ADVERTISEMENT

ಪ್ರಧಾನಿ ಭೇಟಿಗೆ ಸಮಯ ಕೇಳಿದ ಸಿ.ಎಂ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2018, 20:14 IST
Last Updated 21 ಏಪ್ರಿಲ್ 2018, 20:14 IST
ಸಿದ್ದರಾಮಯ್ಯ (ಸಂಗ್ರಹ ಚಿತ್ರ)
ಸಿದ್ದರಾಮಯ್ಯ (ಸಂಗ್ರಹ ಚಿತ್ರ)   

ಬೆಂಗಳೂರು: ಕಾವೇರಿ ನಿರ್ವಹಣಾ ಮಂಡಳಿ ರಚಿಸಬೇಕು ಎಂಬ ತಮಿಳುನಾಡು ಬೇಡಿಕೆಯನ್ನು ಪ್ರಬಲವಾಗಿ ವಿರೋಧಿಸಿರುವ  ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸರ್ಕಾರದ ಮುಂದೆ ರಾಜ್ಯ ಇಟ್ಟಿರುವ ಕರಡು ಯೋಜನೆ ಕುರಿತು ಖುದ್ದಾಗಿ ಚರ್ಚಿಸಲು ತಕ್ಷಣ ಸಮಯ ನಿಗದಿ‍ಪಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಕಾವೇರಿ ನಿರ್ವಹಣಾ ಮಂಡಳಿ ರಚನೆ ಸಂವಿಧಾನಾತ್ಮಕ ಕ್ರಮವಲ್ಲ. ಅಲ್ಲದೆ, ಸುಪ್ರೀಂ ಕೋರ್ಟ್‌ ಈ ವಿಷಯದಲ್ಲಿ ಯಾವುದೇ ಸೂತ್ರ ನೀಡಿಲ್ಲ. ನ್ಯಾಯಮಂಡಳಿ ಐತೀರ್ಪಿನಲ್ಲೂ ನೀರು ನಿರ್ವಹಣಾ ಮಂಡಳಿ ರಚಿಸಬಹುದು ಎಂದು ಕೇವಲ ಶಿಫಾರಸು ರೂಪದಲ್ಲಿ ಹೇಳಿದೆ ವಿನಾ ನಿರ್ದೇಶನ ಕೊಟ್ಟಿಲ್ಲ ಎಂದು ಮುಖ್ಯಮಂತ್ರಿ ಪತ್ರದಲ್ಲಿ ಖಚಿತಪಡಿಸಿದ್ದಾರೆ.

ನ್ಯಾಯಮಂಡಳಿಯ ಈ  ಶಿಫಾರಸ್ಸನ್ನು ಸುಪ್ರೀಂ ಕೋರ್ಟ್ ಫೆಬ್ರುವರಿ 16ರಂದು ನೀಡಿರುವ ತೀರ್ಪಿನಲ್ಲಿ ಸಮರ್ಥಿಸಿಲ್ಲ. ಹೀಗಾಗಿ ಕಾವೇರಿ ನಿರ್ವಹಣಾ ಮಂಡಳಿ ರಚಿಸಬೇಕೆಂಬ ತಮಿಳುನಾಡು ಬೇಡಿಕೆಯು ನ್ಯಾಯಮಂಡಳಿ ಐತೀರ್ಪು ಮತ್ತು ಸುಪ್ರೀಂ ಕೋರ್ಟ್‌ ಪರಿಷ್ಕೃತ ತೀರ್ಪು ಜಾರಿಯ ಅಗತ್ಯಗಳನ್ನು ಮೀರುತ್ತದೆ ಎಂದು ಸಿದ್ದರಾಮಯ್ಯ ಆತಂಕವ್ಯಕ್ತಪಡಿಸಿದ್ದಾರೆ.

ADVERTISEMENT

ಇಂಥ ಪ್ರಸ್ತಾವನೆಗಳು ಸಂವಿಧಾನ ಖಾತರಿಪಡಿಸಿರುವ ಒಕ್ಕೂಟವ್ಯವಸ್ಥೆಯನ್ನು ನಾಶಪಡಿಸುತ್ತದೆ. ಅಲ್ಲದೆ, ಸಂವಿಧಾನದ ಏಳನೇ ಪರಿಚ್ಛೇದದ ಅನುಸಾರ ರಾಜ್ಯಗಳಿಗೆ ಕೊಡಮಾಡಿರುವ ನೀರು ನಿರ್ವಹಣಾ ಅಧಿಕಾರವನ್ನು ಕಸಿದುಕೊಳ್ಳಲಿದೆ ಎಂದೂ ಸಿದ್ದರಾಮಯ್ಯ ವಿವರಿಸಿದ್ದಾರೆ.

ಸುಪ್ರೀಂ ಕೋರ್ಟ್‌ ತೀರ್ಪಿನ ಪ್ರಕಾರ ಸಾಮಾನ್ಯ ಮಳೆ ವರ್ಷದಲ್ಲಿ ತಮಿಳುನಾಡಿಗೆ 177.25 ಟಿಎಂಸಿ ಅಡಿ ಹಾಗೂ ಸಂಕಷ್ಟದ ವರ್ಷದಲ್ಲಿ ಸಂಗ್ರಹ ಪ್ರಮಾಣಕ್ಕೆ ಅನುಸಾರವಾಗಿ ನೀರು ಬಿಡುಗಡೆ ಮಾಡಿದ ಬಳಿಕ ಉಳಿದ ನೀರು ಬಳಸಿಕೊಳ್ಳಲು ಕರ್ನಾಟಕಕ್ಕೆ ಅಧಿಕಾರವಿದ್ದು, ನಿರ್ವಹಣಾ ಮಂಡಳಿ ರಚಿಸುವುದರಿಂದ ಇದಕ್ಕೂ ಕುತ್ತು ಬರಲಿದೆ ಎಂದಿದ್ದಾರೆ.

ಕೋರ್ಟ್‌ ತೀರ್ಪು ಜಾರಿಗೆ ಯೋಜನೆಯೊಂದನ್ನು ರೂಪಿಸುವಂತೆ ಸರ್ವೋಚ್ಚ ನ್ಯಾಯಾಲಯ ಕೇಂದ್ರಕ್ಕೆ ನಿರ್ದೇಶಿಸಿದೆ. ಅದಕ್ಕೆ ಪೂರಕವಾಗಿ ಜಲ ಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ಮಾರ್ಚ್‌ 9ರಂದು ಕರೆದಿದ್ದ ನದಿ ಪಾತ್ರದ ರಾಜ್ಯಗಳ ಸಭೆಯಲ್ಲಿ ನಮ್ಮ ರಾಜ್ಯದ ಮುಖ್ಯ ಕಾರ್ಯದರ್ಶಿ ಭಾಗವಹಿಸಿ ನೀರು ನಿರ್ವಹಣಾ ಮಂಡಳಿ ರಚಿಸಬೇಕು ಎಂಬ ತಮಿಳುನಾಡು ಪ್ರಸ್ತಾವವನ್ನು ವಿರೋಧಿಸಿದ್ದಾರೆ ಎಂದೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಮಾರ್ಚ್‌ 19ರಂದು ಇಡೀ ಕಾವೇರಿ ವಿಷಯದಲ್ಲಿ ನಮ್ಮ ನಿಲುವೇನೆಂಬುದನ್ನು ಮುಖ್ಯ ಕಾರ್ಯದರ್ಶಿ, ಜಲ ಸಂಪನ್ಮೂಲ ಕಾರ್ಯದರ್ಶಿಗೆ ಮನವರಿಕೆ ಮಾಡಿದ್ದಾರೆ. ಜತೆಗೆ ನಮ್ಮ ಕರಡು ಯೋಜನೆಯನ್ನು ಕಳುಹಿಸಿದ್ದಾರೆ ಎಂದೂ ಸಿದ್ದರಾಮಯ್ಯ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.