ADVERTISEMENT

‘ಬಂಗಾರ’ದ ಮಗನಿಗಾಗಿ ಭೂಮಿ ಕೊಳ್ಳುವ ಕನಸು

ಚಿನ್ನದ ಪದಕ ಸೂರೆಗೈದ ರವಿಕಿರಣ್, ನುಸ್ರತ್

ವೆಂಕಟೇಶ್ ಜಿ.ಎಚ್
Published 24 ಮಾರ್ಚ್ 2018, 19:40 IST
Last Updated 24 ಮಾರ್ಚ್ 2018, 19:40 IST
ಚಿನ್ನದ ಪದಕಗಳನ್ನು ತಾಯಿ ಗಂಗಮ್ಮನ ಕೊರಳಿಗೆ ಹಾಕಿ ಸಂಭ್ರಮಿಸಿದ ರವಿಕಿರಣ್‌. ತಂಗಿ ರಾಧಾ, ಅಪ್ಪ ರಾಜಣ್ಣ ಚಿತ್ರದಲ್ಲಿದ್ದಾರೆ‌- ಪ್ರಜಾವಾಣಿ ಚಿತ್ರ: ಸಂಗಮೇಶ ಬಡಿಗೇರ
ಚಿನ್ನದ ಪದಕಗಳನ್ನು ತಾಯಿ ಗಂಗಮ್ಮನ ಕೊರಳಿಗೆ ಹಾಕಿ ಸಂಭ್ರಮಿಸಿದ ರವಿಕಿರಣ್‌. ತಂಗಿ ರಾಧಾ, ಅಪ್ಪ ರಾಜಣ್ಣ ಚಿತ್ರದಲ್ಲಿದ್ದಾರೆ‌- ಪ್ರಜಾವಾಣಿ ಚಿತ್ರ: ಸಂಗಮೇಶ ಬಡಿಗೇರ   

ಬಾಗಲಕೋಟೆ: ‘ನಮಗೆ ಸ್ವಂತಕ್ಕೆ ಗೇಣು ಜಾಗ ಇಲ್ಲ. ಮಗ ತೋಟಗಾರಿಕೆಯಲ್ಲಿ ಸಾಧನೆ ಮಾಡಿದ್ದಾನೆ. ಅವನಿಗೋಸ್ಕರ ಎಲ್ಲಿಯಾದರೂ ಎರಡೆಕರೆ ಜಮೀನು ಕೊಂಡು ಜಾಗ ಮಾಡಿಕೊಡಬೇಕು’ ಎಂದು ಬೆಂಗಳೂರು ಜಿಲ್ಲೆ ಆನೇಕಲ್ ತಾಲ್ಲೂಕಿನ ಕಚನಾಯಕನಹಳ್ಳಿಯ ರಾಜಣ್ಣ ಹೇಳಿದಾಗ ಅವರ ಕಣ್ಣಂಚಿನಿಂದ ಒಸರಿದ ಆನಂದ ಬಾಷ್ಪ ಕ್ಯಾಮೆರಾಗಳ ಫ್ಲ್ಯಾಷ್‌ ಬೆಳಕಲ್ಲಿ ಮಿಂಚುಹರಿಸಿತು.

ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಶನಿವಾರ ನಡೆದ ಏಳನೇ ಘಟಿಕೋತ್ಸವದಲ್ಲಿ, ತಮ್ಮ ಮಗ ಎ.ಆರ್.ರವಿಕಿರಣ್ ಬಿಎಸ್‌ಸಿ ತೋಟಗಾರಿಕೆ ವಿಷಯದಲ್ಲಿ 14 ಚಿನ್ನದ ಪದಕ ಪಡೆದದ್ದು ರಾಜಣ್ಣ ದಂಪತಿಯ ಸಂಭ್ರಮವನ್ನು ಹೆಚ್ಚಿಸಿತ್ತು.

ಪತ್ನಿ ಗಂಗಮ್ಮ ಅವರೊಂದಿಗೆ ಬೊಮ್ಮಸಂದ್ರದ ಎಂಟಿಆರ್ ಕಾರ್ಖಾನೆಯ ಪ್ಯಾಕಿಂಗ್ ವಿಭಾಗದಲ್ಲಿ ರಾಜಣ್ಣ ಕೆಲಸ ಮಾಡುತ್ತಿದ್ದಾರೆ. ‘ನಾವಿಬ್ಬರೂ ಅನಕ್ಷರಸ್ಥರು. 18 ವರ್ಷಗಳಿಂದ ಪ್ಯಾಕಿಂಗ್ ವಿಭಾಗದಲ್ಲಿಯೇ ಇದ್ದೇವೆ. ಓದಿರುವ ಸಣ್ಣ ಸಣ್ಣ ಹುಡುಗರು ನಮ್ಮ ಮೇಲಧಿಕಾರಿಗಳಾಗಿ ಬಂದಾಗ ನಮಗೂ ಮಕ್ಕಳನ್ನು ಚೆನ್ನಾಗಿ ಓದಿಸಬೇಕು ಎಂಬ ಆಸೆಯಾಗುತ್ತಿತ್ತು. ಹಾಗಾಗಿ ಮಗನನ್ನು ಮಾಗಡಿ ತಾಲ್ಲೂಕು ಕುದೂರಿನ ಭಾವಮೈದುನನ ಮನೆಯಲ್ಲಿ ಬಿಟ್ಟು ಓದಿಸಿದೆ’ ಎಂದು ರಾಜಣ್ಣ ಹೇಳಿದರು.

ADVERTISEMENT

ಈ ಸಾಧನೆಗೆ ತಮ್ಮ ಮಾವ ಗೋವಿಂದಪ್ಪ, ಅತ್ತೆ ರಾಮಕ್ಕ, ಸಹಪಾಠಿಗಳು ಹಾಗೂ ಶಿಕ್ಷಕರ ಪ್ರೇರಣೆಯೇ ಕಾರಣ ಎಂದು ರವಿಕಿರಣ್ ಸಂತಸ ಹಂಚಿಕೊಂಡರು. ‘ಎಸ್ಸೆಸ್ಸೆಲ್ಸಿಯಲ್ಲಿ ಶೇ 91ರಷ್ಟು ಅಂಕ ಪಡೆದಿದ್ದೆ. ಚಂದಾಪುರದ ಸ್ವಾಮಿ ವಿವೇಕಾನಂದ ಕಾಲೇಜಿನಲ್ಲಿ ಪಿಯುಸಿ ಓದಿದ್ದು,
ಶೇ 75ರಷ್ಟು ಅಂಕ ಬಂದಿತ್ತು. ಅಲ್ಲಿನ ಉಪನ್ಯಾಸಕ ಬೀರೇಶ್ವರ್ ಅವರ ಸಲಹೆ ಮೇರೆಗೆ ತೋಟಗಾರಿಕೆ ವಿಷಯ ಆಯ್ದುಕೊಂಡೆ’ ಎಂದು ರವಿಕಿರಣ್ ಸ್ಮರಿಸಿದರು.

ಸದ್ಯ ಬೆಂಗಳೂರಿನ ಹೆಬ್ಬಾಳದ ಕೃಷಿ ವಿಶ್ವವಿದ್ಯಾಲಯದಲ್ಲಿ ಎಂಎಸ್‌ಸಿ ಜೆನೆಟಿಕ್ಸ್ ಅಂಡ್ ಪ್ಲಾಂಟ್ ಬ್ರೀಡಿಂಗ್ ವಿಭಾಗದಲ್ಲಿ ಓದುತ್ತಿರುವ ರವಿಕಿರಣ್, ಸಂಶೋಧನಾ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆಯ ಆಸೆ ಹೊಂದಿದ್ದಾರೆ.

ಕರ್ನಾಟಕದಲ್ಲಿಯೇ ಉಳಿಯುವ ಆಸೆ

ಎಂಎಸ್‌ಸಿಯಲ್ಲಿ (ಹಣ್ಣು ವಿಜ್ಞಾನ ವಿಷಯ) ಏಳು ಚಿನ್ನದ ಪದಕ ಪಡೆದ ಜಾರ್ಖಂಡ್‌ನ ಹಜಾರಿಬಾಗ್ ಜಿಲ್ಲೆಯ ಬರ್ಹಿ ಗ್ರಾಮದ ನುಸ್ರತ್ ಪರ್ವಿನ್‌ಗೆ ಅವಕಾಶ ಸಿಕ್ಕರೆ ಕರ್ನಾಟಕದಲ್ಲಿಯೇ ಉಳಿಯುವ ಆಸೆ.

ಅಪ್ಪ ಡಾ.ನಿಜಾಮುದ್ದೀನ್ ಅನ್ಸಾರಿ ವೃತ್ತಿಯಲ್ಲಿ ವೈದ್ಯರು. ಅಮ್ಮ ಶಬೀನಾ ಖಾತುನ್ ಗೃಹಿಣಿ. ನುಸ್ರತ್‌, ಬಿಹಾರ ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿಯಲ್ಲಿ ಬಿಎಸ್‌ಸಿ ಪದವಿ ಪಡೆದಿದ್ದಾರೆ.

(ಎಂಎಸ್‌ಸಿ ಹಣ್ಣು ವಿಜ್ಞಾನ ವಿಷಯದಲ್ಲಿ ಏಳು ಚಿನ್ನದ ಪದಕ ಪಡೆದ ಜಾರ್ಖಂಡ್‌ನ ನುಸ್ರತ್ ಪರ್ವಿನ್)

‘ಇಲ್ಲಿಯ ಜನ ಒಳ್ಳೆಯವರು ಎಂಬ ಕಾರಣಕ್ಕೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಕರ್ನಾಟಕದ ಬಗ್ಗೆ ಅಪ್ಪನಿಗೆ ವಿಶೇಷ ಪ್ರೀತಿ. ಎಂಎಸ್‌ಸಿಗೆ ಇಲ್ಲಿ ಸೀಟ್ ಸಿಕ್ಕಾಗ ಅವರೇ ಹೆಚ್ಚು ಸಂಭ್ರಮಿಸಿದ್ದರು. ಅನಾರೋಗ್ಯದ ಕಾರಣ ಅವರು ಘಟಿಕೋತ್ಸವಕ್ಕೆ ಬರಲಿಲ್ಲ’ ಎಂದು ಹೇಳಿದ ನುಸ್ರತ್ ಪರ್ವಿನ್, ಸದ್ಯ ಹೆಬ್ಬಾಳದ ಭಾರತೀಯ ತೋಟಗಾರಿಕಾ ಸಂಶೋಧನಾ ಕೇಂದ್ರದಲ್ಲಿ ಸಂಶೋಧನಾ ವಿದ್ಯಾರ್ಥಿ.

ಬಿಎಸ್‌ಸಿ ತೋಟಗಾರಿಕೆ ವಿಷಯದಲ್ಲಿ ಬಸಪ್ಪ ಬಂಡಿ, ಟಿ.ರುಚಿತಾ ತಲಾ ನಾಲ್ಕು ಹಾಗೂ ಎಸ್.ಲಾವಣ್ಯ ಮೂರು ಚಿನ್ನದ ಪದಕ ಪಡೆದರು. ಎಂಎಸ್‌ಸಿ ಫ್ಲೋರಿಕಲ್ಚರ್‌ ಅಂಡ್‌ ಲ್ಯಾಂಡ್‌ಸ್ಕೇಪ್‌ ಆರ್ಕ್ಟಿಟೆಕ್ಚರ್‌ ವಿಷಯದಲ್ಲಿ ಜ್ಯೋತಿ ವರ್ಮಾ, ಪಿಎಚ್‌.ಡಿಯಲ್ಲಿ ಎಸ್.ವೈ.ಚಂದ್ರಶೇಖರ್ ತಲಾ ಮೂರು ಚಿನ್ನದ ಪದಕ ಪಡೆದರು.

ವಿಶ್ವವಿದ್ಯಾಲಯದ ಸಹ ಕುಲಾಧಿಪತಿಯೂ ಆದ ತೋಟಗಾರಿಕೆ ಸಚಿವ ಎಸ್.ಎಸ್‌. ಮಲ್ಲಿಕಾರ್ಜುನ ಪದವಿ ಪ್ರದಾನ ಮಾಡಿದರು. ಕುಲಪತಿ ಡಾ.ಡಿ.ಎಲ್.ಮಹೇಶ್ವರ್, ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಕೃಷಿ ವಿಜ್ಞಾನಿಗಳ ನೇಮಕಾತಿ ಮಂಡಳಿಯ ಮಾಜಿ ಅಧ್ಯಕ್ಷ ಸಿ.ಡಿ.ಮಾಯಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.