ADVERTISEMENT

ಮಳೆ: ಮೂವರ ಸಾವು

​ಪ್ರಜಾವಾಣಿ ವಾರ್ತೆ
Published 6 ಮೇ 2016, 19:30 IST
Last Updated 6 ಮೇ 2016, 19:30 IST
ಮೈಸೂರಿನ ಕಾಳಿದಾಸ ರಸ್ತೆಯಲ್ಲಿ ಹೋಟೆಲ್‌ ಗೋಡೆಯೊಂದು ಕುಸಿದ ಪರಿಣಾಮ ಕಾರು ಜಖಂಗೊಂಡಿರುವುದು  ಪ್ರಜಾವಾಣಿ ಚಿತ್ರ
ಮೈಸೂರಿನ ಕಾಳಿದಾಸ ರಸ್ತೆಯಲ್ಲಿ ಹೋಟೆಲ್‌ ಗೋಡೆಯೊಂದು ಕುಸಿದ ಪರಿಣಾಮ ಕಾರು ಜಖಂಗೊಂಡಿರುವುದು ಪ್ರಜಾವಾಣಿ ಚಿತ್ರ   

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಶುಕ್ರವಾರ ಗುಡುಗು ಸಹಿತ ಆಲಿಕಲ್ಲು ಮಳೆಯಾಗಿದೆ.

ಸಿಡಿಲು ಬಡಿದು ಶಿರಾ ತಾಲ್ಲೂಕಿನ ಗುಡೇನಹಳ್ಳಿ ಗ್ರಾಮದ ಬಸವರಾಜು (22) ಹಾಗೂ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಕುರಬತ್ತಹಳ್ಳಿಯಲ್ಲಿ ಅನಸೂಯಾಬಾಯಿ ಹುಸನಪ್ಪ ದೊಡ್ಡಮನಿ (70) ಮೃತಪಟ್ಟಿದ್ದಾರೆ.  ಕೊಡಗು ಜಿಲ್ಲೆ ನಾಪೋಕ್ಲು ಬಳಿ ಮರ ಮುರಿದು ಬಿದ್ದು ನಾರಾಯಣ ಶೆಟ್ಟಿ (67) ಎಂಬುವವರು ಸಾವಿಗೀಡಾಗಿದ್ದಾರೆ.

ಕೊಡಗು, ಮೈಸೂರು, ಮಂಡ್ಯ, ರಾಮನಗರ, ಬಳ್ಳಾರಿ, ವಿಜಯಪುರ, ಕಲಬುರ್ಗಿ, ರಾಯಚೂರು ಜಿಲ್ಲೆಯ ಹಲವೆಡೆ ಮಳೆಯಾಗಿದೆ.
ಬಿಸಿಲ ಬೇಗೆಯಿಂದ ತತ್ತರಿಸಿದ್ದ ಬೆಂಗಳೂರು ನಗರದಲ್ಲಿ ಶುಕ್ರವಾರ ಆಲಿಕಲ್ಲು ಸಹಿತ ಧಾರಾಕಾರ ಮಳೆ ಸುರಿಯಿತು.

ಸಂಜೆ 4 ಗಂಟೆಗೆ ಆರಂಭವಾದ ಮಳೆ 7 ಗಂಟೆಯವರೆಗೆ ಸುರಿಯಿತು. ನಗರದಲ್ಲಿ 44 ಮಿ.ಮೀ ಮಳೆಯಾಗಿದೆ. ಎಚ್‌.ಎ.ಎಲ್‌ ವಿಮಾನ ನಿಲ್ದಾಣ ವ್ಯಾಪ್ತಿಯಲ್ಲಿ 15.6  ಹಾಗೂ ಕೆಂಪೇಗೌಡ ವಿಮಾನ ನಿಲ್ದಾಣ ವ್ಯಾಪ್ತಿಯಲ್ಲಿ 1.6 ಮಿ.ಮೀ ಮಳೆಯಾಗಿದೆ.

ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಇನ್ನೂ ಎರಡು ದಿನ  ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಕೆಲವೆಡೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸುಂದರ್‌ ಮೇತ್ರಿ ಹೇಳಿದರು.

200ಕ್ಕೂ ಹೆಚ್ಚು ಗುಡಿಸಲುಗಳಿಗೆ ಹಾನಿ: ಗುಡುಗು–ಸಿಡಿಲು ಸಹಿತ ಆಲಿಕಲ್ಲು ಮಳೆ
ರಾಜ್ಯದ ವಿವಿಧೆಡೆ ಗುಡುಗು–ಸಿಡಿಲು, ಬಿರುಗಾಯಿಂದ ಕೂಡಿದ ಆಲಿಕಲ್ಲು ಮಳೆಯಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಜೋರು ಮಳೆಯಾಗಿದೆ. ತುರುವೇಕೆರೆ ತಾಲ್ಲೂಕಿನ ಆಯರಹಳ್ಳಿಯಲ್ಲಿ 5 ಮೇಕೆಗಳು ಸಿಡಿಲಿಗೆ ಬಲಿಯಾಗಿವೆ. ಘಟನೆಯಲ್ಲಿ ಮಹಾಲಕ್ಷ್ಮಮ್ಮ ಅವರು ತೀವ್ರ ಆಘಾತಕ್ಕೆ ಒಳಗಾಗಿದ್ದು, ಅವರನ್ನು ತುರುವೇಕೆರೆ ಪಟ್ಟಣದ ಆಸ್ಪತ್ರೆಗೆ ದಾಖಲಿಸಲಾಗಿದೆ.
ತುಮಕೂರು ತಾಲ್ಲೂಕಿನ ಹೆಬ್ಬೂರು, ಗುಬ್ಬಿ ಪಟ್ಟಣದಲ್ಲಿ ಆಲಿಕಲ್ಲು ಮಳೆಯಾಗಿದೆ.  ನಂದಿಹಳ್ಳಿಯಲ್ಲಿ 13 ಮಿ.ಮೀ ಮಳೆ ಬಿದ್ದಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ  ಬಾಗೇಪಲ್ಲಿ ತಾಲ್ಲೂಕಿನ  ಬಿಳ್ಳೂರು ಸಮೀಪದ ಬಂಡಿಕಿಂದಪಲ್ಲಿ ಗ್ರಾಮದಲ್ಲಿ  ಸಿಡಿಲು ಬಡಿದು ಗುಡಿಸಲಿಗೆ ಹಾನಿಯಾಗಿದೆ.
ಚಿಕ್ಕಬಳ್ಳಾಪುರ ಮತ್ತು ಚಿಂತಾಮಣಿ ತಾಲ್ಲೂಕಿನಲ್ಲಿ ಮಳೆಯಾಗಿದೆ.

ಬಳ್ಳಾರಿ ಮತ್ತು ವಿಜಯಪುರ ಜಿಲ್ಲೆಯಲ್ಲಿ ಶುಕ್ರವಾರ ಮಳೆಯಾಗಿದೆ.

ಬಳ್ಳಾರಿ ಸೇರಿದಂತೆ ಜಿಲ್ಲೆಯ ಕೂಡ್ಲಿಗಿ ಹೊಸಪೇಟೆ ತಾಲ್ಲೂಕಿನಲ್ಲಿ  ಉತ್ತಮ ಮಳೆಯಾಗಿದೆ.  ಮರಿಯಮ್ಮನಹಳ್ಳಿ, ಕಂಪ್ಲಿ ಮತ್ತು ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ವಿವಿಧೆಡೆ ಗುರುವಾರ ತಡರಾತ್ರಿ ಬಿರುಸಿನ ಮಳೆಯಾಗಿದೆ.  ಹಗರಿ ಬೊಮ್ಮನಹಳ್ಳಿ ಹೋಬಳಿಯಲ್ಲಿ 24.8 ಮಿ.ಮೀ ಮಳೆಯಾಗಿದೆ. ಕಂಪ್ಲಿಯಲ್ಲಿ ಬಿರುಗಾಳಿ ಸಹಿತ ಮಳೆಗೆ ಸುಮಾರು 200ಕ್ಕೂ ಹೆಚ್ಚು ಗುಡಿಸಲುಗಳಿಗೆ ಹಾನಿಯಾಗಿದೆ.

ಹಗರಿಬೊಮ್ಮನಹಳ್ಳಿ ತಹಶೀಲ್ದಾರ್‌ ಕಚೇರಿಗೆ ಗುರುವಾರ ರಾತ್ರಿ ಸಿಡಿಲು ಬಡಿದು ಸಂಭವಿಸಿದ ವಿದ್ಯುತ್ ಅವಘಡದಲ್ಲಿ ಚುನಾವಣೆ ದಾಖಲೆಗಳು, ಕಂಪ್ಯೂಟರ್‌ ಮತ್ತು ವಿವಿಧ ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿವೆ.

ವಿಜಯಪುರ ಜಿಲ್ಲೆಯ ತಾಳಿಕೋಟೆ , ಅಡವಿಸೋಮನಾಳ, ಖ್ಯಾತನಡೋಣಿ, ಮೂಕಿಹಾಳ, ಹಡಗಿನಾಳ  ಸೇರಿದಂತೆ ವಿವಿಧೆಡೆ ಉತ್ತಮ ಮಳೆಯಾಗಿದೆ.  
ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಕೋಡ್ಲಿಯಲ್ಲಿ ಎತ್ತು ಮತ್ತು ಹೋರಿ, ಅಫಜಲಪುರ ತಾಲ್ಲೂಕಿನ ಹಳಿಯಾಳದಲ್ಲಿ ಏಳು ಕುರಿಗಳು ಸಿಡಿಲಿಗೆ ಬಲಿಯಾಗಿವೆ.

ಚಿಂಚೋಳಿ ತಾಲ್ಲೂಕಿನ ನಾವದಗಿ ಮತ್ತು ಹೊಸಳ್ಳಿ (ಎಚ್) ಮಧ್ಯೆ 25 ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಅಲ್ಲಲ್ಲಿ ಮರಗಳು ಉರುಳಿ ಬಿದ್ದಿದ್ದು, ಮನೆಯ ಮೇಲಿನ ಜಿಂಕ್ ಶೀಟ್‌ ಹಾರಿಹೋಗಿವೆ. ಕೆಲವೆಡೆ ಬಾಳೆ, ಪಪ್ಪಾಯಿ ಗಿಡಗಳಿಗೆ ಹಾನಿಯಾಗಿದೆ.

ಕಲಬುರ್ಗಿ ನಗರದಲ್ಲಿ ಸಂಜೆ ಮಳೆಯಾಗಿದೆ. ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ಭಾರಿ ಗಾಳಿ, ಗುಡುಗು ಸಹಿತ ಮಳೆಗೆ 250 ಕೆ.ವಿ ಸಾಮರ್ಥ್ಯದ ವಿದ್ಯುತ್ ಪರಿವರ್ತಕ ಸುಟ್ಟ ಪರಿಣಾಮ ಬುಧವಾರ ರಾತ್ರಿಯಿಂದ ಶುಕ್ರವಾರ ಮಧ್ಯಾಹ್ನ ವರೆಗೆ 40 ತಾಸು ವಿದ್ಯುತ್‌ ಸ್ಥಗಿತ ಗೊಂಡಿತ್ತು. ಕುಷ್ಟಗಿ ಸೇರಿದಂತೆ ತಾಲ್ಲೂಕಿನ ಅನೇಕ ಕಡೆ ಆಲಿಕಲ್ಲು ಸಹಿತ ಮಳೆ ಸುರಿದಿದೆ.

ಯಾದಗಿರಿ ವರದಿ ಜಿಲ್ಲೆ ಸುರಪುರ ತಾಲ್ಲೂಕಿನ ಕಾಚಾಪುರದಲ್ಲಿ ಆಲಿಕಲ್ಲು ಸಹಿತ ಮಳೆ ಸುರಿದು ಪಪ್ಪಾಯಿ ತೋಟಕ್ಕೆ ಹಾನಿಯಾಗಿದೆ. ಕಕ್ಕೇರಾದಲ್ಲಿ 30ಕ್ಕೂ ಹೆಚ್ಚು ವಿದ್ಯುತ್ ಕಂಬಗಳು, ಮರಗಳು ಮುರಿದು ಬಿದ್ದಿವೆ.

ಇಲವಾಲದಲ್ಲಿ ಮಳೆ: ಮೈಸೂರು ಜಿಲ್ಲೆಯಲ್ಲಿ ಪೂರ್ವ ಮುಂಗಾರು ಮಳೆ ಉತ್ತಮವಾಗಿ ಸುರಿಯುತ್ತಿದ್ದು, ತಾಲ್ಲೂಕಿನ ಇಲವಾಲದಲ್ಲಿ 16.5 ಮಿ.ಮೀ ಮಳೆಯಾಗಿದೆ. ತಿ.ನರಸೀಪುರ ತಾಲ್ಲೂಕಿನ ಬನ್ನೂರು ಹೋಬಳಿಯಲ್ಲಿ 14 ಮಿ.ಮೀ, ಎಚ್.ಡಿ.ಕೋಟೆಯ ಅಂತರಸಂತೆ, ಮೈಸೂರು ತಾಲ್ಲೂಕಿನ ಬೆಳವಾಡಿಯಲ್ಲಿ 13 ಮಿ.ಮೀ, ನಾಗನ ಹಳ್ಳಿಯಲ್ಲಿ 12 ಮಿ.ಮೀ, ಹುಣಸೂರು ಬಳಿ 8 ಮಿ.ಮೀ ಮಳೆಯಾಗಿದೆ. ಕೆ.ಆರ್‌.ನಗರ ತಾಲ್ಲೂಕಿನ ಸುತ್ತಮುತ್ತ 5 ಮಿ.ಮೀ ಹಾಗೂ ನಂಜನಗೂಡು ತಾಲ್ಲೂಕಿನಲ್ಲಿ ತುಂತುರು ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT