ADVERTISEMENT

ಬಡ್ತಿ ಮೀಸಲಾತಿ: ಜ್ಯೇಷ್ಠತೆ ವಿಸ್ತರಣೆಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2017, 20:16 IST
Last Updated 23 ನವೆಂಬರ್ 2017, 20:16 IST

ಬೆಳಗಾವಿ: ಮೀಸಲಾತಿ ಆಧಾರದಲ್ಲಿ ಬಡ್ತಿ ಹೊಂದಿರುವ ರಾಜ್ಯ ಸರ್ಕಾರಿ ನೌಕರರಿಗೆ ತತ್ಪರಿಣಾಮವಾದ ಜ್ಯೇಷ್ಠತೆ ವಿಸ್ತರಿಸಲು ಅವಕಾಶ ಕಲ್ಪಿಸುವ ಮಸೂದೆ ವಿಧಾನ ಪರಿಷತ್‌ನಲ್ಲಿ ಗುರುವಾರ ಅಂಗೀಕಾರವಾಯಿತು.

ಈ ಕುರಿತ ಚರ್ಚೆಗೆ ಉತ್ತರಿಸಿದ ಕಾನೂನು ಸಚಿವ ಟಿ.ಬಿ. ಜಯಚಂದ್ರ, ‘ಪರಿಶಿಷ್ಟರಿಗೆ ಸರ್ಕಾರಿ ಉದ್ಯೋಗದಲ್ಲಿ ಸಿಗಬೇಕಾದಷ್ಟು ಪ್ರಮಾಣದಲ್ಲಿ ಪ್ರಾತಿನಿಧ್ಯ, ಅವರ ಕಾರ್ಯದಕ್ಷತೆ ಹಾಗೂ ಹಿಂದುಳಿದಿರುವಿಕೆಯನ್ನು ಪರಿಗಣಿಸುವಂತೆ ಸುಪ್ರೀಂ ಕೋರ್ಟ್‌ ಸೂಚಿಸಿತ್ತು. ಹೆಚ್ಚುವರಿ ಮುಖ್ಯಕಾರ್ಯದರ್ಶಿ ರತ್ನಪ್ರಭಾ ನೇತೃತ್ವದ ಸಮಿತಿ ನೀಡಿದ ವರದಿ ಇದಕ್ಕೆ ಪೂರಕವಾಗಿದೆ. ಈ ಬಗ್ಗೆ ಕಾನೂನು ಆಯೋಗ ಹಾಗೂ ಕಾನೂನು ತಜ್ಞರ ಅಭಿಪ್ರಾಯ ಪಡೆದೇ ಈ ಮಸೂದೆ ಸಿದ್ಧಪಡಿಸಲಾಗಿದೆ. ಹಾಗಾಗಿ ಈ ಬಗ್ಗೆ ಗೊಂದಲ ಏನೂ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ಇದಕ್ಕೂ ಮುನ್ನ, ಜೆಡಿಎಸ್‌ನ ರಮೇಶ್‌ಬಾಬು, ‘ನ್ಯಾಯಾಲಯದಲ್ಲಿ ಸರಿಯಾದ ವಾದ ಮಂಡಿಸದೆ ಇಲ್ಲಿ ಮಸೂದೆ ಮಂಡಿಸುವ ಮೂಲಕ ಪರಿಶಿಷ್ಟ ಜಾತಿ, ಪಂಗಡದ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದೀರಿ’ ಎಂದರು.

ADVERTISEMENT

‘ಒಂದೆಡೆ ನ್ಯಾಯಾಲಯದಲ್ಲಿ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದೀರಿ. ಇನ್ನೊಂದೆಡೆ ಮಸೂದೆ ಮಂಡಿಸುತ್ತಿದ್ದೀರಿ. ಇದು ಅವರಿಗೆ ಉಪಯೋಗಕ್ಕಿಂತ ಮಾರಕವಾಗುವ ಸಾಧ್ಯತೆ ಹೆಚ್ಚಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಮೀಸಲಾತಿಗೆ ವಿರೋಧವಿಲ್ಲ. ಇದು ಬಡ್ತಿ ವಿಷಯದ ಮೀಸಲಾತಿ ವಿಷಯ. 2002ರಲ್ಲಿ ನ್ಯಾಯಾಲಯ ತಿರಸ್ಕರಿಸಿದ್ದ ಅರ್ಜಿಯಲ್ಲಿದ್ದ ಅಂಶಗಳೇ ಮತ್ತೆ ಇದರಲ್ಲಿಯೂ ಇವೆ’ ಎಂದು ಅವರು ಹೇಳಿದರು.

‘ಇನ್ನೊಬ್ಬರಿಗೆ ಅನ್ಯಾಯ ಮಾಡಿ ಒಬ್ಬರಿಗೆ ನ್ಯಾಯ ಕೊಡಿಸುವಂತೆ ಬಿ.ಆರ್‌. ಅಂಬೇಡ್ಕರ್‌ ಹೇಳಿಲ್ಲ. ಗಂಭೀರ ಚಿಂತನೆ ಮಾಡಿಲ್ಲ. ವಾಪಸ್‌ ಕಳುಹಿಸಿದ ರಾಜ್ಯಪಾಲರಿಗೆ ಯಾಕೆ ಮನವರಿಕೆ ಮಾಡಿಕೊಡಲಿಲ್ಲ. ತೀರ್ಮಾನವನ್ನು ನ್ಯಾಯಾಲಯಕ್ಕೆ ಬಿಡಬೇಕಾಗಿತ್ತು. ಎಲ್ಲರಿಗೂ ಪರೀಕ್ಷೆ ಕಾಲ ತಂದಿದ್ದೀರಿ. ಬಿಸಿ ತುಪ್ಪವಾಗಿದ್ದು, ಉಗಳಲೂ ಆಗದ, ನುಂಗಲೂ ಆಗದಂತೆ ಮಾಡಿದ್ದೀರಿ’ ಎಂದು ಜೆಡಿಎಸ್‌ನ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.

‘ಇಬ್ಬರು ಮಕ್ಕಳಿದ್ದಾರೆ. ಯಾರ ಪರವಾಗಿ ನಿಲ್ಲುತ್ತೀರಿ. ಮುಂದೆ ಪರಿಸ್ಥಿತಿ, ಪರಿಣಾಮ ಏನಾಗುತ್ತದೆ ಎಂದು ಯೋಚಿಸಿದ್ದೀರಾ? ಈಗ ಮಸೂದೆ ತರಲು ಮುಂದಾಗುತ್ತಿರುವವರು, ಕಾವೇರಿ ನೀರಿನ ವಿಷಯದಲ್ಲಿ ಯಾಕೆ ನ್ಯಾಯಾಲಯದ ವಿರುದ್ಧ ಹೋಗಲಿಲ್ಲ’ ಎಂದು ಪ್ರಶ್ನಿಸಿದರು.

‘ಮೀಸಲಾತಿ ಬಂದ ಮೇಲೆ ಸಾಮಾನ್ಯ ದಲಿತರಿಗೆ ಎಷ್ಟು ಸಹಾಯ ಆಗಿದೆ ಎಂಬುದನ್ನು ಪ್ರಾಮಾಣಿಕವಾಗಿ ಹೇಳಬೇಕು. ಮಾತನಾಡುವುದೇ ಅಪರಾಧ ಎನ್ನುವಂತಾಗಿದೆ. ಎಲ್ಲರಿಗೂ ನ್ಯಾಯ ಒದಗಿಸಬೇಕು’ ಎಂದು ಸಲಹೆ ನೀಡಿದರು.

‘ನೌಕರರಲ್ಲಿ ಒಡುಕು ಉಂಟು ಮಾಡುತ್ತಿದ್ದೀರಿ. ಸಮಸ್ಯೆ ಎದುರಾದಾಗ ವಿರೋಧ ಪಕ್ಷದವರ ಜತೆಗೆ ಚರ್ಚಿಸಲಿಲ್ಲ. ಕಾರ್ಯಾಂಗದಲ್ಲಿ ಬಿಕ್ಕಟ್ಟು ಎದುರಾದರೆ ಅದರ ಹೊಣೆಯನ್ನು ಸರ್ಕಾರವೇ ಹೊರಬೇಕಾಗುತ್ತದೆ’ ಎಂದು ಬಿಜೆಪಿಯ ಭಾನುಪ್ರಕಾಶ್‌ ಎಚ್ಚರಿಸಿದರು.

‘ಮಸೂದೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದರೆ ಸರ್ಕಾರದ ನಿಲುವೇನು? ಅದು ತಿರಸ್ಕರಿಸಿದರೆ ಸರ್ಕಾರದ ನಡೆ ಏನು? 50,000 ನೌಕರರು ಯಾವುದೇ ಬಡ್ತಿ ಇಲ್ಲದೆ ನಿವೃತ್ತರಾಗಿದ್ದಾರೆ. ಒಬ್ಬರ ಕಣ್ಣು ಕಿತ್ತು ಮತ್ತೊಬ್ಬರಿಗೆ ಕೊಡುವುದು ಯಾವ ನ್ಯಾಯ ಎಂದು ಬಿಜೆಪಿಯ ಸೋಮಣ್ಣ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.