ADVERTISEMENT

ಪಿಡಿಒ ವಿರುದ್ಧ ಕ್ರಿಮಿನಲ್ ಪ್ರಕರಣಕ್ಕೆ ನಿರ್ಧಾರ

ಮೂರು ದಿನಗಳ ಒಳಗಾಗಿ ವಿಫಲ ಕೊಳವೆ ಬಾವಿ ಮುಚ್ಚಿಸಲು ನಿರ್ಣಯ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2017, 19:30 IST
Last Updated 24 ಏಪ್ರಿಲ್ 2017, 19:30 IST
ಬೆಳಗಾವಿಯ ಕಪಿಲೇಶ್ವರ ಕಾಲೊನಿಯ 2ನೇ ಕ್ರಾಸ್‌ನಲ್ಲಿರುವ ತೆರೆದ ಕೊಳವೆಬಾವಿ
ಬೆಳಗಾವಿಯ ಕಪಿಲೇಶ್ವರ ಕಾಲೊನಿಯ 2ನೇ ಕ್ರಾಸ್‌ನಲ್ಲಿರುವ ತೆರೆದ ಕೊಳವೆಬಾವಿ   

ಬಾಗಲಕೋಟೆ: ಜಿಲ್ಲೆಯಲ್ಲಿರುವ ವಿಫಲ ಕೊಳವೆಬಾವಿಗಳನ್ನು ಮೂರು ದಿನಗಳ ಒಳಗಾಗಿ ಮುಚ್ಚಿಸಲು ಸೋಮವಾರ ಇಲ್ಲಿ ನಡೆದ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ತಪ್ಪಿದಲ್ಲಿ ಆಯಾ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹಾಗೂ ಜಮೀನಿನ ಮಾಲೀಕರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ನಿರ್ಧರಿಸಲಾಯಿತು.

ಅಥಣಿ ತಾಲ್ಲೂಕು ಝಂಜರವಾಡದಲ್ಲಿ ಆರು ವರ್ಷದ ಬಾಲಕಿ ಸಾವಿಗೀಡಾದ ಪ್ರಕರಣವನ್ನು ಸಭೆಯಲ್ಲಿ ಪ್ರಸ್ತಾಪಿಸಿದ ಐಹೊಳೆ ಕ್ಷೇತ್ರದ ಜಿಲ್ಲಾ ಪಂಚಾಯ್ತಿ ಸದಸ್ಯೆ ಬಾಯಕ್ಕಾ ಮೇಟಿ, ಮಕ್ಕಳ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ತೆರೆದ ಕೊಳವೆ ಬಾವಿಗಳು ಕಂಡುಬಂದಲ್ಲಿ ಅದಕ್ಕೆ ಆಯಾ ಸ್ಥಳೀಯ ಆಡಳಿತವನ್ನು ಹೊಣೆ ಮಾಡಲು ಒತ್ತಾಯಿಸಿದರು. ಅದಕ್ಕೆ ಪಕ್ಷಭೇದ ಮರೆತು ಎಲ್ಲಾ ಸದಸ್ಯರೂ ಬೆಂಬಲ ವ್ಯಕ್ತಪಡಿಸಿದರು.

ಮೂರು ದಿನಗಳ ಕಾಲಾವಕಾಶ:  ಇದಕ್ಕೆ ಉತ್ತರಿಸಿದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಕಾಸ್ ಸುರಳಕರ್, ‘ತೆರೆದ ಸ್ಥಿತಿಯಲ್ಲಿರುವ ವಿಫಲ ಕೊಳವೆಬಾವಿಗಳನ್ನು ಮುಚ್ಚಿಸುವ ಕುರಿತು ಮಂಗಳವಾರ ಎಲ್ಲಾ ಗ್ರಾಮ ಪಂಚಾಯ್ತಿಗಳಿಗೂ ಸುತ್ತೋಲೆ ಕಳುಹಿಸಿ ಡಂಗುರ ಸಾರಿಸಲಾಗುವುದು. ಇದರ ಹೊಣೆಯನ್ನು ಆಯಾ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗೆ ವಹಿಸಲಾಗುತ್ತದೆ. ಆಯಾ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಮೇಲ್ವಿಚಾರಣೆ ಮಾಡಲಿದ್ದಾರೆ’ ಎಂದರು.

ADVERTISEMENT

‘ಜಿಲ್ಲಾ ಪಂಚಾಯ್ತಿ ನಿರ್ದೇಶನ ಪಾಲಿಸದೆ ನಿರ್ಲಕ್ಷ್ಯ ತೋರುವವರ ವಿರುದ್ಧ  ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು’ ಎಂದು ಹೇಳಿದರು. ಅದಕ್ಕೆ ಸದಸ್ಯರು ಒಪ್ಪಿಗೆ ನೀಡಿದರು.

ತೆರೆದ ಮೂರು ಕೊಳವೆ ಬಾವಿಗಳು ಬಂದ್‌

ಹುಬ್ಬಳ್ಳಿ: ಅಥಣಿ ತಾಲ್ಲೂಕಿನ ಝಂಜರವಾಡದಲ್ಲಿನ ಕೊಳವೆ ಬಾವಿ ದುರಂತದ ನಂತರ ಈ ಭಾಗದಲ್ಲಿನ ಮೂರು ತೆರೆದ ಕೊಳವೆ ಬಾವಿಗಳನ್ನು ಸೋಮವಾರ ಮುಚ್ಚಿಸಲಾಗಿದೆ.

ಹುಬ್ಬಳ್ಳಿ ತಾಲ್ಲೂಕಿನ ಅದರಗುಂಚಿಯಲ್ಲಿ ಒಂದು ಹಾಗೂ ಝಂಜರವಾಡದಲ್ಲಿ ಎರಡು ಕೊಳವೆ ಬಾವಿಗಳನ್ನು ಮುಚ್ಚಲಾಗಿದೆ. ತೆರೆದ ಕೊಳವೆ ಬಾವಿ ಇರುವ ಬಗ್ಗೆ ಮಾಹಿತಿ ಸಿಕ್ಕ ನಂತರ ಹುಬ್ಬಳ್ಳಿ ತಾಲ್ಲೂಕಿನ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಜೆಸಿಬಿ ಯಂತ್ರ ಬಳಸಿ ಅದನ್ನು ಮುಚ್ಚಿಸಿದರು.

ಧಾರವಾಡ, ಬೆಳಗಾವಿ, ಹಾವೇರಿ, ಉತ್ತರ ಕನ್ನಡ, ಗದಗ, ಬಾಗಲಕೋಟೆ, ಬಳ್ಳಾರಿ ಹಾಗೂ ವಿಜಯಪುರ ಜಿಲ್ಲೆಗಳಲ್ಲಿನ ಸ್ಥಳೀಯ ಗ್ರಾಮ ಪಂಚಾಯ್ತಿ ಅಧಿಕಾರಿಗಳಿಗೆ ಕೊಳವೆಬಾವಿಗಳನ್ನು ಮುಚ್ಚಿಸುವ ಜವಾಬ್ದಾರಿ ನೀಡಲಾಗಿದೆ. ಈ ಸಂಬಂಧ ಆಯಾ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಕೊಳವೆ ಬಾವಿ ಮುಚ್ಚಿಸದ ಜಮೀನು ಮಾಲೀಕರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹೂಡುವುದಾಗಿಯೂ ಅವರು ಎಚ್ಚರಿಸಿದ್ದಾರೆ.

‘ಧಾರವಾಡ ಜಿಲ್ಲೆಯಲ್ಲಿ ಮೂರು ತಿಂಗಳ ಅವಧಿಯಲ್ಲಿ ಒಟ್ಟು 178 ಕೊಳವೆ ಬಾವಿ ಕೊರೆಸಲಾಗಿದೆ. ಅವುಗಳಲ್ಲಿ ವಿಫಲವಾದ 40 ಕೊಳವೆ ಬಾವಿಗಳನ್ನು ಮುಚ್ಚಲಾಗಿದೆ’ ಎಂದು ಭೂ ವಿಜ್ಞಾನ ಇಲಾಖೆ ತಿಳಿಸಿದೆ.

ಬೆಳಗಾವಿ: ಕೃಷಿ ಹಾಗೂ ಕುಡಿಯುವ ನೀರಿನ ಉದ್ದೇಶಕ್ಕೆ ಜಿಲ್ಲೆಯಲ್ಲಿ ಒಟ್ಟು 2,55,610 ಕೊಳವೆ ಬಾವಿ ಕೊರೆಸಲಾಗಿದೆ. ಇವುಗಳಲ್ಲಿ 2,100 ಕೊಳವೆ ಬಾವಿಗಳು ಬಳಕೆಯಲ್ಲಿ ಇಲ್ಲ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ತಿಳಿಸಿದರು.

ಜಿಲ್ಲೆಯಲ್ಲಿ ಎಷ್ಟು ತೆರೆದ ಕೊಳವೆ ಬಾವಿ ಇವೆ ಹಾಗೂ ಎಷ್ಟನ್ನು ಮುಚ್ಚಿಸಲಾಗಿದೆ ಎಂಬುದರ ಮಾಹಿತಿ ಇಲ್ಲ ಎಂದು ಅವರು ವಿವರಿಸುತ್ತಾರೆ.

ಉತ್ತರ ಕನ್ನಡ: ಜಿಲ್ಲೆಯಲ್ಲಿ ಸರ್ಕಾರಿ ಹಾಗೂ ಖಾಸಗಿ ಮಾಲೀಕತ್ವದ ಒಟ್ಟು 69,167 ಕೊಳವೆ ಬಾವಿಗಳಿವೆ. ಇವುಗಳಲ್ಲಿ 3,000ಕ್ಕೂ ಹೆಚ್ಚು ವಿಫಲವಾಗಿದ್ದು, ಎಲ್ಲವನ್ನೂ ಮುಚ್ಚಿಸಲಾಗಿದೆ ಎನ್ನುತ್ತಾರೆ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್‌.ಪ್ರಸನ್ನ.

ಹಾವೇರಿ: ‘ಜಿಲ್ಲೆಯಲ್ಲಿ ಒಟ್ಟು 5,612 ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. ಅವುಗಳಲ್ಲಿ 2,351 ವಿಫಲಗೊಂಡಿದ್ದು, ಎಲ್ಲವನ್ನೂ ಮುಚ್ಚಿಸಲಾಗಿದೆ’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್‌.ವಿ.ದೇವನಾಳ ತಿಳಿಸಿದರು.

ಕಪ್ಪು ಮಣ್ಣಿನಲ್ಲಿ ತೊಂದರೆ ಹೆಚ್ಚು

‘ಉತ್ತರ ಕನ್ನಡ ಜಿಲ್ಲೆಯಲ್ಲಿ ಭೂಮಿಯ ತಳಭಾಗವು ಚಿರೇಕಲ್ಲಿನಿಂದ ಕೂಡಿದೆ. ಕೇಸಿಂಗ್ ಪೈಪ್ ತೆಗೆದರೂ ಕೊಳವೆ ಬಾವಿಗಳು ಅಗಲ ಅಗುವುದಿಲ್ಲ. ಚಾಮರಾಜನಗರ ಜಿಲ್ಲೆಯಲ್ಲೂ ಭೂಮಿಯ ತಳಭಾಗ ಗ್ರಾನೈಟ್‌ನಿಂದ ಕೂಡಿದೆ. ಅಲ್ಲಿಯೂ ಗಡಸು ಇರುತ್ತದೆ. ಆದರೆ, ಕೋಲಾರ, ಚಿತ್ರದುರ್ಗ ಮತ್ತು ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳ ಭೂರಚನೆ ಭಿನ್ನವಾಗಿದೆ. ಕಪ್ಪು ಮಣ್ಣಿನ ನೆಲದಲ್ಲಿ ಭೂಮಿಯ ತಳ ರಚನೆ ಕೇಸಿಂಗ್ ಪೈಪ್ ತೆಗೆದ ತಕ್ಷಣ ಒಂದೆರಡು ಮಳೆಗೇ ಅಗಲವಾಗುತ್ತಾ ಹೋಗುತ್ತದೆ. ಅಂತಹ ಕಡೆ ಕೊಳವೆ ಬಾವಿ ಮುಚ್ಚಲೇಬೇಕು’ ಎಂದು ಹಿರಿಯ ಭೂ ವಿಜ್ಞಾನಿ ಮಲ್ಲೇಶ್ ಇಟ್ನಾಳ್ ಹೇಳುತ್ತಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.