ADVERTISEMENT

ಭೂ ಕಂದಾಯ ಕಾಯ್ದೆ ತಿದ್ದುಪಡಿ: ರಾಜ್ಯ ಸರ್ಕಾರಕ್ಕೆ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2017, 19:30 IST
Last Updated 25 ಏಪ್ರಿಲ್ 2017, 19:30 IST

ಬೆಂಗಳೂರು: ಗೋಮಾಳ ಜಮೀನುಗಳನ್ನು ಬಗರ್‌ಹುಕುಂ ಸಾಗುವಳಿದಾರರಿಗೆ ಹಸ್ತಾಂತರಿಸುವ ಉದ್ದೇಶಕ್ಕಾಗಿ ತರಲಾಗಿರುವ ಭೂ ಕಂದಾಯ ಕಾಯ್ದೆ ತಿದ್ದುಪಡಿ ಪ್ರಶ್ನಿಸಿದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಕಂದಾಯ ಇಲಾಖೆಗೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.

ಈ ಕುರಿತಂತೆ ಹಾಸನ ತಾಲ್ಲೂಕು  ಅಟ್ಟಾವರ ಹೊಸಹಳ್ಳಿಯ ಕಾಳೇಗೌಡ ಹಾಗೂ ಇತರೆ 11 ಜನರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎಸ್‌.ಕೆ.ಮುಖರ್ಜಿ ಹಾಗೂ ನ್ಯಾಯಮೂರ್ತಿ ಪಿ.ಎಸ್‌.ದಿನೇಶ್‌ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ಅರ್ಜಿದಾರರ ವಕೀಲ ಪ್ರಕಾಶ್ ಟಿ. ಹೆಬ್ಬಾರ್, ‘ಸರ್ಕಾರ ಭೂ ಕಂದಾಯ ಕಾಯ್ದೆಯ ಕಲಂ 97ರ ಪರಿಚ್ಛೇದ (4ಎ)ಕ್ಕೆ ಮೂರನೇ ಬಾರಿಗೆ ತಿದ್ದುಪಡಿ ತಂದಿದೆ. ತಿದ್ದುಪಡಿ ಅನುಸಾರ ಗೋಮಾಳ ಜಮೀನುಗಳನ್ನು ಬಗರ್‌ ಹುಕುಂ ಸಾಗುವಳಿದಾರರಿಗೆ ಹಸ್ತಾಂತರಿಸಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಖಾಸಗಿ ಭೂ ಮಾಲೀಕರಿಗೆ ಜಮೀನು ವರ್ಗಾವಣೆಯಾಗುವ ಸಾಧ್ಯತೆ ಇದೆ’ ಎಂದು ಆಕ್ಷೇಪಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.