ADVERTISEMENT

ಪತ್ತೆಗೆ ಶರ್ಲಾಕ್‌ ಹೋಮ್ಸ್ ಬೇಕಿಲ್ಲ!

ಕರ್ನಾಟಕ ವಿಶ್ವವಿದ್ಯಾಲಯ ಕುಲಪತಿ ಭ್ರಷ್ಟಾಚಾರ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2014, 19:30 IST
Last Updated 8 ಅಕ್ಟೋಬರ್ 2014, 19:30 IST

ಬೆಂಗಳೂರು: ‘ಧಾರವಾಡದ ಕರ್ನಾಟಕ ವಿಶ್ವ­­ವಿದ್ಯಾಲಯದ ಕುಲಪತಿ ಡಾ.ಎಚ್‌.­ಬಿ. ವಾಲಿಕಾರ್‌ ಅವರು ತಮ್ಮ ಅಧಿ­ಕಾ­ರಾ­­ವಧಿಯ ಕೊನೆಯ ದಿನಗಳಲ್ಲಿ ತರಾ­ತು­ರಿಯಲ್ಲಿ ನಡೆಸಿದ ನೇಮಕಾತಿಗಳ ಬಗ್ಗೆ ಹಾಗೂ ಹೈಕೋರ್ಟ್‌ನಲ್ಲಿ ಹಲವಾರು ಕೇವಿಯಟ್‌ಗಳನ್ನು ಸಲ್ಲಿಸಿರುವ ಬಗ್ಗೆ ತನಿಖೆ ನಡೆಸಲು ಶರ್ಲಾಕ್‌ ಹೋಮ್ಸ್ ನಂತಹ ಪ್ರಸಿದ್ಧ ಪತ್ತೇದಾರನ ಅಗತ್ಯವಿಲ್ಲ’.

ವಾಲಿಕಾರ್‌ ಅವರ ವಿರುದ್ಧ ಕೇಳಿ­ಬಂದ ಆರೋಪಗಳ ಬಗ್ಗೆ ತನಿಖೆ ನಡೆ­ಸಲು ರಾಜ್ಯಪಾಲರು ನೇಮಿಸಿದ್ದ ಏಕ­ಸದಸ್ಯ ತನಿಖಾ ಸಮಿತಿಯ ನ್ಯಾಯ­ಮೂರ್ತಿ ಬಿ.ಪದ್ಮರಾಜ್‌ ತಮ್ಮ ವರದಿ­ಯಲ್ಲಿ ಹೀಗೆಂದು ಉಲ್ಲೇಖಿಸಿದ್ದಾರೆ. ವಾಲಿಕಾರ್‌ ಅವರ ವಿರುದ್ಧ ಮಾಡ­ಲಾದ ಆರೋಪಗಳಲ್ಲಿ ಮೇಲ್ನೋಟಕ್ಕೆ ಹುರು­ಳಿವೆ ಎಂದೂ ಅವರು ತಮ್ಮ ವರದಿ­ಯಲ್ಲಿ ಹೇಳಿದ್ದಾರೆ. ಅವರು ರಾಜ್ಯ­ಪಾಲ­ರಿಗೆ ಸಲ್ಲಿಸಿದ ಪೂರ್ಣ ವರದಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ವರದಿಯಲ್ಲಿ ಏನಿದೆ?: ವಾಲಿಕಾರ್‌ ನಡೆ­ಸಿದ ನೇಮಕಾತಿಗಳು ಸಂಪೂರ್ಣ ಅಕ್ರಮ­ವಾ­ಗಿವೆ. ನಿಯಮಗಳನ್ನು ಉಲ್ಲಂಘಿಸ­ಲಾ­­ಗಿದೆ. ವಿಶ್ವವಿದ್ಯಾಲಯ­ಗಳ­ಲ್ಲಿನ ನೇಮ­­­­ಕಾತಿಗೆ ಸಂಬಂಧಿಸಿದಂತೆ 1998ರ ಅ.13ರಂದು ರಾಜ್ಯಪಾಲರು ನೀಡಿದ್ದ ನಿರ್ದೇಶನ ಪಾಲನೆಯಾಗಿಲ್ಲ. ಚುನಾ­ವಣಾ ನೀತಿ ಸಂಹಿತೆಯ ಉಲ್ಲಂಘ­­ನೆಯೂ ಆಗಿದೆ. ಸಹಾಯಕ ಪ್ರಾಧ್ಯಾಪಕರ ನೇಮ­ಕಾ­ತಿಗೆ ಸಂಬಂಧಿಸಿದಂತೆ ಹೊರಡಿಸಿದ ಅಧಿ­ಸೂ­ಚನೆಯಿಂದ ಹಿಡಿದು ನೇಮಕಾತಿ ­ಆದೇಶ ಹೊರಡಿಸುವವರೆಗಿನ ಎಲ್ಲ ಪ್ರಕ್ರಿಯೆ­­ಗಳೂ ಸಂಶಯಾತ್ಮಕವಾಗಿವೆ.

ತಮ್ಮ ಅಧಿಕಾರದ ಅವಧಿ ಮುಗಿ­ಯುವ ಕೆಲವೇ ದಿನಗಳ ಮೊದಲು ಕುಲ­ಪತಿ ವಾಲಿಕಾರ್‌ ಅವರು ನಡೆಸಿದ ನೇಮ­ಕಾತಿ ಪ್ರಕ್ರಿಯೆ ಯಾವುದೇ ಹಂತದಲ್ಲಿ­ಯೂ ನ್ಯಾಯಯು­ತವಾಗಿಲ್ಲ. ನೇಮಕಾತಿ ಪ್ರಕ್ರಿಯೆ ನಡೆಸುವುದಕ್ಕೆ ಮೊದಲು ಇದರಲ್ಲಿ ಭಾಗಿಯಾಗುವ ಎಲ್ಲ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ನೇಮ­ಕಾತಿಗೆ ಸಂಬಂಧಿಸಿದಂತೆ ರಾಜ್ಯ­ಪಾ­ಲರು ಹೊರಡಿಸಿದ ನಿರ್ದೇಶನವನ್ನು ಗಮ­ನಕ್ಕೆ ತರಲಾಗಿತ್ತು. ಇದನ್ನು ಅಧಿ­ಕಾರಿ­ಗಳು ವಿಚಾರಣೆ ವೇಳೆ ಒಪ್ಪಿ­ಕೊಂಡಿ­ದ್ದಾರೆ.

ಆದರೆ 2000ದಲ್ಲಿ ಕರ್ನಾಟಕ ವಿಶ್ವ­ವಿ­ದ್ಯಾಲಯ ಕಾಯ್ದೆ ಜಾರಿಯಾದ ನಂತರ 1998ರಲ್ಲಿ ರಾಜ್ಯಪಾಲರು ಹೊರ­ಡಿಸಿದ ನಿರ್ದೇಶನ ರದ್ದಾಗಿದೆ ಎಂದು ತಾವು ಭಾವಿಸಿದ್ದಾಗಿ ಅಧಿ­ಕಾರಿ­ಗಳು ಹೇಳಿದ್ದಾರೆ. ಆದರೆ ಇದು ತಪ್ಪು. ರಾಜ್ಯ­­ಪಾಲರ ನಿರ್ದೇಶನವನ್ನು ಪಾಲಿ­ಸಲೇ ಬೇಕಾಗಿತ್ತು. ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಕನಿಷ್ಠ 8 ವರ್ಷ ಬೋಧನಾನುಭವ ಇರ­ಬೇಕು ಎಂದು ಷರತ್ತು ವಿಧಿಸಿ ವಿಶ್ವ­ವಿದ್ಯಾ­ಲ­ಯವೇ ಜಾಹೀರಾತು ನೀಡಿದ್ದರೂ ಇದನ್ನು ಉಲ್ಲಂಘಿಸಿ ಕೇವಲ 6 ವರ್ಷ 3 ತಿಂಗಳು ಬೋಧನಾ ಅನುಭವ ಇರುವ ಅಭ್ಯರ್ಥಿಗೆ ನೇಮಕಾತಿ ಆದೇಶ ನೀಡಲಾಗಿದೆ.

2014ರ ಸೆಪ್ಟೆಂಬರ್‌ನಲ್ಲಿ ಕೂಡ ಹಲವು ನೇಮಕಾತಿಗಳನ್ನು ಮಾಡಿಕೊಳ್ಳ­ಲಾ­ಗಿದ್ದು ಇದು ಕೂಡ ರಾಜ್ಯಪಾಲರ ನಿರ್ದೇ­ಶನದ ಸ್ಪಷ್ಟ ಉಲ್ಲಂಘನೆ. ರಾಜ್ಯ­ಪಾಲರ ಈ ನಿರ್ದೇಶನದ ಬಗ್ಗೆ ಅರಿವು ಇದ್ದರೂ ಕೂಡ ನೇಮಕಾತಿ ಮಾಡಿ­ಕೊಂ­ಡಿ­­­­ರುವುದು ನೇಮ­ಕಾತಿಯಲ್ಲಿ ಅಕ್ರ­ಮ­­ಗಳು ನಡೆದಿವೆ ಎನ್ನುವ ಅನುಮಾನಕ್ಕೆ ಕಾರ­ಣವಾಗಿದೆ. ಈ ಬಗ್ಗೆ ರಾಜ್ಯಪಾಲರ ಕಚೇ­ರಿಗೆ ಸಲ್ಲಿಕೆಯಾಗಿರುವ ದೂರು­ಗ­ಳಲ್ಲಿ ಸತ್ಯಾಂಶವಿದೆ ಎಂದು ಮೇಲ್ನೋ­ಟಕ್ಕೇ ತಿಳಿಯುತ್ತದೆ.

ಶರವೇಗದಲ್ಲಿ ನೇಮಕ
ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ 2014ರ ಮೇ 22 ಮತ್ತು 23ರಂದು ಸಂದರ್ಶನ ನಡೆಯಿತು. ಮೇ 25ರಂದೇ ಆಯ್ಕೆ ಪಟ್ಟಿ ಪ್ರಕಟಿಸಲಾಯಿತು. ಅಂದೇ ನೇಮಕಾತಿ ಪತ್ರವನ್ನೂ ನೀಡಲಾಯಿತು. ಅದೇ ದಿನ ಸಿಂಡಿಕೇಟ್‌ ಸಭೆಯಲ್ಲಿ ನೇಮಕಾತಿಗಳಿಗೆ ಒಪ್ಪಿಗೆ ಪಡೆಯಲಾಯಿತು. ನೇಮಕಾತಿಗೊಂಡವರು ಅದೇ ದಿನ ಕರ್ತವ್ಯಕ್ಕೆ ಹಾಜರಾದರು. ಈ ರೀತಿ ಹಲವಾರು ಪ್ರಕರಣಗಳಲ್ಲಿ ನಡೆದಿದೆ ಎಂದೂ ವರದಿಯಲ್ಲಿ ಹೇಳಲಾಗಿದೆ.

ನೇಮಕಾತಿ ಸಮಿತಿ ಮತ್ತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ನೀಡಿದ ದಾಖಲೆಗಳ ಪ್ರಕಾರ ಈ ರೀತಿಯ ಅಕ್ರಮ ನಡೆದಿರುವುದು ಸಾಬೀತಾಗಿದೆ ಎಂದೂ ಅದು ತಿಳಿಸಿದೆ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ 2010ರಿಂದ ಈವರೆಗೆ 110 ಬೋಧನಾ ಸಿಬ್ಬಂದಿ ನೇಮಕಾತಿ ಮಾಡಿಕೊಂಡಿದ್ದು ಇದರಲ್ಲಿ ವಿಶ್ವವಿದ್ಯಾಲಯ ಧನ ಸಹಾಯ ಆಯೋಗದ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಲಾಗಿತ್ತು. ಈ ಆರೋಪಗಳು ಕೂಡ ಮೇಲ್ನೋಟಕ್ಕೆ ನಿಜ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

ರಾಜ್ಯಪಾಲರ ನಿರ್ದೇಶನ ಏನು?
ಯಾವುದೇ ವಿವಿ ಕುಲಪತಿಗಳು ತಮ್ಮ ಅಧಿಕಾರದ ಕೊನೆಯ ದಿನಗಳಲ್ಲಿ ನೇಮಕಾತಿ ಪ್ರಕ್ರಿಯೆ ನಡೆಸಿದರೆ ಸಾರ್ವಜನಿಕ ಆಕ್ಷೇಪಗಳು ಬರುವ ಸಾಧ್ಯತೆ ಇದೆ. ಅಲ್ಲದೆ ಸಂಶಯಕ್ಕೂ ಕಾರಣವಾಗುತ್ತದೆ. ಆದ್ದರಿಂದ ಕೊನೆಯ ದಿನಗಳಲ್ಲಿ ನೇಮಕಾತಿಗೆ ಕೈಹಾಕದೆ  ಮುಂದಿನ ಕುಲಪತಿಗೆ ಬಿಡುವುದು ಒಳ್ಳೆಯದು ಎಂದು ರಾಜ್ಯಪಾಲರು 1998ರ ಅಕ್ಟೋಬರ್‌ 13ರಂದು ನಿರ್ದೇಶನ ನೀಡಿದ್ದರು.

ತನಿಖೆಗೆ ಸೂಚಿಸಿದ್ದ ಆರೋಪಗಳು
* ವಿವಿಧ ಸಾಮಗ್ರಿಗಳ ಖರೀದಿಯಲ್ಲಿ ಅವ್ಯವಹಾರ. ಟೆಂಡರ್‌ ಕರೆಯದೆ ಖರೀದಿ. ನಿಯಮ ಬಾಹಿರವಾಗಿ ಖರೀದಿ ಮಾಡಿದ್ದರಿಂದ ವಿಶ್ವವಿದ್ಯಾಲ­ಯಕ್ಕೆ ₨ 3 ಕೋಟಿಗೂ ಹೆಚ್ಚು ನಷ್ಟ.

* ಯಜಿಸಿ ಮತ್ತು ರಾಜ್ಯ ಸರ್ಕಾರದ ಅನುದಾನದಲ್ಲಿ ಕಟ್ಟಡ ನಿರ್ಮಾಣದಲ್ಲಿ ಅವ್ಯವಹಾರ.

* ನೇಮಕಾತಿ ಅಕ್ರಮ

* ಕೋಟ್ಯಂತರ ರೂಪಾಯಿಗಳ ವೆಚ್ಚದ ಬಗ್ಗೆ ಲೆಕ್ಕಪರಿಶೋಧಕರ ಆಕ್ಷೇಪಗಳಿಗೆ ಯಾವುದೇ ಕ್ರಮ ಕೈಗೊಳ್ಳದೇ ಇರುವುದು.

* 2011ರಲ್ಲಿ ಯುಜಿಸಿ ತಜ್ಞರ ಸಮಿತಿ ಭೇಟಿ ನೀಡುವುದಕ್ಕೂ ಸರ್ಕಾರಿ ಲೆಕ್ಕಪರಿಶೋಧಕರಿಗೂ ಯಾವುದೇ ಸಂಬಂಧ ಇಲ್ಲದಿದ್ದರೂ ಲೆಕ್ಕ­ಪರಿಶೋಧಕರ ತಂಡ ಭೇಟಿ ಸಂಬಂಧ ಮಾಡಿದ ಭಾರಿ ವೆಚ್ಚ ಹಾಗೂ ಖಾಸಗಿ ಹೊಟೇಲ್‌ಗಳಿಗೆ ಪಾವತಿಸಿದ ಭಾರಿ ಹಣ.

* ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ನೇಮಕಾತಿ. ಮಧ್ಯರಾತ್ರಿ ಸಿಂಡಿಕೇಟ್‌ ಸಭೆ ನಡೆಸಿ ನೇಮಕಾತಿಗಳಿಗೆ ಒಪ್ಪಿಗೆ ಪಡೆದಿದ್ದು.

* ಮೇಲಿನ ಆರೋಪಗಳಿಗೆ ಸಂಬಂಧಿಸಿದ ಇತರೆ ಅಕ್ರಮಗಳು.

(ಮುಂದುವರಿಯುವುದು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.