ADVERTISEMENT

ಮಳೆ: 10 ಮಂದಿ ಬಲಿ

ಹೈದರಾಬಾದ್‌ ಕರ್ನಾಟಕದಲ್ಲಿ ಸಿಡಿಲಿಗೆ ಏಳು ಜನರ ಸಾವು

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2015, 20:14 IST
Last Updated 4 ಅಕ್ಟೋಬರ್ 2015, 20:14 IST

ಬೆಂಗಳೂರು: ರಾಜ್ಯದ ವಿವಿಧೆಡೆ ಶನಿವಾರ ರಾತ್ರಿ ಹಾಗೂ ಭಾನುವಾರ ಮಳೆಯಾಗಿದ್ದು, ಮಳೆ ಸಂಬಂಧ ಅವಘಡಗಳಲ್ಲಿ ನಾಲ್ವರು ಮಹಿಳೆಯರು ಸೇರಿದಂತೆ 10 ಮಂದಿ ಮೃತಪಟ್ಟಿದ್ದಾರೆ.

ಹೈದರಾಬಾದ್‌ ಕರ್ನಾಟಕದಲ್ಲಿ ಸಿಡಿಲು ಬಡಿದು ಐವರು ಮೃತಪಟ್ಟಿದ್ದಾರೆ. ನವಲಗುಂದ ತಾಲ್ಲೂಕಿನ ಮೊರಬದ ಬಳಿಯ ತುಪ್ಪರಿ ಹಳ್ಳದಲ್ಲಿ ರೈತರೊಬ್ಬರು ಎತ್ತಿನ ಜೊತೆಗೆ ಕೊಚ್ಚಿಕೊಂಡು ಹೋಗಿದ್ದಾರೆ.

ಚಿತ್ರದುರ್ಗ ತಾಲ್ಲೂಕಿನಲ್ಲಿ ಮನೆಗೋಡೆ ಕುಸಿದು ಮಹಿಳೆ ಅಸುನೀಗಿ ದ್ದಾರೆ. ಮಹಿಳೆಯೊಬ್ಬರು ಹಳ್ಳದಲ್ಲಿ ಕೊಚ್ಚಿಕೊಂಡುಹೋದ ಘಟನೆ ಹರಪನ ಹಳ್ಳಿ ತಾಲ್ಲೂಕಿನ ಬೆಣ್ಣಿಹಳ್ಳಿಯಲ್ಲಿ ನಡೆದಿದೆ. ಹೈದರಾಬಾದ್ ಕರ್ನಾಟಕ ಜಿಲ್ಲೆಗಳಲ್ಲಿ ಕೆಲವೆಡೆ ಭಾನುವಾರ ಗುಡುಗು ಸಹಿತ ಮಳೆ ಸುರಿದಿದೆ. ಕಲಬುರ್ಗಿ ಜಿಲ್ಲೆಯಲ್ಲಿ ಮೂವರು, ಯಾದಗಿರಿಯಲ್ಲಿ ಓರ್ವ ಹಾಗೂ ಸಿಂಧನೂರಿನಲ್ಲಿ ಓರ್ವ ಯುವಕ ಮೃತರಾಗಿದ್ದಾರೆ. 

ಜೇವರ್ಗಿ ತಾಲ್ಲೂಕಿನ ಕೊಂಡಗುಳಿ ಗ್ರಾಮದ ಶರಣಗೌಡ ಪೊಲೀಸ್‌ ಪಾಟೀಲ (58), ಅಫಜಲಪುರ ತಾಲ್ಲೂಕಿನ ಹಳ್ಯಾಳ ಗ್ರಾಮದ ಬಸವರಾಜ ಅತನೂರ (25), ರಾಗಿಣಿ ಅತನೂರ (20), ಯಾದಗಿರಿ ತಾಲ್ಲೂಕಿನ ಮುಂಡರಗಿ ಗ್ರಾಮದ ಹಣಮಂತ ಕ್ವಾಟೇರ್ (18), ಕುಷ್ಟಗಿ ತಾಲ್ಲೂಕಿನ ಕನ್ನಾಳ ಗ್ರಾಮದ ಸೋಮನಾಥ ಯಂಕಪ್ಪ (17) ಸಿಡಿಲಿಗೆ ಬಲಿಯಾದವರು.

ಇಬ್ಬರು ಮಹಿಳೆಯರ ಸಾವು: ಶಹಾ ಬಾದ ಸಮೀಪದ ಹೊನಗುಂಟಾ ಗ್ರಾಮದ ಹೊಲದಲ್ಲಿ ಭಾನುವಾರ ಸಂಜೆ ಕೆಲಸ ಮಾಡುತ್ತಿದ್ದಾಗ ಸಿಡಿಲಿಗೆ ಅತ್ತೆ ಮತ್ತು ಸೊಸೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅತ್ತೆ  ಚಂದಮ್ಮಾ ಸಿದ್ದಪ್ಪ ಆಡಿನ್ (51), ಹಿರಿಯ ಸೊಸೆ ಸಕ್ಕುಬಾಯಿ ಬಾಬು ಆಡಿನ್(27) ಮೃತರು.

ಕೊಪ್ಪಳ ಜಿಲ್ಲೆ ಕುಷ್ಠಗಿ ತಾಲ್ಲೂಕಿನಾದ್ಯಂತ ವಿವಿಧೆಡೆ ಭಾರಿ ಮಳೆ ಸುರಿದಿದ್ದು, ತಗ್ಗು ಪ್ರದೇಶಗಳಲ್ಲಿರುವ ಜಮೀನುಗಳು ಜಲಾವೃತಗೊಂಡಿದ್ದವು. ಶಾಖಾಪುರ ಗ್ರಾಮದ ಹಳ್ಳ ತುಂಬಿ ಹೆದ್ದಾರಿ ಮೇಲೆ ಹರಿದಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಯಿತು. ಗ್ರಾಮದ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೂ ನೀರು ನುಗಿದ್ದರಿಂದ ಜನಜೀವನ ಅಸ್ತವ್ಯಸ್ತಗೊಂಡಿತ್ತು. ತಾವರಗೇರಾ, ಹನುಮಸಾಗರ ಹೋಬಳಿ ವ್ಯಾಪ್ತಿಯ ಗ್ರಾಮಗಳ ಕೆರೆಗಳು, ಚೆಕ್‌ಡ್ಯಾಮ್‌ಗಳು ಸಂಪೂರ್ಣ ಭರ್ತಿಯಾಗಿವೆ.

ಹಳ್ಳದಲ್ಲಿ ಕೊಚ್ಚಿಹೋದ ರೈತ: ಉತ್ತರ ಕರ್ನಾಟಕದಾದ್ಯಂತ ಭಾನುವಾರ ಮಳೆಯಾಗಿದ್ದು, ಧಾರವಾಡ ಜಿಲ್ಲೆ ನವಲಗುಂದ ತಾಲ್ಲೂಕಿನ ಮೊರಬದ ಬಳಿಯ ತುಪ್ಪರಿ ಹಳ್ಳದಲ್ಲಿ ರೈತರೊಬ್ಬರು ಎತ್ತಿನ ಜೊತೆಗೆ ಕೊಚ್ಚಿಕೊಂಡು ಹೋಗಿದ್ದಾರೆ. ಫಕೀರಪ್ಪ ಡೊಳ್ಳಿನ (62) ನೀರಿನ ಸೆಳವಿನಲ್ಲಿ ಕೊಚ್ಚಿ ಹೋಗಿದ್ದು, ಅವರಿಗಾಗಿ ಶೋಧಕಾರ್ಯ ಮುಂದುವರಿದಿದೆ. ಒಂದು ಎತ್ತು ಮಾತ್ರ ಈಜಿ ಪಾರಾಗಿದೆ. ತುಪ್ಪರಿ ಹಳ್ಳ ಹಾಗೂ ಬೆಣ್ಣೆಹಳ್ಳ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಹಳ್ಳಕ್ಕೆ ಇಳಿಯದಂತೆ ಸುತ್ತಲಿನ ಗ್ರಾಮಗಳಲ್ಲಿ ಡಂಗೂರ ಸಾರಿದ್ದಾಗಿ ಧಾರವಾಡ ತಾಲ್ಲೂಕು ತಹಶೀಲ್ದಾರ ಆರ್‌.ವಿ. ಕಟ್ಟಿ ತಿಳಿಸಿದ್ದಾರೆ.

ತಾಲ್ಲೂಕಿನ ಗರಗದ ಶ್ರೀಕಾಂತ ನಗರ ಕೆರೆಗೆ ಕೋಡಿ ಬಿದ್ದು, ಹತ್ತು ಮನೆಗಳಿಗೆ ನುಗ್ಗಿದ ನೀರನ್ನು ಯಂತ್ರದ ಸಹಾಯದಿಂದ ಹೊರ ಹಾಕಲಾಯಿತು. ಕುಂದಗೋಳದಲ್ಲಿ ಸತತ ಎರಡು ತಾಸು ಸುರಿದ ಭಾರಿ ಮಳೆಗೆ ಕೆರೆಕಟ್ಟೆಗಳು ತುಂಬಿವೆ. ಹೊಲಗದ್ದೆಗಳಲ್ಲಿ ನೀರು ನಿಂತಿದ್ದು, ಶೇಂಗಾ ಬೆಳೆ ಕೊಚ್ಚಿಕೊಂಡು ಹೋಗಿದೆ. ಬಿಟಿ ಹತ್ತಿ ಬೆಳೆಗೂ ಹಾನಿಯಾಗಿದೆ. ಹೊಲಗಳಲ್ಲಿ ಶೇಖರಣೆಯಾಗಿದ್ದ ನೀರು ಹರಿದು ಬೆಣ್ಣಿ ಹಳ್ಳಕ್ಕೆ ಸೇರುತ್ತಿರುವುದರಿಂದ ಹಳ್ಳದ ನೀರಿನ ಹರಿವು ಹೆಚ್ಚಾಗಿದೆ. ಇಂಗಳಗಿ ಹಾಗೂ ಮತ್ತಿಕಟ್ಟಿ ಗ್ರಾಮಗಳಲ್ಲಿ ಮನೆಗಳಿಗೆ ಹಾನಿಯಾಗಿದೆ.ಬೆಳಗಾವಿ ಜಿಲ್ಲೆಯ ನಿಪ್ಪಾಣಿ, ರಾಮದುರ್ಗ, ಚಿಕ್ಕೋಡಿಯಲ್ಲಿ ಎರಡು ತಾಸಿಗೂ ಹೆಚ್ಚು ಕಾಲ ಜಡಿ ಮಳೆಯಾಗಿದ್ದು, ನಿಪ್ಪಾಣಿಯಲ್ಲಿ ಆಸ್ತಿಪಾಸ್ತಿಗೆ ಹಾನಿಯಾಗಿದೆ. ಮಳೆ–ಗಾಳಿಗೆ ಬೆಳೆದು ನಿಂತ ಕಬ್ಬು ನೆಲಕಚ್ಚಿದ್ದು, ತಂಬಾಕು ಬೆಳೆಯೂ ಹಾನಿಗೀಡಾಗಿದೆ.

ಸಿಡಿಲು ಬಡಿದು 41 ಜನರ ಸಾವು
ಮುಂಬೈ:
ಬರಪೀಡಿತ ಮರಾಠಾವಾಡಾ ಮತ್ತು ವಿದರ್ಭ ಸೇರಿದಂತೆ ಮಹಾರಾಷ್ಟ್ರದಲ್ಲಿ ಕಳೆದ ಕೆಲವು ದಿನಗಳಲ್ಲಿ ಸಿಡಿಲಿಗೆ ಒಟ್ಟು 41 ಜನರು ಸತ್ತಿದ್ದಾರೆ. ವಾರಾಂತ್ಯದಲ್ಲಿ ಮಹಾರಾಷ್ಟ್ರದ ಒಳನಾಡಿನಲ್ಲಿ ಉತ್ತಮ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.