ADVERTISEMENT

ಬೆಂಗಳೂರು, ಮೈಸೂರು, ಕಲಬುರ್ಗಿಗೆ ಅನುದಾನ

‘ಸ್ಮಾರ್ಟ್‌ ಸಿಟಿ’ ಮಾದರಿಯಲ್ಲಿ ಅಭಿವೃದ್ಧಿ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2015, 19:59 IST
Last Updated 2 ಸೆಪ್ಟೆಂಬರ್ 2015, 19:59 IST

ಬೆಳಗಾವಿ: ‘ಕೇಂದ್ರ ಸರ್ಕಾರದ ‘ಸ್ಮಾರ್ಟ್‌ ಸಿಟಿ’ ಯೋಜನೆ ಅಡಿ ಆಯ್ಕೆಯಾಗದ ಬೆಂಗಳೂರು, ಮೈಸೂರು ಮತ್ತು ಕಲಬುರ್ಗಿ ನಗರಗಳನ್ನು ಅದೇ ಯೊಜನೆಯ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ’ ಎಂದು ನಗರಾಭಿವೃದ್ಧಿ ಸಚಿವ ವಿನಯಕುಮಾರ್‌ ಸೊರಕೆ ಘೋಷಿಸಿದರು.

ಕಾನ್ಫೆಡರೇಷನ್‌ ಆಫ್‌ ರಿಯಲ್‌ ಎಸ್ಟೇಟ್‌ ಡೆವಲಪರ್ಸ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ ಸಂಸ್ಥೆ ಬುಧವಾರ ಇಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

‘ರಾಜ್ಯ ಸರ್ಕಾರ ಮುಂದಿನ 5 ವರ್ಷಗಳಲ್ಲಿ ಈ ಮೂರೂ ನಗರಗಳ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಅನುದಾನ ನೀಡಲಿದೆ. ಈಗಾಗಲೇ ಪ್ರತಿ ವರ್ಷ ಬೆಂಗಳೂರು ನಗರಕ್ಕೆ ₹ 1,000 ಕೋಟಿ, ಮೈಸೂರಿಗೆ ₹ 200 ಕೋಟಿ ಹಾಗೂ ಕಲಬುರ್ಗಿ ನಗರಕ್ಕೆ ಹೈದರಾಬಾದ್‌ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಅನುದಾನ ನೀಡಲಾಗುತ್ತಿದೆ’ ಎಂದರು.

‘ಸ್ಮಾರ್ಟ್‌ ಸಿಟಿ’ ಯೋಜನೆ ಮಾದರಿಯಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿ ಅನುಸಾರವೇ ಈ ನಗರಗಳ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಂಡು, ಪ್ರತ್ಯೇಕ ಅನುದಾನ ನೀಡಲು ಸರ್ಕಾರ ನಿರ್ಧರಿಸಿದೆ. 

ಜಾತ್ಯತೀತ ಧೋರಣೆ: ‘ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರ ಇರಿಸಬೇಕು ಎಂಬ ಉದ್ದೇಶದಿಂದ ಕಾಂಗ್ರೆಸ್‌ ಪಕ್ಷವು ಬಿಬಿಎಂಪಿ ಮೇಯರ್‌ ಆಯ್ಕೆಗೆ ಸಂಬಂಧಿಸಿದಂತೆ ಜೆಡಿಎಸ್‌ ಜತೆ ಕೈಜೋಡಿಸುತ್ತಿದೆ. ಇದು ಅಕ್ರಮ ಸಂಬಂಧವಲ್ಲ. ಕೋಮುವಾದಿಗಳೊಂದಿಗೆ ಕೈ ಜೋಡಿಸಿದರೆ ಮಾತ್ರ ಅದು ಅಕ್ರಮ ಸಂಬಂಧವಾಗುತ್ತದೆ’ ಎಂದು ಅವರು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.