕರು ಈ ಪತ್ರವನ್ನು ಅಡಿ ವಿರುದ್ಧ ಪ್ರಸ್ತಾವ ಸಲ್ಲಿಸುವಾಗ ಉಲ್ಲೇಖಿಸಿದ್ದರು.

‘ದಾಖಲೆ ಸಾಕಾಗದು': ತನ್ವೀರ್ ಸೇಠ್ ಮತ್ತು ಇತರರು ಸಲ್ಲಿಸಿದ ಪ್ರಸ್ತಾವ ಸ್ವೀಕರಿಸಿದ ನಂತರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ್ದ ಕಾಗೋಡು ತಿಮ್ಮಪ್ಪ, ‘ಆರೋಪಗಳ ಜೊತೆ ನೀಡಿರುವ ದಾಖಲೆಗಳು ಸಾಕಾಗುತ್ತಿಲ್ಲ. ಅಡಿ ವಿರುದ್ಧದ ಆರೋಪಗಳ ಕುರಿತು ಮೇಲ್ನೋಟಕ್ಕೆ ಕೆಲವು ಆಧಾರಗಳನ್ನು ನೀಡಲಾಗಿದೆ. ಆದರೆ, ಅವಷ್ಟೇ ಸಾಕಾಗದು’ ಎಂದು ಹೇಳಿದ್ದರು.

ಪ್ರಸ್ತಾವ ಸ್ವೀಕರಿಸಿದ್ದ ಕಾಗೋಡು ತಿಮ್ಮಪ್ಪ ಅವರು ಅದನ್ನು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯವರಿಗೆ ಕಳುಹಿಸುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಕಾಂಗ್ರೆಸ್ಸಿನ ಹಿರಿಯ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದರು.

‘ಸಿ.ಎಂ, ಜಯಚಂದ್ರ  ಕ್ಷಮೆಯಾಚಿಸಲಿ’
ಇನ್ನು, ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್, ‘ಪ್ರಾಮಾಣಿಕ ನ್ಯಾಯಮೂರ್ತಿ ಸುಭಾಷ ಬಿ. ಅಡಿ ಅವರಿಗೆ ಚಿತ್ರಹಿಂಸೆ ನೀಡಿದ್ದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾನೂನು ಸಚಿವ ಟಿ.ಬಿ. ಜಯಚಂದ್ರ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು’ ಎಂದು ಒತ್ತಾಯಿಸಿದರು. 

ನ್ಯಾಯಮೂರ್ತಿ ಅಡಿ ಅವರು ಆರೋಪಗಳಿಂದ ಮುಕ್ತರಾಗಿರುವ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶೆಟ್ಟರ್, ‘ರಾಜ್ಯ ಸರ್ಕಾರ ದ್ವೇಷದ ಕೆಲಸ ಮಾಡಿತ್ತು, ನ್ಯಾಯಮೂರ್ತಿಯೊಬ್ಬರ ತೇಜೋವಧೆಗೆ ಮುಂದಾಗಿತ್ತು. ಈಗ ಸರ್ಕಾರಕ್ಕೆ ಮಂಗಳಾರತಿ ಆಗಿದೆ’ ಎಂದರು.

‘ವಿಧಾನ ಪರಿಷತ್ತಿನ ಸದಸ್ಯ ವಿ.ಎಸ್. ಉಗ್ರಪ್ಪ ಅವರಿಂದಾಗಿ ಅಡಿ ಅವರ ವಿರುದ್ಧ ಇಂಥ ಆರೋಪ ಹೊರಿಸಲಾಯಿತು. ಕಾಂಗ್ರೆಸ್ ಶಾಸಕ ಅಶೋಕ ಎಂ. ಪಟ್ಟಣ ಅವರು ಸೂಚಿಸಿದಾಗ, ಪದಚ್ಯುತಿ ಪ್ರಸ್ತಾವಕ್ಕೆ ಆ ಪಕ್ಷದ ಶಾಸಕರು ಕಣ್ಣುಮುಚ್ಚಿ ಸಹಿ ಮಾಡಿದರು. ನೈತಿಕತೆ ಇದ್ದಿದ್ದರೆ ಸಿದ್ದರಾಮಯ್ಯ ಹಾಗೂ ಜಯಚಂದ್ರ ಅವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುತ್ತಿದ್ದರು. ಆದರೆ ಅವರು ಭಂಡರು. ಹಾಗಾಗಿ, ಕನಿಷ್ಠಪಕ್ಷ ಜನತೆಯ ಕ್ಷಮೆಯನ್ನಾದರೂ ಕೋರಬೇಕು’ ಎಂದು ಆಗ್ರಹಿಸಿದರು.

ಬಿಎಸ್‌ವೈ ಟೀಕೆ: ಪ್ರಾಮಾಣಿಕ ವ್ಯಕ್ತಿಗಳ ಚಾರಿತ್ರ್ಯಕ್ಕೆ ಮಸಿ ಬಳಿಯುವ ಕಾಂಗ್ರೆಸ್ಸಿನ ಹೇಯ ರಾಜಕಾರಣ ಈ ಪ್ರಕರಣದಲ್ಲಿ ಜಗಜ್ಜಾಹೀರಾಗಿದೆ. ಇಂಥ ಕೆಲಸ ಮಾಡಿದ್ದಕ್ಕೆ ಸರ್ಕಾರದ ಮುಖ್ಯಸ್ಥರು ಜನರ ಕ್ಷಮೆ ಕೋರಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಆಗ್ರಹಿಸಿದ್ದಾರೆ.
ತಾವು ಆರೋಪ ಮುಕ್ತ ಆಗಿರುವ ಬಗ್ಗೆ ಪ್ರತಿಕ್ರಿಯೆ ನೀಡಲು ನ್ಯಾಯಮೂರ್ತಿ ಅಡಿ ನಿರಾಕರಿಸಿದರು.

ಅಡಿ ಕರ್ತವ್ಯಕ್ಕೆ ಇನ್ನಿಲ್ಲ ಅಡ್ಡಿ
ಉಪ ಲೋಕಾಯುಕ್ತರು ತಪ್ಪು ಮಾಡಿಲ್ಲ ಎಂದು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅಥವಾ ಅವರು ನೇಮಿಸಿದ ನ್ಯಾಯಮೂರ್ತಿಯ ಸಮಿತಿ ವರದಿ ನೀಡಿದರೆ, ಪದಚ್ಯುತಿ ಪ್ರಸ್ತಾವನೆಗೆ ಸಂಬಂಧಿಸಿದಂತೆ ಮುಂದಿನ ಕ್ರಮ ಕೈಗೊಳ್ಳಬೇಕಾಗಿಲ್ಲ ಎಂದು ಕರ್ನಾಟಕ ಲೋಕಾಯುಕ್ತ (ತಿದ್ದುಪಡಿ) ಕಾಯ್ದೆ – 2015ರ ಸೆಕ್ಷನ್ 6(10)ರಲ್ಲಿ ಹೇಳಲಾಗಿದೆ.

‘ನ್ಯಾಯಮೂರ್ತಿ ಸುಭಾಷ ಬಿ. ಅಡಿ ಪದಚ್ಯುತಿ ಸಂಬಂಧ ತನ್ವೀರ್ ಸೇಠ್‌ ಅವರು ಸಲ್ಲಿಸಿದ್ದ ಪ್ರಸ್ತಾವನೆ ಕುರಿತ ಮುಂದಿನ ಪ್ರಕ್ರಿಯೆಗಳನ್ನು ಕೈಬಿಡಲಾಗಿದೆ’ ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಗುರುವಾರ ನೀಡಿರುವ ಆದೇಶದಲ್ಲಿ ಹೇಳಿದ್ದಾರೆ.

ADVERTISEMENT

‘ತನಿಖೆ ಪ್ರಕ್ರಿಯೆ ಪೂರ್ಣಗೊಂಡು, ನಿರ್ದೋಷಿ ಎಂಬುದು ಸಾಬೀತಾಗಿರುವಾಗ ಅಡಿ ಅವರು ಉಪ ಲೋಕಾಯುಕ್ತರಾಗಿ ಕರ್ತವ್ಯ ನಿರ್ವಹಿಸಲು ಯಾವ ಅಡ್ಡಿಯೂ ಇಲ್ಲ’ ಎಂದು ಹೈಕೋರ್ಟ್‌ನ ಹಿರಿಯ ವಕೀಲ ಅಶೋಕ ಹಾರನಹಳ್ಳಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು.

ಪದಚ್ಯುತಿ ಪ್ರಸ್ತಾವನೆಯನ್ನು ಸ್ಪೀಕರ್ ಅವರು ಹೈಕೋರ್ಟ್‌ಗೆ ರವಾನಿಸಿದ ನಂತರ ಅಡಿ ಅವರು ಕರ್ತವ್ಯಕ್ಕೆ ಹಾಜರಾಗುತ್ತಿರಲಿಲ್ಲ. ಅವರು ಕರ್ತವ್ಯಕ್ಕೆ ಹಾಜರಾಗುವಂತಿಲ್ಲ ಎಂದು ಲೋಕಾಯುಕ್ತ ರಿಜಿಸ್ಟ್ರಾರ್‌ಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಪತ್ರ ಕಳುಹಿಸಿತ್ತು.

ಅಡಿ ವಿರುದ್ಧದ ಆರೋಪ: ಘಟನೆಗಳ ಹಿನ್ನೋಟ
 ವೈ. ಭಾಸ್ಕರ ರಾವ್ ಅವರು ಲೋಕಾಯುಕ್ತರಾಗಿದ್ದಾಗ ಅವರ ಪುತ್ರ ಅಶ್ವಿನ್‌, ಲೋಕಾಯುಕ್ತ ಕಚೇರಿಗೆ ಅಧಿಕಾರಿಗಳನ್ನು ಕರೆಸಿಕೊಂಡು ಅವರಿಂದ ಲಂಚ

ಕೇಳುತ್ತಿದ್ದಾರೆ ಎಂಬ ಆರೋಪ ಕೇಳಿಬಂದ ನಂತರ, ರಾವ್ ಪದಚ್ಯುತಿಗೆ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಪ್ರಸ್ತಾವ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ, ಎರಡನೆಯ ಉಪ ಲೋಕಾಯುಕ್ತ ನ್ಯಾಯಮೂರ್ತಿ ಸುಭಾಷ ಬಿ. ಅಡಿ ಪದಚ್ಯುತಿಗೆ ಕಾಂಗ್ರೆಸ್ಸಿನ 78 ಶಾಸಕರು ಪ್ರಸ್ತಾವನೆ ಸಲ್ಲಿಸಿದರು. ಅಡಿ ಪದಚ್ಯುತಿ ಪ್ರಸ್ತಾವ ಸಲ್ಲಿಕೆಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅಡಿ ವಿರುದ್ಧ ಪತ್ರಿಕಾಗೋಷ್ಠಿ ನಡೆಸಿದ್ದ ಕಾಂಗ್ರೆಸ್ ಶಾಸಕರಾದ ವಿ.ಎಸ್. ಉಗ್ರಪ್ಪ ಹಾಗೂ ಅಶೋಕ ಎಂ. ಪಟ್ಟಣ, ‘ಅಡಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದ್ದರು.

ಪ್ರಸ್ತಾವನೆ ಸಲ್ಲಿಸಿದ ನಂತರದ ಪ್ರಮುಖ ಘಟನಾವಳಿಗಳ ಮೇಲೊಂದು ಪಕ್ಷಿನೋಟ ಇಲ್ಲಿದೆ.
* ನವೆಂಬರ್ 23, 2015: ಅಡಿ ಪದಚ್ಯುತಿಗೆ ಕೋರಿ ಕಾಂಗ್ರೆಸ್ ಶಾಸಕರಿಂದ ಪ್ರಸ್ತಾವ ಸಲ್ಲಿಕೆ.
* ನವೆಂಬರ್ 27, 2015: ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಅವರಿಂದ ವಿಧಾನಸಭೆಯಲ್ಲಿ ಪ್ರಸ್ತಾವ ಮಂಡನೆ.
* ಫೆಬ್ರುವರಿ 26, 2016: ಸುಭಾಷ ಅಡಿ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯವರಿಗೆ, ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಂದ ಪತ್ರ.
* ಮಾರ್ಚ್‌ 3, 2016: ಅಡಿ ಅವರು ಉಪ ಲೋಕಾಯುಕ್ತರಾಗಿ ಕರ್ತವ್ಯ ನಿರ್ವಹಿಸುವಂತಿಲ್ಲ ಎಂದು ಲೋಕಾಯುಕ್ತ ರಿಜಿಸ್ಟ್ರಾರ್‌ಗೆ ಸಂದೇಶ ರವಾನೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.