ADVERTISEMENT

ಬಿಎಸ್‌ವೈ ಬೆಂಬಲಿಗನ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2017, 19:30 IST
Last Updated 27 ಏಪ್ರಿಲ್ 2017, 19:30 IST
ಸಭೆಯಲ್ಲಿ ಬಿ.ಎಸ್‌. ಯಡಿಯೂರಪ್ಪ ಪರ ಧ್ವನಿ ಎತ್ತಿದ ಕಾರ್ಯಕರ್ತರೊಬ್ಬರನ್ನು ಹೊರದಬ್ಬುತ್ತಿರುವ ದೃಶ್ಯ     -ಪ್ರಜಾವಾಣಿ ಚಿತ್ರ
ಸಭೆಯಲ್ಲಿ ಬಿ.ಎಸ್‌. ಯಡಿಯೂರಪ್ಪ ಪರ ಧ್ವನಿ ಎತ್ತಿದ ಕಾರ್ಯಕರ್ತರೊಬ್ಬರನ್ನು ಹೊರದಬ್ಬುತ್ತಿರುವ ದೃಶ್ಯ -ಪ್ರಜಾವಾಣಿ ಚಿತ್ರ   

ಬೆಂಗಳೂರು: ಬಿಜೆಪಿ ಅತೃಪ್ತರು ಹಮ್ಮಿಕೊಂಡಿದ್ದ ಸಮಾವೇಶ ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರ ಬೆಂಬಲಿಗರ ಮಧ್ಯೆ ಮಾತಿನ ಚಕಮಕಿ, ಮಾರಾಮಾರಿಗೂ ವೇದಿಕೆಯಾಯಿತು. ಈವರೆಗೆ ನಾಯಕರ ನಡುವೆ ನಡೆಯುತ್ತಿದ್ದ ತಿಕ್ಕಾಟ, ಈ ಮೂಲಕ ಕಾರ್ಯಕರ್ತರ ಮಟ್ಟಕ್ಕೂ ಇಳಿಯಿತು.

ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಭಾನುಪ್ರಕಾಶ್ ಮಾತನಾಡುತ್ತ, ಹಿಂದುಳಿದ ಮೋರ್ಚಾದ ಅಧ್ಯಕ್ಷ ಬಿ.ಜೆ. ಪುಟ್ಟಸ್ವಾಮಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ಭಾನುಪ್ರಕಾಶ್‌ ಯಡಿಯೂರಪ್ಪ ಅವರ ವಿರುದ್ದ ಮಾತನಾಡುತ್ತಿದ್ದಾರೆಂದು ತಪ್ಪಾಗಿ ಭಾವಿಸಿದ ಕಾರ್ಯಕರ್ತರೊಬ್ಬರು ವೇದಿಕೆ ಮುಂಭಾಗಕ್ಕೆ ಬಂದು ಧ್ವನಿ ಎತ್ತಿದರು. ತಕ್ಷಣ ಅವರನ್ನು ಹೊರಹಾಕುವಂತೆ ಭಾನುಪ್ರಕಾಶ್ ಸೂಚಿಸಿದರು. ತಕ್ಷಣ ಕಾರ್ಯಕರ್ತನನ್ನು ಎಳೆದಾಡಿ, ಕೊರಳು ಪಟ್ಟಿ ಹಿಡಿದು ಹೊರ ದಬ್ಬಿದರು.

ADVERTISEMENT

ರಾಜಾಜಿನಗರದಿಂದ ಬಂದಿದ್ದ ಮಹಿಳೆಯೊಬ್ಬರು, ‘ಯಡಿಯೂರಪ್ಪ– ಈಶ್ವರಪ್ಪ ಪರಸ್ಪರ ಯಾಕೆ ಕಚ್ಚಾಡಬೇಕು. ಪಕ್ಷದ ಕಾರ್ಯಕರ್ತರ ಮಧ್ಯೆ ಗೊಂದಲ ಸೃಷ್ಟಿಸುವ ಅಗತ್ಯವೇನು ಎಂದು ಪ್ರಶ್ನಿಸುತ್ತಿದ್ದುದು ಕಂಡುಬಂತು. ‘ಯಡಿಯೂರಪ್ಪನವರ ವಿರುದ್ಧ ಮಾತನಾಡಬೇಡಿ ಎಂದಿದ್ದಕ್ಕೆ ಕಾರ್ಯಕರ್ತರೊಬ್ಬರ ಹಲ್ಲೆ ಮಾಡುವ ಅಗತ್ಯವೇನಿತ್ತು’ ಎಂದು ಅವರು ಹಲ್ಲೆಗೊಳಗಾದ ಕಾರ್ಯಕರ್ತನ ಪರ ನಿಂತು ವಾದಿಸಿದ್ದು ಮತ್ತಷ್ಟು ಗೊಂದಲ ಸೃಷ್ಟಿಸಿತು. ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿ ತಿಳಿಗೊಳಿಸಿದರು.

ಬಿಎಸ್‌ವೈ ದೆಹಲಿಗೆ
ಬೆಂಗಳೂರು:
ತಮ್ಮ ವಿರುದ್ಧ ಬಹಿರಂಗವಾಗಿ ಬಂಡೆದ್ದಿರುವ ಕೆ.ಎಸ್. ಈಶ್ವರಪ್ಪ ವಿರುದ್ಧ  ದೂರು ಸಲ್ಲಿಸಲು ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ಶುಕ್ರವಾರ ದೆಹಲಿಗೆ ತೆರಳಲಿದ್ದಾರೆ.

‘ಸಂಘಟನೆ ಉಳಿಸಿ ಸಭೆಗೆ ಹೋಗದಂತೆ ಎಚ್ಚರಿಕೆ ನೀಡಿದ್ದರೂ ಅದರಲ್ಲಿ ಭಾಗಿಯಾದ ಈಶ್ವರಪ್ಪ ಪಕ್ಷದ ಶಿಸ್ತು ಉಲ್ಲಂಘಿಸಿದ್ದಾರೆ. ಪಕ್ಷದ  ನಾಯಕತ್ವದ ವಿರುದ್ಧ ಕಾರ್ಯಕರ್ತರನ್ನು ಎತ್ತಿಕಟ್ಟಲು ಕಾರಣರಾಗಿದ್ದಾರೆ ಎಂದು  ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಅವರಿಗೆ ಮನವರಿಕೆ ಮಾಡಿಕೊಡಲು ಯಡಿಯೂರಪ್ಪ ನಿರ್ಧರಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಯಡಿಯೂರಪ್ಪ ಮನೆಯಲ್ಲಿ ಗುರುವಾರ ಸಂಜೆ ನಡೆದ ಆಪ್ತರ ಸಭೆಯಲ್ಲಿ, ಈಶ್ವರಪ್ಪ ಅವರನ್ನು ಪಕ್ಷದಿಂದ ಉಚ್ಚಾಟಿಸಲು ವರಿಷ್ಠರ ಮೇಲೆ ಒತ್ತಡ ಹೇರಬೇಕು. ಅದು ಸಾಧ್ಯವಾಗದೇ ಇದ್ದರೆ, ಅಮಾನತು ಶಿಕ್ಷೆಗೆ ಗುರಿಪಡಿಸದೇ  ಇದ್ದರೆ ಪಕ್ಷದ ಸಂಘಟನೆಗೆ ಹಿನ್ನಡೆಯಾಗಲಿದೆ ಎಂಬ ನಿರ್ಣಯಕ್ಕೆ ಬರಲಾಗಿದೆ. ಈ ಬೇಡಿಕೆ ಹೊತ್ತು ಅವರು ದೆಹಲಿಗೆ ತೆರಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.