ADVERTISEMENT

ಪ್ರಚಾರದಲ್ಲಿ ಮುಂದೆ ಹೂಡಿಕೆಯಲ್ಲಿ ಹಿಂದೆ

ಪ್ರವಾಸೋದ್ಯಮ ಇಲಾಖೆ: ಸಿಎಜಿ ವರದಿ ಬಿಚ್ಚಿಟ್ಟ ಸತ್ಯ

ಎಸ್.ರವಿಪ್ರಕಾಶ್
Published 27 ಜುಲೈ 2016, 0:00 IST
Last Updated 27 ಜುಲೈ 2016, 0:00 IST
ಪ್ರಚಾರದಲ್ಲಿ ಮುಂದೆ ಹೂಡಿಕೆಯಲ್ಲಿ ಹಿಂದೆ
ಪ್ರಚಾರದಲ್ಲಿ ಮುಂದೆ ಹೂಡಿಕೆಯಲ್ಲಿ ಹಿಂದೆ   

ಬೆಂಗಳೂರು: ‘ಒಂದು ರಾಜ್ಯ ಹಲವು ಜಗತ್ತು’ ಎಂಬ ಘೋಷಣೆಯಡಿ ವಿಶ್ವಕ್ಕೆ  ಅಂಗೈಯಲ್ಲಿ ಅರಮನೆ ತೋರಿಸಿದ ರಾಜ್ಯ ಪ್ರವಾಸೋದ್ಯಮ ಇಲಾಖೆ ತೆರಿಗೆದಾರನ ಜೇಬಿನಿಂದ ₹1330.89 ಕೋಟಿಗೂ ಹೆಚ್ಚು ಹಣವನ್ನು ನೀರಿನಂತೆ ಖರ್ಚು ಮಾಡಿದೆ.

ಆದರೂ, ಪ್ರವಾಸೋದ್ಯಮ ಅಭಿವೃದ್ಧಿ ಮತ್ತು ಪ್ರವಾಸಿಗರ ಆಕರ್ಷಿಸುವ ವಿಷಯದಲ್ಲಿ ಕರ್ನಾಟಕ ಹಿಂದೆ ಬಿದ್ದಿದೆ.

‘ರಾಜ್ಯದ ಪ್ರವಾಸೋದ್ಯಮದಲ್ಲಿ ಕ್ರಾಂತಿ ಮಾಡುತ್ತೇವೆ. ಲಕ್ಷಗಟ್ಟಲೆ ಉದ್ಯೋಗ ಸೃಷ್ಟಿಸುತ್ತೇವೆ ಎಂದು ದೇಶ–ವಿದೇಶಗಳನ್ನು ಸುತ್ತಿ ಬಂದ ಅಧಿಕಾರಿಗಳು ಮತ್ತು ರಾಜಕಾರಣಿಗಳು ವಿಶ್ವ ಪ್ರವಾಸಿಗರನ್ನು ಕರ್ನಾಟಕದತ್ತ ಸೆಳೆಯುವಲ್ಲಿ ವಿಫಲರಾಗಿದ್ದಾರೆ. ಇನ್ನೊಂದೆಡೆ
₹ 21,673.67 ಕೋಟಿ ಹೂಡಿಕೆಗೆ ಮುಂದಾಗಿದ್ದ ಖಾಸಗಿ ಕಂಪೆನಿಗಳು ಹಿಂದಕ್ಕೆ ಸರಿದಿವೆ. ಉದ್ಯೋಗ ಸೃಷ್ಟಿಯೂ ಆಗಿಲ್ಲ.

ಕರ್ನಾಟಕದ ಪ್ರವಾಸೋದ್ಯಮ ಇಲಾಖೆ ಹಿಡಿದಿರುವ ಅವನತಿಯ ಹಾದಿಯನ್ನು ಕೇಂದ್ರ ಸರ್ಕಾರದ ಮಹಾಲೇಖಪಾಲರ ಹೊಸ ‘ಲೆಕ್ಕಪರಿಶೋಧನಾ ವರದಿ– 2016’ ಎಳೆ ಎಳೆಯಾಗಿ ಬಿಡಿಸಿಟ್ಟಿದೆ.

2010 ರಿಂದ 2015 ರ ಅವಧಿಯಲ್ಲಿ  ಪ್ರವಾಸೋದ್ಯಮ ಇಲಾಖೆ ರಾಜ್ಯದಲ್ಲಿನ ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಅತಿರಂಜಿತ ಚಿತ್ರಣವನ್ನು ನೀಡಿತ್ತು. ಇಲಾಖೆ ಬಿಂಬಿಸಿದಷ್ಟು ಬಂಡವಾಳ ಹೂಡಿಕೆ ಆಗಲಿಲ್ಲ. ಉದ್ಯೋಗವೂ ಸೃಷ್ಟಿ ಆಗಲಿಲ್ಲ. ರಾಜ್ಯ ಸರ್ಕಾರಕ್ಕೆ
₹ 27,750 ಕೋಟಿ ಹೂಡಿಕೆ ಪ್ರಸ್ತಾವನೆಗಳ ಬಂದಿದ್ದು, ಅದರಲ್ಲಿ ₹ 21,750 ಕೋಟಿ ಬಂಡವಾಳ ಹೂಡಿಕೆಗೆ ಹಸಿರು ನಿಶಾನೆ ಸಿಕ್ಕಿತ್ತು.

ಆದರೆ, ಈ ಬೃಹತ್‌ ಮೊತ್ತದ ಬಂಡವಾಳ ಹೂಡಿಕೆ ಆಗಿಲ್ಲ. ಉದ್ಯೋಗ ಸೃಷ್ಟಿಗೆ ಸಂಬಂಧಿಸಿದಂತೆ ಇಲಾಖೆ ಬಿಂಬಿಸಿದ ಪ್ರಮಾಣದಲ್ಲಿ ಶೇ 1 ರಷ್ಟೂ ಉದ್ಯೋಗ  ಸೃಷ್ಟಿ ಆಗಿಲ್ಲ.

ರಾಜ್ಯದ ಪ್ರವಾಸಿ ತಾಣಗಳತ್ತ  ಜನರನ್ನು ಆಕರ್ಷಿಸಲು ದೇಶ– ವಿದೇಶಗಳಲ್ಲಿ  ಭರ್ಜರಿ ಪ್ರಚಾರವನ್ನು ಇಲಾಖೆ ಕೈಗೊಂಡಿತ್ತು. ಪ್ರಚಾರ, ಮೂಲಸೌಕರ್ಯಗಳ ಅಭಿವೃದ್ಧಿ, ಪ್ರಾಥಮಿಕ ಸೌಲಭ್ಯಗಳು, ಪ್ರೋತ್ಸಾಹ ಧನ ಮತ್ತು ಸಬ್ಸಿಡಿ ನೀಡಲು  ಮಾಡಿದ ವೆಚ್ಚ ₹1330.89 ಕೋಟಿ. ಇದರಲ್ಲಿ ಪ್ರಚಾರಕ್ಕೆ ಮಾಡಿದ ಖರ್ಚು ₹ 137.72 ಕೋಟಿ.

ಭಾರಿ ಪ್ರಮಾಣದ ಹಣವನ್ನು ಖರ್ಚು ಮಾಡಿದ ನಂತರವೂ ರಾಜ್ಯಕ್ಕೆ ವಿದೇಶಿ ಪ್ರವಾಸಿಗರನ್ನು ಸೆಳೆಯಲು ಸಾಧ್ಯವಾಗಲಿಲ್ಲ. ಒಂದು ದಶಕದ ಸರಾಸರಿ ತೆಗೆದುಕೊಂಡರೆ, 10 ವರ್ಷಗಳಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆ ಕಂಡು ಬಂದಿಲ್ಲ. ಇಷ್ಟು ಹಣ ಖರ್ಚು ಮಾಡದಿದ್ದರೂ ಬರುವ ಪ್ರವಾಸಿಗರು ಬಂದೇ ಬರುತ್ತಿದ್ದರು ಎಂದು ಲೇಖಪಾಲರ ವರದಿ ಅಭಿಪ್ರಾಯಪಟ್ಟಿದೆ.

2010–11 ರ ಕರ್ನಾಟಕ ಆರ್ಥಿಕ ಸಮೀಕ್ಷೆಯ ವರದಿಯಲ್ಲಿ ₹ 25,000 ಕೋಟಿ ಬಂಡವಾಳ ಹೂಡಿಕೆ ಆಗುವುದರಿಂದ ಸುಮಾರು 29 ರಿಂದ 40 ಲಕ್ಷ ಉದ್ಯೋಗಗಳು ಸೃಷ್ಟಿ ಆಗುವ ಸಾಧ್ಯತೆ ಇದೆ ಎಂಬ ಚಿತ್ರಣ ನೀಡಿತ್ತು. ವಿಪರ್ಯಾಸವೆಂದರೆ, ಶೇ 1 ಕ್ಕಿಂತಲೂ ಕಡಿಮೆ ಉದ್ಯೋಗ ಸೃಷ್ಟಿ ಆಗಿದೆ.

2010 ರಿಂದ 15 ರ ಅವಧಿಯಲ್ಲಿ 512 ಪ್ರವಾಸೋದ್ಯಮ ಯೋಜನೆಗಳ ಪ್ರಸ್ತಾವನೆಗೆ ಸರ್ಕಾರ ಹಿಂದೆ– ಮುಂದೆ ನೋಡದೇ ಒಪ್ಪಿಗೆ ನೀಡಿತ್ತು. ಅಚ್ಚರಿಯ ಸಂಗತಿ ಎಂದರೆ ಇವುಗಳಲ್ಲಿ ಬಹುತೇಕ ಹೊಟೇಲ್‌ ಮತ್ತು ರೆಸಾರ್ಟ್‌ಗಳಿಗೆ ಸಂಬಂಧಿಸಿದ್ದಾಗಿದ್ದವು. 6 ಸಾವಿರ ಉದ್ಯೋಗ ಸೃಷ್ಟಿಸಬಲ್ಲ ₹ 6056.35 ಕೋಟಿಯ 477 ಯೋಜನೆಗಳು ಅನುಷ್ಠಾನದ ವಿವಿಧ ಹಂತಗಳಲ್ಲಿ ಮಂದಗತಿಯಲ್ಲಿ ಸಾಗುತ್ತಿವೆ.

ಆದರೆ, ₹ 21,673.67 ಕೋಟಿಯ 35 ಬೃಹತ್‌ ಯೋಜನೆಗಳನ್ನು ರಾಜ್ಯ ಸರ್ಕಾರ ಕೈ ಬಿಟ್ಟಿತು. ಇದಕ್ಕೆ ಹೂಡಿಕೆದಾರರ ನಿರಾಸಕ್ತಿಯೇ ಕಾರಣವೆಂದು ಸರ್ಕಾರ ಹೇಳಿದೆ.

2008–2015 ರವರೆಗೆ ರಾಜ್ಯ ಸರ್ಕಾರದಿಂದ ಒಪ್ಪಿಗೆ ಪಡೆದ ಬಂಡವಾಳ ಹೂಡಿಕೆ ಪ್ರಸ್ತಾವನೆಗಳಲ್ಲಿ ಶೇ 23 ರಷ್ಟು ಹೂಡಿಕೆ ಆಗಿದೆ ಎಂದು ವರದಿ ಉಲ್ಲೇಖಿಸಿದೆ.

ಹಿಂದಿನ ಸರ್ಕಾರದ ಛಾಯೆ
‘ಈ ಅವ್ಯವಸ್ಥೆಗೆ ಹಿಂದಿನ ಸರ್ಕಾರವೇ ನೇರ ಕಾರಣ. ಪ್ರವಾಸೋದ್ಯಮಕ್ಕೆ ಭಾರಿ ಬಂಡವಾಳ ಬರುತ್ತದೆ ಎಂದು ಬಿಂಬಿಸಲಾಗಿತ್ತು. ಅದು ವಾಸ್ತವ ಅಲ್ಲ. ನಾವು ಈಗ ಎಲ್ಲಾ ಒಪ್ಪಂದಗಳು ಮತ್ತು ಕಡತಗಳನ್ನು ಪರಿಶೀಲಿಸುತ್ತಿದ್ದೇವೆ’ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ‘ಪ್ರಜಾವಾಣಿ’ಗೆ ತಿಳಿಸಿದರು.

ಹಿಂದಿನ ಸಚಿವರು
2010 ರಿಂದ 2015 ರವರೆಗಿನ ಅವಧಿಯಲ್ಲಿ ರಾಜ್ಯ ಪ್ರವಾಸೋದ್ಯಮ ಸಚಿವರಾಗಿ ಬಿಜೆಪಿಯ ಜನಾರ್ದನ ರೆಡ್ಡಿ, ಆನಂದಸಿಂಗ್‌ ಮತ್ತು ಕಾಂಗ್ರೆಸ್‌ನ ಆರ್‌.ವಿ.ದೇಶಪಾಂಡೆ ಕಾರ್ಯ ನಿರ್ವಹಿಸಿದ್ದರು.

ಅಂಕಿ ಅಂಶ
₹1,331 ಕೋಟಿ
-ಪ್ರಚಾರ, ಮೂಲಸೌಕರ್ಯಕ್ಕೆ ಮಾಡಿದ ಖರ್ಚು

₹ 21ಸಾವಿರ ಕೋಟಿ
-ಬಂಡವಾಳ ಹಿಂದಕ್ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.