ADVERTISEMENT

ಬ್ಯಾಂಕ್‌ ಖಾತೆ ಪರಿಶೀಲನೆಗೆ ಅನುಮತಿ‌

ಅಕ್ರಮ ಲಾಟರಿ ಮಾರಾಟ: ಪಾರಿ ರಾಜನ್ ಜತೆ ಅಧಿಕಾರಿಗಳ ಸಂಪರ್ಕ ಪ್ರಕರಣ

​ಪ್ರಜಾವಾಣಿ ವಾರ್ತೆ
Published 23 ಮೇ 2015, 20:04 IST
Last Updated 23 ಮೇ 2015, 20:04 IST

ಬೆಂಗಳೂರು: ಅಕ್ರಮ ಲಾಟರಿ ಮಾರಾಟ ಪ್ರಕರಣದ ಆರೋಪಿ ಪಾರಿ ರಾಜನ್‌ ಜತೆ ಮೊಬೈಲ್ ಸಂಭಾಷಣೆ ನಡೆಸಿದ್ದ ಪೊಲೀಸ್ ಅಧಿಕಾರಿಗಳ ಬ್ಯಾಂಕ್‌ ಖಾತೆ ವಿವರಗಳನ್ನು ಪರಿಶೀಲಿಸಲು ಸರ್ಕಾರ ಸಿಐಡಿಗೆ ಅನುಮತಿ ನೀಡಿದೆ.

‘ಆರೋಪ ಎದುರಿಸುತ್ತಿರುವ ಆರು ಅಧಿಕಾರಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲು ಹಾಗೂ ಅವರ ಬ್ಯಾಂಕ್ ಖಾತೆಯ ವಿವರಗಳನ್ನು ಪರಿಶೀಲಿಸಲು ಅನುಮತಿ ನೀಡುವಂತೆ ಸರ್ಕಾರವನ್ನು ಕೋರಲಾಗಿತ್ತು. ಅದಕ್ಕೆ ಅನುಮತಿ ದೊರೆತಿದ್ದು, ಸೋಮವಾರ ನೋಟಿಸ್ ಜಾರಿಗೊಳಿಸಲಾಗುವುದು. ಪಾರಿ ರಾಜನ್‌ನಿಂದ ಈ ಅಧಿಕಾರಿಗಳ ಖಾತೆಗೆ ಹಣ ವರ್ಗಾವಣೆ ಆಗಿತ್ತೇ ಎಂಬ ಬಗ್ಗೆಯೂ ಪರಿಶೀಲಿಸಲಾಗುವುದು’ ಎಂದು ಸಿಐಡಿ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

‘ಈಗಾಗಲೇ ಕೆಲ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಆದರೆ, ರಾಜನ್‌ ಜತೆ ಹೆಚ್ಚು ಸಂಭಾಷಣೆ ನಡೆಸಿದ್ದ ಅಧಿಕಾರಿಗಳನ್ನು ಮುಖಾಮುಖಿ ವಿಚಾರಣೆ ನಡೆಸಿಯೇ ಹೇಳಿಕೆ ಪಡೆಯಬೇಕೆಂದು ಸರ್ಕಾರ ಸೂಚಿಸಿದೆ’ ಎಂದರು.

ತನಿಖೆಯಲ್ಲಿ ಮಧ್ಯಪ್ರವೇಶ: ‘ಇದೇ ಏ.28 ಮತ್ತು ಏ.30ರಂದು ಲಾಟರಿ ಮತ್ತು ಅಬಕಾರಿ ದಳದ ಎಸ್‌ಐ ಪ್ರಕಾಶ್ ಅವರಿಗೆ ಕರೆ ಮಾಡಿದ್ದ ಐಜಿಪಿ ಅಲೋಕ್‌ಕುಮಾರ್, ‘ಪಾರಿ ರಾಜನ್‌ ನನಗೆ ಗೊತ್ತಿರುವ ವ್ಯಕ್ತಿ. ಆತನನ್ನು ಹುಡುಕಲು ಪ್ರಯತ್ನಿಸಬೇಡಿ. ಆತನೇ ಕೆಜಿಎಫ್‌ಗೆ ಬರಲಿದ್ದಾನೆ’ ಎಂದಿದ್ದರು. ಅವರು ಆರೋಪಿಗೆ ನೆರವು ನೀಡುವುದರ ಜತೆಗೆ, ಸ್ಥಳೀಯ ಪೊಲೀಸರ ತನಿಖೆಯಲ್ಲೂ ಮಧ್ಯ ಪ್ರವೇಶ ಮಾಡಿರುವ ಅಂಶವನ್ನು ಸರ್ಕಾರಕ್ಕೆ ಸಲ್ಲಿಸಿರುವ ಮಧ್ಯಂತರ ವರದಿಯಲ್ಲಿ ಸೇರಿಸಲಾಗಿತ್ತು’ ಎಂದು ತಿಳಿಸಿದರು.

ಬೆಂಗಳೂರು ತೊರೆಯುವಂತಿಲ್ಲ: ‘ಸೇವೆಯಿಂದ ಅಮಾನತಾಗಿರುವ ಅಲೋಕ್‌ಕುಮಾರ್ ಸರ್ಕಾರದ ಲಿಖಿತ ಅನುಮತಿ ಇಲ್ಲದೆ ಬೆಂಗಳೂರು ತೊರೆಯುವಂತಿಲ್ಲ’ ಎಂದು ಸರ್ಕಾರ ಆದೇಶ ಪ್ರತಿಯಲ್ಲಿ ಸೂಚಿಸಿದೆ.  ಜತೆಗೆ ಅವರ ಅಮಾನತಿನಿಂದ ತೆರವಾಗಿರುವ ಕಾನೂನು ಸುವ್ಯವಸ್ಥೆ ವಿಭಾಗದ (ಪಶ್ಚಿಮ) ಹೆಚ್ಚುವರಿ ಪೊಲೀಸ್ ಕಮಿಷನರ್ ಹುದ್ದೆಯ ಹೆಚ್ಚುವರಿ ಹೊಣೆಯನ್ನು ಬಿ.ಎನ್‌.ಎಸ್‌.ರೆಡ್ಡಿ ಅವರಿಗೆ ನೀಡಲಾಗಿದೆ. ರೆಡ್ಡಿ ಈಗ ಆಡಳಿತ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್‌ ಆಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
*
ಲಾಟರಿ ರೂವಾರಿ ‘ಮೈಕೆಲ್’?
‘ಪಾರಿ ರಾಜನ್‌ ಹಾಗೂ ಮೈಕೆಲ್ ಎಂಬಾತನ ಜತೆ ಹೆಚ್ಚು ಸಂಭಾಷಣೆ ನಡೆದಿದೆ. ಇದು ರಾಜನ್‌ನ ಮೊಬೈಲ್ ಕರೆ ವಿವರಗಳ (ಸಿಡಿಆರ್‌) ಪರಿಶೀಲನೆಯಿಂದ ಗೊತ್ತಾಗಿದೆ. ಈವರೆಗಿನ ತನಿಖೆ ಪ್ರಕಾರ ಮೈಕೆಲ್ ಕೂಡ ಅಕ್ರಮವಾಗಿ ಲಾಟರಿ ಮಾರಾಟ ದಂಧೆಯಲ್ಲಿ ತೊಡಗಿದ್ದ ವ್ಯಕ್ತಿ. ಆತನ ಸೂಚನೆಯಂತೆಯೇ ರಾಜನ್ ಕೆಲಸ ಮಾಡುತ್ತಿದ್ದ. ಈಗ ಒಂದು ತಂಡ ಮೈಕೆಲ್‌ನ ಪತ್ತೆ ಕಾರ್ಯದಲ್ಲಿ ತೊಡಗಿದೆ’ ಎಂದು ಸಿಐಡಿ ಅಧಿಕಾರಿಗಳು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.