ADVERTISEMENT

ಫೇಸ್‌ಬುಕ್‌ನಲ್ಲಿ ಬೆದರಿಕೆ: ಬಂಧನ

ಗೂಂಡಾ ಕಾಯ್ದೆಯಡಿ ಕ್ರಮಕ್ಕೆ ಮುಂದಾದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2014, 19:30 IST
Last Updated 2 ಆಗಸ್ಟ್ 2014, 19:30 IST

ಬೆಂಗಳೂರು: ಸಾಮಾ­ಜಿಕ ಜಾಲ­ತಾಣ ‘ಫೇಸ್‌­ಬುಕ್‌’ ಮೂಲಕ ಸಾಮಾಜಿಕ ಕಾರ್ಯ­­­ಕರ್ತೆ­ಯೊ­ಬ್ಬರಿಗೆ ಅತ್ಯಾ­ಚಾ­ರದ ಬೆದರಿಕೆ ಹಾಕಿದ ಆರೋಪದ ಮೇಲೆ ವಿ.ಆರ್.ಭಟ್‌ (45) ಅವರನ್ನು ಬಂಧಿ­ಸಿ­ರುವ ನಗರ ಪೊಲೀಸರು, ಆರೋಪಿ ವಿರುದ್ಧ ಗೂಂಡಾ ಕಾಯ್ದೆ ಅಡಿ ಪ್ರಕ­ರಣ ದಾಖಲಿಸಲು ಮುಂದಾಗಿದ್ದಾರೆ.

‘ವೈಜ್ಞಾನಿಕ ಸಂಶೋಧನೆ, ಚಿಂತ­ನೆ–ಶ್ರಮ ಸಂಸ್ಕೃತಿ’ ವಿಷಯ ಕುರಿತು ಸಾಮಾಜಿಕ ಕಾರ್ಯಕರ್ತೆ ಪ್ರಭಾ ಎಂಬು­ವವರು ಫೇಸ್‌­ಬುಕ್‌ ಖಾತೆ­ಯಲ್ಲಿ ಜುಲೈ 24ರಂದು ಬರೆ­ದಿದ್ದ ಬರಹಕ್ಕೆ ಭಟ್‌ ಅವ­ಹೇಳನಕಾರಿ­ಯಾಗಿ ಪ್ರತಿಕ್ರಿ­ಯಿ­­ಸಿದ್ದರು.

ಈ ಸಂಬಂಧ ಜು. 28ರಂದು ಚಂದ್ರಾ­ಲೇಔಟ್‌ ಠಾಣೆಯಲ್ಲಿ ದೂರು ದಾಖ­ಲಾಗಿತ್ತು. ದೂರಿನ ಅನ್ವಯ ನಿಂದನೆ, ಅಪ­ರಾಧ ಸಂಚು ಮತ್ತು ಮಾಹಿತಿ ತಂತ್ರಜ್ಞಾನ ದುರು­ಪಯೋಗ­ಪಡಿ­ಸಿ­ಕೊಂಡ ಆರೋಪದ ಮೇಲೆ ಪ್ರಕರಣ ದಾಖಲಾ­ಗಿತ್ತು. ದೂರು ದಾಖಲಾದ ಬಳಿಕ ತಲೆ­ಮ­ರೆ­ಸಿಕೊಂ­ಡಿದ್ದ ಆರೋ­ಪಿಯ ಪತ್ತೆಗೆ ನಾಲ್ಕು ವಿಶೇಷ ತಂಡಗಳನ್ನು ರಚಿಸ­ಲಾ­ಗಿತ್ತು. ಶನಿವಾರ ಬೆಳಿಗ್ಗೆ ನಂದಿನಿ­­ ಲೇ­ಔಟ್‌­­ನಲ್ಲಿ ಅವರನ್ನು ಬಂಧಿಸ­ಲಾ­ಯಿತು.

‘ಭಟ್‌ ಅವರನ್ನು  ಚಂದ್ರಾಲೇಔಟ್ ಠಾಣೆಯ ರೌಡಿಗಳ ಪಟ್ಟಿಗೆ ಸೇರಿಸಲಾ­ಗುವುದು. ಬಳಿಕ, ಗೂಂಡಾ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗುವುದು’ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಅಲೋಕ್ ಕುಮಾರ್ ಹೇಳಿದ್ದಾರೆ.

ಗೌರಿ ಲಂಕೇಶ್ ದೂರು
‘ವಿ.ಆರ್.ಭಟ್‌ ಅವರು ನನ್ನ ಫೇಸ್‌ಬುಕ್‌ ಖಾತೆಗೆ ಕೋಮು–ದ್ವೇಷ ಬಿತ್ತುವ ಸಂದೇಶ ರವಾನಿಸಿದ್ದಾರೆ. ಈ ಮೂಲಕ ನೆಮ್ಮದಿ ಹಾಳು ಮಾಡಲು ಪ್ರಯತ್ನಿಸಿದ್ದಾರೆ’ ಎಂದು ಆರೋಪಿಸಿ ಪತ್ರಕರ್ತೆ ಗೌರಿ ಲಂಕೇಶ್ ಸಹ ಬಸವನಗುಡಿ ಠಾಣೆಯಲ್ಲಿ ಶುಕ್ರವಾರ ದೂರು ದಾಖಲಿಸಿದ್ದಾರೆ.

‘ಜುಲೈ 14ರಂದು ಸಂಜೆ 5.30ಕ್ಕೆ ವಿ.ಆರ್.ಭಟ್‌ ಅವರು ಮುಸ್ಲಿಮರ ವಿರುದ್ಧ ಅವಹೇಳನಕಾರಿ ಬರಹ ಬರೆದು ಗೌರಿ ಲಂಕೇಶ್ ಅವರ ಖಾತೆಗೆ ಸಂದೇಶ ರವಾನಿಸಿದ್ದಾರೆ. ಹೀಗಾಗಿ ಬಸವನಗುಡಿ ಠಾಣೆಯ ರೌಡಿಗಳ ಪಟ್ಟಿಯಲ್ಲೂ ಅವರ ಹೆಸರು ಸೇರಿಸಲಾಗುವುದು’ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT