ADVERTISEMENT

ಪ್ರಾದೇಶಿಕ ಪಕ್ಷಗಳ ನಿರ್ನಾಮ ಕಾರ್ಯಸೂಚಿ

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಂಸದ ಡಿ.ಕೆ.ಸುರೇಶ್‌ ಟೀಕಾ ಪ್ರಹಾರ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2017, 20:10 IST
Last Updated 12 ಮಾರ್ಚ್ 2017, 20:10 IST

ಬಿಡದಿ: ‘ಪ್ರಾದೇಶಿಕ ಪಕ್ಷಗಳನ್ನು ನಿರ್ಮೂಲನೆ ಮಾಡುವುದೇ ಪ್ರಧಾನಿ ಮೋದಿ ಅವರ ಅಜೆಂಡಾ ಎಂಬಂತೆ ಕಾಣುತ್ತಿದೆ’ ಎಂದು ಸಂಸದ ಡಿ.ಕೆ. ಸುರೇಶ್‌ ದೂರಿದರು.

ಇಲ್ಲಿ ವಿವಿಧ ಕಾಮಗಾರಿಗಳಿಗೆ ಭಾನುವಾರ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ‘ಹೀಗಾಗಿ ಪ್ರಾದೇಶಿಕ ಪಕ್ಷಗಳನ್ನೇ ಗುರಿಯಾಗಿಸಿಕೊಂಡು ಚುನಾವಣೆ ನಡೆಸಿದೆ’ ಎಂದರು.

‘ಪಂಚರಾಜ್ಯಗಳ ಚುನಾವಣೆಯನ್ನೇ, ಅದರಲ್ಲೂ ಉತ್ತರ ಪ್ರದೇಶದ ಫಲಿತಾಂಶವನ್ನೇ ನೆಪ ಮಾಡಿಕೊಂಡು ರಾಜ್ಯದಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂಬುದು ಸುಳ್ಳು. ಅಧಿಕಾರದ ದುರಾಸೆಯಿಂದಾಗಿ ಬಿಜೆಪಿ ಸುಳ್ಳು ವಂದತಿ ಹಬ್ಬಿಸುತ್ತಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿಯೇ ಬಿಟ್ಟರು ಅನ್ನುವ ಹಾಗೇ ನಡೆದುಕೊಳ್ಳುತ್ತಿರುವುದು ಸರಿಯಲ್ಲ’ ಎಂದರು.

ಕರ್ನಾಟಕದ ಜನ ಪ್ರಜ್ಞಾವಂತರು. ಯಾವುದೇ ಕಾರಣಕ್ಕೂ ಬಣ್ಣದ ಮಾತುಗಳಿಗೆ ಮರುಳಾಗುವುದಿಲ್ಲ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು.

ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಮುಖಭಂಗವಾಗಿಲ್ಲ. ಉತ್ತರ ಪ್ರದೇಶದಲ್ಲಿ ಪಕ್ಷ ಸೋತರೂ, ಪಂಜಾಬ್‌ನಲ್ಲಿ ಗೆಲುವು ಸಾಧಿಸಿದೆ. ನಾಯಕತ್ವದ ವಿಚಾರ ಇಂದಿನ ದಿನಗಳಲ್ಲಿ ಅಪ್ರಸ್ತುತ. ರಾಜ್ಯದ ಜನತೆ ಮಾತಿನ ಮೋಡಿಗೆ ಮರಳಾಗುವುದಿಲ್ಲ. ಬಿಜೆಪಿಯ ಈ ಸಂಸ್ಕೃತಿ ರಾಜ್ಯದಲ್ಲಿ ನಡೆಯುವುದಿಲ್ಲ ಎಂದು ತಿಳಿಸಿದರು.

ಸ್ಥಳೀಯ ಮಟ್ಟದ ನಾಯಕತ್ವದ ಕೊರತೆ ಹಾಗೂ ಸ್ಥಳೀಯ ಪ್ರಾದೇಶಿಕ ಪಕ್ಷಗಳ ಕಾರ್ಯವೈಖರಿ ಹಿನ್ನೆಲೆಯಲ್ಲಿ ರಾಷ್ಟ್ರ ಮಟ್ಟದ ಪಕ್ಷಗಳ ಗೆಲುವು ನಿಂತಿರುತ್ತದೆ. ಹೀಗಾಗಿ ಉತ್ತರ ಪ್ರದೇಶದಲ್ಲಿ ಪಕ್ಷ ಸೋಲನ್ನು ಕಂಡಿದೆ. ಮುಂದಿನ ದಿನಗಳಲ್ಲಿ ಪಕ್ಷದಲ್ಲಿನ ತಪ್ಪುಗಳನ್ನು ತಿದ್ದಿಕೊಂಡು ಉತ್ತಮ ಆಡಳಿತ ನೀಡಿದರೆ, ಮುಂದಿನ ಚುನಾವಣೆಗೆ ನಮ್ಮ ಗೆಲುವು ಖಚಿತ ಎಂದು ತಿಳಿಸಿದರು.

ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇಲ್ಲ. ರಾಜ್ಯದಲ್ಲಿ ತೀವ್ರ ಬರಗಾಲ ಎದುರಾಗಿದ್ದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಉತ್ತಮ ಆಡಳಿತ ನೀಡಿದೆ.

ನೀರಾವರಿ, ವಿದ್ಯುತ್, ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡಿರುವ ರಾಜ್ಯ ಸರ್ಕಾರವನ್ನು ಮತದಾರರು ಎಂದಿಗೂ ಕೈ ಬಿಡುವುದಿಲ್ಲ. ಪಕ್ಷ ತೊರೆದು ಹೋದವರಿಗೆಲ್ಲ ಕಾಂಗ್ರೆಸ್ ಉತ್ತಮ ಸ್ಥಾನವನ್ನೇ ನೀಡಿತ್ತು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಎ.ಮಂಜು ಅವರೇ ನಮ್ಮ ಮುಖಂಡ’
‘ಶಾಸಕ ಎಚ್.ಸಿ.ಬಾಲಕೃಷ್ಣ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಲಿದೆ ಎಂಬ ಬಗ್ಗೆ ಮಾಧ್ಯಮಗಳಲ್ಲಿ ನೋಡಿದ್ದೇನೆ.  ಸದ್ಯಕ್ಕೆ ನಮ್ಮ ಪಕ್ಷದಲ್ಲಿರುವ ಎ.ಮಂಜು ಅವರೇ ನಮ್ಮ ಮುಖಂಡರು’ ಎಂದು ಡಿ.ಕೆ. ಸುರೇಶ್‌ ಅವರು ತಿಳಿಸಿದರು.

‘ಹೈಕಮಾಂಡ್‌ನಲ್ಲಿ ಯಾವ ಚರ್ಚೆ ನಡೆಯುತ್ತಿದೆ ಎಂಬುದರ ಬಗ್ಗೆ ನಮಗೆ ಮಾಹಿತಿ ಇಲ್ಲ. ಪಕ್ಷದಲ್ಲಿ ಏನಾದರೂ ಮಹತ್ವದ ಬದಲಾವಣೆಗಳಾದರೆ ಮಾಧ್ಯಮಗಳಿಗೆ ಮೊದಲು ತಿಳಿಸಲಾಗುವುದು’ ಎಂದು ತಿಳಿಸಿದರು.

ADVERTISEMENT

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.