ADVERTISEMENT

‘ಪಾತಾಳ ಗಂಗೆ’ಗೆ ಶಾಸಕ ಬೊಮ್ಮಾಯಿ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2017, 19:30 IST
Last Updated 27 ಏಪ್ರಿಲ್ 2017, 19:30 IST

ಬೆಂಗಳೂರು: ‘ಮಧ್ಯಪ್ರಾಚ್ಯ ದೇಶಗಳಲ್ಲಿ ಭೂಗರ್ಭ ಬಸಿದು ತೈಲ ತೆಗೆಯುವ ಯಂತ್ರಗಳಿಗೆ ಈಗ ಕೆಲಸ ಇಲ್ಲ. ತುಕ್ಕುಹಿಡಿಯುತ್ತಿರುವ ಯಂತ್ರಗಳಿಗೆ ಕೆಲಸ ಕೊಡಲು ರಾಜ್ಯದ ನೆಲವನ್ನು ಬಳಸಿಕೊಳ್ಳಲಾಗುತ್ತಿದೆಯೇ?’

ಇಂಥದ್ದೊಂದು ಅನುಮಾನವನ್ನು  ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ವ್ಯಕ್ತಪಡಿಸಿದರು.

‘ನೀರು ತೆಗೆಯುವ ಇಂಥ ಯೋಜನೆಯನ್ನು ತೈಲ ತೆಗೆಯುವ ಯಂತ್ರಗಳನ್ನು ಹೊಂದಿರುವ ಖಾಸಗಿ ಕಂಪೆನಿಗಳು ನೇರವಾಗಿ ಅನುಷ್ಠಾನಗೊಳಿಸಲು ಸಾಧ್ಯ ಇಲ್ಲ. ಹೀಗಾಗಿ, ರಾಜ್ಯ ಸರ್ಕಾರದ ಮೂಲಕ ಯೋಜನೆ ಅನುಷ್ಠಾನಕ್ಕೆ ಇಂಥ ಯಂತ್ರ ಹೊಂದಿರುವ ‘ವಾಟರ್‌ ಕ್ವೆಸ್ಟ್‌’ ಕಂಪೆನಿ ಉದ್ದೇಶಿಸಿದೆ’ ಎಂದೂ ಅವರು ಆರೋಪಿಸಿದ್ದಾರೆ.

ADVERTISEMENT

‘ಇದು ಜೈವಿಕ ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುವಂಥ ಯೋಜನೆ. ಹೀಗಾಗಿ, ಸಾಧಕ–ಬಾಧಕ ಪರಿಶೀಲಿಸದೆ ಅನುಷ್ಠಾನಕ್ಕೆ ಮುಂದಾಗುವುದು ಉಚಿತವಲ್ಲ. ಮುಂದಿನ ವಿಧಾನ ಮಂಡಲ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ನಡೆಯಬೇಕು. ಆ ಬಳಿಕ ಸರ್ಕಾರ ತೀರ್ಮಾನ ಕೈಗೊಳ್ಳಬೇಕು’ ಎಂದೂ ಅವರು ಆಗ್ರಹಿಸಿದರು.

‘ಪಾತಾಳ ಗಂಗೆ’ ಯೋಜನೆಯ ರೂಪುರೇಷೆ ಗಮನಿಸಿದರೆ ಇದು ಭವಿಷ್ಯದ ಬದುಕಿಗೆ ಗಂಡಾಂತರವಾಗುವುದರಲ್ಲಿ ಸಂದೇಹ ಇಲ್ಲ. ಹೀಗಾಗಿ ಯಾವುದೇ ಕಾರಣಕ್ಕೂ ದಿಢೀರ್‌ ನಿರ್ಧಾರ ತೆಗೆದುಕೊಳ್ಳಬಾರದು’ ಎಂದೂ ಬೊಮ್ಮಾಯಿ ಅಭಿಪ್ರಾಯಪಟ್ಟರು.

‘ಯೋಜನೆ ಕುರಿತು ಸಂಪೂರ್ಣ ಅಧ್ಯಯನ ಮಾಡಬೇಕು. ವಿದೇಶಗಳಲ್ಲಿ ಯಶಸ್ವಿಯಾಗಿರುವ ಬಗ್ಗೆ ಸಂಸ್ಥೆ ಹೇಳಿಕೊಂಡಿದ್ದರೂ ಆ ದೇಶಗಳಿಗೆ ತೆರಳಿ ಪರಾಮರ್ಶೆ ನಡೆಸಬೇಕು. ಅಲ್ಲಿನ ಸ್ಥಿತಿಗತಿಗೂ ಇಲ್ಲಿನ ಸ್ಥಿತಿಗತಿಗೂ ಇರುವ ವ್ಯತ್ಯಾಸಗಳ ಬಗ್ಗೆ ಭೂಗರ್ಭ ತಜ್ಞರು, ಜಲ ತಜ್ಞರು ಅಧ್ಯಯನ ಮಾಡಬೇಕು. ಆ ವರದಿಯನ್ನು ರಾಜ್ಯದ ಜನರ ಮುಂದಿಡಬೇಕು’ ಎಂದೂ ಅವರು ಹೇಳಿದರು.

‘ಈಗಾಗಲೇ ಸಾವಿರ ಅಡಿ ದಾಟಿ ಕೊಳವೆ ಬಾವಿ ಕೊರೆಯುವುದರಿಂದ ಆಗಿರುವ ಅನಾಹುತಗಳ ಅನುಭವ ಆಗಿದೆ. ಈ ಹೊಸ ತಂತ್ರಜ್ಞಾನದಲ್ಲಿ 10 ಸಾವಿರಕ್ಕೂ ಹೆಚ್ಚು ಅಡಿ ಆಳ ಕೊರೆಯಲು ಉದ್ದೇಶಿಸಲಾಗಿದೆ. ಅದೂ ಒಂದು ಬಾವಿಗೆ ₹ 12 ಕೋಟಿಗೂ ಹೆಚ್ಚು ವೆಚ್ಚ ಮಾಡಲಾಗುವುದು ಎಂದು ಪ್ರಸ್ತಾವಿಸಲಾಗಿದೆ’ ಎಂದರು.

‘ಕೋಟ್ಯಂತರ ಮೊತ್ತದಲ್ಲಿ ಒಂದು ಯೋಜನೆ ಅನುಷ್ಠಾನದಿಂದ ಆ ಗ್ರಾಮದ ನೀರಿನ ಬವಣೆ ನೀಗಿಸಲು ಸಾಧ್ಯವೇ. ಈ ಬಗ್ಗೆ ಸರ್ಕಾರ ಅಧ್ಯಯನ ನಡೆಸಿದೆಯೇ. ಇಂತಹ ಹಲವು ಪ್ರಶ್ನೆಗಳಿಗೆ ಸರ್ಕಾರ ಸ್ಪಷ್ಟನೆ ನೀಡಬೇಕು’ ಎಂದೂ ಬೊಮ್ಮಾಯಿ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.