ADVERTISEMENT

ಮಚ್ಚೆ–ಗುರುತು ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2015, 19:37 IST
Last Updated 26 ಸೆಪ್ಟೆಂಬರ್ 2015, 19:37 IST

ಬೆಂಗಳೂರು: ‘ರಾಘವೇಶ್ವರ ಸ್ವಾಮೀಜಿ ಅವರ ದೇಹದ ಮೇಲೆ ಮಚ್ಚೆ ಹಾಗೂ ಇತರೆ ಗುರುತುಗಳು ಇರುವ ಬಗ್ಗೆ ಗಾಯಕಿ ಪ್ರೇಮಲತಾ ಹೇಳಿಕೆ ನೀಡಿದ್ದಾರೆ. ಆ ಗುರುತುಗಳು ಇವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಿದೆ. ಹೀಗಾಗಿ ನ್ಯಾಯಾಲಯದ ಅನುಮತಿ ಪಡೆದು ಸೆ. 30ರಂದು ಅವರನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುವುದು. ಇದೇ ವೇಳೆ ಅವರ ಪುರುಷತ್ವ ಪರೀಕ್ಷೆ ಕೂಡ ನಡೆಯಲಿದೆ’ ಎಂದು ಸಿಐಡಿ ಮೂಲಗಳು ಹೇಳಿವೆ.

‘ಸ್ವಾಮೀಜಿ–ಪ್ರೇಮಲತಾ ನಡುವಿನ ಮೊಬೈಲ್ ಸಂಭಾಷಣೆ,  ಎಸ್‌ಎಂಎಸ್‌, ಇ–ಮೇಲ್ ಸಂದೇಶಗಳ ವಿನಿಮಯಗಳು ಫಿರ್ಯಾದಿಯ ಆರೋಪಕ್ಕೆ ಪೂರಕವಾಗಿವೆ. ಅವುಗಳ ವಿವರಗಳನ್ನೂ ಹೆಚ್ಚುವರಿ ಪಟ್ಟಿಯಲ್ಲಿ ಸೇರಿಸಲಾಗಿದೆ’.

‘ಫಿರ್ಯಾದಿಯು ಸಿಆರ್‌ಪಿಸಿ 164ನೇ ಕಲಂ ಪ್ರಕಾರ ನ್ಯಾಯಾಧೀಶರ ಮುಂದೆ ಹಾಜರಾಗಿ ಹೇಳಿಕೆ ನೀಡಿದ್ದರು. ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆಯ ಹೇಳಿಕೆ ಅಂತಿಮವಾದ ಕಾರಣ ಆ ಹೇಳಿಕೆಯನ್ನು ಹಾಗೂ ಮಹಜರು ವೇಳೆ ದೊರೆತ ಸಾಂದರ್ಭಿಕ ಸಾಕ್ಷ್ಯಗಳನ್ನು ಚಾರ್ಜ್‌ಶೀಟ್‌ನಲ್ಲಿ ಅಡಕ ಮಾಡಲಾಗಿದೆ’ ಎಂದು ಸಿಐಡಿ ಅಧಿಕಾರಿ ವಿವರಿಸಿದರು.

*
ಸಂಭೋಗ ಆಗಿಲ್ಲ: ಸ್ವಾಮೀಜಿ ವಾದ 
‘ಅತ್ಯಾಚಾರವಿರಲಿ, ನಮ್ಮಿಬ್ಬರ ನಡುವೆ ಒಪ್ಪಿಗೆಯ ಲೈಂಗಿಕ ಕ್ರಿಯೆಯೂ ನಡೆದಿಲ್ಲ ಎಂದು ಸ್ವಾಮೀಜಿ ವಾದಿಸಿದ್ದಾರೆ. ಆದರೆ ಫಿರ್ಯಾದಿಯ ಒಳ ಉಡುಪುಗಳ ಮೇಲೆ ಸ್ವಾಮೀಜಿಯ ವೀರ್ಯ ಇರುವುದು ಡಿಎನ್‌ಎ ಪರೀಕ್ಷೆಯಿಂದ ಖಚಿತವಾಗಿದೆ. ಆರೋಪ ಸಾಬೀತಿಗೆ ಇದಕ್ಕಿಂತ ಬಲವಾದ ಸಾಕ್ಷ್ಯ ಬೇಕಿಲ್ಲ. ಆರೋಪಪಟ್ಟಿಯ 108–114ನೇ ಪುಟಗಳಲ್ಲಿ ಅವರ ಹೇಳಿಕೆಗಳಿವೆ’ ಎಂದು ಹಿರಿಯ ಅಧಿಕಾರಿಗಳು ಹೇಳಿದರು.

*
29ಕ್ಕೆ ವಿಚಾರಣೆ ಮುಂದೂಡಿಕೆ
ಬೆಂಗಳೂರು:
ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ  ವೈದ್ಯಕೀಯ ಪರೀಕ್ಷೆಗೆ ಒಳಪಡಲು ಸಿಐಡಿ ಪೊಲೀಸರು ನೀಡಿರುವ ನೋಟಿಸ್‌ ಪ್ರಶ್ನಿಸಿ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳು ಸಲ್ಲಿಸಿರುವ ರಿಟ್‌ ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ಇದೇ 29ಕ್ಕೆ ಮುಂದೂಡಿದೆ.

ನ್ಯಾಯಮೂರ್ತಿ ಎಲ್.ನಾರಾಯಣ ಸ್ವಾಮಿ ಅವರಿದ್ದ ಏಕಸದಸ್ಯ ಪೀಠದ ಮುಂದೆ ಈ  ಅರ್ಜಿ ಸಲ್ಲಿಸಲಾಗಿತ್ತು. ‘ರಾಮಕಥಾ ಗಾಯಕಿ ಮೇಲಿನ ಅತ್ಯಾಚಾರದ ಆರೋಪಕ್ಕೆ ಸಂಬಂಧಿಸಿದಂತೆ ಬಾಕಿ ಇರುವ ವೈದ್ಯಕೀಯ ಪರೀಕ್ಷೆಗೆ ಒಳಪಡಲು ಇದೇ 30ರಂದು ಬೆಳಿಗ್ಗೆ 9 ಗಂಟೆಗೆ ವಿಕ್ಟೋರಿಯಾ ಆಸ್ಪತ್ರೆಗೆ ಹಾಜರಾಗಬೇಕು’ ಎಂದು ಸಿಐಡಿ ಡಿವೈಎಸ್‌ಪಿ ಇದೇ 21ರಂದು ನೋಟಿಸ್‌ ನೀಡಿದ್ದರು. ಈ ನೋಟಿಸ್ ಸಂವಿಧಾನ ಬಾಹಿರವಾಗಿದೆ ಎಂದು ಆಕ್ಷೇಪಿಸಿ ಸ್ವಾಮೀಜಿ ಈ ಅರ್ಜಿ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT