ADVERTISEMENT

ಪಶ್ಚಿಮಘಟ್ಟ, ವನ್ಯಜೀವಿಗಳಿಗೆ ಗಂಡಾಂತರ

ಎತ್ತಿನಹೊಳೆ ಯೋಜನೆಗೆ ಪರಿಸರ ತಜ್ಞರ ಆತಂಕ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2014, 19:30 IST
Last Updated 23 ಡಿಸೆಂಬರ್ 2014, 19:30 IST

ಸಕಲೇಶಪುರ:  ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ ಕಾಮಗಾರಿ ಈಗಾ­ಗಲೇ ಶುರುವಾಗಿದ್ದು, ಸರ್ಕಾರ ಈ ವಿಷಯದಲ್ಲಿ ಪ್ರಜಾಸತ್ತಾತ್ಮಕವಾಗಿ ನಡೆದುಕೊಳ್ಳದೆ, ಜನರ ಹಕ್ಕು ಹಾಗೂ ಕಾನೂನುಗಳನ್ನು ಗಾಳಿಗೆ ತೂರಿ, ಪರಿಸರ ನಾಶ ಮಾಡಿ, ಅನುಕೂಲಸಿಂಧು ರಾಜ­ಕಾರಣ­ಕ್ಕಾಗಿ ಯೋಜನೆಯನ್ನು ಆತುರಾತುರ­ವಾಗಿ ಕೈಗೆತ್ತಿಕೊಂಡಿದೆ ಎಂಬ ಆರೋಪ ಈ ಭಾಗದ ತಜ್ಞರು, ಪರಿಸರವಾದಿಗಳು ಹಾಗೂ ಬಹುತೇಕ ರೈತರಿಂದ ಕೇಳಿ ಬರುತ್ತಿದೆ. 

ಪಶ್ಚಿಮಾಭಿಮುಖವಾಗಿ ಸುಮಾರು 80 ಕಿ.ಮೀ. ಉದ್ದ, 18 ಸಾವಿರ ಹೆಕ್ಟೇರ್‌ಗಿಂತಲೂ ಹೆಚ್ಚು ವಿಸ್ತೀರ್ಣದ ಕಾಯ್ದಿರಿಸಿದ ದಟ್ಟ ಮಳೆ­ಕಾಡು­­ಗಳ ಗರ್ಭದಲ್ಲಿ ಎತ್ತಿನಹಳ್ಳ, ಮೂರು ಉಪ ಹೊಳೆಗಳು, ಕಾಡುಮನೆ ಹೊಳೆ, ಕೇರಿ­ಹೊಳೆ, ಹೊಂಗಡಹಳ್ಳ ಹರಿಯು­ತ್ತವೆ. ಇವುಗಳ ನೀರನ್ನು ಕೋಲಾರ, ತುಮಕೂರು, ಚಿಕ್ಕ­ಬಳ್ಳಾ­ಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಹರಿಸು­ವುದು ಈ ಯೋಜನೆಯ ಮುಖ್ಯ ಉದ್ದೇಶ.

ದಕ್ಷಿಣ ಭಾರತದ ಮಳೆ ಮೂಲ ಹಾಗೂ ಜನರ ಉಸಿರಾಗಿರುವ ಪಶ್ಚಿಮ­ಘಟ್ಟದ ಈ ಹಳ್ಳ, ತೊರೆ, ಹೊಳೆಗಳ ನೀರನ್ನು ಪೂರ್ವಾಭಿಮುಖ­ವಾಗಿ ಹರಿಸಿ­ದರೆ, ಕಾಡಿನಲ್ಲಿ ಸಸ್ಯಸಂಕುಲ ಹಾಗೂ ಪ್ರಾಣಿಸಂಕುಲ ನೀರಿನ ತತ್ವಾರ ಎದುರಿಸಿ ನಾಶ­ವಾಗುವುದರಲ್ಲಿ ಎರಡು ಮಾತಿಲ್ಲ ಎಂಬುದು ರೈತರ ಕಳವಳವಾಗಿದೆ.

ಮಳೆ ಭರಿಸುವ ಮಳೆಕಾಡುಗಳೆಂದೇ ಗುರುತಿಸ­ಲಾ­ಗುವ ಪಶ್ಚಿಮಘಟ್ಟ ನಾಶ­ವಾದರೆ, ಮಳೆ ಕಡಿಮೆ­ಯಾಗಿ ಎತ್ತಿನಹಳ್ಳ ಹಾಗೂ ಇತರ ಎಲ್ಲ ಹಳ್ಳ­ಗಳಲ್ಲಿ ನೀರು ಇಲ್ಲವಾಗುತ್ತದೆ. ಆಗ ಕೋಲಾರ, ಚಿಕ್ಕಬಳ್ಳಾಪುರಕ್ಕೆ ನೀರು ಸರಬರಾಜು ಮಾಡುವುದಿರಲಿ, ಮಲೆನಾಡಿನಲ್ಲಿಯೇ ಕುಡಿ­ಯುವ ನೀರಿಗೆ ತತ್ವಾರ ಉಂಟಾಗುತ್ತದೆ ಎಂದು ಪ್ರತಿಪಾ­ದಿಸಿರುವ ಪರಿಸರವಾದಿಗಳು, ಈ ಯೋಜನೆ ಅವೈಜ್ಞಾನಿಕವಾಗಿದ್ದು ಪಶ್ಚಿಮಘಟ್ಟ­ವನ್ನು ಸರ್ವನಾಶ ಮಾಡುವುದರಿಂದ ಇದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪಶ್ಚಿಮಘಟ್ಟದ ರಕ್ಷಿತ ಅರಣ್ಯ­ದಲ್ಲಿಯೇ ಅಣೆ­ಕಟ್ಟೆಗಳನ್ನು ನಿರ್ಮಾಣ ಮಾಡಿ ಸುಮಾರು 300 ಮೆಗಾವ್ಯಾಟ್‌ ವಿದ್ಯುತ್‌ ಬಳಕೆ ಮಾಡಿ, ಭಾರಿ ಯಂತ್ರಗಳಿಂದ ಸುಮಾರು ಒಂದು ಸಾವಿರ ಮೀಟರ್‌ ಎತ್ತರಕ್ಕೆ ನೀರು ಎತ್ತುವುದರಿಂದ ಈ ಯೋಜನೆಗೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲ­ಯದಿಂದ ಪರಿಸರ ಪರಿಣಾಮ ವರದಿ ಹಾಗೂ ಸಾಮಾಜಿಕ ಅಧ್ಯಯನ ವರದಿ ಪಡೆಯಬೇಕು.

ಪಶ್ಚಿಮಘಟ್ಟ ನಾಶ ಮಾಡುವ ಇಂತಹ ಯೋಜನೆಗೆ ಕೇಂದ್ರ ಪರಿಸರ ಮತ್ತು ಅರಣ್ಯ ಮಂತ್ರಾಲಯ ಅನುಮತಿ ನೀಡಲು ಸಾಧ್ಯವೇ ಇಲ್ಲ ಎಂಬುದನ್ನು ಮನಗಂಡ ರಾಜ್ಯ ಸರ್ಕಾರ ಈ ಯೋಜನೆಯ ಹೆಸರನ್ನೇ ಬದಲಾ­ಯಿಸಿದೆ. ಆರಂಭ­­ದಲ್ಲಿ ಸ್ಕೀಂ ಫಾರ್‌ ಡೈವರ್ಷನ್‌ ಆಫ್‌ ಫ್ಲಡ್‌ ವಾಟರ್‌ ಫ್ರಮ್‌ ಸಕಲೇಶಪುರ (ವೆಸ್ಟ್‌) ಟು ಕೋಲಾರ್‌/ಚಿಕ್ಕಬಳ್ಳಾಪುರ (ಇಸ್ಟ್‌) ಎಂಬ ಹೆಸರನ್ನು ಯೋಜನೆಗೆ ಇಡಲಾಗಿತ್ತು.

ನಂತರ ಎತ್ತಿನಹೊಳೆ ತಿರುವು ಯೋಜನೆ ಎಂದು ಎರಡನೆ ಬಾರಿ ಹೆಸರು ಬದಲಾವಣೆ ಮಾಡ­ಲಾಯಿತು. ಕೇಂದ್ರದಿಂದ ಪರಿಸರ ಮತ್ತು ಸಾಮಾಜಿಕ ವರದಿ ಅನುಮತಿ ತಪ್ಪಿಸಿಕೊಳ್ಳುವುದಕ್ಕಾಗಿ, ‘ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ’ ಎಂದು ಹೆಸರು ಬದಲಾವಣೆ ಮಾಡಿ­ಕೊಂಡಿದೆ ಎಂದು ಮಲೆನಾಡು ಜನಪರ ಹೋರಾಟ ಸಮಿತಿ ಅಧ್ಯಕ್ಷ ಕಿಶೋರ್‌­ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

10 ಸಾವಿರ ಹೆಕ್ಟೇರ್‌ಗಿಂತ ಹೆಚ್ಚಿನ ಕೃಷಿ ಭೂಮಿಗೆ ನೀರು ಒದಗಿಸುವ ಯಾವುದೇ ನೀರಾವರಿ ಯೋಜನೆಗೆ ಕೇಂದ್ರದ ಅನುಮತಿ ಬೇಕು. ಆದರೆ, ಈ ಯೋಜನೆಯಲ್ಲಿ ಸುಮಾರು 28 ಸಾವಿರ ಹೆಕ್ಟೇರ್ ಕೃಷಿ ಭೂಮಿಗೆ ನೀರು ಒದಗಿಸುವ ಉದ್ದೇಶ ಇದೆ ಎಂದು ಕರ್ನಾಟಕ ನೀರಾವರಿ ನಿಗಮ ಯೋಜನಾ ವರದಿಯಲ್ಲಿ ಹೇಳಿದೆ. ಕಾಲುವೆಯಲ್ಲಿ ನೀರು ಸರಬರಾಜು ಮಾಡುವಾಗ ಸುಮಾರು 100 ಮೆಗಾವಾಟ್‌ ವಿದ್ಯುತ್‌ ಉತ್ಪಾದನೆ ಮಾಡುತ್ತೇವೆ ಎಂದು ವರದಿಯಲ್ಲಿ ಉಲ್ಲೇಖ ಮಾಡಿದ್ದಾರೆ. 50 ಮೆಗಾವಾಟ್‌ ವಿದ್ಯುತ್‌ ಉತ್ಪಾದನೆ ಮಾಡಬೇಕಾ­ದರೂ ಕೇಂದ್ರ ಪರಿಸರ ಮತ್ತು ಅರಣ್ಯ ಮಂತ್ರಾಲಯದ ಅನುಮತಿ ಅಗತ್ಯ.

‘ಎನ್ವಿರಾನ್‌ಮೆಂಟಲ್‌ ಇಂಪ್ಯಾಕ್ಟ್‌ ಅಸೆಸ್‌­ಮೆಂಟ್‌ ನೋಟಿಫಿಕೇಷನ್– 2006’ ಪ್ರಕಾರ, ಮೇಲೆ ಉಲ್ಲೇಖಿಸಿದ ಎಲ್ಲ ಅನುಮತಿ ಪಡೆಯ­ಬೇಕು. ಯೋಜನೆಯನ್ನು ಅರಣ್ಯ ಪ್ರದೇಶ­ದೊಳಗೆ ಅನು­ಷ್ಠಾನ ಮಾಡುವುದರಿಂದ ಅರಣ್ಯ ಇಲಾಖೆಯ ಅನುಮತಿಯೂ ಬೇಕು. 2009ರ ತಿದ್ದು­ಪಡಿಯಂತೆ ಕುಡಿಯುವ ನೀರಿನ ಯೋಜನೆ­ಯಾದರೆ ಅನುಮತಿ ಬೇಡ ಎಂಬುದನ್ನೇ ಮುಂದಿ­ಟ್ಟು­­ಕೊಂಡು, ವನ್ಯಜೀವಿ ಸಂರಕ್ಷಣಾ ಕಾಯಿದೆ, ಅರಣ್ಯ ಕಾಯ್ದೆ, ಜೀವ ವೈವಿಧ್ಯ ಕಾಯ್ದೆಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿ ಕಾಮಗಾರಿ ಆರಂಭಿಸಿರುವುದನ್ನು ಪ್ರಶ್ನಿಸಿ ನ್ಯಾಯಾ­­­ಲಯ ಮೆಟ್ಟಿಲು ಹತ್ತಲು ಪರಿಸರವಾದಿ­ಗಳು ಹಾಗೂ ವಿವಿಧ ಸಂಘಟನೆಗಳು ಮುಂದಾ­ಗಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.