ADVERTISEMENT

ಬೌದ್ಧ ವಸ್ತು ಸಂಗ್ರಹಾಲಯ ರಾಮನಗರಕ್ಕೆ!

ಭೂಕಂಪ, ಚೀನೀಯರ ಆಕ್ರಮಣ ಭೀತಿ: ದಾಖಲೆಗಳ ಸಂರಕ್ಷಣೆಗಾಗಿ ಸ್ಥಳಾಂತರಕ್ಕೆ ಟಿಬೆಟನ್ನರ ಒಲವು

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2017, 19:30 IST
Last Updated 26 ಅಕ್ಟೋಬರ್ 2017, 19:30 IST
ಬೌದ್ಧ ವಸ್ತು ಸಂಗ್ರಹಾಲಯ ರಾಮನಗರಕ್ಕೆ!
ಬೌದ್ಧ ವಸ್ತು ಸಂಗ್ರಹಾಲಯ ರಾಮನಗರಕ್ಕೆ!   

ರಾಮನಗರ: ಬೌದ್ಧ ಪರಂಪರೆಯ ಅಪರೂಪದ ದಾಖಲೆಗಳು, ಹಸ್ತಪ್ರತಿಗಳು, ಕಲಾಕೃತಿಗಳನ್ನು ಒಳಗೊಂಡ ಸಂಗ್ರಹಾಲಯ ಹಾಗೂ ಅಧ್ಯಯನ ಕೇಂದ್ರವೊಂದನ್ನು ರಾಮನಗರ ಜಿಲ್ಲೆಯಲ್ಲಿ ಆರಂಭಿಸಲು ಸಿದ್ಧತೆ ನಡೆದಿದೆ.

ಸದ್ಯ ಹಿಮಾಚಲ ಪ್ರದೇಶ ರಾಜ್ಯದ ಧರ್ಮಶಾಲಾದಲ್ಲಿ ವಸ್ತು ಸಂಗ್ರಹಾಲಯವಿದ್ದು, ಅದನ್ನು ಹಂತಹಂತವಾಗಿ ರಾಮನಗರಕ್ಕೆ ಸ್ಥಳಾಂತರಿಸಲು ಉದ್ದೇಶಿಸಲಾಗಿದೆ. ಅಲ್ಲಿ ಭೂಕಂಪನದಿಂದ ಆಗಬಹುದಾದ ಹಾನಿಯನ್ನು ತಪ್ಪಿಸಲು ಈ ಸ್ಥಳಾಂತರ ನಡೆಯುತ್ತಿದೆ. ಮುಖ್ಯವಾಗಿ ಚೀನಾದ ದಾಳಿಯ ಭೀತಿಯೂ ಟಿಬೆಟನ್ನರನ್ನು ಕಾಡುತ್ತಿದ್ದು, ಧರ್ಮಗುರು ದಲೈಲಾಮ ಅವರೇ ವಸ್ತು ಸಂಗ್ರಹಾಲಯದ ಸ್ಥಳಾಂತರಕ್ಕೆ ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ.

ಟಿಬೆಟನ್ನರ ಐತಿಹಾಸಿಕ ದಾಖಲೆಗಳನ್ನು ನಿರ್ವಹಿಸುತ್ತಿರುವ ಲೈಬ್ರರಿ ಆಫ್‌ ಟಿಬೆಟನ್‌ ವರ್ಕ್ಸ್‌ ಅಂಡ್‌ ಆರ್ಕೈವ್ಸ್‌ (ಎಲ್‌ಟಿಡಬ್ಲ್ಯುಎ) ಈ ಕೇಂದ್ರದ ಸ್ಥಾಪನೆಯ ಯೋಜನೆ ರೂಪಿಸುತ್ತಿದೆ. ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯ ಶೇಷಗಿರಿಹಳ್ಳಿ ಬಳಿ ಈ ಉದ್ದೇಶಿತ ಸಂಗ್ರಹಾಲಯವು ಸ್ಥಾಪನೆಗೊಳ್ಳಲಿದೆ.

ADVERTISEMENT

ಶೇಷಗಿರಿಹಳ್ಳಿಯಲ್ಲಿ ಬೆಂಗಳೂರು–ಮೈಸೂರು ಹೆದ್ದಾರಿಗೆ ಹೊಂದಿಕೊಂಡಂತೆ ದಲೈಲಾಮಾ ಉನ್ನತ ಶಿಕ್ಷಣ ಕೇಂದ್ರವು ಈಗಾಗಲೇ ಕಾರ್ಯ ನಿರ್ವಹಿಸುತ್ತಿದೆ. ಇದಕ್ಕೆ ಪಕ್ಕದಲ್ಲಿಯೇ ಸುಮಾರು 3.8 ಎಕರೆ ಜಾಗವನ್ನು ಈ ಉದ್ದೇಶಿತ ಸಂಗ್ರಹಾಲಯಕ್ಕಾಗಿ ಮೀಸಲಿರಿಸಿದೆ.

ಈಗಾಗಲೇ ಈ ಯೋಜನೆ ಸಿದ್ಧವಾಗಿದ್ದು, ₨52.8 ಕೋಟಿ ವೆಚ್ಚವನ್ನು ಒಳಗೊಂಡಿದೆ. ಈ ಯೋಜನೆ ಕಾರ್ಯಗತಗೊಂಡಿದ್ದೇ ಆದಲ್ಲಿ ಇದೊಂದು ಅಪರೂಪದ ಸಂಗ್ರಾಹಾಲಯವಾಗಲಿದೆ.

ಭೂಕಂಪನ ಭೀತಿ: ಟಿಬೆಟನ್ನರಿಗೆ ಸಂಬಂಧಿಸಿದ ಎಲ್ಲ ಅಪರೂಪದ ದಾಖಲೆಗಳನ್ನು ನಿರ್ವಹಿಸುವ ಸಲುವಾಗಿ 14ನೇ ದಲೈಲಾಮ ಅವರು 1970ರಲ್ಲಿ ಎಲ್‌ಟಿಡಬ್ಲ್ಯುಎ ಅನ್ನು ಸ್ಥಾಪಿಸಿದರು. ಈ ಸಂಸ್ಥೆಯು ಸದ್ಯ 80ಸಾವಿರಕ್ಕೂ ಹೆಚ್ಚು ಹಸ್ತಪ್ರತಿಗಳು, ಅಪರೂಪದ ಛಾಯಾಚಿತ್ರಗಳು, ವರ್ಣಚಿತ್ರಗಳು, ಕೃತಿಗಳು ಹಾಗೂ ಕಲಾಕೃತಿಗಳನ್ನು ಒಳಗೊಂಡಿದೆ. ಇವುಗಳನ್ನು ಧರ್ಮಶಾಲಾದಲ್ಲಿ ಇರುವ ವಸ್ತು ಸಂಗ್ರಹಾಲಯದಲ್ಲಿ ಇಡಲಾಗಿದೆ.

ಆದರೆ ಈ ಪ್ರದೇಶವು ಹಿಮಾಲಯ ಪರ್ವತಗಳ ಅಂಚಿನಲ್ಲಿ ಇದ್ದು, ಅತಿಹೆಚ್ಚು ಭೂಕಂಪನಗಳು ಸಂಭವಿಸುವ ಸೂಕ್ಷ್ಮ ಪ್ರದೇಶವಾಗಿದೆ. ಹೀಗಾಗಿ ಅಲ್ಲಿ ಅಪರೂಪದ ದಾಖಲೆಗಳನ್ನು ಇಡುವುದು ಸೂಕ್ತವಲ್ಲ ಎಂದು ಎಲ್‌ಟಿಡಬ್ಲ್ಯುಎ ತೀರ್ಮಾನಕ್ಕೆ ಬಂದಿದೆ. ಹೀಗಾಗಿ ದೇಶದ ವಿವಿಧೆಡೆ ಉಪ ಕೇಂದ್ರಗಳನ್ನು ತೆರೆದು ಅಲ್ಲಿ ಅವುಗಳನ್ನು ಸಂರಕ್ಷಿಸಲು ಮುಂದಾಗಿದೆ. ಈ ಯೋಜನೆಯ ಭಾಗವಾಗಿ ಮೊದಲು ರಾಮನಗರದಲ್ಲಿ ಸಂಗ್ರಹಾಲಯ ಆರಂಭಕ್ಕೆ ಉದ್ದೇಶಿಸಲಾಗಿದೆ.

ಹಣಕಾಸಿನ ಕೊರತೆ: ಯೋಜನೆಯ ಅನುಷ್ಠಾನಕ್ಕೆ ಹಣಕಾಸಿನ ಕೊರತೆ ಇರುವುದಾಗಿ ಅಧಿಕಾರಿಗಳು ತಿಳಿಸಿದ್ದು, ವಂತಿಗೆ ಮೂಲಕ ಹಣ ಸಂಗ್ರಹಣೆಗೆ ಮುಂದಾಗಿದ್ದಾರೆ. ನಿರ್ದಿಷ್ಟ ಮೊತ್ತ ಸಂಗ್ರಹವಾದ ಬಳಿಕವಷ್ಟೇ ಯೋಜನೆ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ.

**

ಏನೇನು ಇರಲಿದೆ?

ಈ ಕೇಂದ್ರವು ವಸ್ತು ಸಂಗ್ರಹಾಲಯದ ಜೊತೆಜೊತೆಗೆ ಧರ್ಮ, ವಿಜ್ಞಾನ ಹಾಗೂ ಅಧ್ಯಾತ್ಮ ಕುರಿತ ಅಧ್ಯಯನವನ್ನೂ ಒಳಗೊಳ್ಳಲಿದೆ. ಇದಕ್ಕಾಗಿ ಪ್ರತ್ಯೇಕ ಶಾಲೆ, ಸಂಶೋಧನೆ ಮತ್ತು ಪ್ರಕಟಣೆ ಕೇಂದ್ರಗಳು, ಅವುಗಳಿಗೆ ಬೇಕಾದ ಕಟ್ಟಡ ಮತ್ತು ಮೂಲ ಸೌಕರ್ಯಗಳನ್ನು ಕಲ್ಪಿಸಲು ಉದ್ದೇಶಿಸಲಾಗಿದೆ.

**

ವಸ್ತು ಸಂಗ್ರಹಾಲಯಕ್ಕೆ ಭವಿಷ್ಯದಲ್ಲಿ ಧರ್ಮಶಾಲಾ ಹೆಚ್ಚು ಸೂಕ್ತವಲ್ಲ ಎಂಬ ಕಾರಣಕ್ಕೆ ಪರ್ಯಾಯ ಸ್ಥಳಗಳನ್ನು ಹುಡುಕಲಾಗುತ್ತಿದೆ.

-ಗೀಷ್‌ ಹಕೋದರ್, ನಿರ್ದೇಶಕ, ಲೈಬ್ರರಿ ಆಫ್‌ ಟಿಬೆಟನ್‌ ವರ್ಕ್ಸ್‌ ಅಂಡ್‌ ಆರ್ಕೈವ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.