ADVERTISEMENT

ಮಂಡ್ಯದಲ್ಲಿ ಸಂಬಂಧಿಕರ ಖುಷಿ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2015, 19:30 IST
Last Updated 23 ಏಪ್ರಿಲ್ 2015, 19:30 IST

ಮೈಸೂರು: ರಾಜ್ಯದ ಡಾ.ವಿವೇಕ್‌ ಹಲ್ಲೇಗೆರೆ ಮೂರ್ತಿ ಅವರು ಅಮೆರಿಕದ ನೂತನ ‘ಸರ್ಜನ್‌ ಜನರಲ್‌’ ಆಗಿ ವರ್ಜೀನಿಯಾದಲ್ಲಿ ಗುರುವಾರ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಮಂಡ್ಯ ತಾಲ್ಲೂಕಿನ ಹಲ್ಲೇಗೆರೆಯಲ್ಲಿ ಸಂಭ್ರಮ ನೆಲೆಸಿತ್ತು. ಡಾ.ವಿವೇಕ್‌ ಅವರ ಸಂಬಂಧಿಕರು ಹಾಗೂ ಸ್ನೇಹಿತರು ಸಂಭ್ರಮಿಸಿದರು.

‘ಶಸ್ತ್ರಾಸ್ತ್ರ ಕಂಪೆನಿಗಳ ಲಾಬಿಯಿಂದಾಗಿ ವಿವೇಕ್‌ ಪ್ರಮಾಣವಚನ ಸ್ವೀಕಾರ ತಡವಾಯಿತು. ಅದೇನೇ ಇರಲಿ, ವಿವೇಕ್‌ ಅಧಿಕಾರ ಸ್ವೀಕರಿಸಿದ್ದು ನಮಗೆಲ್ಲಾ ಸಂತೋಷದ ವಿಚಾರ. ಇಡೀ ಹಳ್ಳಿಯ ಜನ ಖುಷಿಪಡುತ್ತಿದ್ದಾರೆ’ ಎಂದು ವಿವೇಕ್‌ ಅವರ ಚಿಕ್ಕಪ್ಪ ಎಚ್‌.ಕೆ. ವಸಂತ್‌ಕುಮಾರ್‌  ಪ್ರತಿಕ್ರಿಯಿಸಿದರು.

ಮೈಸೂರು ವಿಶ್ವವಿದ್ಯಾಲಯ ಸೆನೆಟ್‌ನ ಮಾಜಿ ಸದಸ್ಯ ಹಾಗೂ ವಿವೇಕ್‌ ಸಂಬಂಧಿ ಎಚ್‌.ಎ. ವೆಂಕಟೇಶ್‌, ‘ಇಡೀ ಭಾರತ ಹೆಮ್ಮೆಪಡುವ ಸಂಗತಿ ಇದು. ಅದರಲ್ಲೂ ಭಗವದ್ಗೀತೆ ಹೆಸರಿನಲ್ಲಿ ವಿವೇಕ್‌ ಪ್ರಮಾಣವಚನ ಸ್ವೀಕರಿಸಿದರು. ತಮ್ಮ ಬೇರುಗಳನ್ನು ಅವರು ಮರೆತಿಲ್ಲ ಎಂಬುದಕ್ಕೆ ಇದೇ ಸಾಕ್ಷಿ’ ಎಂದು ಬಣ್ಣಿಸಿದರು.

ವಿವೇಕ್‌ ಅವರು ಆರೋಗ್ಯ ಜಾಗೃತಿ ಆಂದೋಲನ ಹಾಗೂ ಶಿಬಿರಗಳಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳುತ್ತಿದ್ದ ಆ ಕ್ಷಣಗಳನ್ನು ನೆನಪಿಸಿಕೊಂಡಿದ್ದು ಮತ್ತೊಬ್ಬ ಸಂಬಂಧಿ ಎಚ್‌.ಆರ್‌. ಗೋಪಾಲಕೃಷ್ಣ. ವೈದ್ಯ ಎಚ್‌.ಎನ್‌. ಲಕ್ಷ್ಮಿನರಸಿಂಹ ಮೂರ್ತಿ ಹಾಗೂ ಮೈತ್ರೇಯಿ ಅವರ ಪುತ್ರ ವಿವೇಕ್‌ ಜನಿಸಿದ್ದು ಲಂಡನ್‌ನಲ್ಲಿ. ತಂದೆಯ ಸಹೋದರರು ಹಲ್ಲೇಗೆರೆ­ಯಲ್ಲಿ ವಾಸವಿದ್ದಾರೆ. ದೊಡ್ಡಪ್ಪ ಎಚ್‌.ಎನ್‌. ಸತ್ಯನಾರಾಯಣ ಅವರು ಬೆಂಗಳೂರಿನಲ್ಲಿ ನೆಲೆಸಿದ್ದು, ಲೋಕೋಪಯೋಗಿ ಇಲಾಖೆಯಲ್ಲಿ ಕಾರ್ಯನಿರ್ವಾಹಕ ಎಂಜಿನಿಯರ್‌ ಆಗಿದ್ದಾರೆ.

ವಿವೇಕ್‌ ಪ್ರತಿ ವರ್ಷ ತಮ್ಮ ಹಳ್ಳಿಗೆ ಭೇಟಿ ನೀಡುತ್ತಿರುತ್ತಾರೆ. ಇವರ ತಾತ ಎಚ್‌.ಸಿ.ನಾರಾಯಣಮೂರ್ತಿ, ವಿಕ್ರಾಂತ್‌ ಟೈರ್ಸ್‌ ಹಾಗೂ ಮೈಸೂರು ಷುಗರ್‌ ಕಂಪೆನಿಯ ನಿರ್ದೇಶಕರಾಗಿದ್ದರು. 

ವಿವೇಕ್‌ ತಂದೆ ಡಾ.ಮೂರ್ತಿ ಓದಿದ್ದು ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ. ಮಂಡ್ಯದ ಅಸಿಟೇಟ್‌ ಫ್ಯಾಕ್ಟರಿ ಆಸ್ಪತ್ರೆ­ಯಲ್ಲಿ ಕೆಲ ಕಾಲ ವೈದ್ಯರಾಗಿದ್ದರು. ಉನ್ನತ ಶಿಕ್ಷಣಕ್ಕಾಗಿ ಲಂಡನ್‌ಗೆ ತೆರಳಿದ ಅವರು, ಈಗ ಫ್ಲಾರಿಡಾದಲ್ಲಿ ನೆಲೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.