ADVERTISEMENT

ಬೋಧಕರ ನೇಮಕ: ಆದೇಶ ಉಲ್ಲಂಘಿಸಿದ ವಿಟಿಯು

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2014, 19:42 IST
Last Updated 29 ಅಕ್ಟೋಬರ್ 2014, 19:42 IST

ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ  ವಿಶ್ವವಿದ್ಯಾಲಯವು (ವಿಟಿಯು) 2013ರಲ್ಲಿ 168 ಬೋಧಕ ಸಿಬ್ಬಂದಿ­ಯನ್ನು ನೇಮಕ ಮಾಡುವಾಗ ‘ಸರ್ಕಾರದ ಆದೇಶ ಮತ್ತು ಸ್ವತಃ ತನ್ನ ನಿಯಮ­ಗಳನ್ನೂ’ ಉಲ್ಲಂಘಿಸಿರುವುದು ಪ್ರಾಥಮಿಕ ತನಿಖೆಯಿಂದ ದೃಢಪಟ್ಟಿದೆ.

ನೇಮಕಾತಿ ಅಕ್ರಮಗಳ ಕುರಿತು ವಿಧಾನ ಪರಿಷತ್‌ ಸದಸ್ಯರಾದ ಮರಿತಿಬ್ಬೇಗೌಡ ಮತ್ತು ಪುಟ್ಟಣ್ಣ ಅವರು ನೀಡಿದ ದೂರಿನ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿದ್ದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ.ವಿ. ಕೃಷ್ಣರಾವ್‌ (ಈಗ ನಿವೃತ್ತಿ ಹೊಂದಿದ್ದಾರೆ) ಅವರು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ  2014ರ ಜುಲೈ 31ರಂದು ಸಲ್ಲಿಸಿರುವ ವರದಿಯಲ್ಲಿ ಇದನ್ನು ದೃಢಪಡಿಸಿದ್ದಾರೆ.

ತನಿಖೆಗೆ ಒಳಪಡಿಸಬಹುದಾದ ಪ್ರಕರಣ ಇದಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬಹುದಾಗಿದೆ ಎಂದು ಅವರು ವರದಿಯಲ್ಲಿ ಶಿಫಾರಸು ಮಾಡಿದ್ದಾರೆ. ಮರಿತಿಬ್ಬೇಗೌಡ ಅವರು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಇತ್ತೀಚೆಗೆ ಹಾಕಿರುವ ಅರ್ಜಿಗೆ ಆಡಳಿತ ಮತ್ತು ಸಿಬ್ಬಂದಿ ಇಲಾಖೆಯು ಪ್ರಾಥಮಿಕ ತನಿಖಾ ವರದಿಯಲ್ಲಿರುವ ಮಾಹಿತಿ­ಗಳನ್ನು ನೀಡಿದೆ.

ವರದಿಯಲ್ಲೇನಿದೆ?: ವಿಟಿಯುನ ಕಾರ್ಯಕಾರಿ ಮಂಡಳಿ­-ಯಲ್ಲಿ ಕೈಗೊಂ­ಡಿ­­­­ರುವ ನಿರ್ಣಯದಂತೆ 168 ಬೋಧಕ ಸಿಬ್ಬಂದಿಯ ನೇಮಕಕ್ಕೆ ಅನುಮತಿ ನೀಡುವಂತೆ ವಿವಿಯು 2011ರ ಜುಲೈ 29ರಂದು ಸರ್ಕಾರಕ್ಕೆ ಮನವಿ ಮಾಡಿತ್ತು. ಸರ್ಕಾರವು 2012ರ ಜುಲೈ 11ರಂದು ಮನವಿಗೆ ಸಮ್ಮತಿಸಿತ್ತು. ಇದರ ಅನ್ವಯ, 2013ರ ಮಾರ್ಚ್‌­ನಲ್ಲಿ (16,19 ಮತ್ತು 20ರಂದು) ಮಾಧ್ಯಮ­ಗಳಲ್ಲಿ ಜಾಹೀರಾತು ನೀಡಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿತ್ತು.

ಆದರೆ, ಈ ನೇಮಕದಲ್ಲಿ ಅಕ್ರಮ ನಡೆಯುತ್ತಿದೆ ಎಂಬ ಆರೋಪ ಜುಲೈ 17ರಂದು ವಿಧಾನ ಪರಿಷತ್ತಿ­ನಲ್ಲಿ ಕೇಳಿ ಬಂದಿತ್ತು. ಉನ್ನತ ಶಿಕ್ಷಣ ಸಚಿವ  ಆರ್‌.ವಿ. ದೇಶಪಾಂಡೆ ಅವರು, ನೇಮಕ ಪ್ರಕ್ರಿಯೆಯನ್ನು ಅಮಾನತಿನಲ್ಲಿ­ ಇಡ­ಲಾಗು­-ವುದು ಎಂದು ಸದನಕ್ಕೆ ಭರವಸೆ ನೀಡಿದ್ದರು. 

ತನ್ನದೇ ನಿಯಮ ಉಲ್ಲಂಘನೆ: ಸರ್ಕಾರದ ಆದೇಶ ಮಾತ್ರವಲ್ಲದೇ ಸ್ವತಃ ತನ್ನದೇ ನಿಯಮವನ್ನೂ ವಿಟಿಯು ಉಲ್ಲಂಘಿಸಿದೆ ಎಂದು ವರದಿ ತಿಳಿಸಿದೆ. ಅದರಂತೆ, ನೇಮಕಾತಿ ಪ್ರಕ್ರಿಯೆಯನ್ನು ಅಮಾನತಿನ­ಲ್ಲಿಡು­ವಂತೆ ಡಿಪಿಎಆರ್‌ ಜುಲೈ 18ರಂದು ವಿಟಿಯುಗೆ ಸೂಚಿಸಿತ್ತು. ಸಂವಿಧಾನದ ಕಲಂ 371 (ಜೆ) ಹೈ ಕ ಭಾಗದ ಮೀಸಲಾತಿ ಸೇರಿದಂತೆ ಹೊಸ ನಿಯಮಗಳು ಜಾರಿಗೆ ಬರುವರೆಗೂ ಸಿಬ್ಬಂದಿಯನ್ನು ನೇಮಕ ಮಾಡದಂತೆ ಸರ್ಕಾರ ಜುಲೈ 20ರಂದು  ನಿರ್ದೇಶನ ನೀಡಿತ್ತು.

ನವೆಂಬರ್‌ನಲ್ಲಿ ಆದೇಶ:  ಕಲಂ 371 (ಜೆ) ಅಡಿಯಲ್ಲಿ ಹೈದರಾಬಾದ್‌ ಕರ್ನಾಟಕ ಅಭ್ಯರ್ಥಿ­ಗಳಿಗೆ ಕಡ್ಡಾಯ­ ಮೀಸಲಾತಿ ಕಲ್ಪಿಸುವಂತೆ ಡಿಪಿಎಆರ್‌ ಹೊರಡಿಸಿದ್ದ ಆದೇಶ ಪಾಲಿಸಲು ಉನ್ನತ ಶಿಕ್ಷಣ ಇಲಾಖೆಯು 2013ರ ನವೆಂಬರ್‌ 6ರಂದು ವಿಟಿಯು ಸೇರಿದಂತೆ ಎಲ್ಲ  ಸಂಸ್ಥೆಗಳಿಗೂ ಸುತ್ತೋಲೆ ಹೊರಡಿಸಿತ್ತು.

ವಾದ ತರ್ಕ ಹೀನ:  ನವೆಂಬರ್‌ 14 ಮತ್ತು ಡಿಸೆಂಬರ್‌ 2ರಂದು ಸರ್ಕಾರಕ್ಕೆ ಮನವಿ ಮಾಡಿದ್ದ ವಿಟಿಯು, ನೇಮಕಾತಿ ಪ್ರಕ್ರಿಯೆಯನ್ನು ಸರ್ಕಾರದ ಆದೇಶ ಬರುವ ಮುನ್ನವೇ ಆರಂಭಿಸಿದ್ದರಿಂದ ಅದನ್ನು ಮುಂದುವರಿಸಲು ಅವಕಾಶ ನೀಡುವಂತೆ ಕೋರಿತ್ತು.
ಆದರೆ, ಅದರ ಈ ಕೋರಿಕೆಯೇ ತರ್ಕಹೀನ ಎಂದು ವರದಿಯಲ್ಲಿ ಅಭಿಪ್ರಾಯ ಪಡಲಾಗಿದೆ.

ತನ್ನ ಮನವಿಗೆ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡದೇ ಇದ್ದಾಗ ವಿಟಿಯು ಸಿಬ್ಬಂದಿ ನೇಮಕಾತಿ ಕಾರ್ಯ  ಮುಂದು­ವರೆಸಿತ್ತು. 2013ರ ಡಿಸೆಂಬರ್‌ 31ರಂದು ನಡೆದಿದ್ದ ವಿಟಿಯು ಕಾರ್ಯಕಾರಿ ಮಂಡಳಿಯ ಸಭೆಯಲ್ಲಿ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರ ವಿರೋಧದ ನಡುವೆಯೂ ನೇಮಕಾತಿಯನ್ನು ಮುಂದುವರೆಸುವ ತೀರ್ಮಾನ ಕೈಗೊಳ್ಳಲಾಗಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ರಾಷ್ಟ್ರೀಯ ಮಟ್ಟದ ಪತ್ರಿಕೆಗಳಲ್ಲಿ ಮತ್ತು ವೆಬ್‌ಸೈಟ್‌ನಲ್ಲಿ ಜಾಹೀರಾತು ನೀಡುವಾಗ, ನೇಮಕ ಮಾಡಿಕೊಳ್ಳುವ ಒಟ್ಟು ಹುದ್ದೆಗಳಲ್ಲಿ ಎಷ್ಟು ಹುದ್ದೆಗಳನ್ನು ಮೀಸಲಾತಿ ವ್ಯಾಪ್ತಿಗೆ ಬರುತ್ತವೆ ಎಂಬ ವಿವರ ನೀಡುವುದು ಕಡ್ಡಾಯ. ಆದರೆ, ವಿಟಿಯು  ಇದನ್ನು ಪಾಲಿಸಿಲ್ಲ ಎಂದೂ ವರದಿ ಹೇಳಿದೆ.

ಅಕ್ರಮ ನಡೆದಿಲ್ಲ...
ವರದಿಯ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿ­ಸಿರುವ ವಿಟಿಯು ಕುಲಪತಿ ಡಾ. ಮಹೇಶಪ್ಪ, ‘ಈ ತನಿಖಾ ವರದಿ ಬಗ್ಗೆ ಯಾವ ಮಾಹಿತಿಯೂ ಇಲ್ಲ’ ಎಂದು ಹೇಳಿದರು. ‘ನೇಮಕಾತಿ ಮಾಡಿದವನು ನಾನು. ನನ್ನನ್ನು ವಿಚಾರಣೆ ನಡೆಸದೇ ಇವರು ತನಿಖೆ ಹೇಗೆ ಮಾಡುತ್ತಾರೆ? 168 ಬೋಧಕರ ನೇಮಕಾತಿಯಲ್ಲಿ ಯಾವ ಅವ್ಯವಹಾರವೂ ನಡೆದಿಲ್ಲ. ಎಲ್ಲವೂ ಪಾರದರ್ಶಕವಾಗಿ ನಡೆದಿದೆ. ಸಂವಿಧಾನದ ಕಲಂ 371 (ಜೆ) ಪ್ರಕಾರ, ಹೈದರಾಬಾದ್‌ –ಕರ್ನಾಟಕ ಅಭ್ಯರ್ಥಿಗಳಿಗೆ ಮೀಸಲಾತಿ­ ನೀಡಲಾಗಿದೆ. ಇದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳು ನನ್ನಲ್ಲಿವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT