ADVERTISEMENT

ಪುತ್ತಿಗೆ ಶ್ರೀಗಳಿಗೆ ಷರತ್ತು ಬದ್ಧ ಆಹ್ವಾನ

ಪರ್ಯಾಯ ಮೆರವಣಿಗೆ, ದರ್ಬಾರ್‌ ಸಭೆಗೆ ಭಾಗವಹಿಸುವಂತಿಲ್ಲ!

​ಪ್ರಜಾವಾಣಿ ವಾರ್ತೆ
Published 16 ಜನವರಿ 2016, 19:40 IST
Last Updated 16 ಜನವರಿ 2016, 19:40 IST
ಉಡುಪಿಯ ಶ್ರೀಕೃಷ್ಣ ಮಠ ವಿದ್ಯುತ್ ಅಲಂಕಾರದಿಂದ ಕಂಗೊಳಿಸಿದ್ದು ಹೀಗೆ.    -ಪ್ರಜಾವಾಣಿ ಚಿತ್ರ/ ದಿವಾಕರ್‌ ಹಿರಿಯಡಕ
ಉಡುಪಿಯ ಶ್ರೀಕೃಷ್ಣ ಮಠ ವಿದ್ಯುತ್ ಅಲಂಕಾರದಿಂದ ಕಂಗೊಳಿಸಿದ್ದು ಹೀಗೆ. -ಪ್ರಜಾವಾಣಿ ಚಿತ್ರ/ ದಿವಾಕರ್‌ ಹಿರಿಯಡಕ   

ಉಡುಪಿ: ‘ಪೇಜಾವರ ಪರ್ಯಾಯದ ಎಲ್ಲ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸುತ್ತೇನೆ. ಜನವರಿ 18ರಂದು ನಡೆಯುವ ದರ್ಬಾರ್‌ ಸಭೆಯಲ್ಲಿ ವಿಶ್ವೇಶತೀರ್ಥ ಸ್ವಾಮೀಜಿ ಅವರಿಗೆ ‘ಅಭಿನವ ಸುಧೀಂದ್ರತೀರ್ಥ’ ಎಂಬ ಬಿರುದು ನೀಡಿ ಗೌರವಿಸುತ್ತೇನೆ’ ಎಂದು ಪುತ್ತಿಗೆ ಮಠದ ಸುಗುಣೇಂದ್ರ ಸ್ವಾಮೀಜಿ ಶನಿವಾರ ಇಲ್ಲಿ ಹೇಳಿದರು.

ಮಠದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪೇಜಾವರ ಶ್ರೀಗಳು ತೀರ್ಥಹಳ್ಳಿಯ ಮಠದ ಶಾಖೆಗೆ ಬಂದು ಆಹ್ವಾನ ಪತ್ರಿಕೆ ನೀಡಿದ್ದಾರೆ. ಆಹ್ವಾನ ಪತ್ರಿಕೆಯಲ್ಲಿಯೂ ಅಷ್ಟಮಠಾಧೀಶರು ಎಂದು ಬರೆದಿದ್ದಾರೆ. ಅಲ್ಲದೆ, ನಮ್ಮ ಪರಮಗುರುಗಳ ಚಿತ್ರವೂ ಅದರಲ್ಲಿದೆ. ಐತಿಹಾಸಿಕ ಪರ್ಯಾಯದ ಸಂದರ್ಭದಲ್ಲಿ ಸ್ವಾಮೀಜಿ ಅವರನ್ನು ಗೌರವಿಸಬೇಕೆಂಬುದು ಶಿಷ್ಯರು, ಮಠದ ಭಕ್ತರ ಆಶಯವಾಗಿದೆ’ ಎಂದು ಹೇಳಿದರು.

ನೀವು ಪರ್ಯಾಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೆ ಕೆಲವು ಮಠಾಧೀಶರು ಪಾಲ್ಗೊಳ್ಳುವುದಿಲ್ಲ ಎಂಬ ಮಾತಿದೆಯಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಎಲ್ಲ ಮಠಾಧೀಶರೊಂದಿಗೆ ಉತ್ತಮ ಸಂಬಂಧವಿದೆ. ಯಾರೊಂದಿಗೂ ದ್ವೇಷ ಇಲ್ಲ. 1992ರಲ್ಲಿ ಪುತ್ತಿಗೆ ಪರ್ಯಾಯ ನಡೆದಾಗ ಅಷ್ಟ ಮಠಾಧೀಶರು ಭಾಗವಹಿಸಿದ್ದರು. 50 ವರ್ಷಗಳ ಇತಿಹಾಸದಲ್ಲಿ ಎಂದೂ ಎಲ್ಲ 8 ಮಠಾಧೀಶರು ಒಟ್ಟಿಗೆ ಪಾಲ್ಗೊಂಡಿರಲಿಲ್ಲ. ಹಿಂದೂ ಎಲ್ಲರೂ ಒಂದು ಎಂದು ಹೇಳುವ ನಾವು ಸಹ ಒಗ್ಗಟ್ಟಿನಿಂದ ಇರಬೇಕು. ಹಿಂದೂ ಧರ್ಮದ ಏಕತೆಯ ದೃಷ್ಟಿಯಿಂದ ಭಾಗವಹಿಸುತ್ತೇನೆ’ ಎಂದು ಅವರು ಹೇಳಿದರು.

ಮಠಕ್ಕೆ ಖುದ್ದು ಭೇಟಿ ನೀಡಿ ಆಹ್ವಾನಿಸದಿದ್ದರೂ ಹೋಗುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ನಮಗಿಂತ ಕಿರಿಯರ ಪರ್ಯಾಯ ಆದರೆ ಕ್ರಮಬದ್ಧವಾಗಿ ಎಲ್ಲವೂ ನಡೆಯಬೇಕು ಎಂದು ನಿರೀಕ್ಷಿಸಬಹುದು. ಹಿರಿಯರಿಂದ ಹೆಚ್ಚಿನ ನಿರೀಕ್ಷೆ ಮಾಡಬಾರದು. ಅಗತ್ಯ ಎನಿಸಿದರೆ ಕೃಷ್ಣಾಪುರ ಹಾಗೂ ಸೋದೆ ಸ್ವಾಮೀಜಿ ಅವರೊಂದಿಗೂ ಮಾತನಾಡಲು ಸಿದ್ಧನಿದ್ದೇನೆ’ ಎಂದರು.

ನಾಳೆ ನಸುಕಿನಲ್ಲಿ ಪೀಠಾರೋಹಣ
ಉಡುಪಿ:
ಪೇಜಾವರ ಪರ್ಯಾಯಕ್ಕೆ ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿದ್ದು ಮಠದ ಭಕ್ತರಲ್ಲಿ ಸಂಭ್ರಮ ಮನೆ ಮಾಡಿದೆ. ಸೋಮವಾರ ನಸುಕಿನ 2.30ಕ್ಕೆ ಪರ್ಯಾಯ ಮೆರವಣಿಗೆ ಆರಂಭವಾ ಗಲಿದ್ದು, 5.40ಕ್ಕೆ ಪೇಜಾವರ ಶ್ರೀಗಳು ಸರ್ವಜ್ಞ ಪೀಠಾರೋಹಣ ಮಾಡಲಿದ್ದಾರೆ. 6.20ಕ್ಕೆ ಪರ್ಯಾಯ ದರ್ಬಾರ್‌ ಆರಂಭವಾಗಲಿದೆ.

***
ಕಾಣಿಯೂರು ಪರ್ಯಾಯದಲ್ಲಿ ಭಾಗವಹಿಸಿದಂತೆ ನಮ್ಮ ಪರ್ಯಾಯದಲ್ಲಿಯೂ ಪಾಲ್ಗೊಳ್ಳಿ ಎಂದು ಪುತ್ತಿಗೆ ಶ್ರೀಗಳಿಗೆ ಹೇಳಿದ್ದೆ.
-ವಿಶ್ವೇಶತೀರ್ಥ ಸ್ವಾಮೀಜಿ,
ಪೇಜಾವರ ಮಠ

***
ವಿಶ್ವೇಶತೀರ್ಥ ಸ್ವಾಮೀಜಿ ಅವರಿಗೆ ಬೇರೆಯವರ ಒತ್ತಡ ಇರಬಹುದು.  ನನ್ನ ಮೇಲೆ ಪ್ರೀತಿ ಇದೆ. ನನ್ನನ್ನು ಅವರು ಮಾನಸ ಪುತ್ರ ಎಂದಿದ್ದಾರೆ.
-ಸುಗುಣೇಂದ್ರತೀರ್ಥ ಸ್ವಾಮೀಜಿ,
ಪುತ್ತಿಗೆ ಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.