ADVERTISEMENT

ಪ್ರವಾಸೋದ್ಯಮ ಮೇಳ: ಸಚಿವ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2015, 20:00 IST
Last Updated 4 ಸೆಪ್ಟೆಂಬರ್ 2015, 20:00 IST

ಬೆಂಗಳೂರು: ಸೆಪ್ಟೆಂಬರ್‌ 6ರಿಂದ 8ರವರೆಗೆ ಆಯೋಜಿಸಿರುವ ‘ಪಾಟಾ’ ಪ್ರವಾಸೋದ್ಯಮ ಮೇಳ ನಡೆಯುವ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರಕ್ಕೆ ಶುಕ್ರವಾರ ಭೇಟಿ ನೀಡಿದ ಪ್ರವಾಸೋದ್ಯಮ ಸಚಿವ ಆರ್.ವಿ. ದೇಶಪಾಂಡೆ, ಪೂರ್ವಸಿದ್ಧತೆಯ ಪರಿಶೀಲನೆ ನಡೆಸಿದರು.

ವಸ್ತುಪ್ರದರ್ಶನ ಮಳಿಗೆ, ಮುಖ್ಯ ಸಭಾಂಗಣ, ವೇದಿಕೆ, ಮಾಧ್ಯಮ ಕೇಂದ್ರ, ಕಾನ್ಫರೆನ್ಸ್‌ ಹಾಲ್‌, ಊಟದ ಕೊಠಡಿಗಳನ್ನು ವೀಕ್ಷಿಸಿದ ಸಚಿವರು, ಸಿದ್ಧತೆ ಬಗ್ಗೆ ವ್ಯವಸ್ಥಾಪಕರಿಂದ ಮಾಹಿತಿ ಪಡೆದರು.

ಬಿಡಿಎ, ಬಿಬಿಎಂಪಿ, ಬೆಸ್ಕಾಂ, ಗೃಹ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು   ಜೊತೆಗಿದ್ದರು.
ಪರಿಶೀಲನೆ ನಡೆಸಿದ ನಂತರ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ ಅವರು,  ಸೆಪ್ಟೆಂಬರ್‌ 5ರ ಸಂಜೆಯ ಒಳಗಾಗಿ ಎಲ್ಲ ಸಿದ್ಧತೆಗಳನ್ನು ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದರು.

ಸಾರ್ವಜನಿಕರಿಗೆ ಪ್ರವೇಶವಿಲ್ಲ: ಪ್ರವಾಸೋದ್ಯಮ ಮೇಳ ಸಂಪೂರ್ಣವಾಗಿ ವ್ಯಾಪಾರಿ ಮೇಳ. ಇಲ್ಲಿ ಬೇರೆ ಬೇರೆ ದೇಶದ ಪ್ರವಾಸೋದ್ಯಮ ಕ್ಷೇತ್ರದ ಉದ್ಯಮಿಗಳು ವ್ಯವಹಾರ ನಡೆಸುತ್ತಾರೆ. ಆದ್ದರಿಂದ ಸಾರ್ವಜನಿಕರಿಗೆ ಪ್ರವೇಶವಿಲ್ಲ. ಪಾಸ್‌ ಇರುವವರಿಗೆ ಮಾತ್ರ ಪ್ರವೇಶವಿದ್ದು, ಸಾರ್ವಜನಿಕರು ಬಂದು ನಿರಾಶರಾಗುವುದು ಬೇಡ ಎಂದರು.
*
ಶ್ಯಾಮ್  ಭಟ್‌ಗೆ ತರಾಟೆ
ಪೂರ್ವಸಿದ್ಧತಾ ಪರಿಶೀಲನೆಯ ವೇಳೆ ಬಿಡಿಎ ಆಯುಕ್ತ ಶ್ಯಾಮ್‌  ಭಟ್‌ ಅವರು ಗೈರಾಗಿದ್ದಕ್ಕೆ ಕೆರಳಿದ ಸಚಿವರು ಬಿಡಿಎ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

‘ಎಲ್ರಿ ನಿಮ್ಮ ಶ್ಯಾಮ್‌ ಭಟ್ರು. ಯಾಕೆ ಬಂದಿಲ್ಲ, ಅವರು ಬಿಡಿಎ ಕಮಿಷನರ್‌. ಅವರ ಕಚೇರಿ ವಿದೇಶದಲ್ಲಿಲ್ಲ. ಬೆಂಗಳೂರಿನಲ್ಲೇ ಇದೆ. ಆದರೆ, ಒಂದೇ ಒಂದು ಮೀಟಿಂಗ್‌ಗೆ ಬರಲ್ಲ. ನಾವು ಬಂದಾಗ ಮುಖನಾದ್ರು ತೋರಿಸಬೇಕಲ್ವಾ? ಎಂಥ ಬೇಜವಾಬ್ದಾರಿ ನಡವಳಿಕೆ ! ನಾವು ನಡೆಸುತ್ತಿರುವುದು ಅಂತರರಾಷ್ಟ್ರೀಯ ಮಟ್ಟದ ಕಾರ್ಯಕ್ರಮ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಈ ಬಗ್ಗೆ ಪತ್ರ ಬರೆಯುವಂತೆ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.