ADVERTISEMENT

ಬೆಲೆ ಏರಿಕೆ: ಗ್ರಾಹಕರು ಕಂಗಾಲು

ಅನುಪಮಾ ಫಾಸಿ
Published 19 ಏಪ್ರಿಲ್ 2014, 20:06 IST
Last Updated 19 ಏಪ್ರಿಲ್ 2014, 20:06 IST
ಬೆಲೆ ಏರಿಕೆ: ಗ್ರಾಹಕರು ಕಂಗಾಲು
ಬೆಲೆ ಏರಿಕೆ: ಗ್ರಾಹಕರು ಕಂಗಾಲು   

ಬೆಂಗಳೂರು: ಬಿಸಿಲ ಧಗೆ ಏರುತ್ತಿರುವ ಜತೆಯಲ್ಲೇ ತರಕಾರಿ ದರ ಹೆಚ್ಚಾಗು­ತ್ತಿದ್ದು, ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.
ಏಪ್ರಿಲ್‌ ತಿಂಗಳ ಆರಂಭದಿಂದಲೂ ತರಕಾರಿ ಬೆಲೆ ಹೆಚ್ಚುತ್ತಲೇ ಇದೆ.  ಒಂದು ವಾರದಿಂದ ಈಚೆಗೆ ತರಕಾರಿ ದರ ಹಂತ ಹಂತವಾಗಿ ಹೆಚ್ಚಾಗುತ್ತಿದೆ. ಕಳೆದ ವಾರಕ್ಕಿಂತ ಈ ವಾರ ತರಕಾರಿ ದರ ಸರಾಸರಿ ಶೇ 20ರಷ್ಟು ಹೆಚ್ಚಾಗಿದೆ.

ಈ ಬಗ್ಗೆ ‘ಪ್ರಜಾವಾಣಿ’ ಯೊಂದಿಗೆ ಮಾತನಾಡಿದ ಹಾಪ್‌ಕಾಮ್ಸ್‌ ಅಧ್ಯಕ್ಷೆ ಎಚ್‌.ಕೆ.ನಾಗವೇಣಿ, ‘ಏಪ್ರಿಲ್‌ ತಿಂಗಳಿ­ನಲ್ಲಿ ಸಾಮಾನ್ಯವಾಗಿ ತರಕಾರಿ ದರ ಹೆಚ್ಚಾಗುತ್ತದೆ. ಈ ಬಾರಿ ತಾಪಮಾನ ಹೆಚ್ಚಾಗಿರುವುದು ಹಾಗೂ ಮಳೆಯ ಏರುಪೇರಿನ ಕಾರಣದಿಂದ ಇಳುವರಿ ಕಡಿಮೆಯಾಗಿದೆ. ಹೀಗಾಗಿ ಬೆಲೆ ಏರಿಕೆಯಾಗುತ್ತಿದೆ’ ಎಂದು ತಿಳಿಸಿದರು.

‘ಬೇಸಿಗೆ ಮಳೆಯ ಬಿದ್ದ ಕಾರಣ­ದಿಂದ ತರಕಾರಿ ಬೆಳೆ ಚೇತರಿಸಿ­ಕೊಂಡಿತ್ತು. ಆದರೆ, ತಾಪಮಾನ ಹೆಚ್ಚಾ­ಗಿ­ರು­ವುದರಿಂದ ತರಕಾರಿ ಬೆಳೆ ಮಧ್ಯದಲ್ಲಿಯೇ ಒಣಗಿ ಹೋಗಿದೆ. ಇದರಿಂದ, ಪೂರೈಕೆ ಕಡಿಮೆಯಾಗಿದೆ’ ಎಂದು ವಿವರಿಸಿದರು.

‘ನಗರಕ್ಕೆ ಆನೇಕಲ್, ಹೊಸಕೋಟೆ, ಕೋಲಾರ, ಮಾಲೂರು, ನಂದಗುಡಿ, ಹಿಂಡಿಗನಾಳ ಕ್ರಾಸ್ (ಎಚ್.ಕ್ರಾಸ್) ಮತ್ತಿತರ ಕಡೆಗಳಿಂದ ತರಕಾರಿ ಬರು­ತ್ತದೆ. ಆದರೆ, ಈ ಭಾಗದಲ್ಲಿ ಬೆಳೆ ಕಡಿಮೆ­ಯಾಗಿರುವುದರಿಂದ ಪೂರೈಕೆ­ಯಲ್ಲಿ ವ್ಯತ್ಯಯವಾಗಿದೆ’ ಎಂದರು.ಬೆಲೆ ಏರಿಕೆಯಿಂದ ಮಧ್ಯಮ ವರ್ಗದ ಜನ ತರಕಾರಿ ಕೊಳ್ಳಲು ಹಿಂದೇಟು ಹಾಕುವಂತಹ ಸ್ಥಿತಿ ನಿರ್ಮಾಣ­ವಾಗಿದೆ. ತಳ್ಳುಗಾಡಿ ಮತ್ತು  ಸ್ಥಳೀಯ ಮಾರುಕಟ್ಟೆಗಳಲ್ಲಿ ನಿತ್ಯ ಬಳಕೆ ತರಕಾರಿ ಬೆಲೆ ದುಪ್ಪಟ್ಟಾ­ಗಿದೆ.

‘ಹಾಪ್‌ಕಾಮ್ಸ್‌ ಮಳಿಗೆಗಳಲ್ಲಿ ತರ­ಕಾರಿ ಕೊಳ್ಳುವುದು ತಕ್ಕ ಮಟ್ಟಿಗೆ ಗ್ರಾಹಕ ಸ್ನೇಹಿಯಾಗಿರುತ್ತದೆ. ಬೆಲೆ ಹೆಚ್ಚ­ಳ­ವಾದರೂ ಅದಕ್ಕೆ ಕಾರಣವಿರು­ತ್ತದೆ. ಆದರೆ, ಸ್ಥಳೀಯ ಮಾರುಕಟ್ಟೆ ಹಾಗೂ ತಳ್ಳುಗಾಡಿಗಳಲ್ಲಿ ತರಕಾರಿ ಬೆಲೆ ಹೆಚ್ಚಾಗಿದೆ’ ಎಂದು ಮಲ್ಲೇಶ್ವರ ನಿವಾಸಿ ಆಶಾ ಹೇಳಿದರು.

‘ಸ್ಥಳೀಯ ಮಾರುಕಟ್ಟೆಯಲ್ಲಿ  ಕೆ.ಜಿ ಟೊಮೆಟೊ ₨ 25, ಬದನೆಕಾಯಿ ₨ 30 ಹಾಗೂ ಈರುಳ್ಳಿ ₨ 35 ಇದೆ. ವಾರದಿಂದ ವಾರಕ್ಕೆ ತರಕಾರಿ ಬೆಲೆ ಹೆಚ್ಚಳವಾಗುತ್ತಿದೆ. ಇದರಿಂದ ತರಕಾರಿ ಕೊಳ್ಳಲು ಹಿಂದೆಮುಂದೆ ನೋಡ­ಬೇಕಾದ ಪರಿಸ್ಥಿತಿ ಇದೆ’ ಎಂದರು.
‘ನಿತ್ಯ ಬೆಳಿಗ್ಗೆ ಹಲವು ಬಡಾವಣೆ­ಗಳಿಗೆ ತಳ್ಳುಗಾಡಿಯಲ್ಲಿ ತೆರಳಿ ತರಕಾರಿ­ಗಳನ್ನು ಮಾರಾಟ ಮಾಡುತ್ತೇನೆ. ಇದನ್ನೇ ನಂಬಿ ಬದುಕುತ್ತಿದ್ದೇನೆ. ಈ ದರ ನೋಡಿದರೆ ಯಾವುದೇ ಗ್ರಾಹ­ಕರು ತರಕಾರಿ ಕೊಳ್ಳಲು ಮುಂದೆ ಬರುವು­ದಿಲ್ಲ’ ಎಂದು ಅಳಲು ತೋಡಿ­ಕೊಂಡವರು ಇಂದಿರಾನಗರದ ತಳ್ಳು­ಗಾಡಿ ಮಾರಾಟಗಾರ ನಿಂಗಪ್ಪ.

ತಿಂಗಳ ಕೊನೆಯವರೆಗೂ ಇದೇ ಸ್ಥಿತಿ
ಈ ಹಿಂದೆ ತರಕಾರಿ ಬೆಳೆಯು ಎಕರೆಗೆ 10 ಟನ್‌ ಇಳುವರಿ ಬರುತ್ತಿತ್ತು, ಆದರೆ, ಈ ಬಾರಿ 5 ರಿಂದ 6 ಟನ್‌ಗೆ ಬಂದಿದೆ.  ಈ ವಾರದಲ್ಲಿಯೇ ತರಕಾರಿ ದರ ಗರಿಷ್ಠ ಮಟ್ಟವನ್ನು ಮುಟ್ಟಿದೆ. ಈ ತಿಂಗಳ ಕೊನೆಯವರೆಗೂ ಇದೇ ಸ್ಥಿತಿ ಮುಂದುವರೆಯುವ ಸಾಧ್ಯತೆಯಿದೆ.
ಎಚ್‌.ಕೆ.ನಾಗವೇಣಿ, ಅಧ್ಯಕ್ಷೆ, ಹಾಪ್‌ಕಾಮ್ಸ್

ಯೋಚಿಸಿ ತಿನ್ನುವ ಕಾಲ
ನಿತ್ಯ ವಸ್ತುಗಳ ಬೆಲೆ ಏರುತ್ತಿದೆ.  ಇತ್ತೀ­ಚ­ೆಗೆ ಸ್ವಲ್ಪ ದಿನಗಳ ಹಿಂದೆ ಈರುಳ್ಳಿ ದರ ಹೆಚ್ಚಾಗಿತ್ತು. ಆದರೆ, ಈಗ ಎಲ್ಲ ತರ­ಕಾರಿಗಳ ದರವೂ ಹೆಚ್ಚಾಗಿದೆ. ನಮ್ಮಂ­ತಹ ಮಧ್ಯಮ ವರ್ಗದವರ ಮೇಲೆಯೇ ಹೊಡೆತ ಜಾಸ್ತಿ. ಮಧ್ಯಮ­ರ್ಗದವರು ಯೋಚಿಸಿ ತಿನ್ನುವ ಕಾಲ.
–ಹಂಸವೇಣಿ, ಗೃಹಿಣಿ ಬಸವೇಶ್ವರನಗರ
ಕ್ರಮ ಕೈಗೊಳ್ಳಬೇಕು
ತರಕಾರಿ ಕೊಳ್ಳಲು ಆಗದಷ್ಟು ಬೆಲೆ ಹೆಚ್ಚಳ ವಾಗಿದೆ. ರೈತರಿಗೆ ಸಿಗುವ ಬೆಲೆ ಕೂಡ ಕಡಿಮೆ. ಆದರೆ ಮಧ್ಯವರ್ತಿ ವ್ಯಾಪಾರಿಗಳು ಲಾಭ ಮಾಡಿಕೊ­ಳ್ಳುತ್ತಿದ್ದಾರೆ. ತರಕಾರಿ ದರವನ್ನು ತಡೆಯಲು ಕ್ರಮ ಕೈಗೊಳ್ಳಬೇಕು.
–ಕುಮಾರ್, ಗ್ರಾಹಕ, ಹಲಸೂರು
ಗ್ರಾಹಕರ ಕೋಪ
ತರಕಾರಿ ದರ ಹೆಚ್ಚಾಗಿದೆ. ಕೊಳ್ಳಲು ಬಂದ ಗ್ರಾಹಕರು ದರವನ್ನು ಕೇಳಿ, ನಾವು ಸುಳ್ಳು ಹೇಳುತ್ತಿದ್ದೇವೆ ಎಂದು ನಮ್ಮ ಮೇಲೆ ಕೋಪಿಸಿಕೊಂಡು ಹೋಗುತ್ತಾರೆ. ದರ ಇಷ್ಟು ಹೆಚ್ಚಾಗಿದೆ ಎಂದರೆ ಅವರು ನಂಬುವುದಿಲ್ಲ.
– ಪುಟ್ಟಣ್ಣ,  ತರಕಾರಿ ವ್ಯಾಪಾರಿ, ಮಲ್ಲೇಶ್ವರ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT