ADVERTISEMENT

ಮಂಡ್ಯದಿಂದ 'ಐದು ರೂಪಾಯಿ ವೈದ್ಯ' ಡಾ.ಎಸ್.ಸಿ.ಶಂಕರೇಗೌಡ ಪಕ್ಷೇತರ ಅಭ್ಯರ್ಥಿ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2018, 10:54 IST
Last Updated 23 ಏಪ್ರಿಲ್ 2018, 10:54 IST
'ಐದು ರೂಪಾಯಿ ವೈದ್ಯ' ಎಂದೇ ಖ್ಯಾತರಾಗಿರುವ ಡಾ.ಎಸ್.ಸಿ.ಶಂಕರೇಗೌಡ
'ಐದು ರೂಪಾಯಿ ವೈದ್ಯ' ಎಂದೇ ಖ್ಯಾತರಾಗಿರುವ ಡಾ.ಎಸ್.ಸಿ.ಶಂಕರೇಗೌಡ   

ಮಂಡ್ಯ: 'ಐದು ರೂಪಾಯಿ ವೈದ್ಯ' ಎಂದೇ ಖ್ಯಾತರಾಗಿರುವ ಡಾ.ಎಸ್.ಸಿ.ಶಂಕರೇಗೌಡ ಮಂಡ್ಯ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸಿದರು.

ಜೆಡಿಎಸ್‌ನಿಂದ ಸ್ಪರ್ಧಿಸಲು ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿದ್ದ ಶಂಕರೇಗೌಡ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಜೆಡಿಎಸ್‌ನಿಂದ ಎಂ.ಶ್ರೀನಿವಾಸ್‌, ಬಿಜೆಪಿಯಿಂದ ಬಿ.ಬಸವೇಗೌಡ ಹಾಗೂ ಕಾಂಗ್ರೆಸ್‌ನಿಂದ ಅಂಬರೀಷ್‌ ಅವರಿಗೆ ಟಿಕೆಟ್‌ ನೀಡಲಾಗಿದೆ. ಆದರೆ, ಮಂಡ್ಯದಿಂದ ಸ್ಪರ್ಧಿಸಲು ಅಂಬರೀಷ್‌ ಇನ್ನೂ ನಿರ್ಧಾರ ಪ್ರಕಟಿಸಿಲ್ಲ.

35 ವರ್ಷಗಳಿಂದ ₹5ಕ್ಕೆ ಚಿಕಿತ್ಸೆ:

ADVERTISEMENT

ಡಾ.ಶಂಕರೇಗೌಡ ಅವರು ನಗರದ ಆರ್‌.ಪಿ ರಸ್ತೆಯಲ್ಲಿ 1982ರಿಂದ ಕ್ಲಿನಿಕ್‌ ನಡೆಸುತ್ತಿದ್ದಾರೆ. ₹5ಕ್ಕೆ ಚಿಕಿತ್ಸೆ ನೀಡುತ್ತಿದ್ದು, 35 ವರ್ಷಗಳಿಂದ ಒಮ್ಮೆಯೂ ಚಿಕಿತ್ಸೆ ದರ ಬದಲಾವಣೆ ಮಾಡಿಲ್ಲ.

ಇವರು ಉತ್ತಮ ರೈತರೂ ಆಗಿದ್ದು, ಪ್ರತಿದಿನ ಬೆಳಿಗ್ಗೆ ತಮ್ಮ ಗ್ರಾಮ ಶಿವಳ್ಳಿಯ ಜಮೀನಿನಲ್ಲಿ ಕೃಷಿ ಕೆಲಸ ಮಾಡುತ್ತಾರೆ. ಶಿವಳ್ಳಿಯಲ್ಲಿ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಾರೆ. ಮಧ್ಯಾಹ್ನ 2ರಿಂದ ರಾತ್ರಿ 11ರವರೆಗೂ ನಗರದ ಕ್ಲಿನಿಕ್‌ನಲ್ಲಿ ಚಿಕಿತ್ಸೆ ನೀಡುತ್ತಾರೆ.

ಈ ಹಿಂದೆ ಜನರ ಒತ್ತಾಯದಿಂದ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿ, ಜಯಗಳಿಸಿ, ಉಪಾಧ್ಯಕ್ಷರೂ ಆಗಿದ್ದರು.

ಜಿಲ್ಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ನೀರು ಬಳಕೆದಾರರ ಸಂಘದ ಅಧ್ಯಕ್ಷರೂ ಆಗಿದ್ದು, ನಾಲೆಯ ನೀರಿನ ಸದ್ಬಳಕೆ ಬಗ್ಗೆ ಅರಿವು ಮೂಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.