ADVERTISEMENT

ಪೊಲೀಸರ ಕಣ್ತಪ್ಪಿಸಿ ಬಂದ ಮಹಾರಾಷ್ಟ್ರ ಜನಪ್ರತಿನಿಧಿಗಳು!

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2017, 19:30 IST
Last Updated 13 ನವೆಂಬರ್ 2017, 19:30 IST

ಬೆಳಗಾವಿ: ನಿಷೇಧಾಜ್ಞೆ ಉಲ್ಲಂಘಿಸಿ, ಬೆಳಗಾವಿ ಪ್ರವೇಶಿಸಿದ ಮಹಾರಾಷ್ಟ್ರದ ಇಬ್ಬರು ಶಾಸಕರು ಹಾಗೂ ಸಂಸದರೊಬ್ಬರು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಆಯೋಜಿಸಿದ್ದ ಮಹಾಮೇಳಾವ್‌ದಲ್ಲಿ ಭಾಗವಹಿಸಿದ್ದರು. ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನ ವಿರೋಧಿಸಿ ಎಂ.ಇ.ಎಸ್‌ ಸೋಮವಾರ ಮಹಾಮೇಳಾವ್‌ ಆಯೋಜಿಸಿತ್ತು. ಇದರಲ್ಲಿ ಭಾಗವಹಿಸಲು ಬರುವ ಮಹಾರಾಷ್ಟ್ರದ ಜನಪ್ರತಿನಿಧಿಗಳಿಗೆ ಗಡಿ ಪ್ರವೇಶಿಸದಂತೆ ಜಿಲ್ಲಾಧಿಕಾರಿ ಎಸ್‌.ಜಿಯಾವುಲ್ಲಾ ನಿಷೇಧಾಜ್ಞೆ ಜಾರಿ ಮಾಡಿದ್ದರು.

ಕೊಲ್ಹಾಪುರದ ಸಂಸದ ಧನಂಜಯ ಮಹಾಡಿಕ್‌, ಗಡಹಿಂಗ್ಲಜ ಶಾಸಕಿ ಸಂಧ್ಯಾ ಕುಪ್ಪೇಕರ ಹಾಗೂ ವಿಧಾನ ಪರಿಷತ್‌ ಸದಸ್ಯ ಜಯಂತರಾವ್‌ ಪಾಟೀಲ ಅವರು ದ್ವಿಚಕ್ರ ವಾಹನಗಳಲ್ಲಿ ಗಡಿ ಪ್ರವೇಶ ಮಾಡಿ ಮಹಾಮೇಳಾವ್‌ದಲ್ಲಿಯೂ ಭಾಗವಹಿಸಿದರು. ವೇದಿಕೆ ಮೇಲೆ ದಿಢೀರ್‌ ಪ್ರತ್ಯಕ್ಷರಾದ ಇವರನ್ನು ಕಂಡು ಪೊಲೀಸರು ಕಂಗಾಲಾದರು.

ADVERTISEMENT

ತಡೆಯಲು ಆಗಲಿಲ್ಲ: ಸಂಸದ ಧನಂಜಯ ಮಾತನಾಡಿ, ‘ಬೆಳಗಾವಿಗೆ ಬರದಂತೆ ಜಿಲ್ಲಾಧಿಕಾರಿ ನಿಷೇಧಾಜ್ಞೆ ಹೊರಡಿಸಿದ್ದರು. ಗಡಿಯಲ್ಲಿ ಪೊಲೀಸರ ಪಹರೆ ಇತ್ತು. ಆದರೂ ನಾವು ಬೈಕ್‌ನಲ್ಲಿ ಗಡಿ ಪ್ರವೇಶಿಸಿದೆವು. ನಮ್ಮನ್ನು ತಡೆಯಲು ಕರ್ನಾಟಕ ಸರ್ಕಾರಕ್ಕೆ ಸಾಧ್ಯವಾಗಲಿಲ್ಲ’ ಎಂದು ಟೀಕಿಸಿದರು.

ಜಯಂತರಾವ್‌ ಪಾಟೀಲ ಮಾತನಾಡಿ, ‘ಗಡಿ ವಿವಾದ ಕುರಿತು ಸುಪ್ರೀಂಕೋರ್ಟ್‌ನ ತೀರ್ಪು ನಮ್ಮ ಪರ ಬರಲಿದೆ ಎನ್ನುವ ವಿಶ್ವಾಸವಿದೆ. ಮಹಾರಾಷ್ಟ್ರಕ್ಕೆ ಸೇರಿದ ವರ್ಷವೇ ಬೆಳಗಾವಿಯ ಇದೇ ಸುವರ್ಣ ವಿಧಾನಸೌಧದಲ್ಲಿ ನಾವೂ ಅಧಿವೇಶನ ನಡೆಸುತ್ತೇವೆ’ ಎಂದರು.

ವಿಧಾನಸಭೆ ಕಲಾಪವನ್ನು ಬಹಿಷ್ಕರಿಸಿ ಹೊರಬಂದ ಎಂಇಎಸ್‌ ಶಾಸಕರಾದ ಸಂಭಾಜಿ ಪಾಟೀಲ ಹಾಗೂ ಅರವಿಂದ ಪಾಟೀಲ ಅವರು
ಮಹಾಮೇಳಾವ್‌ದಲ್ಲಿ ಭಾಗವಹಿಸಿದ್ದರು.

ನಿಷೇಧಾಜ್ಞೆ ಉಲ್ಲಂಘಿಸಿ ಗಡಿ ಪ್ರವೇಶ ಮಾಡಿದ ಮಹಾರಾಷ್ಟ್ರದ ಜನಪ್ರತಿನಿಧಿಗಳು, ರಾಜ್ಯದ ಎಂಇಎಸ್‌ ಶಾಸಕರು ಸೇರಿ 13 ಮಂದಿ ವಿರುದ್ಧ ಟಿಳಕವಾಡಿ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.