ADVERTISEMENT

ಬಿಜೆಪಿ–ಜೆಡಿಎಸ್‌ ಸದಸ್ಯರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2017, 19:30 IST
Last Updated 22 ನವೆಂಬರ್ 2017, 19:30 IST
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ವಿಧಾನಸಭೆಯ ಕಲಾಪದಲ್ಲಿ ಬುಧವಾರ ಬಹುತೇಕ ಸಚಿವರು ಗೈರುಹಾಜರಾಗಿದ್ದಕ್ಕೆ ವಿರೋಧ ಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದಾಗ ಸಚಿವ ಕೃಷ್ಣ ಬೈರೇಗೌಡ ಸಮಾಧಾನ ಪಡಿಸಲು ಯತ್ನಿಸಿದರು –ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್‌ ಪಿ.ಎಸ್
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ವಿಧಾನಸಭೆಯ ಕಲಾಪದಲ್ಲಿ ಬುಧವಾರ ಬಹುತೇಕ ಸಚಿವರು ಗೈರುಹಾಜರಾಗಿದ್ದಕ್ಕೆ ವಿರೋಧ ಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದಾಗ ಸಚಿವ ಕೃಷ್ಣ ಬೈರೇಗೌಡ ಸಮಾಧಾನ ಪಡಿಸಲು ಯತ್ನಿಸಿದರು –ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್‌ ಪಿ.ಎಸ್   

ಬೆಳಗಾವಿ: ವಿಧಾನಸಭೆ ಕಲಾಪಕ್ಕೆ ಬುಧವಾರ ಬೆಳಿಗ್ಗೆಯೂ ಕಡ್ಡಾಯವಾಗಿ ಹಾಜರಿರಬೇಕಿದ್ದ ಸಚಿವರ ಪೈಕಿ ಬಹುತೇಕರು ಗೈರಾಗಿದ್ದು, ಬಿಜೆಪಿ– ಜೆಡಿಎಸ್‌ ಸದಸ್ಯರ ಆಕ್ರೋಶಕ್ಕೆ ಕಾರಣವಾಯಿತು.

ಕಲಾಪ ಆರಂಭವಾಗುತ್ತಿದ್ದಂತೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್, ಸಚಿವರ ಗೈರು ಹಾಜರಿ ಕುರಿತು ಆಕ್ಷೇಪಿಸಿದರು. ಅದಕ್ಕೆ ಬಿಜೆಪಿಯ ಸಿ.ಟಿ. ರವಿ, ಡಿ.ಎನ್‌. ಜೀವರಾಜ್‌, ಅರವಿಂದ ಲಿಂಬಾವಳಿ, ಜೆಡಿಎಸ್‌ನ ವೈ.ಎಸ್.ವಿ. ದತ್ತ ದನಿಗೂಡಿಸಿದರು.

ಕಡ್ಡಾಯವಾಗಿ ಹಾಜರಿರಬೇಕಾದ ಸಚಿವರುಗಳ ಹೆಸರನ್ನು ವಿಧಾಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಓದಿದರು. ಆರ್‌.ವಿ. ದೇಶಪಾಂಡೆ, ಎಚ್‌.ಕೆ. ಪಾಟೀಲ, ಬಸವರಾಜ ರಾಯರಡ್ಡಿ, ತನ್ವೀರ್‌ ಸೇಠ್‌, ಎಚ್.ಎಂ. ರೇವಣ್ಣ, ವಿನಯ ಕುಲಕರ್ಣಿ, ಮಹದೇವಪ್ಪ, ಡಿ.ಕೆ. ಶಿವಕುಮಾರ್‌, ಕೃಷ್ಣ ಬೈರೇಗೌಡ, ಶರಣ ಪ್ರಕಾಶ ಪಾಟೀಲ, ಎ.‌ ಮಂಜು, ರಮೇಶ ಜಾರಕಿಹೊಳಿ, ರುದ್ರಪ್ಪ ಲಮಾಣಿ ಹೆಸರುಗಳು ಪಟ್ಟಿಯಲ್ಲಿದ್ದವು.

ADVERTISEMENT

ಆದರೆ, ಈ ಪೈಕಿ ಎಚ್‌.ಕೆ. ಪಾಟೀಲ, ರಾಯರಡ್ಡಿ, ರೇವಣ್ಣ, ಕೃಷ್ಣ ಬೈರೇಗೌಡ ಮಾತ್ರ ಇದ್ದರು.

ಜೆಡಿಎಸ್‌ನ ಮಂಜುನಾಥಗೌಡ, ‘ಕಲ್ಲು ಗಣಿಗಾರಿಕೆ ಗುತ್ತಿಗೆ ಪಡೆದುಕೊಂಡವರು ಬೇರೆಯವರಿಗೆ ಪರಭಾರೆ ಮಾಡುತ್ತಿದ್ದು ಇದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗುತ್ತಿದೆ. ಈ ನಷ್ಟ ತುಂಬಿಕೊಳ್ಳಲು ಸರ್ಕಾರ ಏನು ಕ್ರಮ ತೆಗೆದುಕೊಂಡಿದೆ’ ಎಂದು ಪ್ರಶ್ನಿಸಿದರು.

ಅದಕ್ಕೆ ಗಣಿ ಮತ್ತು ಭೂ ವಿಜ್ಞಾನ ಸಚಿವ ವಿನಯ ಕುಲಕರ್ಣಿ ಪರವಾಗಿ ಬಸವರಾಜ ರಾಯರಡ್ಡಿ ಉತ್ತರ ನೀಡಲು ಮುಂದಾದರು. ಆದರೆ, ಉಪ ಪ್ರಶ್ನೆ ಎದುರಾದಾಗ, ‘ಉತ್ತರ ನೀಡಲು ಸಚಿವರೇ ಬೇಕು’ ಎಂದು ವಿರೋಧ ಪಕ್ಷಗಳ ಸದಸ್ಯರು ಪಟ್ಟು ಹಿಡಿದರು.

‘ಸಚಿವರು ಎಲ್ಲಿಗೆ ಹೋಗಿದ್ದಾರೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ’ ಎಂದು ಸಭಾಧ್ಯಕ್ಷರು ಸ್ಪಷನೆ ನೀಡಿದರು. ಆಗ ಮುಖ್ಯ ಸಚೇತಕ ಅಶೋಕ ಪಟ್ಟಣ,‘ಸಚಿವರಿಗೆ ಆರೋಗ್ಯ ಸರಿ ಇಲ್ಲ, ಆಸ್ಪತ್ರೆಗೆ ಹೋಗಿದ್ದಾರೆ’ ಎಂದು ಸಮಜಾಯಿಷಿ ನೀಡಿದರು.

ಈ ಬಗ್ಗೆ ರವಿ ಮತ್ತು ರಾಯರಡ್ಡಿ ಮಧ್ಯೆ ವಾಗ್ವಾದ ನಡೆಯಿತು. ಬಸವಣ್ಣನ ವಚನಗಳ ವಿನಿಮಯವೂ ಆಯಿತು. ಆಗ ಸಿಟ್ಟಿಗೆದ್ದ ಸಭಾಧ್ಯಕ್ಷರು, ‘ಸಿನಿಮಾ ಹಾಡು ಬೇಕಾದರೂ ಹಾಡಿ, ವಚನ ಬೇಕಾದರೂ ಹೇಳಿ’ ಎಂದು ಕೆಲಹೊತ್ತು ಸುಮ್ಮನಾದರು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.