ADVERTISEMENT

ಮುಕ್ತ ವಿ.ವಿ ಪದವೀಧರರು ಅತಂತ್ರ

ಕೆಪಿಎಸ್‌ಸಿ ನಿರ್ಧಾರ ಎತ್ತಿ ಹಿಡಿದ ಹೈಕೋರ್ಟ್‌್

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2015, 19:33 IST
Last Updated 19 ಸೆಪ್ಟೆಂಬರ್ 2015, 19:33 IST

ಮೈಸೂರು: ಕರ್ನಾಟಕ ಲೋಕಸೇವಾ ಆಯೋಗವು ನಡೆಸುತ್ತಿರುವ ನೇಮಕಾತಿ ಪರೀಕ್ಷೆಗಳಿಗೆ ಕರ್ನಾಟಕ ರಾಜ್ಯ ಮುಕ್ತವಿಶ್ವವಿದ್ಯಾಲಯವು ನೀಡುವ ಪ್ರಮಾಣಪತ್ರಗಳು ಅಸಿಂಧು ಎಂಬ ನಿರ್ಧಾರವನ್ನು ರಾಜ್ಯ ಹೈಕೋರ್ಟ್‌ ಎತ್ತಿ ಹಿಡಿದಿದ್ದು, ವಿ.ವಿ.ಯಿಂದ ಪದವಿ ಪಡೆದವರು ರಾಜ್ಯ ಹಾಗೂ ದೇಶದ ಎಲ್ಲ ಉದ್ಯೋಗಾವಕಾಶಗಳಿಂದ ವಂಚಿತರಾಗುವುದು ಜಗಜ್ಜಾಹೀರಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಗೋ. ಮಧುಸೂದನ ತಿಳಿಸಿದ್ದಾರೆ.

2012–13ನೇ ಸಾಲಿನಿಂದ ವಿ.ವಿ.ಯ ಮಾನ್ಯತೆಯನ್ನು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ರದ್ದುಪಡಿಸಿದೆ. ಆದರೆ, ಮಾನ್ಯತೆ ಸದ್ಯದಲ್ಲೇ ಸಿಗಲಿದೆ ಎಂದು ಕುಲಪತಿ ಹಾಗೂ ಕುಲಸಚಿವರು ಸುಳ್ಳು ಭರವಸೆಗಳನ್ನು ನೀಡುತ್ತಿದ್ದು, ಇದು ವಿದ್ಯಾರ್ಥಿಗಳ ದಾರಿ ತಪ್ಪಿಸುವ ಹುನ್ನಾರವಾಗಿದೆ ಎಂದು ಟೀಕಿಸಿದ್ದಾರೆ. ಅಲ್ಲದೇ, ಯುಜಿಸಿ ಜಂಟಿ ಕಾರ್ಯದರ್ಶಿ ಡಾ.ರೇಣು ಭಾತ್ರಾ ಅವರು, ಮುಕ್ತ ವಿ.ವಿ ಕುಲಸಚಿವರಿಗೆ ಸೆಪ್ಟೆಂಬರ್‌ನಲ್ಲೇ ಪತ್ರ ಬರೆದಿದ್ದು, ಸೂಕ್ತ ದಾಖಲೆಗಳನ್ನು ನೀಡದ ಹೊರತು ಮಾನ್ಯತೆ ನೀಡುವುದು ಅಸಾಧ್ಯ ಎಂದು ನಾಲ್ಕು ಅಂಶಗಳಲ್ಲಿ ಹೇಳಿರುವುದಾಗಿ ತಿಳಿಸಿದ್ದಾರೆ.

ರೇಣು ಅವರು ಬರೆದಿರುವ ಪತ್ರದಲ್ಲಿ, ಮುಕ್ತ ವಿ.ವಿ.ಯು ತನ್ನ ಸಹಯೋಗಿ ಸಂಸ್ಥೆಗಳ, ಅಧ್ಯಯನ ಕೇಂದ್ರಗಳನ್ನು ಸಂಪೂರ್ಣವಾಗಿ ಮುಚ್ಚಿರುವ ಬಗ್ಗೆ, ನಡೆಸಿರುವ ಪತ್ರ ವ್ಯವಹಾರ, ನಿರ್ದೇಶನ ಮತ್ತು ಆದೇಶ ಪ್ರತಿಗಳನ್ನು ಪ್ರತ್ಯೇಕವಾಗಿ ಸಲ್ಲಿಸುವಂತೆ ಹೇಳಲಾಗಿದೆ. ಅಂದರೆ, ವಿ.ವಿ.ಯು ಇನ್ನೂ ಆ ಸಂಸ್ಥೆಗಳೊಂದಿಗೆ ಕದ್ದುಮುಚ್ಚಿ ಸಂಬಂಧ ಮುಂದುವರಿಸಿದ್ದು, ವಿದ್ಯಾರ್ಥಿಗಳಿಂದ ಶುಲ್ಕ ಪಡೆದು ಮೋಸ ಮಾಡಿದೆ ಎಂದಿದ್ದಾರೆ.

ವಿ.ವಿ.ಯು ನೀಡಿರುವ ಮುಚ್ಚಳಿಕೆಯಲ್ಲಿ ಪಿಎಚ್‌.ಡಿ, ಎಂ.ಫಿಲ್‌, ಆನ್‌ಲೈನ್‌ ಮತ್ತು ತಾಂತ್ರಿಕ ಪದವಿಗಳನ್ನು ನಿಷ್ಕ್ರಿಯಗೊಳಿಸಿರುವುದು ಅಸ್ಪಷ್ಟವಾಗಿದೆ. ಈ ಹಿಂದೆ ಆರಂಭಿಸಿದ್ದ ಕೋರ್ಸ್‌ಗಳೂ ನಿಷ್ಕ್ರಿಯಗೊಂಡಿವೆಯೊ ಇಲ್ಲವೊ ಎಂಬ ಮಾಹಿತಿ ಇಲ್ಲ. ಹಾಗಾಗಿ, ಹೊಸ ಮುಚ್ಚಳಿಕೆಯನ್ನು ಸೂಕ್ತ ಮಾಹಿತಿಯೊಂದಿಗೆ ₹ 100 ಛಾಪಾ ಕಾಗದದಲ್ಲಿ ನೀಡಲು ಸೂಚನೆ ನೀಡಿದೆ. ಇದಕ್ಕೆ ಕಾರಣ, ನೀಡಿರುವ ಮುಚ್ಚಳಿಕೆ ಸುಳ್ಳಾಗಿರುವುದು ಎಂದು ಹೇಳಿದ್ದಾರೆ.

ಮುಕ್ತ ವಿ.ವಿ.ಯ 1992ರ ಕಾಯ್ದೆಯನ್ನು ಯುಜಿಸಿಯ ನಿರ್ದೇಶನಗಳಿಗೆ ಅನುಸಾರವಾಗಿ ರಾಜ್ಯ ಭೌಗೋಳಿಕ ವ್ಯಾಪ್ತಿಗೆ ಮಿತಿಗೊಳಿಸಬೇಕು ಎಂದು, ಅದಕ್ಕಾಗಿ ಕಾಯ್ದೆಯನ್ನು ತಿದ್ದುಪಡಿಗೊಳಿಸಬೇಕು ಎಂದು ಸೂಚಿಸಿದೆ. ಅಂದರೆ, ಮತ್ತೊಮ್ಮೆ ವಿಧಾನಮಂಡಲದ ಅಧಿವೇಶನ ನಡೆದು, ಅಲ್ಲಿ 1992ರ ಕಾಯ್ದೆಯನ್ನು ತಿದ್ದುಪಡಿಗೆ ಒಳಪಡಿಸಬೇಕು ಅಥವಾ ಸುಗ್ರೀವಾಜ್ಞೆ ತರಬೇಕು. ಇದನ್ನು ಮಾಡದ ಹೊರತು ನವೀಕರಣ ಸಾಧ್ಯವೇ ಇಲ್ಲ ಎಂದು ತಿಳಿಸಿದ್ದಾರೆ.

2011ರ ಅಕ್ಟೋಬರ್‌ನಲ್ಲಿ ‘ಡಿಇಸಿ’, ‘ಇಗ್ನೊ’, ‘ಎಂಎಚ್‌ಆರ್‌ಡಿ’ ಗಳನ್ನು ಪ್ರತಿವಾದಿಗಳನ್ನಾಗಿ ಮಾಡಿ, ದೆಹಲಿ ಹೈಕೋರ್ಟ್‌ನಲ್ಲಿ ಮುಕ್ತ ವಿ.ವಿ ಸಲ್ಲಿಸಿರುವ ರಿಟ್‌ ಅರ್ಜಿಯ ಹಾಲಿ ಸ್ಥಿತಿಯ ಬಗ್ಗೆ ಸ್ಪಷ್ಟೀಕರಣ ಕೋರಿದೆ. ಅಂದರೆ, ರಿಟ್‌ ಅರ್ಜಿಯನ್ನು ಹಿಂಪಡೆಯಬೇಕು ಎಂಬ ಯುಜಿಸಿ ನಿರ್ದೇಶನವನ್ನು ಮುಕ್ತ ವಿ.ವಿ ಈವರೆಗೂ ಪಾಲಿಸಿಲ್ಲ ಎಂದಿದ್ದಾರೆ.

ಒಟ್ಟಾರೆಯಾಗಿ 2012–13ನೇ ಸಾಲಿಗೆ ತನ್ನ ಮಾನ್ಯತೆ ನವೀಕರಿಸಿಕೊಳ್ಳಬೇಕಿದ್ದ ಮುಕ್ತ ವಿ.ವಿ.ಯು ಮಾನ್ಯತೆ ರದ್ದಾಗುವವರೆಗೂ, ನವೀಕರಣಕ್ಕೆ ಅರ್ಜಿಯನ್ನೇ ಸಲ್ಲಿಸದೆ ಬೇಜವಾಬ್ದಾರಿಯಿಂದ ನಡೆದುಕೊಂಡಿದೆ. ಹಾಗಾಗಿ, ಕುಲಪತಿ, ಕುಲಸಚಿವ ಹಾಗೂ ಡೀನ್‌ (ಶೈಕ್ಷಣಿಕ) ಮುಂತಾದ ಅಧಿಕಾರಿಗಳ ವಿರುದ್ಧ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರು ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.