ADVERTISEMENT

ಬಯೋಕಾನ್‌ಗೆ ಅಧಿಕಾರಿಗಳ ಭೇಟಿ

ಮಾಲಿನ್ಯ ನಿಯಂತ್ರಣ ಕ್ರಮಗಳ ಪರಿಶೀಲನೆ: ಹಲವು ಲೋಪದೋಷಗಳ ಪತ್ತೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2015, 19:30 IST
Last Updated 30 ಜೂನ್ 2015, 19:30 IST

ಆನೇಕಲ್: ತಾಲ್ಲೂಕಿನ ಹೆಬ್ಬಗೋಡಿ ಯಲ್ಲಿರುವ ಬಯೋಕಾನ್ ಕಾರ್ಖಾನೆಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಹಾಗೂ ಸದಸ್ಯರು ಮಂಗಳವಾರ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲಿಸಿದರು. ಬಯೋಕಾನ್‌ ಕಂಪೆನಿ ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಉಲ್ಲಂಘಿಸಿರುವುದರಿಂದ ಪರಿಸರ ಮಾಲಿನ್ಯ ಉಂಟಾಗುತ್ತಿದೆ ಎಂದು   ನಿವೃತ್ತ ಕಮಾಂಡರ್ ಜಿ.ವಿ.ಅತ್ರಿ ಅವರು ದೂರು ನೀಡಿದ್ದರು.

ಪರಿಸರ ಮಾಲಿನ್ಯ ಮಂಡಳಿಯ ಅಧಿಕಾರಿಗಳು ಔಷಧ ತಯಾರಿಕಾ ವಿಭಾಗ ಸೇರಿದಂತೆ ವಿವಿಧ ಘಟಕಗಳು ಹಾಗೂ ತ್ಯಾಜ್ಯ ವಿಲೇವಾರಿಗಾಗಿ ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಿ ಹಲವಾರು ಲೋಪದೋಷಗಳನ್ನು ಪತ್ತೆ ಮಾಡಿದರು. ಮಂಡಳಿಯ ಅಧಿಕಾರಿಗಳು ಹಾಗೂ ಸದಸ್ಯರು ದೂರುದಾರರೊಂದಿಗೆ ಕಂಪೆನಿಯ ಅಧ್ಯಕ್ಷೆ ಕಿರಣ್  ಮಜುಂ ದಾರ್ ಷಾ ಅವರನ್ನು ಭೇಟಿ ಮಾಡಿ ಪರಿಸರ ಮಾಲಿನ್ಯ ನಿಯಂತ್ರಣ ಕ್ರಮಗ ಳನ್ನು ಕೈಗೊಳ್ಳುವಂತೆ ಸೂಚಿಸಿದರು.

ಕಾರ್ಖಾನೆಯಲ್ಲಿ ಮಾಲಿನ್ಯ ನಿಯಂತ್ರ ಣಕ್ಕಾಗಿ ಸಮಿತಿ ರಚಿಸಿ ನೋಡಲ್ ಅಧಿಕಾರಿಯೊಬ್ಬರನ್ನು ನೇಮಕ ಮಾಡಲಾಗುವುದು. ಸಮಿತಿಯು ಸೂಚಿಸುವ ಎಲ್ಲ ನಿಯಂತ್ರಣ ಕ್ರಮಗಳನ್ನು ಆರು ತಿಂಗಳಲ್ಲಿ ಅನುಷ್ಠಾನಕ್ಕೆ ತರಲಾಗುವುದು ಎಂದು ಮಂಡಳಿಯ ಅಧಿಕಾರಿಗಳಿಗೆ ಕಿರಣ್ ಮಜುಂದಾರ್ ಷಾ ಭರವಸೆ ನೀಡಿದರು. ಹೆಬ್ಬಗೋಡಿ, ವೀರಸಂದ್ರ, ಬೊಮ್ಮ ಸಂದ್ರ, ಕಮ್ಮಸಂದ್ರ ಕೆರೆಗಳ ಪುನಶ್ಚೇತ ನಕ್ಕಾಗಿ ಕಂಪೆನಿ ವತಿಯಿಂದ ಕ್ರಮ ಕೈಗೊಳ್ಳಲಾಗುವುದು. ಈ ಅಭಿವೃದ್ದಿ ಕಾರ್ಯಗಳಿಗಾಗಿ ₹10 ಕೋಟಿ  ಅನು ದಾನ ಬಿಡುಗಡೆ ಮಾಡಲಾಗು ವುದು ಎಂದು ತಿಳಿಸಿದರು.

ಅಂತರ್ಜಲ ಕಲುಷಿತ: ದೂರುದಾರ ನಿವೃತ್ತ ಕಮಾಂಡರ್ ಜಿ.ವಿ. ಅತ್ರಿ ಮಾತನಾಡಿ, ಬಯೋಕಾನ್ ಕಾರ್ಖಾನೆಯ ತ್ಯಾಜ್ಯ ನೀರು ಸುತ್ತಮುತ್ತ ಕೆರೆಗಳಿಗೆ ಹರಿಯುವುದರಿಂದ  ಮಲಿನ ವಾಗಿದ್ದು, ಅಂತರ್ಜಲ ಕಲುಷಿತವಾಗಿದೆ. ಜಾನು ವಾರುಗಳು ಈ ನೀರು ಕುಡಿದು ಅನಾ ರೋಗ್ಯಕ್ಕೆ ತುತ್ತಾಗಿವೆ. ವಾಯು ಮಾಲಿನ್ಯ ಹಾಗೂ ಜಲಮಾಲಿನ್ಯದಿಂದ ಜನರು ಆರೋಗ್ಯದ ಸಮಸ್ಯೆಗಳನ್ನು ಎದುರಿ ಸುತ್ತಿದ್ದಾರೆ. ಸೂಕ್ತ ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮಂಡಳಿಗೆ ದೂರು ನೀಡಿ ರುವುದಾಗಿ ತಿಳಿಸಿದರು.

ಮನವಿ: ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಪರಿಸರ ಮಾಲಿನ್ಯ ನಿಯಂ ತ್ರಣ ಮಂಡಳಿಯ ಅಧಿಕಾರಿಗಳು ಭೇಟಿ ನೀಡಿದ ಸಂದರ್ಭದಲ್ಲಿ ಕಾರ್ಖಾ ನೆಯ ಮುಂದೆ ಪ್ರತಿಭಟನೆ ನಡೆಸಿ ಮಾಲಿನ್ಯ ನಿಯಂತ್ರಣಕ್ಕೆ ಕ್ರಮ ಕೈಗೊಂಡು ಜನರ ಆರೋಗ್ಯ, ಕಾಪಾಡಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು. ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯರಾದ ಜೈಪ್ರಕಾಶ್, ಮೋಹನ್‌ ಕುಮಾರ್ ಕೊಂಡಜ್ಜಿ, ಜಯಪ್ರಕಾಶ್ ಆಳ್ವ, ಅಧಿಕಾರಿಗಳಾದ ಲಿಂಗರಾಜು, ರಮೇಶ್ ಪರಿಶೀಲನೆಗೆ ಬಂದಿದ್ದರು.
*
ಬಯೋಕಾನ್ ಕಾರ್ಖಾನೆಯ ಮಾಲಿನ್ಯದಿಂದ ಸುತ್ತಮುತ್ತಲಿನ ಪರಿಸರ ಕೆರೆಗಳು ಕಲುಷಿತವಾಗಿವೆ ಜನಜಾನುವಾರುಗಳ ಆರೋಗ್ಯ ಹದಗೆಟ್ಟಿದೆ
-ಜಿ.ವಿ.ಅತ್ರಿ,
ನಿವೃತ್ತ ಕಮಾಂಡರ್

*
ಮುಖ್ಯಾಂಶಗಳು
*ನಿವೃತ್ತ  ಕಮಾಂಡರ್‌   ಜಿ.ವಿ. ಅತ್ರಿ ದೂರು
*ಕೆರೆ ಪುನಶ್ಚೇತನಕ್ಕೆ  ಕ್ರಮ
*ಲೋಪದೋಷಗಳ ನಿವಾರಣೆಗಾಗಿ ಸಮಿತಿ ರಚನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.