ADVERTISEMENT

ಭಾಷೆ ಸತ್ತರೆ ಸಮಾಜ ಛಿದ್ರಛಿದ್ರ

ಸಾಧಕರೊಡನೆ ಸಂವಾದ ಕಾರ್ಯಕ್ರಮದಲ್ಲಿ ವೈದೇಹಿ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2016, 19:38 IST
Last Updated 27 ಆಗಸ್ಟ್ 2016, 19:38 IST
ಭಾಷೆ ಸತ್ತರೆ ಸಮಾಜ ಛಿದ್ರಛಿದ್ರ
ಭಾಷೆ ಸತ್ತರೆ ಸಮಾಜ ಛಿದ್ರಛಿದ್ರ   

ಬೆಂಗಳೂರು: ‘ಭಾಷೆಯನ್ನು ತಪಸ್ಸಿನಂತೆ ಕಲಿಯುವವರು ಕಡಿಮೆ ಆಗುತ್ತಿದ್ದಾರೆ. ಭಾಷೆ ಸತ್ತರೆ ಸಮಾಜ ಛಿದ್ರ ಛಿದ್ರವಾಗುತ್ತದೆ. ಮನುಷ್ಯ ರಾಕ್ಷಸನಾಗುತ್ತಾನೆ’ ಎಂದು ಸಾಹಿತಿ ವೈದೇಹಿ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕರ್ನಾಟಕ ಲೇಖಕಿಯರ ಸಂಘದ ಆಶ್ರಯದಲ್ಲಿ ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಸಾಧಕರೊಡನೆ ಸಂವಾದ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬರವಣಿಗೆ ಮೂಲಕ ಹೋರಾಟ ನಡೆಸೋಣ ಎಂದರೆ ಭಾಷೆ ಸಾಯುತ್ತಿದೆ.  ಕನ್ನಡ ಕಲ್ಪತರು, ನಮ್ಮನ್ನು ಉದ್ಧಾರ ಮಾಡುವ ಭಾಷೆ ಎಂದು ತಿಳಿಯುವವರು ಕಡಿಮೆ ಆಗುತ್ತಿದ್ದಾರೆ. ಹೊಟ್ಟೆ ತುಂಬಿಸುವ ಭಾಷೆಯನ್ನು ಕಲಿಯಬೇಕೆಂಬ ಹುಂಬರು ನಮ್ಮ ನಡುವೆ ಇದ್ದಾರೆ. ನಮ್ಮ ಭಾಷೆಯನ್ನು ಬಿಡದೆ ಇಂಗ್ಲಿಷ್‌ ಕಲಿಯಬಹುದು ಎನ್ನುವ ಧೈರ್ಯ ತೋರಬೇಕಿದೆ’ ಎಂದರು.

‘ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದರೂ ಲಿಂಗ ತಾರತಮ್ಯ ನಿಂತಿಲ್ಲ. ಗ್ರಾಮೀಣ ಭಾಗದಲ್ಲಿ ಮನೆ, ಶೌಚಾಲಯ ಇಲ್ಲದೆ ಗುಡಿಸಲಿನಲ್ಲಿ ವಾಸ ಮಾಡುವವರು ಇದ್ದಾರೆ.

ನಮ್ಮ ಕಡೆ ಶಾಲೆಗೆ ಹೋದ ಹೆಣ್ಣು ಮಗು ವಾಪಸ್‌ ಬರುವವರೆಗೆ ಪೋಷಕರು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುತ್ತಾರೆ. ಬ್ಲೇಡ್‌, ಕಾರದಪುಡಿ ತೆಗೆದುಕೊಂಡು ಹೋಗುವಂತೆ ಮಕ್ಕಳಿಗೆ ಹೇಳುವ ಪರಿಸ್ಥಿತಿ ಇದೆ’ ಎಂದು ಹೇಳಿದರು.

‘ನಾವು ಹುಟ್ಟಿರುವುದು ಜಗಳವಾಡುವುದಕ್ಕೋ ಅಥವಾ ಕೂಡಿ ಬಾಳುವುದಕ್ಕೋ ಎಂಬುದರ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಸಂಬಂಧಗಳನ್ನು ಬೆಸೆಯಬೇಕು.ಪ್ರೀತಿ, ವಿಶ್ವಾಸವನ್ನು ಬೆಳೆಸಿಕೊಳ್ಳಬೇಕು’ ಎಂದರು. ‘ಈ ಹಿಂದೆ ಸಮಾನತೆ ಎಂಬುದು ಆಶಯವಾಗಿತ್ತು. ಈಗ ಸಮಾನತೆ ಅಗತ್ಯ ಆಗಿದೆ. ಸಂಪೂರ್ಣ ಸ್ವಾತಂತ್ರ್ಯ ಕಲ್ಪನೆ ತಪ್ಪು.

ಮಹಿಳೆಯರು ಇಂದಿಗೂ ಅಗೋಚರವಾಗಿ ಬಂಧನದಲ್ಲಿದ್ದಾರೆ. ಆ ಬಂಧನದಿಂದ ಸ್ವಲ್ಪ ಮಟ್ಟಿಗಾದರೂ ಬಿಡುಗಡೆ ಪಡೆಯಲು ಪ್ರಯತ್ನಿಸಬೇಕು’ ಎಂದು ಸಲಹೆ ನೀಡಿದರು.

ಅಧ್ಯಯನವಿಲ್ಲದೆ ನದಿ ತಿರುವು: ‘ನಿಸರ್ಗದ ಪ್ರತಿ ವಸ್ತುವನ್ನೂ ಲಾಭದ ದೃಷ್ಟಿಯಿಂದ ನೋಡಲಾಗುತ್ತಿದೆ. ಬೆಟ್ಟ–ಗುಡ್ಡ, ನದಿ, ಕೆರೆಗಳನ್ನು ನಾಶ ಮಾಡಲಾಗುತ್ತಿದೆ. ಆಡಳಿತ ನಡೆಸುವವರಿಗೆ ವೈಜ್ಞಾನಿಕ ಜ್ಞಾನವಿಲ್ಲ. ಯಾವುದೇ ಅಧ್ಯಯನ ನಡೆಸದೆ ನದಿ ತಿರುವು ಮಾಡಲು ಹೊರಟಿದ್ದಾರೆ’ ಎಂದು ದೂರಿದರು. ಲೇಖಕಿಯರ ಸಂಘದ ಅಧ್ಯಕ್ಷೆ ವಸುಂಧರಾ ಭೂಪತಿ ಹಾಗೂ ಕಸಾಪ ಗೌರವ ಕೋಶಾಧ್ಯಕ್ಷ ಪಿ.ಮಲ್ಲಿಕಾರ್ಜುನಪ್ಪ  ವೇದಿಕೆಯಲ್ಲಿದ್ದರು.

***
ನಾನು ಎಲ್ಲವನ್ನೂ ಸಹಿಸಬಲ್ಲೆ. ಆದರೆ, ಮಕ್ಕಳು, ವೃದ್ಧೆಯರ ಮೇಲೆ ನಡೆಯುವ ಅತ್ಯಾಚಾರವನ್ನು ಸಹಿಸಲು ನನ್ನಿಂದ ಆಗುವುದಿಲ್ಲ.
– ವೈದೇಹಿ, ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.