ADVERTISEMENT

ಮತ್ತೆ ಸಕ್ರಿಯ ರಾಜಕಾರಣಕ್ಕೆ ರಮ್ಯಾ

ಕಾಂಗ್ರೆಸ್‌ ಮುಖಂಡ ಕೃಷ್ಣ ಜತೆ ಭೇಟಿ ನಂತರ ಘೋಷಣೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2015, 19:59 IST
Last Updated 1 ಆಗಸ್ಟ್ 2015, 19:59 IST

ಬೆಂಗಳೂರು: ಒಂದು ವರ್ಷದಿಂದ ಪಕ್ಷದ  ಚಟುವಟಿಕೆಯಿಂದ ದೂರ ಉಳಿದಿದ್ದ ಕಾಂಗ್ರೆಸ್‌ ನಾಯಕಿ, ನಟಿ  ರಮ್ಯಾ ಸಕ್ರಿಯ ರಾಜಕಾರಣಕ್ಕೆ ಮರಳುವುದಾಗಿ ತಿಳಿಸಿದರು. ಕಾಂಗ್ರೆಸ್‌ನ ಹಿರಿಯ ಮುಖಂಡ ಎಸ್‌.ಎಂ.ಕೃಷ್ಣ ಅವರನ್ನು ಶನಿವಾರ ಭೇಟಿ ಮಾಡಿದ ಅವರು ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.

‘ನೀತಿ ನಿಯಮಗಳ ಕುರಿತ ಅಧ್ಯಯನದ ಸಲುವಾಗಿ 9 ತಿಂಗಳು ಲಂಡನ್‌ನಲ್ಲಿದ್ದೆ. ಈ ಕೋರ್ಸ್‌ ಪೂರ್ಣಗೊಳಿಸಲು ಇನ್ನೂ ಸ್ವಲ್ಪ ಸಮಯ ಲಂಡನ್‌ನಲ್ಲಿ ಇರಬೇಕಾಗುತ್ತದೆ. ಅದರ ನಂತರ ಜರ್ಮನಿಗೂ ಎರಡು ತಿಂಗಳು ಅಧ್ಯಯನಕ್ಕೆ ತೆರಳುತ್ತೇನೆ. ಬಳಿಕ ಸಕ್ರಿಯ ರಾಜಕಾರಣಕ್ಕೆ ಮರಳುತ್ತೇನೆ’ ಎಂದರು.

2014ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿ ಸೋತ ಬಳಿಕ ಅವರು ರಾಜಕೀಯ ವೇದಿಕೆಗಳಲ್ಲಿ  ಕಾಣಿಸಿಕೊಂಡಿರಲಿಲ್ಲ. ಮಂಡ್ಯ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ  ರೈತರ ಕುಟುಂಬವನ್ನು ಅವರು ಇತ್ತೀಚೆಗೆ ಭೇಟಿ ಮಾಡಿ ಸಾಂತ್ವನ ಹೇಳಿದ್ದರು. ಪುಣೆಯ ಫಿಲ್ಮ್  ಮತ್ತು ಟೆಲಿವಿಷನ್‌ ಇನ್‌ಸ್ಟಿಟ್ಯೂಟ್‌ಗೆ ಶುಕ್ರವಾರ ಭೇಟಿ ನೀಡಿದ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಜತೆಯಲ್ಲಿ ರಮ್ಯಾ ಕೂಡಾ ಇದ್ದರು. ವಿಧಾನ ಪರಿಷತ್‌ಗೆ ಆಯ್ಕೆಯಾಗುವ ವದಂತಿಯನ್ನು ಅವರು ನಿರಾಕರಿಸಿದರು.

ಕೃಷ್ಣ ಬುದ್ಧಿಮಾತು: ‘ರಾಜಕಾರಣಿಯಾದವರು ಸದಾ ಜನರ ಒಡನಾಟದಲ್ಲಿರಬೇಕು. ನನ್ನನ್ನು ಗೆಲ್ಲಿಸಿದ್ದು  ಮಂಡ್ಯದ ಜನ.  ನನ್ನನ್ನು ಸೋಲಿಸಿದ್ದೂ ಅವರೇ. ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೇರುವುದಕ್ಕೆ ಅವರೇ ಕಾರಣ. ಚುನಾವಣೆಯಲ್ಲಿ ಸೋತ ಬಳಿಕ ಜನರಿಂದ ದೂರ ಉಳಿಯಬಾರದು’ ಎಂದು ಕೃಷ್ಣ ಅವರು ರಮ್ಯಾಗೆ ಬುದ್ಧಿಮಾತು ಹೇಳಿದರು ಎಂದು ಮೂಲಗಳು ತಿಳಿಸಿವೆ.

‘ಯಾವುದೇ ರಾಜಕೀಯ ನಿರ್ಧಾರ ಕೈಗೊಳ್ಳುವುದಕ್ಕೆ ಮುನ್ನ ಪಕ್ಷದ ನಾಯಕರನ್ನು ವಿಶ್ವಾಸಕ್ಕೆ ಪಡೆಯಬೇಕು’ ಎಂದು ಕೃಷ್ಣ ಕಿವಿಮಾತು ಹೇಳಿದರು. ಸಂತ್ರಸ್ತ ರೈತರ ಮನೆಗಳಿಗೆ ಭೇಟಿ ನೀಡುವುದಕ್ಕೆ ಮುನ್ನ ರಮ್ಯಾ ಅವರು ಪಕ್ಷದ ಸ್ಥಳೀಯ ಮುಖಂಡರಿಗೆ  ಮಾಹಿತಿ ನೀಡಿರಲಿಲ್ಲ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು.

ಟ್ಯಾಕ್ಸಿಯಲ್ಲಿ ಬಂದು ಆಟೊದಲ್ಲಿ ವಾಪಸ್‌: ಸದಾಶಿವನಗರದಲ್ಲಿನ ಕೃಷ್ಣ ಅವರ ಮನೆಗೆ ರಮ್ಯಾ ಟ್ಯಾಕ್ಸಿಯಲ್ಲಿ ಬಂದರು. ಭೇಟಿ ನಂತರ ಅವರು ಆಟೋರಿಕ್ಷಾ ಹಿಡಿದು ತಮ್ಮ ಮನೆಗೆ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.