ADVERTISEMENT

ಪಾತಾಳಗಂಗೆ ನೀರು ಬೇಕಾ... ಗಂಗಾ ಸ್ನಾನ ಸಾಕಾ?

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 19:30 IST
Last Updated 23 ಮಾರ್ಚ್ 2017, 19:30 IST
ಬೆಂಗಳೂರು: ‘ರಾಜ್ಯದ ಜಲದಾಹ ತೀರಿಸಲು ಪಾತಾಳಗಂಗೆಯ ನೀರು ತರಬೇಕಾಗುತ್ತದೆ’ ಎಂದು ಸಚಿವರು ಹೇಳಿದರೆ, ‘ಗಂಗಾ ನದಿಯ ಸ್ನಾನ ಮಾಡಿದರೆ ಸಾಕು’ ಎಂದು ಸದಸ್ಯರೊಬ್ಬರು ಸಲಹೆ ನೀಡಿದರು. 
 
ವಿಧಾನಸಭೆಯಲ್ಲಿ ಬುಧವಾರ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಸ್ತಾಪಿಸಿದ ವಿಷಯ ಸ್ವಾರಸ್ಯಕರ ಚರ್ಚೆಗೆ ಕಾರಣವಾಯಿತು. 
 
‘ವಿಶ್ವ ಜಲ ದಿನ. ನಾವು ಮಳೆ ನೀರು ಇಂಗಿಸಲು ಹಾಗೂ ನೀರು ಉಳಿಸಲು ಗಂಭೀರ ಪ್ರಯತ್ನ ಮಾಡಬೇಕು. ಈ ಬಗ್ಗೆ ಸಮಗ್ರ ಯೋಜನೆ ರೂಪಿಸಿ’ ಎಂದು ಮನವಿ ಮಾಡಿದರು.  
 
‘ವಿಶ್ವ ಜಲ ದಿನ ಎಂದು ನೆನಪಿಸಿದ್ದಕ್ಕೆ ಧನ್ಯವಾದಗಳು’ ಎಂದು ಮಾತು ಆರಂಭಿಸಿದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಎಚ್‌.ಕೆ. ಪಾಟೀಲ, ‘ನೀರಿನ ಬವಣೆ ನೀಗಿಸಲು ಹೊಸ ಹೊಸ ತಂತ್ರಜ್ಞಾನಗಳ ನೆರವು ಪಡೆಯ ಬೇಕಾಗುತ್ತದೆ. ಸಂಶೋಧನೆಗಳನ್ನೂ ಮಾಡಬೇಕಾಗುತ್ತದೆ.

ಅದಕ್ಕೆ ದೊಡ್ಡ ಮೊತ್ತ ಬೇಕು. ಈ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಸಮಾಲೋಚನೆ ನಡೆಸುತ್ತೇನೆ. ಪಾತಾಳಗಂಗೆಯಿಂದಲೂ ನೀರು ತರಲು ಚಿಂತನೆ ನಡೆಸುತ್ತೇವೆ’ ಎಂದು ಘೋಷಿಸಿದರು. 
 
‘ಅದೆಲ್ಲ ಏನೂ ಬೇಡ. ಎಲ್ಲರೂ ಗಂಗಾ ಸ್ನಾನ ಮಾಡಬೇಕು ಎಂದು ನಾಡಿನ 7 ಕೋಟಿ ಜನರಿಗೂ ನೋಟಿಸ್‌ ಕೊಡಿ’ ಎಂದು ಬಿಜೆಪಿಯ ಲಕ್ಷ್ಮಣ ಸವದಿ ವ್ಯಂಗ್ಯವಾಗಿ ಹೇಳಿದರು. 
 
‘ಪಾತಾಳಗಂಗೆ ಎಂದರೆ ಏನು? ಸ್ವಲ್ಪ ಮಾಹಿತಿ ನೀಡಿ’ ಎಂದು ಬಿಜೆಪಿಯ ವಿ. ಸುನೀಲ್‌ ಕುಮಾರ್‌ ಕೇಳಲು ಮುಂದಾದರು. ‘ಸಚಿವರ ಕೊಟ್ಟ ಉತ್ತರ ಭಯಂಕರವಾಗಿದೆ. ಸ್ವಲ್ಪ ಸುಮ್ಮನಿರಪ್ಪ’ ಎಂದು ಕಾಗೇರಿ ತಡೆದರು. ಹೌದೌದು ಎಂದು ಬಿಜೆಪಿಯ ಸದಸ್ಯರು ಧ್ವನಿಗೂಡಿಸಿದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.