ADVERTISEMENT

ಬೆಳಗಾವಿಯ ‘ಐನಾಕ್ಸ್‌’ ಚಿತ್ರಮಂದಿರಕ್ಕೆ ಬೀಗ

​ಪ್ರಜಾವಾಣಿ ವಾರ್ತೆ
Published 18 ಮೇ 2017, 20:14 IST
Last Updated 18 ಮೇ 2017, 20:14 IST

ಬೆಳಗಾವಿ: ನೀರಿನ ಬಾಟಲಿ, ಆಹಾರ ಪದಾರ್ಥಗಳನ್ನು ಗರಿಷ್ಠ ಬೆಲೆಗಿಂತ (ಎಂ.ಆರ್‌.ಪಿ) ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಇಲ್ಲಿನ ಹೋಟೆಲ್‌ ಹಾಗೂ ಚಿತ್ರಮಂದಿರಗಳ ವಿರುದ್ಧ ಜಿಲ್ಲಾಡಳಿತ ಗುರುವಾರದಿಂದ ಕಾರ್ಯಾಚರಣೆಆರಂಭಿಸಿದ್ದು, ಮೊದಲಿಗೆ ‘ಐನಾಕ್ಸ್‌’ ಚಿತ್ರಮಂದಿರಕ್ಕೆ ಬೀಗ ಹಾಕಿಸಿದೆ.

ಜಿಲ್ಲಾಧಿಕಾರಿ ಎನ್‌. ಜಯರಾಮ್‌ ಸೂಚನೆ ಮೇರೆಗೆ ಗ್ರಾಹಕರ ಸೋಗಿನಲ್ಲಿ ಚಿತ್ರಮಂದಿರಕ್ಕೆ ತೆರಳಿದ್ದ ಉಪ ವಿಭಾಗಾಧಿಕಾರಿ ಕವಿತಾ ಯೋಗಪ್ಪನವರ ಹಾಗೂ ತಹಶೀಲ್ದಾರ್‌ ಗಿರೀಶ ಸ್ವಾದಿ, ಅಲ್ಲಿ ಕುಡಿಯುವ ನೀರಿನ ಬಾಟಲಿ ಖರೀದಿಸಿದ್ದಾರೆ. ₹ 20 ಎಂ.ಆರ್‌.ಪಿ ಎಂದು ನಮೂದಿಸಲಾಗಿದ್ದ ಲೀಟರ್‌ ನೀರಿನ ಬಾಟಲಿಗೆ ಅಲ್ಲಿನವರು ₹ 50 ಪಡೆದಿದ್ದಾರೆ. ಹೀಗಾಗಿ, ಚಿತ್ರಮಂದಿರದ ವಿರುದ್ಧ ಕ್ರಮ ಕೈಗೊಂಡು, ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

₹ 20ರ ನೀರಿನ ಬಾಟಲಿಗೆ ಕನಿಷ್ಠ ₹ 26ರಿಂದ ₹ 126ರವರೆಗೂ ಪಡೆಯಲಾಗುತ್ತಿದೆ. ಈ ಮೂಲಕ ಗ್ರಾಹಕರನ್ನು ವಂಚಿಸಲಾಗುತ್ತಿದೆ ಎಂದು ಬಿಲ್‌ಗಳ ಸಮೇತ ವಕೀಲ ಹರ್ಷವರ್ಧನ ಪಾಟೀಲ ಈಚೆಗೆ ದೂರು ನೀಡಿದ್ದರು.

ADVERTISEMENT

ವರದಾ ನದಿ ಪಾತ್ರದಲ್ಲಿ ದೇವಸ್ಥಾನ ಪತ್ತೆ
ಗುತ್ತಲ (ಹಾವೇರಿ ಜಿಲ್ಲೆ):
ಹಾವೇರಿ ತಾಲ್ಲೂಕಿನ ಮಣ್ಣೂರ ಗ್ರಾಮದ ವರದಾ ನದಿ ಪಾತ್ರದಲ್ಲಿ ಪುರಾತನ ದೇವಸ್ಥಾನದ ಕುರುಹು ಪತ್ತೆಯಾಗಿದೆ.

ಬುಧವಾರ ಮರಳು ಗಣಿಗಾರಿಕೆ ನಡೆಸುವಾಗ ಗುಡಿಯ ಕಿಂಡಿ ಮಾದರಿಯ ‘ಜಾಲಂದ್ರ’ ಕಂಡು ಬಂದಿದೆ. ಸ್ಥಳೀಯರು ಸುತ್ತಲಿದ್ದ ಕಲ್ಲು, ಮಣ್ಣು, ಮರಳನ್ನು  ತೆಗೆದಿದ್ದಾರೆ. ಆಗ ದೇವಸ್ಥಾನದ ವಿನ್ಯಾಸ ಇರುವುದು ಗೋಚರಿಸಿದೆ.

‘ಪತ್ತೆಯಾದ ಜಾಲಂದ್ರದಲ್ಲಿ 28 ಕಿಂಡಿಗಳಿವೆ. ಇಲ್ಲಿ ಬರೀ ಮರಳು ಮತ್ತು ಕೆಸರು ಸಿಗುತ್ತಿದೆ.  ಗರ್ಭಗುಡಿಯ ನೀರು ಹೊರಬರಲು ನಿರ್ಮಿಸಿದ ಕಲ್ಲಿನ ಕೆತ್ತನೆಯೂ ಇದೆ.  ನಂದಿ ಅಥವಾ ಶಿವಲಿಂಗದ ದೊಡ್ಡ ಗಾತ್ರದ ದೇವಸ್ಥಾನ ಇರಬಹುದು’ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.