ADVERTISEMENT

ಬೇಂದ್ರೆ, ಕುವೆಂಪು ಈಗಲೂ ಬೆಸ್ಟ್‌ ಸೆಲ್ಲರ್ಸ್‌

​ಪ್ರಜಾವಾಣಿ ವಾರ್ತೆ
Published 18 ಜನವರಿ 2015, 20:18 IST
Last Updated 18 ಜನವರಿ 2015, 20:18 IST

ಧಾರವಾಡ: ‘ಕನ್ನಡದ ಕ್ಲಾಸಿಕ್‌ಗಳು ಅಂತ ಹೇಳೊ ಬೇಂದ್ರೆ, ಕುವೆಂಪು ಈಗಲೂ ಬೆಸ್ಟ್‌ ಸೆಲ್ಲರ್ಸ್‌’ ಎಂದು  ಸಾಹಿತ್ಯ ಪ್ರಕಾಶನದ ಸುಬ್ರಹ್ಮಣ್ಯ ಹೇಳಿದರು. ಓದುಗರ ಸಾಹಿತ್ಯದ ಒಲವಿನ ಬಗ್ಗೆ ಭರವಸೆ ಮೂಡಿಸಿದ ಮಾತು ಇದಾದರೂ, ‘ಇಂತಹ ಅಭಿರುಚಿ ಬೆಳೆಸಬೇಕಾದ ಪಾಲಕರೇ ಓದಿನಿಂದ ದೂರವಾಗುತ್ತಿದ್ದಾರೆ’ ಎಂಬ ಆತಂಕವನ್ನೂ ಅವರು ವ್ಯಕ್ತಪಡಿಸಿದರು.

ಧಾರವಾಡದಲ್ಲಿ ನಡೆಯುತ್ತಿರುವ ಸಾಹಿತ್ಯ ಸಂಭ್ರಮದ ಮೂರನೇ ಆವೃತ್ತಿಯ ಕೊನೆಯ ದಿನ, ‘ಕನ್ನಡ ಪುಸ್ತಕಗಳ ಓದುಗರ ಒಲವು­ಗಳು’ ಎಂಬ ಗೋಷ್ಠಿಯಲ್ಲಿ ಭಾಗ­ವ­ಹಿಸಿದ ಆರ್‌.ದೊಡ್ಡೇಗೌಡ, ಎಂ.ಎ. ಸುಬ್ರಹ್ಮಣ್ಯ, ಮಯೂರ ಮಾಸ ಪತ್ರಿಕೆಯ ಸಹಾಯಕ ಸಂಪಾದಕಿ ಆರ್‌. ಪೂರ್ಣಿಮಾ ಅವರು ಓದುಗರ ನಿಲುವು ಬದಲಾಗಿದ್ದನ್ನು ಒಪ್ಪಿಕೊಂಡರು.

‘ಹತ್ತು ಹದಿನೈದು ವರ್ಷಗಳ ಹಿಂದೆ ಸುಮಾರು 600ರಿಂದ 700 ಪುಸ್ತಕಗಳು ಪ್ರಕಟವಾಗುತ್ತಿದ್ದವು. ಈಗ ಅವುಗಳ ಸಂಖ್ಯೆ ಏಳೆಂಟು ಸಾವಿರ­ಕ್ಕೇರಿದೆ. ಈ ಸಮೃದ್ಧಿಯ ಕಾಲದಲ್ಲಿ ಓದುಗರ ಸಂಖ್ಯೆಯೂ ಏರಿದೆ ಎನ್ನೋಣವೆ’ ಎಂಬ ಗೋಷ್ಠಿಯ ನಿರ್ದೇಶಕ ಪ್ರಕಾಶ ಅವರ ಮಾತಿಗೆ ಪ್ರತಿಕ್ರಿಯಿಸಿದ ಸುಬ್ರಹ್ಮಣ್ಯ, ‘ಪುಸ್ತಕದ ಮೂಲಕ ಸಾಹಿತ್ಯ ಓದುವ ಸಾಂಪ್ರದಾಯಿಕ ಓದು ಕಡಿಮೆ­ಯಾಗಿದೆ.

ಕನ್ನಡಕ್ಕೆ ಇನ್ನೂ ಆನ್‌ಲೈನ್‌ ಮಾರಾಟದ ವೇಗ ಬಲ ಬಂದಿಲ್ಲ. ತ್ರಿವೇಣಿ, ಎಂ.ಕೆ. ಇಂದಿರಾ ಅವರ ಪುಸ್ತಕ ಬಿಡುಗಡೆಯ ದಿನ ಬೆಳಿಗ್ಗೆಯೇ ಬೆಂಗಳೂರಿನ ಬಳೆಪೇಟೆಯಲ್ಲಿ ಕ್ಯೂ ನಿಂತು ಕಾಯುತ್ತಿದ್ದ ದಿನಗಳಿದ್ದವು. ಈಗಲೂ ಭೈರಪ್ಪ, ತೇಜಸ್ವಿ, ಷಡಕ್ಷರಿ, ಮಣಿಕಾಂತ್‌ ಅವರ ಪುಸ್ತಕಗಳು 50ರಿಂದ 60 ಸಾವಿರ ಪ್ರತಿ ಮುದ್ರಣವಾಗ್ತಿವೆ’ ಎಂದರು. ಆದರೆ ಓದುಗರಿಗೆ ಈಗ ಗಂಭೀರ ಸಾಹಿತ್ಯ ಬೇಕಿಲ್ಲ. ತಕ್ಷಣದ ಶಮನ ನೀಡುವ ಅಡುಗೆ, ಅಧ್ಯಾತ್ಮ, ಯೋಗ, ವ್ಯಕ್ತಿತ್ವ ವಿಕಸನದ ಪುಸ್ತಕದತ್ತ ಆಕರ್ಷಣೆ ಹೆಚ್ಚು ಎಂದರು.

ನವೋದಯ ಕಾಲದ ಅನಕೃ, ತರಾಸು, ಕಟ್ಟೀಮನಿ, ಬೀಚಿ ಪುಸ್ತಕಗಳಿಗೆ ಓದುಗರ ಸಮೃದ್ಧಿ ಕಾಣಿಸಿತು. ಸಾಮಾಜಿಕ ಕಾದಂಬರಿಗಳು ರೂಪು ತಳೆದು ತ್ರಿವೇಣಿ, ಎಂ.ಕೆ. ಇಂದಿರಾ, ಸಾಯಿಸುತೆಯವರ ಕಾಲಕ್ಕೆ ಇನ್ನೂ ಸಮೃದ್ಧಿ ಕಂಡಿದೆ. ಪುಸ್ತಕ ಮಾರಾಟದ ವಿಷಯಕ್ಕೆ ಬಂದರೆ ನಾವಂತೂ ಅವರು ಸಾಯಿಸುತೆ ಅಲ್ಲ, ಬದುಕುಸುತೆ ಅಂದದ್ದಿದೆ. ಇವರ ಮುಖ್ಯ ಓದುಗ ವರ್ಗವೇ ಗೃಹಿಣಿಯರು. ಅವರೀಗ ಟಿವಿಗೆ ಶಿಫ್ಟ್‌ ಆಗಿದ್ದಾರೆ. ಆದರೆ ಗಂಭೀರ ಸಾಹಿತ್ಯದ ಓದುಗರು ಆಗಲೂ ಇದ್ದರು, ಈಗಲೂ ಇದ್ದಾರೆ ಎಂದರು.

ಮಾಸ್ತಿ, ಕಾರಂತ, ಕುವೆಂಪು ಮುಂತಾದ ಲೇಖಕರೇ ಸ್ವತಃ ಮಾರಾಟಗಾರರೂ, ಪ್ರಕಾಶಕರೂ, ಮುದ್ರಕರೂ ಆಗಿದ್ದರು. ಆದರೆ ಈಗ ಸರ್ಕಾರ ಈ ವ್ಯವಹಾರದೊಳಗೆ ಮೂಗು ತೂರಿಸಿ ದಲ್ಲಾಳಿ ಹೆಚ್ಚಿಸಿತು. ಗ್ರಂಥಾಲಯಕ್ಕೆ ಪುಸ್ತಕ ಖರೀದಿ ಮಾಡಿದ್ದು ಸಾಮಾನ್ಯರ ಹಣದಿಂದ. ಇದೇ ಪ್ರಮಾದವಾಯಿತು. ಅಭಿರುಚಿ ಬೆಳೆಸಬೇಕಾದ ಗ್ರಂಥಾಲಯಗಳು ಪುಸ್ತಕ­ಗಳಿಂದ ಜನ ವಿಮುಖವಾಗುವಂತೆ ಮಾಡಿದವು ಎಂದರು.

ಮೊದಲ ಸಾಲಿನಿಂದ ವೃಷಭೇಂದ್ರ­ಸ್ವಾಮಿ ಪ್ರತಿಕ್ರಿಯಿಸಿ, ‘ಅದಕ್ಕೇ ಓದುಗರಿರುವ ಲೇಖಕರು ಸರ್ಕಾರದ ಮರ್ಜಿ ಕಾಯ್ತಾ ಇಲ್ಲ. ಗ್ರಂಥಾಲಯಕ್ಕೆ ಈಗ ಯಾರು ಹೋಗಿ ಓದುತ್ತಾರೆ’ ಎಂದು ಪ್ರಶ್ನಿಸಿದರು. ಪ್ರಕಾಶ ಕಂಬತ್ತಳ್ಳಿ ಸಭಿಕರ ನಡುವೆ ಉಪಸ್ಥಿತರಿದ್ದ ವಸುಧೇಂದ್ರ ಅವರನ್ನೂ ಚರ್ಚೆಗೆ ಒಳಗೊಳ್ಳಲು  ಪ್ರಶ್ನೆ ಎಸೆದರು. ‘ತಂತ್ರಜ್ಞಾನ ಯಾವತ್ತೂ ಓದಿನ ಪರವಾಗೇ ಇದೆ. ತಾಳೆಗರಿಯಿಂದ ಕಾಗದದವರೆಗೆ ಬಂದಾಗ ಸ್ವೀಕರಿಸಿಲ್ಲವೆ, ಉಪಕರಣ ಬದಲಾಗ್ತಿವೆ ಅಷ್ಟೆ. ಕಿಂಡಲ್‌ ಇರಲಿ, ಐಪ್ಯಾಡ್‌, ಮೊಬೈಲ್‌ ಇರಲಿ, ಒಟ್ಟಿನಲ್ಲಿ ಕನ್ನಡ ಓದಲಿ. ಹೋಗಲಿ ಇಂಗ್ಲಿಷನ್ನಾದರೂ ಓದಲಿ’ ಎಂದು ವಸುಧೇಂದ್ರ ಹೇಳಿದರು.

ಜನಸಂಖ್ಯೆಗೆ ಅನುಗುಣವಾಗಿ ಸಾಹಿತ್ಯಪ್ರೇಮಿಗಳ ಸಂಖ್ಯೆ ಜಾಸ್ತಿಯಾ­ಗಬೇಕಿತ್ತು. ಆದರೆ ಸಾಮಾಜಿಕ ಬದಲಾವಣೆಯ ಚೌಕಟ್ಟಿನಲ್ಲಿ ನೋಡಿದಾಗ, ನಮ್ಮ ಶಿಕ್ಷಣದ ಉದ್ದೇಶ, ನಮ್ಮ ಜೀವನದ ಉದ್ದೇಶ, ಸಾಮಾಜಿಕ ಸ್ಥಿತ್ಯಂತರ  ಓದುಗರ ಮೇಲೂ ಪ್ರಭಾವ ಬೀರ್‍ತಿವೆ ಎಂದು ಆರ್‌. ಪೂರ್ಣಿಮಾ ಹೇಳಿದರು. ಕನ್ನಡ ಪುಸ್ತಕಗಳೂ ಗುಣಮಟ್ಟದಲ್ಲಿ ರಾಜಿಯಾಗದೆ ಇಂಗ್ಲಿಷ್‌ ಪುಸ್ತಕಗಳಿಗೆ ಸರಿಸಮವಾಗಿ ಅಚ್ಚಾಗ್ತಿವೆ. ಆಕರ್ಷಣೆ ಇವುಗಳತ್ತ ಇದ್ದೇ ಇದೆ. ವೈಚಾರಿಕ ಸಾಹಿತ್ಯದೆಡೆಗೆ ಓದುಗರ ಒಲವಿದೆ ಎಂದು ಪ್ರಕಾಶಕ ಆರ್‌.ದೊಡ್ಡೇಗೌಡ      ಹೇಳಿದರು.

ಹೆಗ್ಗಣ ಹೊರ ತೆಗೆಯಿರಿ
ಅಧಿಕಾರಿಗಳು ಮತ್ತು ಪ್ರಕಾಶಕರ ನಡುವೆ ಒಪ್ಪಂದವಾಗುತ್ತಿವೆ. ಗ್ರಂಥಾ­ಲಯ ಇಲಾಖೆಯಲ್ಲಿನ ಭ್ರಷ್ಟಾಚಾ­ರದಲ್ಲಿ ಭಾಗಿಯಾದ ಹೆಗ್ಗಣಗಳನ್ನು ಹೊರ ತೆಗೆದರೆ ಎಲ್ಲ ಸರಿಯಾಗುತ್ತದೆ.
–ಬಿ.ಟಿ. ಲಲಿತಾ ನಾಯಕ್‌

ಟೈಟಲ್‌ ಹೋಗಿರುತ್ತೆ
ಗ್ರಂಥಾಲಯಕ್ಕೂ ಬರೀ ಟೈಟಲ್‌ ಹೋಗಿರುತ್ತೆ, ಆರ್ಡರ್‌ಗೆ ಕಾದು ಪ್ರಿಂಟ್‌ ಮಾಡುವ ಪ್ರಕಾಶಕರೂ ಇದ್ದಾರೆ.
–ಹೇಮಾ ಪಟ್ಟಣಶೆಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT