ADVERTISEMENT

ಮಳೆ ಕೊರತೆಯಿಂದ ಬಿತ್ತನೆ ತೀವ್ರ ಕುಂಠಿತ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2015, 6:44 IST
Last Updated 2 ಆಗಸ್ಟ್ 2015, 6:44 IST

ಬೆಂಗಳೂರು: ಜುಲೈಯಲ್ಲಿ ರಾಜ್ಯದಲ್ಲಿಶೇ 47ರಷ್ಟು ಮಳೆ ಕೊರತೆಯಾಗಿದೆ. ಇದರಿಂದ ಅರ್ಧದಷ್ಟು ಪ್ರದೇಶಗಳಲ್ಲಿ ಬರದ ಛಾಯೆ ಆವರಿಸಿದ್ದು, ಬಿತ್ತನೆ ಗಣನೀಯವಾಗಿ ಕಡಿಮೆಯಾಗಿದೆ.

ಜೂನ್‌ನಿಂದ ಜುಲೈ 31ರ ವರೆಗೆ 474.40 ಮಿ.ಮೀ. ವಾಡಿಕೆಯ ಮಳೆಯಾಗಬೇಕಿತ್ತು.  ಆದರೆ 341.04 ಮಿ.ಮೀ. ಮಾತ್ರ ಮಳೆಯಾಗಿದೆ. 95 ತಾಲ್ಲೂಕುಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. 21 ತಾಲ್ಲೂಕುಗಳಲ್ಲಿ ಅತ್ಯಲ್ಪ ಮಳೆಯಾಗಿದೆ.

ರಾಜ್ಯದಲ್ಲಿ ಈ ವರ್ಷ 73 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಇರಿಸಿ ಕೊಳ್ಳಲಾಗಿದೆ. ಆದರೆ, ಜುಲೈ ಅಂತ್ಯದವರೆಗೆ 37.62 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ (ಶೇ 52) ಮಾತ್ರ ಬಿತ್ತನೆಯಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ 44.52 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಕೃಷಿ ಇಲಾಖೆಯ ಲೆಕ್ಕಾಚಾರದ ಪ್ರಕಾರ ಶೇ 82ರಷ್ಟು ಪ್ರದೇಶದಲ್ಲಿ ಬಿತ್ತನೆಯಾಗಬೇಕಿತ್ತು.

ಕೆಲವು ಜಿಲ್ಲೆಗಳಲ್ಲಿ ಮಳೆಯ ಕೊರತೆಯಿಂದ ಮಳೆಯಾಶ್ರಿತ ಬಿತ್ತನೆ ಸ್ಥಗಿತಗೊಂಡಿದೆ. ಒಂದು ತಿಂಗಳಿಂದ ಸರಿಯಾಗಿ ಮಳೆ ಬೀಳದ ಕಾರಣ ಹಲವು ಕಡೆ ಹೆಸರು, ಉದ್ದು, ಜೋಳ, ಮುಸುಕಿನ ಜೋಳ, ತೊಗರಿ, ಸೂರ್ಯಕಾಂತಿ, ಶೇಂಗಾ, ಹತ್ತಿ ಇತ್ಯಾದಿ ಬೆಳೆಗಳು ಮುರುಟಿ ಹೋಗಲಾರಂಭಿಸಿವೆ.

ರಾಜ್ಯದಲ್ಲಿ ಜೂನ್‌ನಲ್ಲಿ ವಾಡಿಕೆಗಿಂತ ಜಾಸ್ತಿ (ಶೇ 8) ಮಳೆಯಾಗಿತ್ತು. 197.1 ಮಿ.ಮೀ. ವಾಡಿಕೆಯ ಮಳೆಯಾಗಬೇಕಿತ್ತು. ಪ್ರತಿಯಾಗಿ 213.4 ಮಿ.ಮೀ. ಮಳೆಯಾಗಿತ್ತು. ಜುಲೈಯಲ್ಲಿ ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ದಕ್ಷಿಣ ಒಳನಾಡಿನ ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ಹೊರತುಪಡಿಸಿ ವಾಡಿಕೆಯ ಅರ್ಧದಷ್ಟೂ ಮಳೆಯಾಗಿಲ್ಲ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಶೇ 70ಕ್ಕೂ ಅಧಿಕ ಮಳೆ ಕೊರತೆ ಉಂಟಾಗಿದೆ.

ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಜೂನ್‌ನಲ್ಲಿ ವಾಡಿಕೆಗಿಂತ ಶೇ 54ಷ್ಟು ಹೆಚ್ಚು ಮಳೆಯಾಗಿತ್ತು. ಜುಲೈನಲ್ಲಿ ಇದಕ್ಕೆ ತದ್ವಿರುದ್ಧ ಪರಿಸ್ಥಿತಿ ಇದೆ. ಈ ಜಿಲ್ಲೆಗಳಲ್ಲಿ ಶೇ 48ರಷ್ಟು ಮಳೆ ಕೊರತೆ ಉಂಟಾಗಿದೆ.

‘ಕಳೆದ 2 ತಿಂಗಳಲ್ಲಿ ಶೇ22ರಷ್ಟು ಮಳೆ ಕೊರತೆಯಾಗಿದೆ. ಎಲ್‌ನಿನೊ ಉಷ್ಣ ಮಾರುತಗಳಿಂದಾಗಿ ಮುಂಗಾರಿನಲ್ಲಿ ಮಳೆ ಅಭಾವದ ಆತಂಕ ಎದುರಾಗಿತ್ತು. ಆದರೆ ಜೂನ್‌ನಲ್ಲಿ ಸಾಕಷ್ಟು ಮಳೆಯಾಗಿದೆ. ಜುಲೈನಲ್ಲಿ ಮಳೆ ಕೊರತೆ ಉಂಟಾಗಿದೆ’ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದರು. 

ಅಲ್ಪಾವಧಿ ಬೆಳೆಗೆ ಸಲಹೆ: ‘ಕಳೆದ 2–3 ದಿನಗಳಿಂದ ಬೆಂಗಳೂರು ಹಾಗೂ ಆಸುಪಾಸಿನ ನಾಲ್ಕೈದು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುತ್ತಿದೆ. ವಾರದಲ್ಲಿ ಉತ್ತಮ ಮಳೆಯ ನಿರೀಕ್ಷೆ ಇದೆ. ಹೀಗಾಗಿ ಈ ಭಾಗಗಳಲ್ಲಿ ರಾಗಿ ಮತ್ತಿತರ ದೀರ್ಘಾವಧಿ ಬೆಳೆಗಳ ಬಿತ್ತನೆಗೆ ಅವಕಾಶ ಇದೆ’ ಎಂದು ಬೆಂಗಳೂರು ಕೃಷಿ ವಿವಿಯ ಹವಾಮಾನ ತಜ್ಞ ಎಂ.ಬಿ. ರಾಜೇಗೌಡ ತಿಳಿಸಿದರು.

ಬಿತ್ತನೆ ಬೀಜಕ್ಕೂ ಬೇಡಿಕೆ ಇಳಿಮುಖ:  ‘ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಬೀಜದ ಬೇಡಿಕೆ 10.73 ಲಕ್ಷ ಕ್ವಿಂಟಲ್‌ ಇದೆ. ಈ ವರೆಗೆ 3.32 ಲಕ್ಷ ಕ್ವಿಂಟಲ್‌ ಬಿತ್ತನೆ ಬೀಜಗಳನ್ನು ರೈತರಿಗೆ ರಿಯಾಯಿತಿ ದರದಲ್ಲಿ ವಿತರಿಸಲಾಗಿದೆ’ ಎಂದು ಕೃಷಿ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
*
ಎರಡನೇ ವಾರ ಉತ್ತಮ ಮಳೆ
ಕಳೆದೆರಡು ದಿನಗಳಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯಾಗುತ್ತಿದೆ.  ಆಗಸ್ಟ್‌ ಎರಡನೇ ವಾರದಲ್ಲಿ ಉತ್ತಮ ಮಳೆಯಾಗಲಿದೆ.
- ‌ಗೀತಾ ಅಗ್ನಿಹೋತ್ರಿ,
ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರದ ನಿರ್ದೇಶಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT