ADVERTISEMENT

ನ್ಯಾಯಾಂಗ ತನಿಖೆಗೆ ಆಗ್ರಹ: ಪಿಎಚ್.ಡಿ ತಡೆಗೆ ಒತ್ತಡ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2013, 19:30 IST
Last Updated 30 ಡಿಸೆಂಬರ್ 2013, 19:30 IST

ತುಮಕೂರು: ತುಮಕೂರು ವಿಶ್ವವಿದ್ಯಾಲಯದ ನಿರ್ಗಮಿತ ಕುಲಪತಿ ಡಾ.ಎಸ್.ಸಿ.ಶರ್ಮಾ ಅವರ ಅಧಿಕಾರ ಅವಧಿಯಲ್ಲಿ ನಡೆದಿರುವ ಶೈಕ್ಷಣಿಕ, ಆಡಳಿತಾತ್ಮಕ ಅಕ್ರಮಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸುವಂತೆ ವಿವಿಧ ಸಂಘಟನೆ ಮುಖಂಡರು, ಲೇಖಕರು, ಪ್ರಗತಿಪರ ಚಿಂತಕರು ಆಗ್ರಹಪಡಿಸಿದ್ದಾರೆ.

ನಿಯಮ ಬಾಹಿರವಾಗಿ ಆರು ಮಂದಿ ಪಿಎಚ್‌.ಡಿ ಪಡೆದುಕೊಳ್ಳುತ್ತಿದ್ದು, ತಕ್ಷಣ ಸರ್ಕಾರ ಮಧ್ಯೆ ಪ್ರವೇಶಿಸಿ ಪದವಿ ಪ್ರದಾನ ಮಾಡದಂತೆ ತಡೆಯಬೇಕು. ಜನವರಿ 12ರಂದು ನಡೆಯುವ ವಿಶ್ವವಿದ್ಯಾಲಯ ಘಟಿಕೋತ್ಸವದಲ್ಲಿ ಪಿಎಚ್‌.ಡಿ ಪದವಿ ಪ್ರಮಾಣಪತ್ರ ವಿತರಿಸಬಾರದು ಎಂದು ಒತ್ತಾಯಿಸಿದ್ದಾರೆ.

ಚಿಂತಕ ಕೆ.ದೊರೈರಾಜು, ಲೇಖಕ ಕೆ.ಪಿ.ನಟರಾಜ್, ಸಮುದಾಯ ಸಂಘಟನೆ ಅಧ್ಯಕ್ಷ ಕೆ.ಗೋವಿಂದರಾಜು, ಪ್ರಜ್ಞಾ ವೇದಿಕೆಯ ಗಂಗಾಧರಮೂರ್ತಿ, ಡಿವೈಎಫ್ಐನ ರಾಘವೇಂದ್ರ, ಸಮುದಾಯದ ಸುರೇಂದ್ರ ಸೋಮವಾರ ಜಂಟಿ ಪತ್ರಿಕಾ ಗೋಷ್ಠಿಯಲ್ಲಿ ಈ ಬೇಡಿಕೆ ಮುಂದಿಟ್ಟರು. ಜಿಲ್ಲೆಯಿಂದ ಹೋರಾಟ ಆರಂಭವಾಗಿದ್ದು, ರಾಜ್ಯದ ಇತರಡೆಗೂ ವಿಸ್ತರಣೆಯಾಗಲಿದೆ ಎಂದರು.

ಡಾ.ಶರ್ಮಾ ಅವಧಿಯಲ್ಲಿ ಸ್ವಜನ ಪಕ್ಷಪಾತ, ಜಾತೀಯತೆ, ಭ್ರಷ್ಟಾಚಾರ ದಿಂದಾಗಿ ವಿ.ವಿ ಶೈಕ್ಷಣಿಕ, ಬೌದ್ಧಿಕ, ನೈತಿಕ ಘನತೆ ಮಣ್ಣುಪಾಲಾಗಿದೆ. ಮೊದಲ ಪಿಎಚ್‌.ಡಿ ಬ್ಯಾಚ್‌ನಲ್ಲಿ 83 ವಿದ್ಯಾರ್ಥಿಗಳಿದ್ದು, ಕೇವಲ ಆರು ಮಂದಿಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಯುಜಿಸಿ, ವಿ.ವಿ ನಿಯಮಗಳಿಗೆ ತಿದ್ದುಪಡಿ ಮಾಡಲಾಗಿದೆ.

ಉಳಿದ 77 ಮಂದಿ ಪಿಎಚ್.ಡಿ ಆಕಾಂಕ್ಷಿಗಳಿಗೆ ಈ ಅವಕಾಶ ನಿರಾಕರಿಸುವ ಮೂಲಕ ಶೈಕ್ಷಣಿಕ ದೌರ್ಜನ್ಯ ಎಸಗಲಾಗಿದೆ. ಇದು ಪ್ರಜಾತಂತ್ರ ವಿರೋಧಿಯಾಗಿದೆ ಎಂದು ಆರೋಪಿಸಿದರು. ಈ ಸಾಲಿನ ಘಟಿಕೋತ್ಸವದಲ್ಲಿ ಡಿಲಿಟ್, ಡಿಎಸ್‌.ಸಿ ಪದವಿ ಪಡೆಯುತ್ತಿರುವವರಲ್ಲಿ ಶೇ 80ರಷ್ಟು ಮಂದಿ ಒಂದೇ ಸಮುದಾಯದವರು ಇದ್ದಾರೆ. ವಿ.ವಿ.ಯಲ್ಲಿ ಸ್ವಹಿತಾಸಕ್ತಿಗಾಗಿ ವಿವಿಧ ಪೀಠಗಳನ್ನು ಸ್ಥಾಪಿಸಲಾಗಿದೆ. ಒಂದೇ ಸಮುದಾಯದ ಏಳು ಮಂದಿಗೆ ಉಪ ಕುಲಸಚಿವ ಹುದ್ದೆ ನೀಡಲಾಗಿದೆ. ಗೌರವ ಪ್ರಾಧ್ಯಾಪಕರ ಹುದ್ದೆ ನೀಡುವಲ್ಲೂ ಜಾತಿ ಕೆಲಸ ಮಾಡಿದೆ ಎಂದು ಆರೋಪಿಸಿದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.