ADVERTISEMENT

ಮೊದಲ ಪಾತ್ರಕ್ಕೆ ₹30 ಸಂಭಾವನೆ

ಮನೆಯಂಗಳದಲ್ಲಿ ಮಾತುಕತೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 20:05 IST
Last Updated 21 ಜನವರಿ 2017, 20:05 IST
ವೈಜನಾಥ ಬಿರಾದರ
ವೈಜನಾಥ ಬಿರಾದರ   

ಬೆಂಗಳೂರು: ‘ತೆರೆ ಹಿಂದೆ ಸಾಕಷ್ಟು ಕಷ್ಟಪಟ್ಟು ಧಾರವಾಡದ ಪಂಚಲಿಂಗೇಶ್ವರ ನಾಟಕ ತಂಡದಲ್ಲಿ ಮೊದಲ ಬಾರಿಗೆ ಸಣ್ಣದೊಂದು ಪಾತ್ರ ಗಿಟ್ಟಿಸಿದೆ. ಇದಕ್ಕೆ ಸಿಕ್ಕ ಸಂಭಾವನೆ ₹ 30’ ಎಂದು ಕಲಾವಿದ ವೈಜನಾಥ ಬಿರಾದರ ನೆನಪಿಸಿಕೊಂಡರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶನಿವಾರ ಆಯೋಜಿಸಿದ್ದ ‘ಮನೆಯಂಗಳದಲ್ಲಿ ಮಾತುಕತೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ನಮಸ್ಕಾರ, ಚೆನ್ನಾಗಿದ್ದೀರಾ’ ಎಂದು ಹಾಸ್ಯಭರಿತವಾಗಿಯೇ ಮಾತು ಆರಂಭಿಸಿದ ಅವರು, ಕಲಾವಿದನಿಗೆ ನಟನೆಯಲ್ಲಿ ಶ್ರದ್ಧೆ ಮುಖ್ಯ. ಶ್ರದ್ಧೆಯಿಂದ ಕಾಯಕ ಮುಂದುವರಿಸಿದರೆ ಖಂಡಿತ ಫಲ ಸಿಕ್ಕೇ ಸಿಗುತ್ತದೆ’ ಎಂದರು.

‘ಗಡಿ ಜಿಲ್ಲೆ ಬೀದರ್‌ನ ತೇಗಂಪುರ ನನ್ನೂರು. ನಮ್ಮದು ಬಡ ಕುಟುಂಬ. ಚಿಕ್ಕವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡೆ. ಜೀವನ ನಡೆಸುವುದೇ ದುಸ್ತರವಾಗಿದ್ದರೂ ನಟನೆಯ ಬಗ್ಗೆ ನನಗೆ ಅಪಾರ ಆಸಕ್ತಿ. ಆದರೆ, ಓದಿದ್ದು ಮಾತ್ರ ಮೂರೂವರೆ ಕ್ಲಾಸು’ ಎಂದು ಅವರು ಹೇಳಿದರು.

ನಟನೆ ಮುಂದುವರಿಸುವ ‘ಕನಸೆಂಬೋ ಕುದುರೆಯನೇರಿ’ ಬೆಂಗಳೂರಿಗೆ ಬಂದೆ. ಎಲ್ಲೂ ಅವಕಾಶ ಸಿಗದೇ ಸುಮಾರು 6 ತಿಂಗಳು ಟೈಂ ಪಾಸ್ ಮಾಡಿದೆ. ಒಂದೊತ್ತು ಊಟಕ್ಕೂ ಸಮಸ್ಯೆಯಾಗಿತ್ತು. ನೀರು ಕುಡಿದು ಹಸಿವು ನೀಗಿಸಿಕೊಳ್ಳುತ್ತಿದ್ದೆ. ಕಡೆಗೆ ರಾಜಕುಮಾರ್, ಕಾಶಿನಾಥ್‌ ಅಂತಹ ಕಲಾವಿದರ ಸಹಾಯದಿಂದ ಚಿತ್ರರಂಗಕ್ಕೆ ಕಾಲಿಟ್ಟೆ’ ಎಂದರು.

‘ರಾಜ್‌ಕುಮಾರ್ ಅವರ ಜೀವನದ ಕಥೆ ನನಗೆ ಸ್ಫೂರ್ತಿ. ಅವರಂತೆ ಶ್ರದ್ಧೆಯಿಂದ ನಟಿಸುತ್ತಾ ಬಂದಿದ್ದೇನೆ. ಜತೆಗೆ ಬಿರಾದರ ಮಿತ್ರ ನಾಟಕ ತಂಡ ಕಟ್ಟಿ ರಾಜ್ಯದ ಅನೇಕ ಕಡೆ ಪ್ರದರ್ಶನಗಳನ್ನು ನೀಡುತ್ತಿದ್ದೇನೆ’ ಎಂದು ಹೇಳಿದರು.
*
ಪೋಷಕ ಕಲಾವಿದರಿಗೆ ಮನೆ ನೀಡಲು ಮನವಿ
‘ನಮ್ಮಂತಹ ಕಲಾವಿದರಿಗೆ ಕಷ್ಟ ಎದುರಾದಾಗ ದನಿ ಎತ್ತಲು ಯಾರೂ ಬರುವುದಿಲ್ಲ. ಬಹುತೇಕ ಪೋಷಕ ಕಲಾವಿದರಿಗೆ ಸ್ವಂತ ಮನೆಗಳಿಲ್ಲ. ಸರ್ಕಾರ ನೀಡುವ ಮನೆಗಳು ಕೆಲವೇ ಕೆಲವು ಕಲಾವಿದರ ಸಂಘಟನೆ ಸದಸ್ಯರ ಪಾಲಾಗುತ್ತಿದೆ’ ಎಂದು ಬಿರಾದರ ದೂರಿದರು. 

‘ಇಷ್ಟು ವರ್ಷ ನಟನೆ ಮಾಡಿಕೊಂಡು ಬಂದಿದ್ದರೂ  ಸ್ವಂತ ಮನೆ ಹೊಂದಲು ಸಾಧ್ಯವಾಗಿಲ್ಲ. ಕಲಾವಿದರಿಗೆ ಮನೆ ಹಂಚಿಕೆ ಮಾಡುವ ಹೊಣೆಯನ್ನು ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನೀಡಬೇಕು. ಈ ಮೂಲಕ ಪ್ರಾಮಾಣಿಕರಿಗೆ ಮನೆಗಳು ಸಿಗುವಂತೆ ಮಾಡಬೇಕು’ ಎಂದು ಮನವಿ ಮಾಡಿದರು.

ಮಾಸಾಶನ ರೂಪದಲ್ಲಿ ಕಲಾವಿದರಿಗೆ ಪ್ರತಿ ತಿಂಗಳು ಕೇವಲ ₹1,500 ಸಿಗುತ್ತದೆ. ಇದರಿಂದ ಜೀವನ ನಿರ್ವಹಣೆ ಮಾಡಲು ಅಸಾಧ್ಯ. ಅಲ್ಲದೆ, ಇದನ್ನು ಪಡೆಯಲು ಅಧಿಕಾರಿಗಳು ಸಾಕಷ್ಟು ಬಾರಿ ಅಲೆದಾಡಿ ಸುತ್ತಾರೆ. ಇದೇ ರೀತಿ ಸರ್ಕಾರದಿಂದ ಸಿಗಬೇಕಾದ ಅನೇಕ ಸೌಲಭ್ಯಗಳಿಂದ ಕಲಾವಿದರು ವಂಚಿತರಾಗುತ್ತಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT