ADVERTISEMENT

ಭೀಮಗಡ: ಅರ್ಜಿ ವಾಪಸ್‌ ‍ಪಡೆದ ಹೆಸ್ಕಾಂ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2017, 19:30 IST
Last Updated 19 ಸೆಪ್ಟೆಂಬರ್ 2017, 19:30 IST
ಹೆಮ್ಮಡಗಾ ಗ್ರಾಮದಲ್ಲಿ ಹಾಕಿದ್ದ ವಿದ್ಯುತ್‌ ಕಂಬಗಳು
ಹೆಮ್ಮಡಗಾ ಗ್ರಾಮದಲ್ಲಿ ಹಾಕಿದ್ದ ವಿದ್ಯುತ್‌ ಕಂಬಗಳು   

ಬೆಂಗಳೂರು: ಭೀಮಗಡ ವನ್ಯಧಾಮದ ವ್ಯಾಪ್ತಿಯ ಗ್ರಾಮಗಳಲ್ಲಿ ವಿದ್ಯುತ್‌ ಸಂಪರ್ಕ ಕಲ್ಪಿಸಲು ಕಂಬಗಳನ್ನು ಅಳವಡಿಸಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ಹೆಸ್ಕಾಂ ಹಿಂಪಡೆದಿದೆ.

ವನ್ಯಜೀವಿ ಧಾಮದಲ್ಲಿ ಅನಧಿಕೃತ ವಿದ್ಯುತ್‌ ಕಾಮಗಾರಿ ಕುರಿತು ನೀಡಿದ್ದ ದೂರನ್ನು ಆಧರಿಸಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಅವರು ವಿಸ್ತ್ರತ ತನಿಖೆಗೆ ಆದೇಶಿಸಿದ್ದರು. ಅದರ ಬೆನ್ನಲ್ಲೇ ಹೆಸ್ಕಾಂ ಅರ್ಜಿ ವಾಪಸ್‌ ಪಡೆದಿದೆ. ಅರಣ್ಯ ಇಲಾಖೆಯಿಂದ ಅನುಮತಿ ಪಡೆದ ನಂತರ ಈ ಗ್ರಾಮಗಳಿಗೆ ಸೌರವಿದ್ಯುತ್ ಸಂಪರ್ಕ ನೀಡುವುದಾಗಿ ಕಂಪೆನಿ ಹೇಳಿದೆ. ಕಂಪೆನಿ ಅರ್ಜಿಗಳನ್ನು ವಾಪಸ್ ಪಡೆದ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.
ಐದು ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಹೆಸ್ಕಾಂ ಕಳೆದ ವರ್ಷ ನಿರ್ಧರಿಸಿತ್ತು. ಪ್ರಥಮ ಹಂತದಲ್ಲಿ ಹೆಮ್ಮಡಗಾ ಗ್ರಾಮದಿಂದ ದೇಗಾಂವ ಗ್ರಾಮದವರೆಗೆ 2016ರ ಅಕ್ಟೋಬರ್ ಹಾಗೂ ಡಿಸೆಂಬರ್ ನಡುವೆ ನೂರಕ್ಕೂ ಹೆಚ್ಚು ‌ಕಂಬಗಳನ್ನು ಕಂಪೆನಿ ಅಳವಡಿಸಿತ್ತು. ಈ ಕಾಮಗಾರಿಗೆ ಅರಣ್ಯ ಇಲಾಖೆ, ರಾಜ್ಯ ಹಾಗೂ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಅನುಮತಿ ಪಡೆದಿರಲಿಲ್ಲ.

ಈ ಕುರಿತು ‘ಪ್ರಜಾವಾಣಿ’ 2016ರ ಡಿಸೆಂಬರ್ 8ರಂದು ವರದಿ ಪ್ರಕಟಿಸಿತ್ತು. ತಕ್ಷಣ ಅರಣ್ಯಾಧಿಕಾರಿಗಳು ಹೆಸ್ಕಾಂ ಅಧಿಕಾರಿಗಳ ಜತೆ ಸಭೆ ನಡೆಸಿ ವಿದ್ಯುತ್ ಸಂಪರ್ಕ ನೀಡಲು ಪ್ರಸ್ತಾವ ಸಲ್ಲಿಸಿ ಅನುಮತಿ ಪಡೆಯಲು ಸೂಚಿಸಿದ್ದರು. ತಳೆವಡಿ, ಕೃಷ್ಣಾಪುರ, ಹೋಲ್ದಾ, ಮೆಂಡಿಲ್ ಹಾಗೂ ದೇಗಾಂವ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು 15 ಹೆಕ್ಟೇರ್ ಅರಣ್ಯ ಭೂಮಿ ಪರಿವರ್ತನೆಗೆ ಅನುಮತಿ ನೀಡುವಂತೆ ಹೆಸ್ಕಾಂ 2017ರ ಜನವರಿಯಲ್ಲಿ ಅರ್ಜಿ ಸಲ್ಲಿಸಿತ್ತು. ಅನಧಿಕೃತವಾಗಿ ಸಂಪರ್ಕ ಕಲ್ಪಿಸಿದ್ದ ದೇಗಾಂವ ಗ್ರಾಮದಲ್ಲಿ ಕಾಮಗಾರಿ ನಡೆಸಲು ಮತ್ತೆ ಅರ್ಜಿ ಸಲ್ಲಿಸಿತ್ತು.

ADVERTISEMENT

ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣಾ ಕಾಯ್ದೆಗಳ ಗಂಭೀರ ಉಲ್ಲಂಘನೆ ಆಗಿದೆ ಎಂದು ಆರೋಪಿಸಿ ವನ್ಯಜೀವಿ ಕಾರ್ಯಕರ್ತರು ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಈ ವರ್ಷದ ಮಾರ್ಚ್‌ನಲ್ಲಿ ದೂರು ಸಲ್ಲಿಸಿದ್ದರು. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಏಪ್ರಿಲ್‌ನಲ್ಲಿ ಆದೇಶಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.