ADVERTISEMENT

ಬೆಂಗಳೂರಿನ ಮಹಿಳೆ ನ್ಯಾಯಾಂಗ ಬಂಧನಕ್ಕೆ

ಪೊಲೀಸ್‌ ಸಿಬ್ಬಂದಿ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2015, 20:15 IST
Last Updated 30 ಡಿಸೆಂಬರ್ 2015, 20:15 IST

ಕಾರವಾರ: ಕರ್ತವ್ಯ ನಿರತ ಪೊಲೀಸ್‌ ಸಿಬ್ಬಂದಿಗೆ ಕಪಾಳಕ್ಕೆ ಹೊಡೆದ, ಬೆಂಗಳೂರಿನ ಕಾರ್ತೀಕಾ ಎಂಬುವವರನ್ನು ಬುಧವಾರ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ವಾಯುಸೇನೆಯಲ್ಲಿ ವಿಂಗ್‌ ಕಮಾಂಡರ್‌ ಆಗಿ ನಿವೃತ್ತಿ ಹೊಂದಿರುವ ಇವರು, ಸದ್ಯ ಬೆಂಗಳೂರಿನ ಖಾಸಗಿ ಕಂಪೆನಿಯ ಉದ್ಯೋಗಿ  ಎಂದು ತಿಳಿದುಬಂದಿದೆ.

ಘಟನೆ ವಿವರ: ಕಾರ್ತೀಕಾ ಅವರ ಪತಿ ವಾಯುಸೇನೆಯಲ್ಲಿ ಅಧಿಕಾರಿಯಾಗಿದ್ದಾರೆ. ಪತಿಯ ಸಹೋದರ ಸೀಬರ್ಡ್‌ನಲ್ಲಿ ಉದ್ಯೋಗಿಯಾಗಿದ್ದು, ಅವರನ್ನು ಭೇಟಿ ಮಾಡಲು ಕುಟುಂಬ ಸಮೇತ ನೌಕಾನೆಲೆಗೆ ಬಂದಿದ್ದರು ಎನ್ನಲಾಗಿದೆ. ಕಾರ್ತೀಕಾ ಮಂಗಳವಾರ ಬೆಳಿಗ್ಗೆಯಿಂದ ಸಂಜೆವರೆಗೆ ನೌಕಾನೆಲೆಯ ಹೊರಭಾಗದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದುದ್ದನ್ನು ಕಂಡ ನೌಕಾನೆಲೆ ಪೊಲೀಸರು, ಗ್ರಾಮೀಣ ಪೊಲೀಸರಿಗೆ ಸಂಜೆ ವಿಷಯ ಮುಟ್ಟಿಸಿದ್ದಾರೆ.

‘ಸ್ಥಳಕ್ಕೆ ಹೋಗಿ ವಿಚಾರಿಸಲು ಹೋದಾಗ ಕಾರ್ತೀಕಾ ಎನ್ನುವವರು ಸರಿಯಾಗಿ ಮಾಹಿತಿ ನೀಡದೇ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಬಳಿಕ ಅವರನ್ನು ಠಾಣೆಗೆ ಕರೆದೊಯ್ಯಲಾಯಿತು. ಆ ಸಂದರ್ಭದಲ್ಲಿ ಅವರು ಮಹಿಳಾ ಸಿಬ್ಬಂದಿಯೊಬ್ಬರ ಮೇಲೆ ಹಲ್ಲೆ ನಡೆಸಿದರು. ಆಗ ವಶಕ್ಕೆ ಪಡೆದ ಅವರನ್ನು ಬುಧವಾರ ಬೆಳಿಗ್ಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು’ ಎಂದು ಗ್ರಾಮೀಣ ಠಾಣೆ ಸಬ್‌ಇನ್‌ಸ್ಪೆಕ್ಟರ್‌ ಗೋವಿಂದ ದಾಸರಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.