ADVERTISEMENT

ಬೆಲೆ ಕುಸಿತ: ಗೋದಾಮಿಗೆ ಭತ್ತ

ಫಸಲು ಸಂರಕ್ಷಣೆಗೆ ಮುಂದಾದ ರೈತರ ಮೇಲೆ ಇನ್ನಷ್ಟು ಹೊರೆ

ಕೆ.ನರಸಿಂಹ ಮೂರ್ತಿ
Published 23 ಮೇ 2015, 19:48 IST
Last Updated 23 ಮೇ 2015, 19:48 IST

ಬಳ್ಳಾರಿ: ಭತ್ತಕ್ಕೆ ಸೂಕ್ತ ಬೆಲೆ ಸಿಗಬಹುದೆಂದು ಇಲ್ಲಿಯವರೆಗೂ ಕಾಯ್ದ ಜಿಲ್ಲೆಯ ರೈತರು, ಕಡಿಮೆ ಬೆಲೆಗೆ ಮಾರಾಟ ಮಾಡಲು ಇಷ್ಟವಿಲ್ಲದೇ ಗೋದಾಮುಗಳಲ್ಲಿ ಸಂಗ್ರಹಿಸಿಡಲು ಮುಂದಾಗಿದ್ದಾರೆ. ವಿಪರ್ಯಾಸವೆಂದರೆ ಭತ್ತ ತುಂಬಲು ಬಳಸುವ ಖಾಲಿ ಚೀಲಕ್ಕೇ ಹೆಚ್ಚು ದುಡ್ಡು ತೆರಬೇಕಾಗಿದೆ.

ಅಕಾಲಿಕ ಮಳೆಯಿಂದಾಗಿ ಬೇಸಿಗೆ ಅವಧಿ ಬೆಳೆ ನಷ್ಟವಾಗಿ ಇಳುವರಿಯಲ್ಲೂ ಕುಸಿತ ಕಂಡಿರುವ ರೈತರಿಗೆ ಗೋದಾಮಿನಲ್ಲಿ ದಾಸ್ತಾನು ಮಾಡಲು ಭರಿಸಬೇಕಾದ ಅತಿಯಾದ ಖರ್ಚು ಕಂಗೆಡಿಸಿದೆ. ಹೆಚ್ಚು ವಿಸ್ತಾರವಾದ ಮನೆ ಮತ್ತು ಸ್ವಂತ ಗೋದಾಮು ಹೊಂದಿರುವ ರೈತರು ಸುರಕ್ಷಿತ ಭಾವನೆಯಲ್ಲಿದ್ದಾರೆ. ಆದರೆ ಬಾಡಿಗೆ ಗೋದಾಮುಗಳನ್ನು ಆಶ್ರಯಿಸಿರುವ ರೈತರಿಗೆ ಕಷ್ಟ ಎದುರಾಗಿದೆ. ಬಯಲಿನಲ್ಲಿ ಇಟ್ಟರೆ ಭತ್ತ ಕೆಡುವ ಸಂಭವ ಹೆಚ್ಚಿರುವುದು ರೈತರ ಆತಂಕಕ್ಕೆ ಕಾರಣ ಎನ್ನಲಾಗಿದೆ.

ಖರ್ಚು ಅಧಿಕ: ‘ಒಂದು ಕ್ವಿಂಟಲ್‌ ಭತ್ತವನ್ನು ಹಳ್ಳಿಯಿಂದ ಗೋದಾಮಿಗೆ ಸಾಗಿಸಿ ದಾಸ್ತಾನು ಮಾಡಲು ಸುಮಾರು ₹ 100 ಖರ್ಚಾಗುತ್ತದೆ.  ಒಂದು ಎಕರೆಗೆ ಕನಿಷ್ಠ 28 ಕ್ವಿಂಟಲ್‌ ಭತ್ತ ಉತ್ಪಾದನೆಯಾಗುತ್ತದೆ. ಅದನ್ನು ದಾಸ್ತಾನು ಮಾಡಲು ಸುಮಾರು ₹ 2,800 ಬೇಕು. ಈ ಹಣ ಹೊಂದಿಸಲು ಸಹ ನಾವು ಕಷ್ಟಪಡಬೇಕಾಗಿದೆ’ ಎನ್ನುತ್ತಾರೆ ಜಿಲ್ಲೆಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಭತ್ತ ಬೆಳೆಯುವ ಸಿರಗುಪ್ಪ ತಾಲ್ಲೂಕಿನ ಗಡಿಯಲ್ಲಿರುವ ಚಿಕ್ಕಬಳ್ಳಾರಿ ನವಗ್ರಾಮದ

ರೈತ ನಾಗಲಿಂಗಪ್ಪ.

‘ಒಂದು ಎಕರೆಯಲ್ಲಿ ಭತ್ತ ಬೆಳೆಯಲು ತಗಲುವ ವೆಚ್ಚ ₹ 30 ಸಾವಿರ. ಬೆಳೆಯುವುದೂ ಕಷ್ಟ. ಬೆಳೆದ ಬೆಳೆಯನ್ನು ರಕ್ಷಿಸುವುದೂ ಕಷ್ಟವಾಗಿದೆ’ ಎಂದು ಅವರು ಹೇಳುತ್ತಾರೆ. ಅವರು 10 ಎಕರೆಯಲ್ಲಿ ಭತ್ತ ಬೆಳೆದಿದ್ದು, ಮಾರಾಟ ಮಾಡಲಾಗಿಲ್ಲ.

‘ಪ್ರಜಾವಾಣಿ’ ಪ್ರತಿನಿಧಿ ಗ್ರಾಮಕ್ಕೆ ಭೇಟಿ ನೀಡಿದಾಗ, ಗೋದಾಮಿಗೆ ಸಾಗಿಸಲು ಅವರು ಭತ್ತವನ್ನು ಚೀಲಗಳಿಗೆ ತುಂಬಿಸುತ್ತಿದ್ದರು. ಸರ್ಕಾರಿ ಶಾಲೆಯ ಹೊರ ಆವರಣದಲ್ಲಿ ಹಲವು ರೈತರು ಭತ್ತದ ರಾಶಿ ಹಾಕಿ, ಮೇಲೆ ಪ್ಲಾಸ್ಟಿಕ್‌ ಹೊದಿಸಿದ್ದರು. ‘ಸ್ವಂತ ಜಮೀನಿನಲ್ಲಿ ಭತ್ತ ಬೆಳೆದವರು ಈ ಕಷ್ಟಕಾಲವನ್ನು ಹೇಗಾದರೂ ಎದುರಿಸುತ್ತಾರೆ. ಆದರೆ ಜಮೀನನ್ನು ಗುತ್ತಿಗೆಗೆ ಪಡೆದು ಬೆಳೆದವರ ಸ್ಥಿತಿ ದೇವರಿಗೇ ಪ್ರೀತಿ‘ ಎಂಬುದು ರೈತರ ಸಂಕಟದ ನುಡಿ.

ಗಿರಣಿ ಮಾಲಿಕರ ಮೌನ: ‘ಪ್ರತಿ ಬಾರಿ ಭತ್ತ ಖರೀದಿಸುತ್ತಿದ್ದ ಅಕ್ಕಿ ಗಿರಣಿ ಮಾಲೀಕರು ಈ ಬಾರಿ ಭತ್ತ ಖರೀದಿಗೆ ಆಸಕ್ತಿಯನ್ನೇ ತೋರಿಸಿಲ್ಲ. ಕ್ವಿಂಟಲ್‌ಗೆ ₹ 1,600ವರೆಗೂ ಇದ್ದ ಬೆಲೆ ಈ ಬಾರಿ ₹ 1,100ಕ್ಕೆ ಕುಸಿದಿದೆ. ಈ ಬೆಲೆಗೆ ಕೊಟ್ಟರೆ ಅಸಲೂ ದಕ್ಕುವುದಿಲ್ಲ’ ಎಂಬುದು ರೈತರ ಅಳಲು.

*
ಮಳೆಯಿಂದಾಗಿ ಭತ್ತದ ಗುಣಮಟ್ಟ ಸರಿ ಇಲ್ಲದ ಕಾರಣ ಬೆಲೆ ಕುಸಿದಿದೆ. ಹೀಗಾಗಿ ಖರೀದಿ ಕೇಂದ್ರ ತೆರೆದು ರೈತರಿಗೆ ನೆರವಾಗಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ.
- ಎಂ.ಶರಣಬಸವನಗೌಡ,
ಎಪಿಎಂಸಿ ಅಧ್ಯಕ್ಷ, ಸಿರುಗುಪ್ಪ

*
ಅಂಕಿ ಅಂಶಗಳು
1.78
ಲಕ್ಷ ಟನ್‌ ಉತ್ಪಾದನೆ ಗುರಿ
1.13 ಲಕ್ಷ ಟನ್‌ ಅಂದಾಜು ಉತ್ಪಾದನೆ
15,116 ಹೆಕ್ಟೇರ್‌ ಬೆಳೆ ನಷ್ಟ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.