ADVERTISEMENT

ಮಯೂರ ಕನ್ನಡ ಪ್ರತಿಭಾನ್ವೇಷಣೆ ರಾಜ್ಯ ಮಟ್ಟದ ಸ್ಪರ್ಧೆ 27ಕ್ಕೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2017, 19:30 IST
Last Updated 24 ಜುಲೈ 2017, 19:30 IST
ಮಯೂರ ಕನ್ನಡ ಪ್ರತಿಭಾನ್ವೇಷಣೆ ರಾಜ್ಯ ಮಟ್ಟದ ಸ್ಪರ್ಧೆ 27ಕ್ಕೆ
ಮಯೂರ ಕನ್ನಡ ಪ್ರತಿಭಾನ್ವೇಷಣೆ ರಾಜ್ಯ ಮಟ್ಟದ ಸ್ಪರ್ಧೆ 27ಕ್ಕೆ   

ಬೆಂಗಳೂರು: ಮಕ್ಕಳಲ್ಲಿ ಕನ್ನಡ ಭಾಷಾ ಜ್ಞಾನವನ್ನು ಒರೆಗೆ ಹಚ್ಚುವ ಉದ್ದೇಶದಿಂದ ಶಿರಾಳಕೊಪ್ಪದ ಕನ್ನಡ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ರಾಜ್ಯದಾದ್ಯಂತ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗೆ ನಡೆಸುತ್ತಿರುವ 2016 ನೇ ಸಾಲಿನ ‘ಮಯೂರ ಕನ್ನಡ ಪ್ರತಿಭಾನ್ವೇಷಣೆ’ ಪರೀಕ್ಷೆಯ ರಾಜ್ಯಮಟ್ಟದ ಆಯ್ಕೆ ಸ್ಪರ್ಧೆ ಜುಲೈ 27 ರಂದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಸಾಂಸ್ಕೃತಿಕ ಭವನದಲ್ಲಿ ಜರುಗಲಿದೆ.

ರಾಜ್ಯದ 21 ಜಿಲ್ಲೆಗಳಿಂದ 2,000 ಮಕ್ಕಳು ಈ ಪರೀಕ್ಷೆಯ ಪ್ರಾಥಮಿಕ ಸುತ್ತುಗಳಲ್ಲಿ ಭಾಗವಹಿಸಿದ್ದು, ಅಂತಿಮ ಸುತ್ತಿಗೆ ಎರಡು ವಿಭಾಗದಲ್ಲಿ ತಲಾ 40 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ಕದಂಬ ಸಾಮ್ರಾಜ್ಯದ ಸ್ಥಾಪಕ ಮಯೂರವರ್ಮನ ಹೆಸರಿನಲ್ಲಿ ನಡೆಯುತ್ತಿರುವ ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸುವ ವಿದ್ಯಾರ್ಥಿಗೆ ‘ಮಯೂರ ಅಕ್ಷರವೀರ ಪ್ರಶಸ್ತಿ’ ಹಾಗೂ ₹1 ಲಕ್ಷ ನಗದು ಪುರಸ್ಕಾರ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದವರಿಗೆ ಕ್ರಮವಾಗಿ ₹50 ಸಾವಿರ ಹಾಗೂ ₹25 ಸಾವಿರ ನಗದು ಪುರಸ್ಕಾರ ನೀಡಲಾಗುತ್ತದೆ. ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಮಕ್ಕಳಿಗೆ ಪ್ರತ್ಯೇಕವಾಗಿ ಬಹುಮಾನ ನೀಡಲಾಗುವುದು.

ADVERTISEMENT

ಈ ಪರೀಕ್ಷೆಯಲ್ಲಿ ಪಾಲ್ಗೊಂಡ  ಮಕ್ಕಳಿಗೂ ಯುನೈಟೆಡ್ ಇಂಡಿಯಾ ಕಂಪೆನಿಯ ಸಹಕಾರದೊಂದಿಗೆ ₹ 1 ಲಕ್ಷ ಮೌಲ್ಯದ ವಿಮೆ ಸೌಲಭ್ಯ  ಕಲ್ಪಿಸಲಾಗಿದೆ.
ತೀರ್ಪುಗಾರರಾಗಿ ಕಾದಂಬರಿಕಾರ ಕುಂ.ವೀರಭದ್ರಪ್ಪ, ಮಕ್ಕಳ ಸಾಹಿತಿ ನಾ.ಡಿಸೋಜ ಭಾಗವಹಿಸಲಿದ್ದಾರೆ.

‘ಡ್ರಾಮಾ ಜ್ಯೂನಿಯರ್’ ಖ್ಯಾತಿಯ ಬಾಲ ಕಲಾವಿದ ಪ್ರಣೀತ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ  ಶಾಸಕರಾದ ಕಿಮ್ಮನೆ ರತ್ನಾಕರ್, ಶಾಸಕ ಬಿ.ವೈ.ರಾಘವೇಂದ್ರ ಪಾಲ್ಗೊಳ್ಳಲಿದ್ದಾರೆ.  ಕಾರ್ಯಕ್ರಮಕ್ಕೆ ‘ಪ್ರಜಾವಾಣಿ’ ಪತ್ರಿಕೆ,  ‘ಕಿಯೊನಿಕ್ಸ್’,  ‘ಈ ನೆಟ್ ಸಂಸ್ಥೆ’ಗಳು ಮಾಧ್ಯಮ ಸಹಯೋಗ ನೀಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.