ADVERTISEMENT

ಪಂಚಾಯ್ತಿ ಅನುದಾನ ಶೇ 8ಕ್ಕೆ ಏರಿಸಿ

15ನೇ ಹಣಕಾಸು ಆಯೋಗಕ್ಕೆ ಕೇಂದ್ರ ಗ್ರಾಮೀಣಾಭಿವೃದ್ಧಿ ಮಾಜಿ ಸಚಿವ ಮಣಿ ಶಂಕರ್ ಅಯ್ಯರ್ ಮನವಿ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2017, 19:30 IST
Last Updated 22 ಆಗಸ್ಟ್ 2017, 19:30 IST
ತುಮಕೂರಿನಲ್ಲಿ ಮಂಗಳವಾರ ನಡೆದ ಪಂಚಾಯತ್ ರಾಜ್ ಜಿಲ್ಲಾ ಸಮಾವೇಶದಲ್ಲಿ ಭಾಗವಹಿಸಿದ್ದ ಮಹಿಳಾ ಪ್ರತಿನಿಧಿಗಳು
ತುಮಕೂರಿನಲ್ಲಿ ಮಂಗಳವಾರ ನಡೆದ ಪಂಚಾಯತ್ ರಾಜ್ ಜಿಲ್ಲಾ ಸಮಾವೇಶದಲ್ಲಿ ಭಾಗವಹಿಸಿದ್ದ ಮಹಿಳಾ ಪ್ರತಿನಿಧಿಗಳು   

ತುಮಕೂರು: ‘ಕೇಂದ್ರ 15ನೇ ಹಣಕಾಸು ಆಯೋಗವು ಪಂಚಾಯಿತಿಗಳಿಗೆ ಶೇ 4ರಷ್ಟು ಮಾತ್ರ ಅನುದಾನ ನಿಗದಿಪಡಿಸಿದ್ದು, ಅದನ್ನು 6ರಿಂದ 8ಕ್ಕೆ ಹೆಚ್ಚಿಸಿದರೆ ಮಾತ್ರ ಎಲ್ಲರೊಂದಿಗೆ ಎಲ್ಲರ ವಿಕಾಸ (ಸಬ್‌ ಕಾ ಸಾಥ್ ಸಬ್ ಕಾ ವಿಕಾಸ್) ಎಂಬ ಆಶಯ ಸಾಕಾರವಾಗಲಿದೆ’ ಎಂದು ಪಂಚಾಯತ್‌ರಾಜ್‌ ತಜ್ಞ ಮಣಿಶಂಕರ್ ಅಯ್ಯರ್ ಮಂಗಳವಾರ ಇಲ್ಲಿ ಹೇಳಿದರು.

73ನೇ ಸಂವಿಧಾನ ತಿದ್ದುಪಡಿ ಮತ್ತು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ಕಾಯ್ದೆ 1993ರ ‘ರಜತ ವರ್ಷಾಚರಣೆ ಮತ್ತು ಪಂಚಾಯತ್‌ರಾಜ್ ಜಿಲ್ಲಾ ಸಮಾವೇಶ’ದಲ್ಲಿ ವಿಶೇಷ ಉಪನ್ಯಾಸ ನೀಡಿದರು.

(ಸಮಾವೇಶದಲ್ಲಿ ತೋಟಗಾರಿಕೆ ಇಲಾಖೆ ಪ್ರದರ್ಶಿಸಿದ ತೆಂಗು, ಅಡಿಕೆ ಬೆಳೆಗಳನ್ನು ವಿಧಾನ ಪರಿಷತ್‌ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ, ಸಚಿವ ಟಿ.ಬಿ.ಜಯಚಂದ್ರ, ಪಂಚಾಯತ್‌ರಾಜ್‌ ತಜ್ಞ ಮಣಿ ಶಂಕರ್ ಅಯ್ಯರ್, ಸಚಿವ ಎಚ್.ಕೆ.ಪಾಟೀಲ್ ವೀಕ್ಷಿಸಿದರು.)

ADVERTISEMENT

‘ನನ್ನ ಬಹಳ ವರ್ಷದ ಗೆಳೆಯರೊಬ್ಬರು 15ನೇ ಹಣಕಾಸು ಆಯೋಗಕ್ಕೆ ಇಷ್ಟರಲ್ಲಿಯೇ ನೂತನ ಅಧ್ಯಕ್ಷರಾಗುವ ಸಾಧ್ಯತೆ ಇದೆ. ಅವರು ಅಧ್ಯಕ್ಷರಾದರೆ ಶೇ 8ರಷ್ಟು ಅನುದಾನ ಹೆಚ್ಚಳ ಮಾಡಲು ಮನವಿ ಮಾಡುತ್ತೇನೆ. ಕರ್ನಾಟಕ ಸರ್ಕಾರವು ಅನುದಾನ ಹೆಚ್ಚಳ ಅಗತ್ಯ ಕುರಿತು ಸಮಗ್ರ ವರದಿ ಕೊಟ್ಟರೆ ಆಯೋಗದ ಅಧ್ಯಕ್ಷರ ಗಮನಕ್ಕೆ ತರಲಾಗುವುದು’ ಎಂದು ಹೇಳಿದರು.

‘ಪಂಚಾಯತ್ ರಾಜ್ ಸಂಸ್ಥೆಗಳು ಸಂವಿಧಾನಬದ್ಧವಾಗುವ ಮೊದಲು ಈ ದೇಶದಲ್ಲಿ 4,500 ಶಾಸಕರು ಮತ್ತು 550 ಸಂಸದರು ಮಾತ್ರ ಅಭಿವೃದ್ಧಿ ಬಗ್ಗೆ ಚರ್ಚಿಸಿ ಯೋಜನೆ ರೂಪಿಸುತ್ತಿದ್ದರು. ಈಗ ದೇಶದಲ್ಲಿ ವಿವಿಧ ಪಂಚಾಯ್ತಿಗಳ ಒಟ್ಟು 32 ಲಕ್ಷ ಪ್ರತಿನಿಧಿಗಳು ಆ ಜವಾಬ್ದಾರಿ ನಿರ್ವಹಿಸುವಂತಾಗಿದೆ. ವಿಶೇಷವಾಗಿ ಪಂಚಾಯತ್ ರಾಜ್ ಕಾಯ್ದೆ ರಚಿಸಿದ ರಾಜ್ಯಗಳಲ್ಲಿ ಕರ್ನಾಟಕ ಮೊದಲ ರಾಜ್ಯವಾಗಿದೆ. 24 ವರ್ಷ ಪೂರೈಸಿ 25ನೇವರ್ಷಕ್ಕೆ ಪದಾರ್ಪಣೆ ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ’ ಎಂದರು.

‘ಪಂಚಾಯತ್‌ ರಾಜ್ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕ ಲೆಕ್ಕಪತ್ರ ನಿರ್ವಹಣೆ ಅವಶ್ಯವಾಗಿದೆ. ಲೆಕ್ಕ ಪರಿಶೋಧನೆಯೇ ಬೇರೆ ಸಾಮಾಜಿಕ ಲೆಕ್ಕ ಪರಿಶೋಧನೆಯೇ ಬೇರೆ. ಸರ್ಕಾರದ ಅನುದಾನ ಬಳಸುವುದರಿಂದ ವೃತ್ತಿಪರ ಸಂಸ್ಥೆಯಿಂದ ತರಬೇತಿ ಪಡೆದವರಿಂದಲೇ ಸಾಮಾಜಿಕ ಲೆಕ್ಕ ಪರಿಶೋಧನೆ ನಡೆಸಬೇಕು. ಇಂತಹ ಪರಿಶೋಧನೆಯಿಂದ ಅನುದಾನ ದುರ್ಬಳಕೆ ತಪ್ಪುತ್ತದೆ, ಕಾಲ ಮಿತಿಯಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತವೆ’ ಎಂದು ಹೇಳಿದರು.

‘ಸರ್ಕಾರವು ಕೃಷಿ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಒದಗಿಸುವ ಅನುದಾನವೂ ಪಂಚಾಯಿತಿಗಳ ಮೂಲಕವೇ ಬಳಕೆ ಮಾಡುವಂತಹ ವ್ಯವಸ್ಥೆ ರೂಪಗೊಳ್ಳಬೇಕು’ ಎಂದು ಹೇಳಿದರು.

‘ಪಂಚಾಯತ್ ರಾಜ್ ಆಡಳಿತ ವ್ಯವಸ್ಥೆಯಲ್ಲಿ ಶೇ 50ರಷ್ಟು ಮಹಿಳೆಯರಿಗೆ ಅಧಿಕಾರ ಲಭಿಸಿದೆ. ಅದನ್ನು ಸಮರ್ಥವಾಗಿ ಚಲಾಯಿಸಿ ಜನಪರ ಕೆಲಸ ಮಾಡಬೇಕು’ ಎಂದು ಅವರು ಆಶಯ ವ್ಯಕ್ತಪಡಿಸಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ‘ಅಕ್ಟೋಬರ್ 2ರಂದು ರಾಜ್ಯದ 15 ಜಿಲ್ಲೆಗಳನ್ನು ಬಯಲು ಶೌಚ ಮುಕ್ತ ಜಿಲ್ಲೆಗಳು ಎಂದು ಘೋಷಣೆ ಮಾಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.