ADVERTISEMENT

ಮತ್ತೊಬ್ಬ ಆರೋಪಿ ಸಿಐಡಿ ಬಲೆಗೆ

ಡಿವೈಎಸ್‌ಪಿ ಕಲ್ಲಪ್ಪ ಹಂಡಿಬಾಗ ಆತ್ಮಹತ್ಯೆ– ತೇಜಸ್‌ ಅಪಹರಣ ಪ್ರಕರಣ

​ಪ್ರಜಾವಾಣಿ ವಾರ್ತೆ
Published 29 ಜುಲೈ 2016, 19:30 IST
Last Updated 29 ಜುಲೈ 2016, 19:30 IST
ವಿಜಯ್‌ಕುಮಾರ್‌ ಅಲಿಯಾಸ್‌ ಕರಡಿ
ವಿಜಯ್‌ಕುಮಾರ್‌ ಅಲಿಯಾಸ್‌ ಕರಡಿ   

ಚಿಕ್ಕಮಗಳೂರು: ಡಿವೈಎಸ್‌ಪಿ ಕಲ್ಲಪ್ಪ ಹಂಡಿಬಾಗ ಆತ್ಮಹತ್ಯೆ ಮತ್ತು ತೇಜಸ್‌ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನು ಸಿಐಡಿ ಪೊಲೀಸರು ಶುಕ್ರವಾರ ಬೆಳಿಗ್ಗೆ ಬೆಂಗಳೂರಿನಲ್ಲಿ ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ. ಪ್ರಕರಣದಲ್ಲಿ ಬಂಧಿತ ಆರೋಪಿಗಳ ಸಂಖ್ಯೆ 8ಕ್ಕೆ ಏರಿದೆ.

ಬೆಂಗಳೂರಿನ ವಿದ್ಯಾರಣ್ಯಪುರ ದೊಡ್ಡಬೊಮ್ಮಸಂದ್ರದ ವಾಸಿ ವಿಜಯ್‌ಕುಮಾರ್‌ (22) ಬಂಧಿತ ಆರೋಪಿ. ಈತ ಪೇಂಟಿಂಗ್‌ ವೃತ್ತಿ ಮಾಡುತ್ತಿದ್ದ. ಪ್ರಕರಣದ ಪ್ರಮುಖ ಸೂತ್ರಧಾರ, ತಲೆಮರೆಸಿಕೊಂಡಿರುವ ಆರೋಪಿ ಖಾಂಡ್ಯ ಪ್ರವೀಣ್‌ ಜತೆ ಸೇರಿ ತೇಜಸ್‌ ಅಪಹರಣದಲ್ಲಿ ಭಾಗಿಯಾಗಿದ್ದ. ಆರೋಪಿ ವಿರುದ್ಧ ನಗರದ ಬಸವನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ಶನಿವಾರ ನಗರಕ್ಕೆ ಕರೆತಂದು, ನಂತರ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ ಎಂದು ತನಿಖಾ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಮೂವರು ಆರೋಪಿಗಳು ನ್ಯಾಯಾಂಗ ವಶಕ್ಕೆ:  ಬೆಂಗಳೂರಿನಲ್ಲಿ ಗುರುವಾರ ಬಂಧಿಸಿದ್ದ  ಜೀವ, ಯಶಸ್‌ ಹಾಗೂ ಕೀರ್ತಿ ಎಂಬ ಮೂವರು ಆರೋಪಿಗಳನ್ನು ಸಿಐಡಿ ಡಿವೈಎಸ್‌ಪಿ ಧರಣೇಶ್‌ ನೇತೃತ್ವದ ತನಿಖಾ ತಂಡ ಶುಕ್ರವಾರ ನಗರಕ್ಕೆ ಕರೆತಂದಿತು. ಪೊಲೀಸ್‌ ಅತಿಥಿ ಗೃಹದಲ್ಲಿ ಆರೋಪಿಗಳನ್ನು ತೀವ್ರ ವಿಚಾರಣೆ ನಡೆಸಿತು.

ಅಪಹರಣಕ್ಕೆ ಒಳಗಾಗಿದ್ದ ದೂರುದಾರ ತೇಜಸ್‌ನನ್ನು ವಿಚಾರಣೆ ನಡೆಸಿ, ಹೇಳಿಕೆ ದಾಖಲಿಸಿಕೊಳ್ಳಲಾಯಿತು. ನಂತರ ಮೂವರು ಆರೋಪಿಗಳನ್ನು 2ನೇ ಹೆಚ್ಚುವರಿ ಜಿಲ್ಲಾ ಪ್ರಧಾನ ಸೆಷನ್ಸ್‌ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ನ್ಯಾಯಾಧೀಶ ಕಂಬೇಗೌಡ ಅವರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದರು ಎಂದು ಮೂಲಗಳು ತಿಳಿಸಿವೆ.
ತಲೆಮರೆಸಿಕೊಂಡಿರುವ ಆರೋಪಿಗಳಾದ ಖಾಂಡ್ಯ ಪ್ರವೀಣ್‌, ನವೀನ್‌ಶೆಟ್ಟಿ ಹಾಗೂ ಸಹಚರರ ಬಂಧನಕ್ಕೆ ಸಿಐಡಿ ತೀವ್ರ ಶೋಧ ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.