ADVERTISEMENT

ಮೈಸೂರು ಭಾಗದ ಮೂರು ಜಿಲ್ಲೆಗಳಲ್ಲಿ ನಾಳೆಯಿಂದ ರಾಹುಲ್‌ ಪ್ರವಾಸ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2018, 10:31 IST
Last Updated 23 ಮಾರ್ಚ್ 2018, 10:31 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ಮೈಸೂರು: ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಮಾರ್ಚ್‌ 24 ಮತ್ತು 25ರಂದು ‘ಜನಾಶೀರ್ವಾದ ಯಾತ್ರೆ’ ನಡೆಯಲಿದ್ದು, ಮುಖ್ಯಮಂತ್ರಿ ತವರು ಜಿಲ್ಲೆಯಲ್ಲಿ ಶಕ್ತಿಪ್ರದರ್ಶನಕ್ಕೆ ವೇದಿಕೆ ಸಜ್ಜುಗೊಂಡಿದೆ.

ಎರಡು ದಿನಗಳ ಪ್ರವಾಸದ ವೇಳೆ ರಾಹುಲ್‌, ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳಿಗೆ ಭೇಟಿ ನೀಡಲಿದ್ದು, ರೋಡ್ ಶೋ ಹಾಗೂ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಲಿದ್ದಾರೆ.

ಶನಿವಾರ ಬೆಳಿಗ್ಗೆ 9 ಗಂಟೆಗೆ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿರುವ ರಾಹುಲ್‌, ಅಲ್ಲಿಂದ ಚಾಮುಂಡಿಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಲಿದ್ದಾರೆ.

ADVERTISEMENT

ಬೆಳಿಗ್ಗೆ 10.15ಕ್ಕೆ ಮಹಾರಾಣಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿಯರ ಜತೆ ಸಂವಾದ ನಡೆಸಲಿದ್ದು, ಮಧ್ಯಾಹ್ನ ಚಾಮರಾಜನಗರಕ್ಕೆ ತೆರಳಲಿದ್ದಾರೆ. ಚಾಮರಾಜನಗರದ ಅಂಬೇಡ್ಕರ್‌ ಕ್ರೀಡಾಂಗಣ, ಸಂತೇಮರಳ್ಳಿ, ಯಳಂದೂರು, ಕೊಳ್ಳೇಗಾಲ ಮತ್ತು ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಲಿದ್ದಾರೆ.

ರಾತ್ರಿ ಮೈಸೂರಿನಲ್ಲಿ ವಾಸ್ತವ್ಯ ಹೂಡಲಿದ್ದು, ಭಾನುವಾರ ಬೆಳಿಗ್ಗೆ ಸರ್ಕಾರಿ ಅತಿಥಿಗೃಹದಲ್ಲಿ ಬ್ಲಾಕ್ ಅಧ್ಯಕ್ಷರುಗಳು ಮತ್ತು ಹಿರಿಯ ಮುಖಂಡರ ಜತೆ ಸಭೆ ನಡೆಸಲಿದ್ದಾರೆ. ಆ ಬಳಿಕ ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆ, ಪಾಂಡವಪುರ ಮತ್ತು ಶ್ರೀರಂಗಪಟ್ಟಣದಲ್ಲಿ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಮೈಸೂರಿಗೆ ವಾಪಸಾಗಲಿದ್ದಾರೆ.

ಭಾನುವಾರ ಸಂಜೆ 4 ಗಂಟೆಗೆ ಮೈಸೂರು ನಗರದ ಬಸವೇಶ್ವರ ವೃತ್ತದಿಂದ ರಾಹುಲ್‌ ಗಾಂಧಿ ರೋಡ್‌ ಷೋ ನಡೆಯಲಿದೆ. 5 ಗಂಟೆಗೆ ಮಹಾರಾಜ ಕಾಲೇಜು ಮೈದಾನದಲ್ಲಿ ಸಮಾವೇಶ ಆರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.