ADVERTISEMENT

ಬೆದರಿಕೆಗೆ ಬೆಚ್ಚಿದ ಯಡಿಯೂರಪ್ಪ: ಭಿನ್ನರ ಅಮಾನತು, ನೋಟಿಸ್‌ ವಾಪಸ್‌ಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2017, 19:30 IST
Last Updated 22 ಏಪ್ರಿಲ್ 2017, 19:30 IST
ಸಚಿವ ಡಿ.ವಿ.ಸದಾನಂದಗೌಡ
ಸಚಿವ ಡಿ.ವಿ.ಸದಾನಂದಗೌಡ   

ಬೆಂಗಳೂರು: ಭಿನ್ನಮತೀಯರ ಬೆದರಿಕೆಗೆ ಬೆಚ್ಚಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ತಮ್ಮ ಎದುರು ತಿರುಗಿ ಬಿದ್ದಿರುವವರಿಗೆ ನೀಡಿದ್ದ ನೋಟಿಸ್‌ ಮತ್ತು ಅಮಾನತು ಆದೇಶ ವಾಪಸ್‌ ಪಡೆಯಲು ಮುಂದಾಗಿದ್ದಾರೆ.

ರಾಯಣ್ಣ ಬ್ರಿಗೇಡ್‌ನಲ್ಲಿ ಗುರುತಿಸಿಕೊಂಡಿದ್ದ ಮಾಜಿ ಮೇಯರ್‌ ಎಂ. ವೆಂಕಟೇಶಮೂರ್ತಿ ಅವರನ್ನು ಬಿಜೆಪಿಯಿಂದ ಆರು ವರ್ಷ ಅವಧಿಗೆ ಅಮಾನತು ಮಾಡಲಾಗಿತ್ತು. ‘ಯಡಿಯೂರಪ್ಪ ಸರ್ವಧಿಕಾರಿಯಂತೆ ವರ್ತಿಸುತ್ತಿದ್ದಾರೆ. ನಿಲುವು ಬದಲಾವಣೆ ಮಾಡಿಕೊಳ್ಳದಿದ್ದರೆ ಪಕ್ಷದ ವರಿಷ್ಠರಿಗೆ ದೂರು ನೀಡಬೇಕಾಗುತ್ತದೆ’ ಎಂದು ಹೇಳಿಕೆ ನೀಡಿದ್ದ ಮಾಜಿ ಶಾಸಕ ಸೊಗಡು ಶಿವಣ್ಣ ಮತ್ತು ಪಕ್ಷದ ಪ್ರಮುಖ ಎಂ.ಬಿ. ನಂದೀಶ ಅವರಿಗೆ ಶಿಸ್ತುಕ್ರಮದ ನೋಟಿಸ್‌ ನೀಡಲಾಗಿತ್ತು.

ಶನಿವಾರ ನಡೆದ ದಿಢೀರ್‌ ಬೆಳವಣಿಗೆಯಲ್ಲಿ ಅಮಾನತು ಆದೇಶ ಹಿಂದಕ್ಕೆ ಪಡೆಯುವಂತೆ ಬೆಂಗಳೂರು ನಗರ ಘಟಕದ ಅಧ್ಯಕ್ಷ ಸದಾಶಿವ ಅವರಿಗೆ ಯಡಿಯೂರಪ್ಪ ಸೂಚಿಸಿದ್ದಾರೆ. ಉಳಿದ ಇಬ್ಬರಿಗೆ ನೀಡಿದ ನೋಟಿಸ್‌ ವಾಪಸ್‌ ಪಡೆಯುವಂತೆ ಪಕ್ಷದ ಪ್ರಧಾನ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

‘ಕರ್ನಾಟಕ ಜನತಾ ಪಕ್ಷದಲ್ಲಿ (ಕೆಜೆಪಿ) ತಮ್ಮ ಜತೆಗೆ ಗುರುತಿಸಿಕೊಂಡವರಿಗೆ ಯಡಿಯೂರಪ್ಪ ಆದ್ಯತೆ ನೀಡುತ್ತಿದ್ದಾರೆ. ಪಕ್ಷಕ್ಕಾಗಿ ದುಡಿದವರನ್ನು ನಿರ್ಲಕ್ಷಿಸುತ್ತಿದ್ದಾರೆ’  ಎಂದು ಪಕ್ಷದ ಅನೇಕ ಹಿರಿಯ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು. ಪದಾಧಿಕಾರಿಗಳ ಪಟ್ಟಿ ಬದಲಿಸುವಂತೆ ಆಗ್ರಹಿಸಿದ್ದಲ್ಲದೆ, ವರಿಷ್ಠರಿಗೂ ದೂರು ಸಲ್ಲಿಸಿದ್ದರು.

ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಸಂಘಟಿಸಿದ್ದ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ ಅವರು ಯಡಿಯೂರಪ್ಪಗೆ ಸವಾಲು ಒಡ್ಡಿದ್ದರು. ಇದು ಪಕ್ಷದೊಳಗೆ ಆಂತರಿಕ ಕಲಹ ಹೆಚ್ಚಿಸಿತ್ತು. ಯಡಿಯೂ ರಪ್ಪ ಅವರು ತಮ್ಮ ಧೋರಣೆ ತಿದ್ದಿಕೊಳ್ಳುವಂತೆ ಸೂಚಿಸಬೇಕು ಎಂದು ಹಲವು ಶಾಸಕರು ಮತ್ತು ಮಾಜಿ ಶಾಸಕರು ಪಕ್ಷದ ವರಿಷ್ಠರಿಗೆ ಪತ್ರ ಬರೆದಿದ್ದರು.

ಈ ಎಲ್ಲ ಬೆಳವಣಿಗೆಗಳ ಮಧ್ಯೆ ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರನ್ನು ದೆಹಲಿಗೆ ಕರೆಸಿಕೊಂಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಇಬ್ಬರಿಗೂ ಬುದ್ದಿವಾದ ಹೇಳಿದ್ದರು. ಇದೇ ವರ್ಷದ ಫೆ. 10ರೊಳಗೆ ಪಕ್ಷದ ಆಂತರಿಕ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದ್ದ ಅವರು, ಪಕ್ಷದ ರಾಜ್ಯ ಉಸ್ತುವಾರಿ ಮುರಳೀಧರ ರಾವ್‌ ನೇತೃತ್ವದಲ್ಲಿ ನಾಲ್ವರ ಸಮಿತಿ ರಚಿಸಿದ್ದರು. ರಾಯಣ್ಣ ಬ್ರಿಗೇಡ್‌ ಸಂಘಟಿಸಿದಂತೆ ಈಶ್ವರಪ್ಪಗೆ ಸೂಚಿಸಿದ್ದರು.

‘ಗಡುವು ನೀಡಿ ಎರಡು ತಿಂಗಳು ಕಳೆದರೂ ಯಡಿಯೂರಪ್ಪ ಸಮಿತಿಯ ಸಭೆ ಕರೆದಿಲ್ಲ. ಪಕ್ಷದಲ್ಲಿನ ಭಿನ್ನಮತ ಆಲಿಸಲು ಮುಂದಾಗಿಲ್ಲ’ ಎಂಬ ಆಕ್ರೋಶ ವ್ಯಕ್ತವಾಗಿತ್ತು. ತುಮಕೂರಿನ ಸೊಗಡು ಶಿವಣ್ಣ ಅವರ ಮನೆಯಲ್ಲಿ ಇತ್ತೀಚೆಗೆ ಸಭೆ ಸೇರಿದ್ದ ಪಕ್ಷದ ಪ್ರಮುಖರು ಇದೇ 27ರಂದು ಬೆಂಗಳೂರಿನ ಅರಮನೆ ಆವರಣದಲ್ಲಿ ಸಮಾವೇಶ ನಡೆಸಲು ನಿರ್ಧರಿಸಿದ್ದರು. ಮೂಲ ಬಿಜೆಪಿಯ ಒಂದು ಸಾವಿರ ಮಂದಿಯನ್ನು ಸೇರಿಸಲು ಸಿದ್ಧತೆ ನಡೆಸಿದ್ದರು. ಅಷ್ಟಕ್ಕೂ ಯಡಿಯೂರಪ್ಪ ಮಣಿಯದಿದ್ದರೆ ದೆಹಲಿಗೆ ತೆರಳಿ ವರಿಷ್ಠರಿಗೆ ದೂರು  ನೀಡಲು ಮುಂದಾಗಿದ್ದರು.

ಈ ಬೆಳವಣಿಗೆಗಳಿಂದ ಹೆದರಿದ ಯಡಿಯೂರಪ್ಪ, ನೋಟಿಸ್ ವಾಪಸ್ ಪಡೆದು ಬಂಡಾಯ ಶಮನಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.

‘ಆತ್ಮಾವಲೋಕನ ಸಭೆಗೆ ಆಹ್ವಾನ ಇಲ್ಲ’

ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಅನುಭವಿಸಿದ ಸೋಲಿನ ಕುರಿತು ಆತ್ಮಾವಲೋಕನ ನಡೆಸಲು ಭಾನುವಾರ   ಬಿಜೆಪಿ ಕಚೇರಿಯಲ್ಲಿ ಸಭೆ ಕರೆಯಲಾಗಿದೆ.

ಈ ಸಭೆಗೆ ಉಭಯ ಸದನಗಳ ವಿರೋಧ ಪಕ್ಷದ ನಾಯಕರು, ಪಕ್ಷದ ಪ್ರಮುಖರ ಸಮಿತಿಯ ಸದಸ್ಯರಿಗೆ ಆಹ್ವಾನ ನೀಡದಿರುವುದು ಪಕ್ಷದಲ್ಲಿ ಅತೃಪ್ತಿಗೆ ಕಾರಣವಾಗಿದೆ.

ಸಭೆಗೆ ಕೇಂದ್ರ ಸಚಿವ ಅನಂತಕುಮಾರ್‌,   ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಶೋಭಾ ಕರಂದ್ಲಾಜೆ, ಅರವಿಂದ ಲಿಂಬಾವಳಿ, ರವಿಕುಮಾರ್ ಹಾಗೂ ವಿಧಾನಪರಿಷತ್‌ ಸದಸ್ಯ ವಿ. ಸೋಮಣ್ಣ ಅವರಿಗೆ ಮಾತ್ರ ಆಹ್ವಾನ ನೀಡಲಾಗಿದೆ ಎಂದು ಗೊತ್ತಾಗಿದೆ.

‘ವಿಧಾನಸಭೆ ಚುನಾವಣೆಗೆ 11 ತಿಂಗಳು ಬಾಕಿ ಇರುವಾಗ ನಡೆದ ಉಪಚುನಾವಣೆಯಲ್ಲಿ ಸೋಲು ಕಂಡಿರುವುದು ಪಕ್ಷಕ್ಕೆ ದೊಡ್ಡ ಹಿನ್ನಡೆ. ಕಾರಣ ಹುಡುಕುವ ಸಭೆಗೆ ಎಲ್ಲರನ್ನೂ ಕರೆಯಬೇಕಿತ್ತು. ಯಡಿಯೂರಪ್ಪ ಈ ವಿಷಯದಲ್ಲೂ ಸರ್ವಾಧಿಕಾರಿ ಧೋರಣೆ ಮುಂದುವರಿಸಿರುವುದು ಸರಿಯಲ್ಲ’ ಎಂದು ಹಿರಿಯ ನಾಯಕರು ಅತೃಪ್ತಿ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

‘ಭಿನ್ನಾಭಿಪ್ರಾಯ ಇರುವುದು ನಿಜ’

ಮಂಡ್ಯ: ಬಿಜೆಪಿಯಲ್ಲಿ ಆಂತರಿಕ ಭಿನ್ನಾಭಿಪ್ರಾಯವಿದೆ. ಆದರೆ, ಅದು ಅಷ್ಟು ದೊಡ್ಡ ಸಂಗತಿಯಲ್ಲ ಎಂದು ಕೇಂದ್ರದ ಸಾಂಖ್ಯಿಕ ಹಾಗೂ ಕಾರ್ಯಕ್ರಮ ಅನುಷ್ಠಾನ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹಾಗೂ ಕೆ.ಎಸ್‌.ಈಶ್ವರಪ್ಪ ನಡುವಿನ ಭಿನ್ನಮತ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ, ಪಕ್ಷದಲ್ಲಿ ಭಿನ್ನಾಭಿಪ್ರಾಯ ಇರುವಂತಹುದು ಸ್ವಾಭಾವಿಕ. ಪಕ್ಷದ ವರಿಷ್ಠರು ಶೀಘ್ರದಲ್ಲಿಯೇ ಸರಿಪಡಿಸಲಿದ್ದಾರೆ ಎಂದರು.

‘ಯಾವಾಗ ಬೇಕಾದರೂ ರಾಜ್ಯದಲ್ಲಿ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಬಹುದು. ಆ ಕಾರಣ ಜಿಲ್ಲಾ ಪ್ರವಾಸ ಮಾಡಿ ಪಕ್ಷದ ಸಂಘಟನೆ ಕುರಿತು ವರದಿ ನೀಡುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಸೂಚಿಸಿದ್ದಾರೆ. ಮಂಡ್ಯ ಸೇರಿದಂತೆ ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆಯ ಮುಖಂಡರ ಅಭಿಪ್ರಾಯ ಸಂಗ್ರಹಿಸಿ ವರದಿ ಸಲ್ಲಿಸುತ್ತೇನೆ’ ಎಂದು ಹೇಳಿದರು.

ಎಸ್‌.ಎಂ.ಕೃಷ್ಣ ಅವರು ಅವರದ್ದೇ ಆದ ಪ್ರಭಾವ ಹೊಂದಿದ್ದಾರೆ. ಉಪಚುಣಾವಣೆ ಸಂದರ್ಭದಲ್ಲಿ ಆಗಷ್ಟೇ ಪಕ್ಷಕ್ಕೆ ಸೇರಿಕೊಂಡಿದ್ದರು. ಮುಂದಿನ ದಿನಗಳಲ್ಲಿ ಅವರನ್ನು ಪಕ್ಷ ಬಳಸಿಕೊಳ್ಳಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.